Sunday, May 11, 2008

ಸುಮುಖದ ಜೈತ್ರಯಾತ್ರೆ : ಮಾಳ್ಕೋಡು ಛಲಕ್ಕೆ ಫಲ

ಕನ್ನಡದಲ್ಲಿ ಓದುಗರ ಸಂಖ್ಯೆ ಕಡಿಮೆ, ಮಾರುಕಟ್ಟೆ ಚಿಕ್ಕದು, ಇಲ್ಲಿ ಪುಸ್ತಕ ಪ್ರಕಟಿಸೋದು ಒಂದೇ, ಹಾಳು ಬಾವಿಗೆ ಬೀಳೋದು ಒಂದೇ ಎಂಬ ಮಾತುಗಳ ಮಧ್ಯೆಯೇ ‘ಸುಮುಖ’ ಪ್ರಕಾಶನ ಸದ್ದಿಲ್ಲದೇ ಗೆಲುವಿನತ್ತ ಮುಖಮಾಡಿದೆ. ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿರುವ ಈ ಪ್ರಕಾಶನ, ಅತಿ ಕಡಿಮೆ ಅವಯಲ್ಲಿ ಅಂದರೆ ಕೇವಲ ನಾಲ್ಕೂವರೆ ವರ್ಷಗಳಲ್ಲಿ ೨೦೦ ಪುಸ್ತಕಗಳ ಗಡಿ ದಾಟಿ, ಮುನ್ನಡೆದಿದೆ. ಬಹುಶಃ ಅಲ್ಪಕಾಲದಲ್ಲಿ ಈ ಮಟ್ಟದ ಸಾಧನೆ ಮಾಡಿದ ಇನ್ನೊಂದು ಪ್ರಕಾಶನ ಇರಲಿಕ್ಕಿಲ್ಲ.
‘ಕಾಸಿಗಿಂತಲೂ ಖುಷಿಯೇ ಮುಖ್ಯ, ಕನ್ನಡ ಪ್ರೀತಿಯೇ ದೊಡ್ಡದು’ ಎಂದು ನಂಬಿಕೊಂಡಿರುವ ಸುಮುಖ ಪ್ರಕಾಶನದ ಮಾಲೀಕ ನಾರಾಯಣ ಮಾಳ್ಕೋಡು, ಬರೀ ವ್ಯಾಪಾರಿಯಲ್ಲ. ಅವರೊಬ್ಬ ಲೇಖಕರು, ಸಾಹಿತ್ಯ ಪರಿಚಾರಕರು. ಕನ್ನಡ ಪುಸ್ತಕಗಳನ್ನು ನಾಡಿನುದ್ದಕ್ಕೂ ತಲುಪಿಸುವ ಹಂಬಲ ಹೊಂದಿರುವ ಅವರದು ಕಲ್ಲು ಮುಳ್ಳಿನ ಹಾದಿ. ಗೆಲುವಿನ ಕಿರೀಟ ಧರಿಸಲು ಅವರು ಪಟ್ಟ ಪಾಡು ಒಂದೆರಡಲ್ಲ.
ದರಿದ್ರ ವ್ಯವಸ್ಥೆ ವಿರುದ್ಧ ಬಂಡಾಯ
‘ಪ್ರಕಾಶನ ಆರಂಭಿಸಬೇಕು ಎನ್ನುವ ಹಂಬಲ ನಿಮ್ಮ ಮನದಲ್ಲಿ ಬಂದದ್ದೇಗೆ?’ ಎಂದರೆ , ‘ಈ ಹಿಂದೆ ಲೇಖಕರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು. ಪ್ರಕಾಶಕರಿಂದ ಲೇಖಕರಿಗಾಗುತ್ತಿರುವ ಅನ್ಯಾಯ ನನ್ನ ಅನುಭವಕ್ಕೂ ಬಂದಿತ್ತು. ಒಂದು ಸಾವಿರ ಮುದ್ರಿಸುವುದಾಗಿ ಹೇಳಿ ೧೦ ಸಾವಿರ ಪ್ರತಿಗಳನ್ನು ಪ್ರಕಟಿಸುವುದು, ಲೇಖಕರಿಗೆ ಗೌರವ ಧನ ನೀಡದೇ ನಾಮ ಹಾಕುವ ದರಿದ್ರ ವ್ಯವಸ್ಥೆಯಿಂದ ನಾನು ಬೇಸತ್ತಿದ್ದೆ. ಪ್ರಾಮಾಣಿಕ ಪ್ರಕಾಶನ ತೆರೆಯುವ ಉದ್ದೇಶದಿಂದ ಸುಮುಖಕ್ಕೆ ಚಾಲನೆ ನೀಡಿದೆ ’ ಎನ್ನುತ್ತಾರೆ ಮಾಳ್ಕೋಡು. ಇನ್ನೂ ಒಂದೆಜ್ಜೆ ಮುಂದೆ ಹೋಗಿ ಪ್ರಕಾಶನ ಕ್ಷೇತ್ರದ ಹುಳುಕುಗಳನ್ನು ತೆರೆದಿಡುತ್ತಾರೆ.
ಅವರು ಹೇಳುವಂತೆ ; ‘ನಮ್ಮಲ್ಲಿ ಲೈಬ್ರೆರಿ ಪ್ರಕಾಶಕರು ಮತ್ತು ಜನಹಿತ ಪ್ರಕಾಶಕರು ಎಂಬ ಎರಡು ಗುಂಪುಗಳಿವೆ. ನಮ್ಮಲ್ಲಿ ಲೈಬ್ರೆರಿ ಪ್ರಕಾಶಕರ ಸಂಖ್ಯೆ ದೊಡ್ಡದು. ಗ್ರಂಥಾಲಯ ಇಲಾಖೆಯ ದುಡ್ಡು ನಂಬಿ, ಇವರು ಬದುಕುತ್ತಾರೆ. ಇವರ ದೆಸೆಯಿಂದ ಪುಸ್ತಕಗಳು ಲೈಬ್ರೆರಿಯ ಕತ್ತಲೆ ಕೋಣೆಯಲ್ಲಿ ಕೊಳೆಯಬೇಕಾಗುತ್ತದೆ ’
ಪುಸ್ತಕ ನೀತಿ ಜಾರಿಗೆ ಬರಲಿ..
‘ನಮ್ಮಲ್ಲಿ ಸೂಕ್ತ ಜಲನೀತಿಯಿಲ್ಲ. ಅದೇ ರೀತಿ ಪುಸ್ತಕ ನೀತಿಯೂ ಇಲ್ಲ. ಪ್ರಕಾಶನಗಳಿಂದ ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಖರೀದಿಸುತ್ತದೆ. ಆದರೆ ಕೆಲವು ಪ್ರಕಾಶಕರು ಬೇರೆಬೇರೆ ಹೆಸರಲ್ಲಿ ೮-೧೦ ಪ್ರಕಾಶನಗಳನ್ನು ಹೊಂದಿದ್ದಾರೆ. ಇದು ಹಣ ನುಂಗಲು ದಾರಿಯಾಗಿದ್ದು, ಪ್ರಾಮಾಣಿಕ ಪ್ರಕಾಶಕರಿಗೆ ತೊಂದರೆಯಾಗಿದೆ. ಗೌರವ ಧನ ನೀಡದೇ ವಂಚಿಸುವ ಪ್ರಕಾಶಕನಿಗೆ ಪಾಠ ಕಲಿಸುವ ಅಥವಾ ಬರಹದ ಹಕ್ಕುಗಳನ್ನು ಮೂರುನಾಲ್ಕು ಪ್ರಕಾಶಕರಿಗೆ ಮಾರುವ ಲೇಖಕನಿಗೆ ಶಿಕ್ಷೆ ನೀಡುವ ಕಾನೂನುಗಳು ನಮ್ಮಲ್ಲಿಲ್ಲ. ಹೀಗಾಗಿ ಕಳ್ಳರ ಸಂಖ್ಯೆ ಹೆಚ್ಚುತ್ತಿದೆ. ನಕಲಿ ಪುಸ್ತಕಗಳ ಜಾಲ ವಿಸ್ತಾರಗೊಳ್ಳುತ್ತಿದೆ. ಹೀಗಾಗಿ ಸಮಗ್ರ ಪುಸ್ತಕ ನೀತಿ ಅತ್ಯಗತ್ಯ’ ಎನ್ನುವುದು ಮಾಳ್ಕೋಡು ಅಭಿಪ್ರಾಯ.
ಬರೀ ಸುಳ್ಳು ನೆವಗಳು!
ಕನ್ನಡದ ಮಾರುಕಟ್ಟೆ ಚಿಕ್ಕದು, ಓದುಗರ ಕೊರತೆ ಇದೆ ಎನ್ನುವ ಮಾತನ್ನು ಮಾಳ್ಕೋಡು ಒಪ್ಪುವುದಿಲ್ಲ. ‘ಇಲ್ಲ.. ಇದು ತಪ್ಪು. ಓದುಗರಿಗೆ ಪುಸ್ತಕಗಳನ್ನು ತಲುಪಿಸಲು ಪ್ರಕಾಶಕರಿಗೆ ದಾರಿಗಳಿಲ್ಲ. ಇದೊಂದು ನೆಟ್‌ವರ್ಕ್ ಸಮಸ್ಯೆ. ಇನ್ನು ಕನ್ನಡ ಪುಸ್ತಕ ಪ್ರಾಕಾರ ಪ್ರಕಾಶನ ಸಂಸ್ಥೆಯಾಗಿ ಬದಲಾಗಿದೆ! ಅದು ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿ ಮಾಡಿ, ತಾಲೂಕು ಕೇಂದ್ರಗಳಲ್ಲಿ ಮಾರಾಟ ಮಾಡಬೇಕು. ಎಲ್ಲಾ ಕಡೆ ಪ್ರಕಾಶಕರೇ ಮಳಿಗೆ ತೆರೆಯುವ ವ್ಯವಸ್ಥೆ ಜಾರಿಗೆ ಬರಲು, ಇನ್ನೂ ಸಮಯ ಬೇಕು. ಆ ಮಟ್ಟಕ್ಕೆ ಕನ್ನಡ ಪ್ರಕಾಶಕರು ಬೆಳೆದಿಲ್ಲ. ಹೊಸ ಪುಸ್ತಕಗಳ ಬಗ್ಗೆ ಓದುಗರಿಗೆ ಮಾಹಿತಿ ಸಿಗುತ್ತಿಲ್ಲ. ಕನ್ನಡ ಪತ್ರಿಕೆಗಳನ್ನು ಈ ಬಗ್ಗೆ ದೂರುವಂತಿಲ್ಲ. ಪ್ರಕಟವಾಗುವ ಸಾವಿರಾರು ಪುಸ್ತಕಗಳಿಗೆ ಜಾಗ ನೀಡಲು ಪತ್ರಿಕೆಗಳಿಗೆ ಕಷ್ಟ. ಕನ್ನಡ ಪುಸ್ತಕಗಳ ಬಗ್ಗೆ ಮಾಹಿತಿ ನೀಡುವ ಪತ್ರಿಕೆಗಳನ್ನು ಆರಂಭಿಸಿ, ಆನೇಕರು ವಿಫಲರಾಗಿದ್ದಾರೆ ’ಎನ್ನುವ ಅವರು, ಓದುಗರನ್ನು ತಲುಪುವ ಹೊಸ ಹಾದಿಗಳತ್ತ ಚಿಂತನೆ ನಡೆಸಿದ್ದಾರೆ.
ಕನ್ನಡ ಪುಸ್ತಕಗಳು ಬಲು ದುಬಾರಿ
‘ಓದುಗರು ಬೆಚ್ಚುವಷ್ಟು ಕೆಲವು ಕನ್ನಡ ಪುಸ್ತಕಗಳು ಬಲು ದುಬಾರಿ’ ಎನ್ನುವ ಮಾತನ್ನು ಅರ್ಧ ಒಪ್ಪುವ ಮಾಳ್ಕೋಡು, ‘ಓದುಗರು ಕೆಲವು ಸಂಗತಿಗಳನ್ನು ತಾಳೆ ಹಾಕಬೇಕು. ನಮ್ಮ ಪ್ರಕಾಶನವು ಪುಟಕ್ಕೆ ೪೦-೪೨ ಪೈಸೆ ನಿಗದಿ ಪಡಿಸುತ್ತದೆ. ಕೆಲವು ಪ್ರಕಾಶಕರು ಲಾಭದ ಆಸೆಯಿಂದ ೭೦-೮೦ ಪೈಸೆ ನಿಗದಿ ಮಾಡುತ್ತಾರೆ. ಯಾವ ಪ್ರಕಾಶಕರು ಸೂಕ್ತ ಎಂಬುದನ್ನು ಲೇಖಕರು ಮತ್ತು ಓದುಗರು ನಿರ್ಧರಿಸಬೇಕು’ ಎನ್ನುತ್ತಾರೆ.
ಪ್ರಕಾಶಕ ಸಂಸ್ಕೃತಿಯ ಹರಿಕಾರ
ಲೇಖಕರು ಸಾಹಿತ್ಯದ ಹರಿಕಾರರಾದರೆ, ಪ್ರಕಾಶಕರು ಸಂಸ್ಕೃತಿಯ ಹರಿಕಾರರು ಎಂದು ಪ್ರತಿಪಾದಿಸುವ ಮಾಳ್ಕೋಡು, ಪ್ರಕಾಶಕರಿಗೆ ಸೂಕ್ತ ಸ್ಥಾನಮಾನ ದಕ್ಕಿಲ್ಲ ಎಂದು ವಿಷಾದಿಸುತ್ತಾರೆ. ‘ಭ್ರಷ್ಟ ಪ್ರಕಾಶಕರಿಗೆ ಮಣೆ ಹಾಕುವುದ ಬೇಡ. ಪ್ರಾಮಾಣಿಕ ಪ್ರಕಾಶಕರನ್ನು ಪ್ರಸ್ತುತ ಬೆಳೆಸಬೇಕಾಗಿದೆ. ನಾನಂತೂ ಪ್ರಕಾಶನವನ್ನು ಕೇವಲ ವ್ಯಾಪಾರವಾಗಿ ಪರಿಗಣಿಸಿಲ್ಲ. ಇದನ್ನು ದೇವರು ಎಂದು ಪರಿಭಾವಿಸಿದ್ದೇನೆ. ದುಡ್ಡು ಮಾಡುವುದೇ ನನ್ನ ಗುರಿಯಾಗಿದ್ದರೆ ಪ್ರಕಾಶನ ತೆರೆಯುತ್ತಿರಲಿಲ್ಲ. ಹೋಟೆಲ್ಲೋ ಅಥವಾ ಬೇಕರಿಯನ್ನೋ ತೆರೆಯುತ್ತಿದ್ದೆ ’ ಎನ್ನುತ್ತಾರೆ.
ಅವು ತಾಳ್ಮೆ ಪರೀಕ್ಷೆಯ ದಿನಗಳು
ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೮೮, ಪಿಯುಸಿಯಲ್ಲಿ ಶೇ.೮೬, ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಶೇ.೭೦ ಅಂಕ ಪಡೆದಿರುವ ಮಾಳ್ಕೋಡು ಮನಸ್ಸು ಮಾಡಿದ್ದರೆ ಸರಕಾರಿ ಕೆಲಸ ಗಿಟ್ಟಿಸುವುದು ಕಷ್ಟವಾಗುತ್ತಿರಲಿಲ್ಲ. ಆದರೆ ಅವರ ಆಲೋಚನೆಗಳೇ ವಿರುದ್ಧ ದಿಕ್ಕಿನಲ್ಲಿದ್ದವು. ೫೦೦ ರೂ. ಸಂಬಳಕ್ಕೆ ರಾಗಸಂಗಮ ಮತ್ತು ಚುಟುಕದಲ್ಲಿ ಕೆಲಸ ಮಾಡಿದ ಅವರಿಗೆ ಮೊದಲಿನಿಂದಲೂ ಅಕ್ಷರ ಸಹವಾಸ ಹಿತಕರವೆನಿಸಿತ್ತು. ಬರೆಯುವುದು ಮತ್ತು ಓದುವುದು ಅವರ ನೆಚ್ಚಿನ ಚಟಗಳಾಗಿದ್ದವು.
ಮುದ್ರಣ ಮಾಧ್ಯಮದ ಒಳಹೊರಗನ್ನು ಅರಿತ ಅವರಿಗೆ ಪ್ರಕಾಶನ ಆರಂಭಿಸುವುದು ಕಷ್ಟವಾಗಲಿಲ್ಲ. ಕಷ್ಟಪಟ್ಟು ಕೂಡಿಟ್ಟಿದ್ದ ೨ ಲಕ್ಷ ರೂ. ಹಣವನ್ನು ಹಾಕಿ ೧೦ ಪುಸ್ತಕಗಳನ್ನು ಪ್ರಕಟಿಸಿ,ಸೆಪ್ಟೆಂಬರ್ ೭,೨೦೦೩ರಲ್ಲಿ ಸುಮುಖ ಪ್ರಕಾಶನಕ್ಕೆ ಚಾಲನೆ ನೀಡಿದರು. ಆಮೇಲೆ ಮಾರುಕಟ್ಟೆ ಕಷ್ಟ ಅವರ ಅನುಭವಕ್ಕೆ ಬಂತು. ಮುಂದಿನ ಹಾದಿಯನ್ನು ಆಯ್ಕೆ ಮಾಡಿಯಾಗಿತ್ತು. ಹೀಗಾಗಿ ಅಲ್ಲಿಯೇ ಮುಂದುವರಿಯಲು ಅವರು ಮನಸ್ಸು ಮಾಡಿದರು. ಪ್ರಕಾಶನಕ್ಕೆ ಪೂರಕವಾಗಲೆಂದು ಜನವರಿ ೧೮, ೨೦೦೪ರಲ್ಲಿ ಮಾಗಡಿ ರಸ್ತೆಯ ಟೋಲ್‌ಗೇಟ್ ವೃತ್ತದ ಬಳಿ ಸುಮುಖ ಬುಕ್‌ಹೌಸ್ ತೆರೆದರು. ಅದೊಂದು ಏಕವ್ಯಕ್ತಿ ಕೇಂದ್ರಿತ ಸಾಹಸ. ಕೇವಲ ೫೦೦ ಶೀರ್ಷಿಕೆಗಳ ಪುಸ್ತಕಗಳು ಅಲ್ಲಿದ್ದವು(ಈಗ ೧೦ ಸಾವಿರ ಶೀರ್ಷಿಕೆಯ ನಾನಾ ಪುಸ್ತಕಗಳು ಅಲ್ಲಿವೆ). ಬೆಳಗ್ಗೆ ೯ರಿಂದ ರಾತ್ರಿ ೯ರ ತನಕ ಅವರು ಅಂಗಡಿ ಬಿಟ್ಟು ಕದಲಲಿಲ್ಲ.
ಆಗ ‘ಓ ಪುಸ್ತಕ ಪ್ರಕಾಶನವಾ?’ಎಂದು ಮೂಗು ಮುರಿದವರೇ ಹೆಚ್ಚು. ಮಗ ಹಾಳಾದ ಎಂಬ ಆತಂಕ ಹೆತ್ತವರಲ್ಲಿಯೂ ಇತ್ತು. ಈ ಅಂಶಗಳಿಗೆ ಪುಷ್ಟಿ ನೀಡುವಂತೆ ಮೊದಲ ತಿಂಗಳು ಅವರು ಪುಸ್ತಕ ಮಾರಿ ಸಂಪಾದಿಸಿದ್ದು, ಕೇವಲ ೮೦೦ ರೂಪಾಯಿ! ಅದರಲ್ಲಿ ಕಟ್ಟಡದ ಬಾಡಿಗೆ ೫೦೦ ರೂಪಾಯಿಯನ್ನು ನುಂಗಿತ್ತು. ಆಗ ಅವರು ತುಸು ಗಾಬರಿಗೊಂಡರು. ಎಲ್ಲೋ ತಪ್ಪು ಮಾಡಿದ ಭಯ ಕಾಡಿತು. ಎಡವಿದಂತೆ ಭಾಸವಾಯಿತು. ಆದರೆ ಅವರ ಒಲವು-ನಿಲುವು ಬದಲಾಗಲಿಲ್ಲ.
ಅಕ್ಷರ ಬಂಧ-ಸಂಬಂಧ
ಸಾಹಿತ್ಯದ ನಂಟು ಬೆಸದ ಬಗ್ಗೆ ಹೇಳುತ್ತಾ ಅವರು ವಿದ್ಯಾರ್ಥಿ ದಿನಗಳಿಗೆ ಮರಳುತ್ತಾರೆ. "೯ನೇ ತರಗತಿಯಲ್ಲಿದ್ದಾಗಲೇ ನನ್ನದೊಂದು ಲೇಖನ ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ಪ್ರಕಟವಾಗಿತ್ತು. ೧೦ನೇ ತರಗತಿಯಲ್ಲಿದ್ದಾಗ ಧಾರವಾಡ ಆಕಾಶವಾಣಿಯಲ್ಲಿ ನನ್ನ ಕಾರ್ಯಕ್ರಮವೊಂದು ಪ್ರಸಾರವಾಗಿತ್ತು. ಆ ನಂತರ ಶಿಕ್ಷಣ ಮತ್ತಿತರ ವಿಷಯಗಳನ್ನು ಆಧರಿಸಿ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ೫೦-೬೦ ಕಾರ್ಯಕ್ರಮಗಳನ್ನು ಮಾಡಿದೆ. ಚಂದನದಲ್ಲಿ ‘ಬೆಳಗು’ ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದೆ. ಮೊದಲಿನಿಂದಲೂ ಓದುವಿಕೆ ನಿರಂತರವಾಗಿತ್ತು. ಧಾರವಾಡದಲ್ಲಿ ಪಿಯೂಸಿ ಓದುವಾಗ, ಪತ್ರಿಕೋದ್ಯಮದತ್ತ ಸೆಳೆತ ಶುರುವಾಯಿತು. ಪಾಟೀಲ್ ಪುಟ್ಟಪ್ಪನವರ ಪರಿಚಯವಾಯಿತು. ಓದುತ್ತಲೇ ಕೆಲಸ ಮಾಡತೊಡಗಿದೆ. ವಿಶ್ವವಾಣಿ, ವಿಶಾಲ ಕರ್ನಾಟಕದಿಂದ ಕಾವೇರಿ ಮತ್ತು ಸುಪ್ರಪಾತ ಚಾನೆಲ್‌ವರೆಗೆ ಸುದ್ದಿಮನೆಯಲ್ಲಿ ಕೆಲಸಮಾಡಿದೆ. ರಾಗಸಂಗಮ ಮತ್ತು ಚುಟುಕವನ್ನು ಎರಡು ವರ್ಷಗಳ ಹಿಂದಷ್ಟೆ ಖರೀದಿಸಿದೆ. ನಾನು ಕೆಲಸ ಮಾಡಿದ ಸಂಸ್ಥೆ ಖರೀದಿಸಿದ್ದು, ಖುಷಿ ತಂದಿದೆ " ಎನ್ನುತ್ತಾರೆ.
ಪ್ರಕಾಶನದಲ್ಲಿ ಕಳೆದು ಹೋಗದ ಅವರು ಆಗಸ್ಟ್ ೧೯, ೨೦೦೭ರಿಂದ ಸುಮುಖ, ಕಥಾಲೋಕ(೧೯೪೫ರ ನಂತರ ಕತೆಗಳಿಗೆ ಮೀಸಲಾದ ಪತ್ರಿಕೆ ಇರಲಿಲ್ಲ), ಸುಮ್‌ಸುಮ್ನೆ, ವಿನ್ ಎಂಬ ನಾಲ್ಕು ಮಾಸಪತ್ರಿಕೆಗಳನ್ನು ಮಾಳ್ಕೋಡು ಆರಂಭಿಸಿದ್ದು, ತಿಂಗಳಿಗೆ ೨ ಪುಸ್ತಕ ಪ್ರಕಟಿಸುವ ಗುರಿ ಹೊಂದಿದ್ದಾರೆ. ಅದೀಗ ದ್ವಿಗುಣಗೊಂಡಿದ್ದು, ತಿಂಗಳಿಗೆ ೪-೫ ಪುಸ್ತಕಗಳು ಹೊರಬರುತ್ತಿವೆ. ಹಿರಿಯ ಮತ್ತು ಕಿರಿಯ ಲೇಖಕರ ಪುಸ್ತಕಗಳನ್ನು ಪ್ರೀತಿಯಿಂದ ಅವರು ಪ್ರಕಟಿಸುತ್ತಿದ್ದಾರೆ.
೩೬ವರ್ಷದ ಮಾಳ್ಕೋಡು ನೂರಾರು ವರ್ಷ ಬಾಳಲಿ, ಸಾವಿರಾರು ಪುಸ್ತಕಗಳನ್ನು ಪ್ರಕಟಿಸಲಿ ಎಂಬುದು ನಮ್ಮೆಲ್ಲರ ಹಾರೈಕೆ. ನಿಮ್ಮ ಹಾರೈಕೆಯೂ ಇದೇ ಆದರೆ ಈಗಲೇ ಶುಭಾಶಯ ತಿಳಿಸಿ(ಮೊಬೈಲ್ : ೯೮೪೪೨ ೭೮೭೯೨).

No comments: