Wednesday, August 13, 2008

ಗ್ರಾಮೀಣ ಭಾರತದ ಇಷ್ಟ-ಕಷ್ಟಗಳು!


ಯಾರನ್ನಾದರೂ ಮಾತನಾಡಿಸಿ ನೋಡಿ, ತಮ್ಮ ಊರಿನ ವಿಷಯ ಬಂದಾಗ ಎಲ್ಲರೂ ಭಾವುಕರಾಗುತ್ತಾರೆ. ‘ನಮ್ಮ ಊರು(ಹಳ್ಳಿ) ಆಗಿದೆ, ಹೀಗಿದೆ.. ಇಲ್ಲೇನಿದೆ ಮಣ್ಣು’ ಎನ್ನುತ್ತಾ ತಮ್ಮ ನೆನಪಿನ ಮೆರವಣಿಗೆಗೆ ಕರೆದೊಯ್ಯುತ್ತಾರೆ. ‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎಂಬ ವೈರಾಗ್ಯದ ಮಾತಾಡುತ್ತಾರೆ. ತಮ್ಮ ಜೀವನ ಸಂಧ್ಯಾಕಾಲವನ್ನು ಹಳ್ಳಿಯಲ್ಲಿ ಸವೆಸಬೇಕು ಎನ್ನುತ್ತಾರೆ.‘ಈಗಲೇ ಹೋಗಲು ಇಷ್ಟ, ಆದರೆ ನಮ್ಮ ಕಮಿಟ್‌ಮೆಂಟ್‌ಗಳು ನಾವು ನಮ್ಮಿಷ್ಟದಂತೆ ಬದುಕಲು ಬಿಡುತ್ತಿಲ್ಲ’ ಎಂದು ನೂರೊಂದು ಸಬೂಬು ಹೇಳುತ್ತಾರೆ. ಒಟ್ಟಿನಲ್ಲಿ ಹಳ್ಳಿಗಳ ಕುರಿತಾದ ರೊಮ್ಯಾಂಟಿಕ್ ಕಲ್ಪನೆ ಜಾರಿಯಲ್ಲಿದೆ. ಒಂದರ್ಥದಲ್ಲಿ ಹಳ್ಳಿಗಳು ಹಳ್ಳಿಗಳಾಗೇ ಇರಬೇಕಾ ಎಂಬ ಪ್ರಶ್ನೆಯೂ ಬರುತ್ತದೆ. ಆದರೆ ಒಂದರ್ಥದಲ್ಲಿ ಹಳ್ಳಿಗಳು ಬದಲಾಗಿವೆ. ಅತ್ತ ಪಟ್ಟಣಗಳೂ ಆಗದೇ, ಇತ್ತ ಹಳ್ಳಿಯ ಸೊಗಡನ್ನೂ ಕಳೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿವೆ. ಸ್ವಾತಂತ್ರ್ಯಾನಂತರ ಹಳ್ಳಿಗಳ ಸ್ಥಿತಿ ಸುಧಾರಿಸಬೇಕಾಗಿತ್ತು. ಆದರೆ ಬಹುತೇಕ ಹಳ್ಳಿಗಳು ಇನ್ನೂ ವಿದ್ಯುತ್ ದೀಪವನ್ನೇ ಕಂಡಿಲ್ಲ. ರಸ್ತೆಗಳಿಲ್ಲದೇ ಅನೇಕ ಹಳ್ಳಿಗಳು ದ್ವೀಪದಂತೆ ಉಳಿದಿವೆ. ಒಂದು ಬೆಂಕಿಪೊಟ್ಟಣಕ್ಕಾಗಿ ಎರಡು ಮೂರು ಮೈಲು ಸವೆಸಬೇಕಾದ ಸ್ಥಿತಿ ಕೆಲವು ಹಳ್ಳಿಗಳಲ್ಲಿ ಈಗಲೂ ಇದೆ. ನನ್ನಳ್ಳಿಯ ಕಾಣುತ್ತಲೇ ಗ್ರಾಮೀಣ ಭಾರತವನ್ನು ಊಹಿಸುವ ಯತ್ನ ನನ್ನದು. ಹೊಟ್ಟೆಪಾಡಿಗಾಗಿ(ವೃತ್ತಿ) ಮಾಯಾನಗರಿ ಬೆಂಗಳೂರಿನಲ್ಲಿ ನಾನಿದ್ದರೂ, ನನ್ನ ಮೂಲ ಬೇರುಗಳು ನನ್ನೂರಿನಲ್ಲಿಯೇ ಇವೆ. ಆನೂಡಿ, ನನ್ನಮ್ಮನ ಊರು. ನನ್ನ ಊರು ಸಹಾ ಹೌದು. ಬಾಲ್ಯಕ್ಕೊಂದು ಬೆರಗುಕೊಟ್ಟ, ಬದುಕಿಗೊಂದಿಷ್ಟು ಮೌಲ್ಯಗಳನ್ನು ಬಳುವಳಿಯಾಗಿ ಕೊಟ್ಟ ಆನೂಡಿಯನ್ನು ಮರೆಯುವುದಾದರೂ ಹೇಗೆ? ಹೀಗಾಗಿಯೇ ಅಲ್ಲಿನ ತವಕ-ತಲ್ಲಣಗಳು ಈಗಲೂ ನನ್ನನ್ನು ಕಾಡುತ್ತವೆ. ಜನಪ್ರತಿನಿಗಳ ನಿರ್ಲಕ್ಷ್ಯ, ಜನ ಸಾಮಾನ್ಯರಲ್ಲಿ ಜಾಗೃತಿಯ ಕೊರತೆಯಿಂದಾಗಿ ನಾನಾ ಪರಿಸರ ಸಂಬಂ ಸಮಸ್ಯೆಗಳು ಇಂದೂ ಜೀವಂತವಾಗಿ ಉಳಿದಿವೆ, ನಾಳೆಯೂ ಸಮಸ್ಯೆಗಳು ತೀರುತ್ತವೆ ಎಂದು ನನಗನಿಸುವುದಿಲ್ಲ. ಯಾವುದಿದು ಆನೂಡಿ? ಎಲ್ಲಿಯದಿದು ಆನೂಡಿ? -ಆನೂಡಿಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡ ಖ್ಯಾತನಾಮರು ಇಲ್ಲದ ಕಾರಣ, ಈ ಬಗ್ಗೆ ತುಸು ಹೇಳುವುದು ಉಚಿತ. ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿದೆ ಆನೂಡಿ. ವಿಚಾರವಾದಿ ಎಚ್.ನರಸಿಂಹಯ್ಯ ಅವರ ಹುಟ್ಟೂರಾದ ಹೊಸೂರು ಪಕ್ಕದಲ್ಲಿರುವ ಆನೂಡಿಯ ಏಕೈಕ ಹೆಗ್ಗಳಿಕೆ, ಅಲ್ಲಿನ ಆಂಜನೇಯ ದೇವಸ್ಥಾನ. ಊರ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿರುವ ದೇವಸ್ಥಾನ ಬಿಟ್ಟರೆ, ಇಲ್ಲಿನ ಬಗ್ಗೆ ಮಾತನಾಡಲು ಇನ್ನೊಂದು ವಿಷಯ ಸಿಗುವುದಿಲ್ಲ.ಎಲ್ಲಾ ಹಳ್ಳಿಗಳಂತೆಯೇ ಆನೂಡಿಯಲ್ಲೂ ಶೌಚದ್ದೊಂದು ಸಮಸ್ಯೆ. ಬಯಲುಗಳಲ್ಲಿನ ಮೋಟು ಗಿಡಗಳ ಮರೆಯಲ್ಲಿ ಅಡಗಿ ಕೊಳ್ಳುವ ಪರಿಸ್ಥಿತಿ ಈಗಲೂ ಇದೆ. ಮೊದಲು ಊರ ಮುಂದಿನ ನಮ್ಮ ಬಣವೆಯಲ್ಲಿನ ತಿಪ್ಪೆ ಹೆಂಗಸರು ಮತ್ತು ಮಕ್ಕಳ ಶೌಚ ಕೇಂದ್ರವಾಗಿತ್ತು. ಅಲ್ಲಿನ ಅರಳೀಕಟ್ಟೆಯಲ್ಲಿ ಮೈಗಳ್ಳರ ಚೌಕಾಭಾರ, ಬಸವನಕಟ್ಟೆ, ಹೆಡ್ ಮತ್ತಿತರ ದುಡ್ಡಿನ ಆಟಗಳ ಪರಿಣಾಮ ಜನಸಂದಣಿ ಹೆಚ್ಚಿದ ಮೇಲೆ ಅಲ್ಲಿಗೆ ಹೋಗಲು ಹೆಣ್ಣು ಮಕ್ಕಳು ಹಿಂದೆ ಮುಂದೆ ನೋಡುವಂತಾಯಿತು. ಸೂರ್ಯ ಹುಟ್ಟುವ ಮುನ್ನ ಅಥವಾ ಸೂರ್ಯ ಮುಳುಗಿ ಕತ್ತಲಾದ ಮೇಲೆ ಇಬ್ಬರು ಮೂವರು ಹೆಂಗಸರು ಜತೆಯಾಗಿ ಬಣವೆ ಕಡೆ ಹೋಗುತ್ತಿದ್ದರು. ಶೌಚದ ಸ್ವಾಭಾವಿಕ ಪ್ರಕ್ರಿಯೆಗೆ, ಸಮಯ ಕಾಯುವಂಥ ಸ್ಥಿತಿ ನಿರ್ಮಾಣವಾಗಿತ್ತು. ಊರಿನ ಗಂಡಸರು ಕೆರೆ ಬದಿಗೋ, ತಮ್ಮ ಕರೆಂಟ್ ರೂಂನ ಬಳಿಗೋ ಹೋಗುತ್ತಾರೆ. ಮೂತ್ರ ವಿಸರ್ಜನೆ ನಂತರ, ಸ್ವಚ್ಛತಾ ಕಾರ್ಯಕ್ಕೆ ನೀರು ಬೇಕೇಬೇಕೆಂಬ ನಿಯಮ ಕೆಲವರಿಗಿಲ್ಲ. ಯಾವುದೋ ಹಸಿರು ಗಿಡದ ಸೊಪ್ಪೋ, ಅಂಗೈ ಅಗಲದ ಕಾಗದ ಸಿಕ್ಕಿದರೂ ಸಾಕು! ಆನೂಡಿ ರಸ್ತೆಯಲ್ಲಿ ಬಸ್ ಇಳಿದು, ಊರು ಪ್ರವೇಶಿಸಲಿರುವ ೪-೫ ಅಡಿ ಅಗಲದ ರಸ್ತೆಯಲ್ಲಿ ಬರುವ ಪ್ರತಿಯೊಬ್ಬರೂ, ಮೂಗಿಗೆ ಕರವಸ್ತ್ರವೊಡ್ಡುವುದು ಅನಿವಾರ್ಯ. ಪ್ರತಿಯೊಂದು ಹೆಜ್ಜೆಯನ್ನೂ ಬಹಳ ಲೆಕ್ಕಾಚಾರ ಹಾಕಿ, ರೇಖಾಗಣಿತದಲ್ಲಿ ರೇಖೆ ಎಳೆದಂತೆ, ಕೋನಗಳನ್ನು ಸೇರಿಸಿದಂತೆ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಕಾಲಿನ ಜತೆ ಗಲೀಜು ಸಂಬಂಧ ಬೆಳೆಸುತ್ತದೆ! ಯಾಕೆ ಹೀಗೆ? ಕಂಪ್ಯೂಟರ್ ಯುಗದಲ್ಲೂ ಇಂಥ ಅಜ್ಞಾನ ಉಳಿದಿರುವುದನ್ನು ಕಂಡಾಗ, ತುಸು ಬೇಸರವಾಗುತ್ತದೆ. ನೈರ್ಮಲ್ಯದ ಬಗ್ಗೆ ಕಾಳಜಿ ಮೂಡಿಸುವ ನಾನಾ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಂಡಿದ್ದರೂ, ಅವು ಆನೂಡಿಯನ್ನು ತಲುಪಿದಂತಿಲ್ಲ. ಜನರಿಗೆ ರಸ್ತೆಬದಿ ಕೂತು, ಹೊಟ್ಟೆಯಲ್ಲಿರುವುದನ್ನು ಖಾಲಿ ಮಾಡಿದರಷ್ಟೆ ಸಮಾಧಾನ! ನಿಮ್ಮೂರಿನಲ್ಲಿ ಏನಿಲ್ಲದಿದ್ದರೂ ಎಲ್ಲಾ ಕಾಲ ಸೂರ್ಯಕಾಂತಿ ಹೂವುಗಳು ರಸ್ತೆ ಬದಿಯಲ್ಲಿ ಮಾತ್ರವಲ್ಲ, ರಸ್ತೆ ಮೇಲೂ ಹರಡಿರುತ್ತವೆ ಎಂದು ಪಟ್ಟಣದ ಗೆಳೆಯನೊಬ್ಬ ಗೇಲಿ ಮಾಡುತ್ತಿರುತ್ತಾನೆ. ನಿರ್ಮಲ ಕರ್ನಾಟಕ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಒಂದಿಷ್ಟು ಹಣವನ್ನು ಸರಕಾರ ನೀಡಿದ್ದು, ಜನರು ಆ ಹಣವನ್ನು ಪಡೆದದ್ದು ಎಲ್ಲವೂ ಆಗಿದೆ. ಕೆಲವು ಶೌಚಾಲಯಗಳು ಅರ್ಥದಲ್ಲೇ ನಿಂತಿವೆ. ಪೂರ್ಣಗೊಂಡಿರುವ ಕೆಲವು ಶೌಚಾಲಯಗಳನ್ನು ಸ್ಟೋರ್ ರೂಂನಂತೆ ಮೂಟೆಗಳನ್ನು ಹಾಕಲು ಬಳಸುತ್ತಿದ್ದಾರೆ!. ಶೌಚ ಕೊಠಡಿ ಬಳಸಲು ಇಲ್ಲಿನ ಜನರಿಗೆ ಎಂಥದ್ದೋ ಮುಜುಗರ! ಇಲ್ಲಿನ ಶೌಚ ಪುರಾಣ ಕೇಳಿ, ನಿಮಗೆ ಅಚ್ಚರಿಯಾಗಬಹುದು. ಆನೂಡಿಗೆ ಬಂದರೆ ಅದು ಅನುಭವಕ್ಕೆ ಬರುತ್ತದೆ. ದಟ್ಟ ಬಿಸಲಿನ ಬೆನ್ನುತಟ್ಟುವಂತೆ ಎದ್ದು ನಿಂತ ಜಾಲಿ ಗಿಡಗಳು, ಅವುಗಳ ಅಡಿಯಲ್ಲಿ ಮಲಮೂತ್ರದ ರಾಶಿ. ಅದರಿಂದ ಸೂಸುವ ತಾಜಾ ಪರಿಮಳ! ಆನೂಡಿ ಬಗ್ಗೆ ಅಸಹ್ಯ ಪಟ್ಟುಕೊಳ್ಳಲು, ಹೊಸಬರಿಗೆ ಇನ್ನೇನು ಬೇಕು? ಆನೂಡಿ ಎಂದಾಗ ಅಜ್ಜಿಮನೆಯ ಹಿತ್ತಲಿನಲ್ಲಿದ್ದ ದಾಳಿಂಬೆ ಗಿಡ ನೆನಪಾಗುತ್ತದೆ. ಗಿಡ ಸಣ್ಣದಾದರೂ, ಮೈತುಂಬ ಹಣ್ಣು! ಮನೆ ಮಗನಂತಿದ್ದ ನರಸಪ್ಪ (ನಾನು ಈ ಮನೆಯ ದೊಡ್ಡ ಮಗ ಎಂದು ಆತನೇ, ಊರು ಜನರಿಗೆ ಆಗಾಗ ಹೇಳುತ್ತಿದ್ದ. ಜೀತದ ಪರಿಕಲ್ಪನೆ ಆಗಂತೂ ಇರಲಿಲ್ಲ. ನನ್ನ ಅಜ್ಜಿಯ ಸೆರಗಿನಡಿಯಲ್ಲಿ ಸುಖ ಉಂಡಿದ್ದ ನರಸಪ್ಪ ಮನೆಯವನೇ ಆಗಿ ಬಿಟ್ಟಿದ್ದ) ತರುತ್ತಿದ್ದ ಹಲಸಿನ ಹಣ್ಣು, ಮಾವಿನ ಹಣ್ಣು ಈಗಲೂ ಬಾಯಲ್ಲಿ ನೀರೂರುತ್ತದೆ. ಕಬ್ಬನ್ನು ತಂದು, ಸಣ್ಣಗೆ ಪಿಚ್ಚಗೆ ಮಾಡಿ ಕೊಡುವಲ್ಲಿ ಆತನಿಗೆ ಎಂಥದ್ದೋ ಅಕ್ಕರೆ. ನಾವು ಸಾಕು ಎಂದಷ್ಟು, ಇನ್ನಷ್ಟು ಮತ್ತಷ್ಟು ಎಂದು ಕೊಡುತ್ತಲೇ ಇದ್ದ. ತೋಟಗಳು ಬೋಳಾಗಿ, ಈಗ ಅವೆಲ್ಲಾ ಸೈಟುಗಳಾಗಿವೆ. ಊರು ಮುಂದಿನ ನಮ್ಮಜ್ಜಿಯವರ ತಿಪ್ಪೆಯಿದ್ದ ಹೊಲವನ್ನು ಸರಕಾರವೇ ಖರೀದಿಸಿ, ಆಶ್ರಯ ಯೋಜನೆಯಡಿ ನಿವೇಶನವಾಗಿ ಪರಿವರ್ತಿಸಿದೆ. ಅಲ್ಲಿನ ನೀರಿನ ಆಸರೆಯಾಗಿದ್ದ ವೊಡ್ಡು ಮತ್ತು ಬಣವೆಯಲ್ಲಿದ್ದ ಹತ್ತಾರು ಹಣ್ಣಿನ ಮರಗಳು ಈಗ ನೆನಪಷ್ಟೆ. ಮಳೆಯನ್ನೇ ಕೃಷಿಗಾಗಿ ನಂಬಿರುವ ಇಲ್ಲಿನ ಜನರು ಮೊದಲು ಸಮೃದ್ಧವಾಗಿಯೇ ಇದ್ದರು. ಕಾಲಕಾಲಕ್ಕೆ ಮಳೆಯಾಗುತ್ತಿತ್ತು. ಕೆರೆಯಲ್ಲಿ ನೀರಿರುತ್ತಿತ್ತು. ಭತ್ತ, ಕಬ್ಬು, ರಾಗಿ, ಅಲಸಂದೆ, ಅವರೆ, ಹೆಸರುಕಾಳು, ಸೂರ್ಯಕಾಂತಿ, ಮೆಣಸಿನಕಾಯಿ -ಹೀಗೆ ಎಲ್ಲವನ್ನೂ ಬೆಳೆಯುತ್ತಿದ್ದರು. ಅವುಗಳನ್ನು ಕಟ್ಟಿಡಲು ಗೋಣಿ ಚೀಲಗಳು ಸಾಕಾಗದೇ, ಮನೆಯ ಮೂಲೆಗಳಿಗೆ ರಾಶಿ ಸುರಿಯುತ್ತಿದ್ದರು. ಮನೆಯಲ್ಲಿನ ವಾಡೆಗಳಲ್ಲಿ ಧಾನ್ಯ ಲಕ್ಷ್ಮಿ ನೆಲೆ ನಿಂತಿದ್ದಳು. ಭೂಮಿಯೊಳಗಿನ ಕಣಜಗಳು ಸಮೃದ್ಧವಾಗಿರುತ್ತಿದ್ದವು. ಮಾವಿನ ತೋಪು, ಆಲೆಮನೆ, ತೋಟಗಳು ಕಣ್‌ಕುಕ್ಕುವಂತಿದ್ದವು. ಬಾಂಬೆ ಮಿಠಾಯಿ, ಪಾಪನ್ ಪಪ್ಪು, ಐಸ್ ಕ್ಯಾಂಡಿ, ಬಟ್ಟೆ ಪಿನ್ -ಹೀಗೆ ಏನೇ ಬರಲಿ, ನಮ್ಮಜ್ಜಿ ದುಡ್ಡು ಕೊಟ್ಟದ್ದಕ್ಕಿಂತ ರಾಗಿ ಕೊಟ್ಟಿದ್ದೆ ಹೆಚ್ಚು. ಮೊರಗಳಲ್ಲಿ ತುಂಬಿತುಂಬಿ ಕೊಡುವುದು ನಮ್ಮಜ್ಜಿ ಪದ್ಧತಿಯಾಗಿತ್ತು. ಮನೆಯಲ್ಲಿ ಹಸು, ಎಮ್ಮೆ, ಎತ್ತು, ಕರು -ಹೀಗೆ ಜಾನುವಾರುಗಳಿಗೊಂಡು ಜಾಗ. ಮನೆಯಲ್ಲಿ ಬೆಣ್ಣೆ, ತುಪ್ಪ, ಮೊಸರಿಗೆ ಎಂದೂ ಕೊರತೆ ಇರಲಿಲ್ಲ. ಊರಿನ ನಾನಾ ಮಂದಿ ಮಜ್ಜಿಗೆ ಕೊಡಕ್ಕಾ, ಮೊಸರು ಕೊಡಕ್ಕಾ ಎಂದು ಬಟ್ಟಲಿಡಿದು ಬರುತ್ತಿದ್ದರು. ನಮ್ಮಜ್ಜಿ ಇಲ್ಲ ಎಂಥದ್ದು ನನಗಂತೂ ನೆನಪಿಲ್ಲ. ಆದರೆ ಅದೆಲ್ಲವೂ ಈಗ ಗತಕಾಲದ ವೈಭವ. ಕಳೆದ ೧೦-೧೫ ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ. ಬಾವಿಯಲ್ಲಿನ ನೀರು ಬತ್ತಿ ಬಹಳ ವರ್ಷಗಳಾಗಿವೆ. ಪೈಪೋಟಿಗೆ ಬಿದ್ದವರಂತೆ ಕೊರೆಸಿದ ಕೊಳಾಯಿಗಳಲ್ಲಿ ಕೆಲವು ಕಾಲೆತ್ತಿವೆ. ಬೋರು, ಮೋಟರ್‌ಗೆ ಸಾವಿರಾರು ರೂಪಾಯಿ ಸುರಿದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಕೆರೆ ತುಂಬಿ ಎಷ್ಟು ವರ್ಷವಾಯಿತೋ ಗೊತ್ತಿಲ್ಲ. ಮುತ್ಯಾಲಮ್ಮನ ಪರಿಸೆ ಮಾಡದ ಕಾರಣ, ಮಳೆಯಿಲ್ಲ ಎಂದು ಮೊನ್ನೆ ಪೂಜಾರಿ ಮೈತುಂಬಿಕೊಂಡಿದ್ದ ಆಂಜನೇಯ ಸ್ವಾಮಿ ಹೇಳಿದನಂತೆ. ನನ್ನಪ್ಪನಿಗೆ ನನ್ನಜ್ಜ ಬರೆಯುತ್ತಿದ್ದ ಬಹುತೇಕ ಕಾಗದಗಳಲ್ಲಿ, ‘ಇಲ್ಲಿ ಮಳೆಯಿಲ್ಲ‘ ಎಂಬ ಸಾಲು ಸಾಮಾನ್ಯವಾಗಿಬಿಟ್ಟಿದೆ. ಮೊನ್ನೆ ಸಿಕ್ಕಿದ್ದ ತಾತಾ, ಮಳೆ ಕೊರತೆಯ ಬಗ್ಗೆಯೇ ಮಾತಾಡುತ್ತಿದ್ದರು. ವ್ಯವಸಾಯ ಲಾಸಿನ ಬಾಬತ್ತು ಎಂದು ಇಲ್ಲಿನ ಜನರು ಭಾವಿಸಿದ್ದಾರೆ. ಮನೆ ಮಕ್ಕಳು ಪಟ್ಟಣ ಸೇರಿ, ಹೊಟ್ಟೆ ಪಾಡು ನೋಡಿಕೊಂಡಿದ್ದಾರೆ. ನಮ್ಮ ಕಾಲವಂತೂ ಹೀಗಾಯಿತು ಅವರಾದರೂ ಸುಖವಾಗಿರಲಿ ಎಂಬುದು ಅನೇಕರ ಮಾತು. ಹಸಿರ ಜಾಗದಲ್ಲೀಗ ಬರೀ ಸೀಮೆ ಜಾಲಿಯೇ ನಿಂತಿದೆ. ‘ಏಕೆ ಓಡುವಿರಿ ನಿಲ್ಲಿ ಮೋಡಗಳೇ, ನಾಲ್ಕು ಹನಿಯ ಚೆಲ್ಲಿ’ ಎಂಬ ಕೂಗು ಮುಷ್ಕರ ಹೂಡಿರುವ ಮಳೆ ಮೋಡಗಳಿಗೆ ಕೇಳಿಸುತ್ತಿಲ್ಲ. ಮನೆಮಂದಿಗಾಗುವಷ್ಟು ಬೆಳೆದು ಸಂತೃಪ್ತರಾಗಿದ್ದ ನನ್ನ ಅಜ್ಜಿ ಮನೆಯವರೇ ಈಗ, ಅಂಗಡಿಯಲ್ಲಿ ಅಕ್ಕಿ ತರುತ್ತಿದ್ದಾರೆ. ಆಲೆಮನೆ ಎಂಬುದು ಎಲ್ಲಿ ಹೋಯಿತೋ? ಬೆಲ್ಲದ ಘಮಲು ಮನೆಯಲ್ಲೀಗ ಉಳಿದಿಲ್ಲ. ಪ್ಲಾಸ್ಟಿಕ್ ಕವರ್‌ನಲ್ಲಿ ಕೆ.ಜಿ.ಲೆಕ್ಕದಲ್ಲಿ ಸಕ್ಕರೆ ತರುವ ನನ್ನ ತಾತನ ಕಂಡಾಗ, ಸಕ್ಕರೆ ರಾಜನಿಗೆ ಎಂಥಾ ಸ್ಥಿತಿ ಬಂತು ಅನ್ನಿಸುತ್ತದೆ? ಬೆಂಗಳೂರಿನಲ್ಲಿರುವ ಮಗ, ಜಮೀನನ್ನು ಮಾರೋಣ ಅನ್ನುತ್ತಿದ್ದಾನಂತೆ. ಹಳ್ಳಿಯಲ್ಲಿ ಭೂಮಿ ಕೇಳೋರಿಲ್ಲ. ಇಲ್ಲಿ ಆ ಹಣದಲ್ಲಿ ಸೈಟು ತೆಗೆದರೆ, ಒಂದೆರಡು ವರ್ಷಕ್ಕೆ ದ್ವಿಗುಣವಾಗುತ್ತೆ ಅನ್ನೋದು ಅವರ ಲೆಕ್ಕಾಚಾರ.

2 comments:

ರಮೇಶ್ ಹಿರೇಜಂಬೂರು said...

hettavarige heggana muddu geleya. hagagi yaaru avara uurannu bittu koduvudilla. adu saamanya kano...

Unknown said...

ನಮ್ಮೂರಿನ ಬಗ್ಗೆ ಬರೆಯಬೇಕಾದರೆ ಸಂಪೂರ್ಣ ಮಾಹಿತಿ ಪಡೆದು ಬರೆಯಪ್ಪ ನಟೇಶ..