‘ ಸ್ಥಾವರಕ್ಕಳಿವುಂಡು, ಜಂಗಮಕ್ಕಳಿವಿಲ್ಲ ’ ಎಂಬ ಮಾತಿನಲ್ಲಿ ಈಗಿನ ಯುವಕರಿಗೆ ನಂಬಿಕೆ. ಈಗೀಗ ಕೆಲಸ ಹುಡುಕುವುದೆಷ್ಟು ಸಾಮಾನ್ಯವೋ, ಕೆಲಸ ಬಿಡುವ ಪ್ರವೃತ್ತಿಯೂ ಸಾಮಾನ್ಯವೆನ್ನಿಸಿದೆ. ಪದೇಪದೇ ಕೆಲಸ ಬದಲಿಸುವ ಮನಸ್ಥಿತಿಯನ್ನು ಯುವಕರು ಬೆಳೆಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಐಟಿ ರಂಗದಲ್ಲಿ ಈ ವಲಸೆಯಾಟ ಹೆಚ್ಚು.
ಸರಕಾರಿ ಉದ್ಯೋಗ ಸಿಕ್ಕಿದರೆ, ಬದುಕು ಸಾರ್ಥಕವಾಯಿತು ಎನ್ನುವ ಭಾವನೆ ಮೊದಲು ಅನೇಕರಲ್ಲಿತ್ತು. ಆದರೆ, ಸಾಫ್ಟ್‌ವೇರ್ ಹಕ್ಕಿ ರೆಕ್ಕಿ ಬಿಚ್ಚಿದ ಮೇಲೆ ಪರಿಸ್ಥಿತಿ ಬದಲಾಗಿದೆ. ಡಾಲರ್‌ಗಳಲ್ಲಿ ಸಂಬಳವನ್ನು ಲೆಕ್ಕ ಹಾಕಲಾಗುತ್ತಿದ್ದು, ಸಂಬಳ ನಾಲ್ಕೈದು ಅಂಕೆಗಳನ್ನು ತಲುಪಿದೆ. ಕೆಲಸ ಎಲ್ಲಿ, ಹೇಗೆ ಅನ್ನುವುದಕ್ಕಿಂತಲು ಸಂಬಳ ಎಷ್ಟು ಅನ್ನೋದು ಈಗಿನ ಪೀಳಿಗೆಯ ಮೂಲಭೂತ ಪ್ರಶ್ನೆ. ಸಂಬಳದ ಅಂಕೆ-ಸಂಖ್ಯೆಗಳ ಬೆನ್ನತ್ತಿಯೋ ಅಥವಾ ಬೇರೆ ಕಾರಣಕ್ಕೋ, ಕಂಪನಿಯಿಂದ ಕಂಪನಿಗೆ ಜಿಗಿಯುತ್ತಲೇ ಇರುತ್ತಾರೆ.
ಗೂಡಿಂದ ಗೂಡಿಗೆ ಹಾರುವ ಪ್ರವೃತ್ತಿ ತಡೆಯಲು, ಪ್ರತಿಭಾವಂತರು ಮತ್ತು ಅನುಭವಿಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಕಂಪನಿಗಳು ಅನೇಕ ಕಸರತ್ತುಗಳನ್ನು ಮಾಡುತ್ತವೆ. ಆರು ತಿಂಗಳಿಗೊಮ್ಮೆ ಸಂಬಳದಲ್ಲಿ ಹೆಚ್ಚಳ(ಕನಿಷ್ಠ ಶೇ.೧೫ರಿಂದ ೨೦), ವರ್ಷಕ್ಕೆರಡು ಸಲ ಮನರಂಜನೆಗಾಗಿ ಪಿಕ್ನಿಕ್, ಆಗಾಗ ಕೆಲಸದ ಒತ್ತಡ ಕಡಿಮೆ ಮಾಡಲು ನಾನಾ ಕಾರ್ಯಕ್ರಮ, ತರಬೇತಿ -ಹೀಗೆ ಕಂಪನಿಗಳು ಉದ್ಯೋಗಿಗಳನ್ನು ಹಿಡಿದಿಡಲು ಸೌಲತ್ತುಗಳನ್ನು ಒದಗಿಸುತ್ತವೆ. ಆದರೆ ಈ ಟೆಕ್ಕಿಗಳು ವರ್ಷಗಳಿರಲಿ ಒಂದಷ್ಟು ತಿಂಗಳೂ ಒಂದೆಡೆ ನಿಲ್ಲುವ ಜಾಯಮಾನವನ್ನೇ ಹೊಂದಿಲ್ಲ. ಕೆಲಸಕ್ಕೆ ಸೇರಿದ ದಿನವೇ, ಕಾಲು ತೆಗೆಯುವ ಲೆಕ್ಕಾಚಾರ ಅವರ ಮನದಲ್ಲಿ!
ನುರಿತ ಕೆಲಸಗಾರನಿಗೆ ರತ್ನಗಂಬಳಿ
ಬಿಸಿಲಲ್ಲಿ ಅಲೆದಲೆದು ಕೆಲಸ ಹುಡುಕುವ ದಿನಗಳು ಇವಲ್ಲ. ಮರ್ಜಿ, ಬಕೆಟ್ ಹಿಡಿಯೋದು, ದಕ್ಷಿಣೆ ಸಲ್ಲಿಸೋದು ಇವೆಲ್ಲ ಇಲ್ಲಿಲ್ಲ. ‘ಕೆಲಸ ಗೊತ್ತಿದೆಯಾ? ನೀವು ನಮ್ಮಲ್ಲಿಗೆ ಬನ್ನಿ ’ ಎಂದು ಐಟಿ ಕಂಪನಿಗಳು ರತ್ನಗಂಬಳಿ ಹಾಸಿ ಕೈಬೀಸಿ ಕರೆಯುತ್ತವೆ. ಫೋನಲ್ಲಿಯೇ ಕೆಲವು ಸಲ ಸಂದರ್ಶನಗಳು ನಡೆಯುತ್ತವೆ. ಸಂಬಳದ ಬಗ್ಗೆ ಚೌಕಾಶಿ ನಡೆದು, ಕೊನೆಗೆ ಜಾಣರ ಬೆನ್ನತ್ತುತ್ತವೆ. ದಿನಕ್ಕೆ ಎರಡು ಸಲ ಕಾಲ್ ಮಾಡಿ, ಆಹ್ವಾನಿಸುತ್ತವೆ.
ಒಂದಷ್ಟು ವೆಬ್‌ಸೈಟ್‌ಗಳಲ್ಲಿ ಬಯೋಡೇಟಾ ತೇಲಿಬಿಟ್ಟು, ದಿನವೂ ಇ-ಮೇಲ್ ಚೆಕ್ ಮಾಡುವುದು, ಈಗಿನ ಹುಡುಗರ ದಿನಚರಿ. ಕ್ಯಾಂಪಸ್ ಸಂದರ್ಶನಗಳು ಜನಪ್ರಿಯವಾಗುತ್ತಿದ್ದು, ಕೋರ್ಸ್ ಮುಗಿಸುವ ಮುನ್ನವೇ ಉದ್ಯೋಗ ಸಿದ್ಧವಾಗಿ ಕೂತಿರುತ್ತದೆ. ಡಿಗ್ರಿ ನಂತರ ಉದ್ಯೋಗ ಸಂಬಂ ಕೋರ್ಸ್‌ಗಳನ್ನು ಮುಗಿಸಿದರೆ , ಇಂಗ್ಲಿಷ್ ಭಾಷೆ ಮೇಲೆ ತುಸು ಹಿಡಿತ ಸಾಸಿ, ಪಿಯುಸಿ ಓದುವಾಗಲೇ ಒಂದಿಷ್ಟು ಕಂಪ್ಯೂಟರ್ ಕಲಿತು ಬಿಟ್ಟರೆ, ನಿರುದ್ಯೋಗದ ಶಾಪ ಎಂದಿಗೂ ಕಾಡುವುದಿಲ್ಲ. ಆರಂಭದಲ್ಲಿಯೇ ೬-೭ ಸಾವಿರದ ಕೆಲಸ ಸಿಕ್ಕೋದು ಕಷ್ಟ ಅಲ್ಲವೇ ಅಲ್ಲ. ಅನುಭವ ಹೆಚ್ಚಿದಂತೆಲ್ಲ, ಸಂಬಳ ಮತ್ತು ಸವಲತ್ತುಗಳು ಸಹಾ ಹೆಚ್ಚುತ್ತಿರುತ್ತದೆ. ಪಡೆದ ಅನುಭವ, ಇನ್ನೊಂದು ಕಂಪನಿ ಪ್ರವೇಶಿಸಲು ರಹದಾರಿ. ಹೀಗಾಗಿಯೇ ಬಿಇ ಮುಗಿಸಿದ ಯುವಕರು ಆರಂಭದಲ್ಲಿ ಐದಾರು ಸಾವಿರ ಸಂಬಳದ ಕೆಲಸ ಸಿಕ್ಕರೂ ನಿರಾಳವಾಗಿಯೇ ಕೆಲಸ ಮಾಡುತ್ತಾರೆ. ಸಣ್ಣಪುಟ್ಟ ಕಂಪನಿಗಳಲ್ಲಿ ಕೆಲಸ ಕಲಿಯುವುದು ಮತ್ತು ಅನುಭವ ಗಳಿಸುವುದು ಅವರ ಮುಂದಿರುವ ತಕ್ಷಣದ ಗುರಿ.
ಕೇವಲ ಐದಾರು ಸಾವಿರದಿಂದ ವೃತ್ತಿ ಆರಂಭಿಸಿದ ನನ್ನ ಗೆಳೆಯ ಪ್ರಹ್ಲಾದನ ಈಗಿನ ಸಂಬಳ ೪೦ಸಾವಿರ ರೂಪಾಯಿ. ಬಿ.ಕಾಂ. ಮುಗಿಸಲಾಗದೇ ಒದ್ದಾಡುತ್ತಿದ್ದ ಆತ, ಡೇಟಾ ಎಂಟ್ರಿ ಕೆಲಸಕ್ಕೆ ಸೇರಿಕೊಂಡ. ಆರಂಭದಲ್ಲಿ ಟ್ರೈನಿಯಾಗಿ ಕಂಪನಿಯೊಂದಕ್ಕೆ ಪ್ರವೇಶ ಪಡೆದ. ಕಲಿಯುವ ಉತ್ಸಾಹವಿತ್ತು, ಅವಕಾಶವೂ ಇತ್ತು. ಸಮಯ ಪರಿಪಾಲನೆ, ಕೆಲಸದ ಮೇಲಿನ ಶ್ರದ್ಧೆಯಿಂದ ಕಂಪನಿಯ ಆಡಳಿತ ಮಂಡಳಿಗೆ ಆತ ಅಚ್ಚುಮೆಚ್ಚು. ಒಂದೊಂದೇ ಮೆಟ್ಟಿಲನ್ನು ಆತ ಏರಿದ್ದ. ಕೆಲಸದಲ್ಲಿ ಪರಿಣತನಾಗಿದ್ದ. ಟೀಮ್ ಮೆಂಬರ್ ಆಗಿ, ಟೀಮ್ ಲೀಡರ್ ಆಗಿ ಆತ ಈಗ ಬೆಳೆದು ನಿಂತಿದ್ದಾನೆ.
ಆತನ ಗುರಿ ವಿಸ್ತಾರಗೊಂಡಿದೆ, ಪಯಣ ಇನ್ನಷ್ಟು ಬೆಳೆದಿದೆ. ‘ಒಬ್ಬರ ಕೈಕೆಳಗಿನ ಕೆಲಸ ಸಾಕು ಗುರೂ.. ಒಂದು ಚೂರು ದುಡ್ಡು ಸಿಕ್ಕರೆ, ನಾನೇ ಪುಟ್ಟದೊಂದು ಕಂಪನಿ ಶುರು ಮಾಡುತ್ತೇನೆ ’ ಎನ್ನುತ್ತಾನೆ ಪ್ರಹ್ಲಾದ.
ಗೂಡು ಬಿಡಲೊಂದು ಕಾರಣ
‘ನಿಮ್ಮ ಕೆಲಸ ನಮಗೆ ತೃಪ್ತಿಯಾಗುತ್ತಿಲ್ಲ’ ಎಂದು ಕೆಲವು ಸಲ ಕಂಪನಿಗಳೇ ಗೂಡು ಬಿಡಿಸುತ್ತವೆ. ಆದರೆ ಬಹುತೇಕ ಸಲ ಉದ್ಯೋಗಿಗಳೇ ಕೆಲಸ ಬದಲಿಸುತ್ತಾರೆ.
ಸಂಬಳದ ಆಮಿಷ, ಪ್ರತಿಷ್ಠಿತ ಕಂಪನಿಗಳ ಬಗೆಗಿನ ಮೋಹ, ಇನ್ನಷ್ಟು ಕೆಲಸ ಕಲಿಯುವ ಬಯಕೆ, ಹೊಸತಿಗಾಗಿ ಅನ್ವೇಷಣೆ, ಹಾಲಿ ಕಂಪನಿಯಲ್ಲಿನ ಕೆಲವು ಕಿರಿಕಿರಿಗಳು -ಇವು ಕೆಲಸ ಬಿಡಲು ಮುಖ್ಯವಾದ ನಾಲ್ಕು ಕಾರಣಗಳು.
ನೈಟ್ ಶಿಫ್ಟ್‌ಗಳ ಕಿರಿಕಿರಿ, ಅಕ ಕೆಲಸದೊತ್ತಡ, ರಜೆಗಳ ಕೊರತೆ, ಉದ್ಯೋಗದಲ್ಲಿ ಅಸ್ಥಿರತೆ ಅಂಶಗಳು ಕೆಲವರನ್ನು ಸರಕಾರಿ ನೌಕರಿಯತ್ತ ಸೆಳೆಯುತ್ತವೆ. ಆದರೆ ಇಂಥ ಉದಾಹರಣೆಗಳು ಅತಿ ವಿರಳ.
Friday, June 13, 2008
Subscribe to:
Posts (Atom)