Thursday, June 28, 2007

ಇದು ನಾವು ನೋಡಿದ್ದು, ನಂಬಿದರೆ ನಂಬಿ ಬಿಟ್ಟರೆ ಬಿಡಿ..!?


ಈ ಕಾಲದಲ್ಲೂ ಇದೆಲ್ಲ ಏನ್ರೀ? ಚಂಡಿಯಂತೆ? ಚೌಡೇಶ್ವರಿಯಂತೆ ಎಂದು ಬಾಯಿ ಸೊಟ್ಟಗೆ ಮಾಡಬೇಡಿ. ವಿಜ್ಞಾನ ಲೋಕಕ್ಕೆ ಸವಾಲು ಹಾಕುವಂತಹ ನಿದರ್ಶನವೊಂದು ನಮ್ಮ ನಡುವೆಯೇ ಇದೆ!!!


ನಂಬೋರು ನಂಬಬಹುದು. ನಂಬಲ್ಲ ಅನ್ನೋರು, ಕಾರಣ ಕೊಟ್ಟರೇ, ಒಳ್ಳೆಯದು. ಕಾರಣ ಸದ್ಯಕ್ಕೆ ತೋಚುತ್ತಿಲ್ಲ ಎಂದ ಮಾತ್ರಕ್ಕೆ ವಿಚಾರವಂತರೆಲ್ಲರೂ, ದೇವರಿಗೆ ಅಡ್ಡಡ್ಡ ಬೀಳಿ ಎಂದು ಹೇಳುವುದು ನನ್ನ ಉದ್ದೇಶವಲ್ಲ. ಹೀಗೂ ಉಂಟು? ಅದೇ, ಯಾಕೆ ಹೀಗೆ ಎಂಬುದು ಜಗತ್ತಿಗೆ ಗೊತ್ತಾದರೆ ಒಳ್ಳೆಯದು.


ಮಂತ್ರಕ್ಕಿಂತಲೂ ಉಗುಳೇ ಜಾಸ್ತಿಯಾಯಿತು ಎಂದು ಬೇಸರಿಸಿಕೊಳ್ಳಬೇಡಿ. ಇನ್ನು ನೇರವಾಗಿ ವಿಚಾರಕ್ಕೆ ಬರುತ್ತೇನೆ. ಹಾಸನಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೆಗ್ಗಡಿಗೆರೆ ಅನ್ನುವುದು ಒಂದು ಕುಗ್ರಾಮ. ಆದರೆ ಅದೀಗ ಜಯಮ್ಮ ಎಂಬಾಕೆಯಿಂದ, ಎಲ್ಲರ ಗಮನ ಸೆಳೆಯುತ್ತಿದೆ.


ಈ ಜಯಮ್ಮ ಎಂಬ ಮಹಿಳೆ ಕಳೆದ 8ವರ್ಷದಿಂದ ಅನ್ನ-ನೀರು ಮುಟ್ಟಿಲ್ಲ. ಹಾಸಿಗೆ ಬಿಟ್ಟು ಎದ್ದಿಲ್ಲ! ಆಕೆಯನ್ನು ಸಾಕ್ಷಾತ್ ಚೌಡೇಶ್ವರಿದೇವಿ ಎಂದು ನಂಬುವ ಮಂದಿ ಗ್ರಾಮದಲ್ಲಿ ಬಹುಸಂಖ್ಯಾತರು.


ಕತ್ತಲ ಕೋಣೆಯ ಹಾಸಿಗೆ ಮೇಲೆ ದಪ್ಪನೆಯ ಉಲ್ಲನ್ ರಗ್ಗಿನಡಿ ಮಲಗಿರುವ ಜಯಮ್ಮ, ಕಳೆದ 8ವರ್ಷಗಳಲ್ಲಿ 3 ಸಲ ಮಾತ್ರ ಹಾಸಿಗೆ ಬಿಟ್ಟು ಎದ್ದಿದ್ದಾಳೆ. ಬಯಲಿಗೆ ಬಂದಿದ್ದಾಳೆ. ಊರಲ್ಲಿ ಚೌಡೇಶ್ವರಿ ಉತ್ಸವವಿದ್ದರೇ ಮಾತ್ರ, ಅವಳು ಹಾಸಿಗೆ ಬಿಟ್ಟು ಮೇಲಕ್ಕೆ ಏಳುತ್ತಾಳೆ. ದೇವಸ್ಥಾನಕ್ಕೆ ಬರುತ್ತಾಳೆ. ಆಮೇಲೆ ತಾನುಂಟು, ತನ್ನ ಹಾಸಿಗೆಯುಂಟು.


ಹಾಸಿಗೆ ಮೇಲೆ ಮಲಗುವ ಅವಳು ಬದುಕಿದ್ದಾಳೆ ಅನ್ನುವುದಕ್ಕೆ ಒಂದೇ ನಿದರ್ಶನ, ಉಸಿರಾಟ! ಇಂಥದ್ದೊಂದು ವಿಲಕ್ಷಣ ಸಂಗತಿಯನ್ನು ಟೀವಿ 9ತಂಡ, ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದೆ. ಕಳೆದ ಭಾನುವಾರ 'ಹೀಗೂ ಉಂಟು?!' ಕಾರ್ಯಕ್ರಮದಲ್ಲಿ, ಜಯಮ್ಮನ ಬಗ್ಗೆ ಸಾಕಷ್ಟು ವಿಚಾರಗಳು ಪ್ರಸ್ತಾಪವಾದವು.


ಜಯಮ್ಮ ಮೊದಲು ಹೀಗಿರಲಿಲ್ಲ. ಎಲ್ಲ ಹೆಣ್ಣು ಮಕ್ಕಳಂತೆಯೇ ಇದ್ದಳು. ಮನೆ ಹಿತಕ್ಕಾಗಿ ಕೂಲಿ ಮಾಡುತ್ತಿದ್ದಳು. ಸಮಾಜದಲ್ಲಿ ನಮ್ಮದೂ ಒಂದು ಮನೆ ಅಂತ ಆಗಲಿ ಎಂದು ಕಾಸಿಗೆ ಕಾಸು ಸೇರಿಸುತ್ತಿದ್ದಳು. ಆಕೆ ದಿಟ್ಟೆ, ಜೊತೆಗೆ ಸ್ವಾಭಿಮಾನಿ.


ಇನ್ನೂ ವಿಚಿತ್ರವೆಂದರೆ ಜಯಮ್ಮ ಮದುವೆ ಸಹಾ ಆಗಿದ್ದಾಳೆ. ಹೊಳೆ ನರಸೀಪುರದ ಗಂಡನ ಮನೆಯಲ್ಲಿ ಆಕೆ ಒಂದು ದಿನ ಸಹಾ ಸರಿಯಾಗಿ ಸಂಸಾರ ಮಾಡಿಲ್ಲ. ಪ್ರಥಮ ರಾತ್ರಿಯ ದಿನವೇ, ಜಯಮ್ಮನನ್ನು 'ಅಕ್ಕ' ಎಂದು ಸ್ವತಃ ಆಕೆಯ ಗಂಡನೇ ಸಂಬೋಧಿಸಿದ್ದಾನೆ. ಹೆಂಡತಿಯನ್ನು ತವರಿಗೆ ಬಿಟ್ಟು, ಈ ಸಂಸಾರ ಬೇಡ ಎಂದು ವಾಪಸ್ಸು ಹೋಗಿದ್ದಾನೆ.


ಜಯಮ್ಮ ಊಟ ಮಾಡುತ್ತಿಲ್ಲ ಎಂದು ಆಕೆಯ ಅಣ್ಣ ರಮೇಶ್ ಮತ್ತು ಮನೆಯವರು ತಲೆ ಕೆಡಿಸಿಕೊಂಡಿದ್ದಾರೆ. ಸಾಲ-ಶೂಲ ಮಾಡಿ, ಮನೆಯಲ್ಲಿರುವ ಚಿನ್ನಾಭರಣ ಮಾರಿ, ತಮಗೆ ಸಾಧ್ಯವಿರುವ ವೈದ್ಯರನ್ನೆಲ್ಲ ಸಂಪರ್ಕಿಸಿದ್ದಾರೆ. ವೈದ್ಯರೆಲ್ಲರೂ, ದಿಕ್ಕು ತೋಚದೇ ಆಕಾಶ ನೋಡಿದಾಗ ರಮೇಶ್ ಕಕ್ಕಾಬಿಕ್ಕಿಯಾಗಿದ್ದಾನೆ. ಕೊನೆಗೆ ತಂಗಿಯನ್ನು ಮನೆಗೆ ಕರೆತಂದಿದ್ದಾನೆ.


ಮಗಳ ಹಾಸಿಗೆಯ ಪಕ್ಕವೇ ಕೂತಿರುವ ತಾಯಿಗೆ, ಮಗಳು ಸುಧಾರಿಸಿಕೊಂಡರೆ ಸಾಕು ಎನ್ನುವ ಆಸೆ. ಎದ್ದು ಊಟ ಮಾಡಿದರೆ ಸಾಕು ಎಂಬ ಬಯಕೆ. ಚೌಡೇಶ್ವರಿ ಉತ್ಸವ ಮೂರ್ತಿ ಮನೆ ಬಳಿಗೆ ಬಂದರೆ, ಜಯಮ್ಮ ಎದ್ದು ಕೂರುತ್ತಾಳೆ ಎಂಬ ಸಂಗತಿಯನ್ನು ಟೀವಿ 9 ತಂಡ ಪರೀಕ್ಷಿಸಿದೆ.


ಜನರು ಹೇಳುವಂತೆ, ಚೌಡೇಶ್ವರಿ ದೇವಿಯ ವಿಗ್ರಹ ಮನೆ ಬಾಗಿಲಿಗೆ ಬಂದ ತಕ್ಷಣ, ಹಾಸಿಗೆಯಿಂದ ತೆವಲಿಕೊಂಡು ಹೊರಬರುವ ಜಯಮ್ಮ ಭಕ್ತಿ ಭಾವದಿಂದ ನಡೆದುಕೊಳ್ಳುತ್ತಾರೆ. ನಂತರ ತಾವಾಗಿಯೇ ಎದ್ದು ನಿಲ್ಲುತ್ತಾರೆ. ಶುಭ್ರವಾಗಿ ಸ್ನಾನ ಮಾಡಿ, ಮಡಿ ಸೀರೆ ಉಟ್ಟು, ಚೌಡೇಶ್ವರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ದೇವಸ್ಥಾನದವರೆಗೆ ನಡೆದುಕೊಂಡು ಹೋಗುತ್ತಾರೆ. ಅವರ ಮುಖದಲ್ಲಿ ಆಯಾಸ ಕಾಣಿಸುವುದೇ ಇಲ್ಲ. ಈ ಪ್ರಕ್ರಿಯೆ ಸತತ 4ಗಂಟೆ ನಡೆಯಿತು. ನಂತರ ಯಥಾ ಪ್ರಕಾರ, ಜಯಮ್ಮ ಹಾಸಿಗೆ ಸೇರಿದರು.


ಟೀವಿ 9ತಂಡ ನೀರು ಕುಡಿಸುವ ಪ್ರಯತ್ನ ಮಾಡಿತು. ಬಲವಂತಕ್ಕೆ ನೀರು ಕುಡಿದ ಜಯಮ್ಮ, ಕೆಲವೇ ಸೆಕೆಂಡ್‌ಗಳಲ್ಲಿ ನೀರನ್ನೆಲ್ಲ ವಾಂತಿ ಮಾಡಿದಳು. ಜಯಮ್ಮನಿಗೆ ತಿನ್ನೋದಕ್ಕೆ ಆಸೆ. ಆದರೆ ತಿಂದದ್ದೆಲ್ಲ ವಾಂತಿಯಾಗುತ್ತೆ. ವಾಂತಿಯಲ್ಲಿ ರಕ್ತದ ಉಂಡೆಗಳು ಬೀಳುತ್ತವೆ ಎಂಬುದು ಅವರ ತಾಯಿಯ ವಿವರಣೆ.


ಇದೆಲ್ಲಾ ಯಾಕೆ ಅನ್ನೋ ಪ್ರಶ್ನೆಗೆ ಜಯಮ್ಮನ ಅಣ್ಣ ರಮೇಶ್ ಉತ್ತರ ನೀಡಿದ್ದಾರೆ. ನಮ್ಮದು ಚೌಡೇಶ್ವರಿ ದೇವಿಯನ್ನು ಪೂಜಿಸುವ ಕುಟುಂಬ. ದೇವಿಗೆ ಅಪಚಾರ ಮಾಡಿದ ನಮ್ಮ ತಂದೆ ಕುಷ್ಟರೋಗಕ್ಕೆ ಬಲಿಯಾದರು. ದೇವಿಯ ಅವಕೃಪೆಯಿಂದ ಹೀಗೆಲ್ಲ ಆಗುತ್ತಿದೆ ಅನ್ನುತ್ತಾರೆ ರಮೇಶ್.


ಜಯಮ್ಮನನ್ನು ಊರಿನ ಜನ ಚೌಡೇಶ್ವರಿಯೆಂದೇ ನಂಬಿದ್ದಾರೆ. ಆಕೆಯನ್ನು ಗೇಲಿ ಮಾಡಿದವರು ಅಷ್ಟಕಷ್ಟಗಳಿಗೆ ಸಿಲುಕಿದ ಉದಾಹರಣೆಗಳೂ ಇವೆಯಂತೆ. ಅವರವರ ನಂಬಿಕೆ ಅವರವರಿಗಿರಲಿ. 8ವರ್ಷ ಏನನ್ನೂ ತಿನ್ನದೇ, ಕುಡಿಯದೇ ಜೀವಂತ ಶವದಂತೆ ಹಾಸಿಗೆ ಮೇಲೆ ಬದುಕಲು ಸಾಧ್ಯವೇ? ಅದು ಹೇಗೆ? ಚೌಡೇಶ್ವರಿ ಬಂದಾಗ ಜಯಮ್ಮನ ಮೈಗೆ ಎಲ್ಲಿಂದ ಅಷ್ಟೊಂದು ಶಕ್ತಿ ಬರುತ್ತದೆ? ಮೂರನೇ ಜಗತ್ತಿನ ಇಂಥ ವಿಪರೀತಗಳನ್ನು ಸೀಳಿನೋಡುವುದಕ್ಕೆ ಯಾವ ಪ್ರಯೋಗಾಲಯ, ಯಾವ ಸಂಶೋಧಕನಿಗೆ ಆಸಕ್ತಿಯಿದೆ?

Monday, June 25, 2007

ನಟನೆ ಬಿಟ್ಟುಬೇರೆ ಗೊತ್ತಿಲ್ಲ..ನೀವು ಕೈಬಿಡಲಿಲ್ಲ-ಗಣೇಶ್‌


ಟ್ವಿಂಕಲ್‌ ಟ್ವಿಂಕಲ್‌ ಲಿಟ್ಟಲ್‌ ಸ್ಟಾರ್‌... ಗಣೇಶ್‌ ಈಗ ಸೂಪರ್‌ ಸ್ಟಾರ್‌’ ಅಂದರೆ ತಪ್ಪಾಗುತ್ತದೆ! ಹೌದು. ‘ಮುಂಗಾರು ಮಳೆ’ಯಿಂದ ಗಣೇಶ್‌ ‘ಸ್ಟಾರ್‌’ಆದರು ಅನ್ನುವಂತಿಲ್ಲ! ಕಾರಣ; ಗಣೇಶ್‌ ಮೊದಲೂ ಸ್ಟಾರ್‌ ಆಗಿದ್ದವರೇ...ಉದಯ ಟೀವಿಯ ‘ಕಾಮಿಡಿ ಟೈಂ’ ಮೂಲಕ ಗಣೇಶ್‌, ನಾಡಿನ ಮನೆಮನೆಯಲ್ಲೂ ಅಭಿಮಾನಿಗಳ ಸೃಷ್ಟಿಸಿಗೊಂಡವರು.

ಸೂರ್ಯಕಾಂತಿ ಹೂವಿನಂತೆ ಮುಖವರಳಿಸಿ, ಚಿನಕುರುಳಿಯಂತೆ ಮಾತು ಪೋಣಿಸುವ ಈ ಗಣೇಶ್‌ ಇಷ್ಟವಾಗಲು ಕಾರಣಗಳು ಅನೇಕ. ಪಕ್ಕದ ಮನೆ ಹುಡುಗನಂತೆ, ಈ ಹುಡುಗ ನಗ್ತಾನೆ. ಮಾತಾಡ್ತಾನೆ. ಹೀರೋಯಿಸಂನಿಂದ ಹೊರಬಂದು ಎಲ್ಲರೊಂದಿಗೆ ಬೆರೆಯುತ್ತಾನೆ. ಇದು ಅವರನ್ನು ಹತ್ತಿರದಿಂದ ಕಂಡವರು ಹೇಳುವ ಮಾತು.

ಆದರೆ ಒಂದಂತೂ ನಿಜ. ಶ್ರದ್ಧೆ-ಛಲ ಇದ್ದರೆ ಯಾರು ಬೇಕಾದರೂ ನಾಯಕನಾಗಬಹುದು ಅನ್ನುವುದಕ್ಕೆ ಗಣೇಶ್‌ ನಮ್ಮ ಮುಂದಿನ ಉದಾಹರಣೆ. ಗಾಂಧಿನಗರದಲ್ಲಿ ಅವರು ತುಳಿದ ಸೈಕಲ್‌ ವೆಸ್ಟ್‌ಆಗಿಲ್ಲ. ಅವರಿಗೀಗ ಕಾದದ್ದಕ್ಕೆ ಬಡ್ಡಿ ರೂಪದಲ್ಲಿ... ಚಕ್ರಬಡ್ಡಿ ರೂಪದಲ್ಲಿ ಪ್ರತಿಫಲ ಸಿಕ್ಕಿದೆ. ಅದೃಷ್ಟ ಬಾಗಿಲಿಗೆ ಬಂದು ತಗೋತಗೋ ಎಂದಿದೆ. ಗಣೇಶ್‌ರ ಇನ್ನೊಂದು ಆಸ್ತಿ ನಗೆ. ಈ ಹುಡುಗನ ನಗೆಗೆ ಸೋಲದವರ್ಯಾರು... (ಯೋಗರಾಜ್‌ ಭಟ್‌ಗೆ ಗಣೇಶ್‌ರ ನಗೆಮೊಗ ತುಂಬಾ ಇಷ್ಟವಾಯಿತಂತೆ! ).

ಈಗಂತೂ ಗಣೇಶ್‌ ಬಿಜಿ. ಈ ಮಧ್ಯೆಯೂ ಬಿಡುವು ಮಾಡಿಕೊಂಡು ಅವರು ಸಂದರ್ಶನ ನೀಡಿದ್ದಾರೆ. ಮಾತುಕತೆಯ ವಿವರ ನಿಮ್ಮ ಮುಂದೆ.

ನೀವು ಹೀರೋ ಆಗಲಿಲ್ಲ ಅಂದ್ರೆ ಏನ್‌ ಆಗ್ತಾಯಿದ್ರಿ?

ಏನೂ ಇಲ್ಲ. ಗಣೇಶ್‌ ಆಗಿಯೇ ಇರ್ತಾಯಿದ್ದೆ! ಸಿನಿಮಾಗೆ ಯಾಕೆ ಬಂದೆ ಅಂದ್ರೆ, ನನಗೆ ಅಭಿನಯ ಬಿಟ್ರೆ ಬೇರೇನೂ ಗೊತ್ತಿಲ್ಲ..

‘ಮುಂಗಾರು ಮಳೆ’ ಬಗ್ಗೆ ಹೇಳಿ? ನಿಮಗೆ ಇಷ್ಟವಾದ ಹಾಡು-ಸನ್ನಿವೇಶ- ಯಾವುದು?

ಹೇಳೋದು ಅಂದ್ರೆ, ಸಕತ್ತು ಖುಷಿಯಾಗುತ್ತಿದೆ. ನಾನು ಹೇಳೋದನ್ನು ಪ್ರೇಕ್ಷಕರು ಹೇಳುತ್ತಿದ್ದಾರೆ. ಸಾಕಲ್ವಾ? ನನಗೆ ಎಲ್ಲಾ ಹಾಡು ಇಷ್ಟ. ಅದರಲ್ಲೂ ‘ಅನಿಸುತಿದೆ ಯಾಕೋ ಇಂದು.. ’ ಸಕತ್ತು ಇಷ್ಟ. ಇಷ್ಟದ ಸನ್ನಿವೇಶ -ಹೆಂಡ ಕುಡೀತಾ, ಮಳೆಯಲ್ಲಿ ನೆನೆಯುತ್ತಾ, ಮನದ ಮಾತುಗಳ ಹೇಳುವುದು...

ನಿಮ್ಮ ಊರು? ನಿಮ್ಮ ಹಿನ್ನೆಲೆ.. ವಿದ್ಯಾಭ್ಯಾಸ ಇತ್ಯಾದಿ.. ಬಗ್ಗೆ ಒಂದೆರಡು ಮಾತು...

ನನ್ನೂರು, ನೆಲಮಂಗಲ ಬಳಿಯ ಅಡಕೆಮಾರನಹಳ್ಳಿ. ತಂದೆ -ಕಿಷನ್‌, ತಾಯಿ-ಸುಲೋಚನಾ. ನಾನು ಮೂರನೆಯವನು. ನನ್ನ ತಮ್ಮಂದಿರ ಹೆಸರು ಮಹೇಶ್‌ ಮತ್ತು ಉಮೇಶ್‌. ನಮ್ಮಜ್ಜಿ ಸೀತಮ್ಮ. ಈಗ ಬೆಂಗಳೂರಿನ ವಿಜಯನಗರದಲ್ಲಿ ವಾಸ.

ಸಿನಿಮಾಗೆ ಯಾಕೆ ಬಂದ್ರಿ?

ವಿದ್ಯೆ ಅರ್ಧಕ್ಕೆ ನೈವೇದ್ಯೆ ಆಯಿತು. ಬಲವಂತಕ್ಕೆ ನೆಲಮಂಗಲದಲ್ಲಿ ಡಿಪ್ಲೋಮೋ ಇನ್‌ ಎಲೆಕ್ಟ್ರಾನಿಕ್ಸ್‌ ಮಾಡ್ತೆ. ಅಲ್ಲಿಗೆ ಸುಸ್ತಾದೆ. ಬಣ್ಣದ ಬದುಕಲ್ಲಿ ಅನ್ನ ಹುಡುಕಿಕೊಳ್ಳೋದು ಅನಿವಾರ್ಯ ವಾಯಿತು. ಸೈಕಲ್‌ ತುಳಿಯೋದು ಮುಂದುವರೆಯಿತು.

ನಿಮ್ಮ ಮೊದಲ ಸಿನಿಮಾ?

‘ಠಪೋರಿ’ . ಈ ಚಿತ್ರದಲ್ಲಿ ಖಳನಟನ ಪಾತ್ರ ನನ್ನದು. ಖಳನಟ ಹಾಸ್ಯನಟನಾಗಿ, ನಾಯಕನಟನಾದ. ಎಲ್ಲವೂ ಅಭಿಮಾನಿ ದೇವರ ಆಶೀರ್ವಾದ. ಈ ಗಣೇಶ್‌ನ ಅಭಿಮಾನಿಗಳು ಮುಂದೇನು ಮಾಡ್ತಾರೋ ನೋಡೋಣ...

ಹೊಸ ಟ್ರೆಂಡ್‌ ಬರ್ತಾಯಿದೆ... ಇದರ ಬಗ್ಗೆ ಹೇಳಿ?

ಬರಲಿ. ಇದು ಒಂದು ಥರಹಾ ಒಳ್ಳೆಯದು ಅಲ್ವಾ ಸಾರ್‌... ‘ಹಳೇ ಬೇರು, ಹೊಸ ಚಿಗುರು ಸೇರಿರಲು ...’ಅನ್ನೋ ಕವಿವಾಣಿಯೇ ಇದೆ.

‘.. ಮಳೆ ’ ಯಶಸ್ಸಿನಲ್ಲಿ ನಿಮ್ಮ ಪಾತ್ರವೆಷ್ಟು? ಮಳೆ ಪಾತ್ರವೆಷ್ಟು? ಯೋಗರಾಜ ಭಟ್‌ ಪಾತ್ರವೆಷ್ಟು? ಹಾಡುಗಳ ಪಾತ್ರವೆಷ್ಟು?

(ನಗು) ಹೀಗೆ ಪರ್ಸೆಂಟೇಚ್‌ ಲೆಕ್ಕದಲ್ಲಿ ಹಂಚೋದು ಕಷ್ಟ. ಒಟ್ಟಾರೆ ಇದು ಟೀಮ್‌ ವರ್ಕ್‌.

‘ಮುಂಗಾರು ಮಳೆ’ ಯಶಸ್ಸಿಗೆ ಕಾರಣ?

ಕಾರಣ ಗೊತ್ತಿಲ್ಲ. ಇದೊಂದು ಮ್ಯಾಜಿಕ್‌ ಇರಬಹುದಾ? ಸಾಧಿಸಲೇ ಬೇಕು ಎಂದು ಹೊರಟವರ ಯಶಸ್ಸಿದು. ಯಶಸ್ಸಿನ ಕಾರಣ ಗೊತ್ತಾಗಿ ಬಿಟ್ಟರೆ, ಇಂಥ ಚಿತ್ರಗಳು ಇನ್ನಷ್ಟು ಬರುತ್ತೆ! ಸೋಲಿಗೆ ಕಾರಣ ಇರುತ್ತೆ. ಗೆಲುವಿಗೆ ಕಾರಣ ಇರೋದಿಲ್ಲ. ಸಿನಿಮಾ ಗೆದ್ದಿದೆ. ಪ್ರೇಕ್ಷಕರಿಗೆ ಇಷ್ಟವಾಗಿದೆ. 76ಸೆಂಟರ್‌ನಲ್ಲಿ ಮುನ್ನುಗ್ಗುತ್ತಿದೆ. ನನಗಂತೂ ಸಕತ್ತು ಖುಷಿ.

ಸಿನಿಮಾ ಆರಂಭಿಸಿದಾಗ ಏನನ್ನಿಸಿತು?

ಸಿನಿಮಾ ಸ್ಕಿೃೕಪ್ಟ್‌ ಕಂಡಾಗಲೇ, ಗೆಲುವಿನ ವಾಸನೆ ಬಡಿದಿತ್ತು... ಪ್ರೇಕ್ಷಕರು ನಮ್ಮ ಕೈಬಿಡಲಿಲ್ಲ. ನಿರೀಕ್ಷೆ ನಿಜವಾಯಿತು.

ಸಿನಿಮಾದಲ್ಲಿ ದೇವದಾಸ(ಮೊಲ) ಸತ್ತ... ಆಮೇಲೆ ಏನಾಯ್ತು?

ಈಗ ನಮ್ಮ ಫಾರಂ ಹೌಸ್‌ನಲ್ಲಿದ್ದಾನೆ. ಎಂಟು ಮಕ್ಕಳಿಗೆ ಜನ್ಮ ನೀಡಿ ಆರಾಮವಾಗಿದ್ದಾನೆ. ಸಂಸಾರ ನಡೆದಿದೆ.

ಮದುವೆ ಯೋಚನೆ ಇದೆಯಾ? ಪ್ರೀತಿ-ಪ್ರೇಮ-ಪ್ರಣಯ ಏನಾದರೂ ಉಂಟಾ...?

ಮದುವೆ ಸದ್ಯಕ್ಕಿಲ್ಲ. ಅಯ್ಯಾಯ್ಯೋ, ಪ್ರೀತಿ-ಪ್ರೇಮ-ಪ್ರಣಯ ಅವೆಲ್ಲ ಏನಿಲ್ಲ ಬಿಡಿ.. (ಮಾತಲ್ಲಿ ನಾಚಿಕೆ).
ಮುಂದಿನ ಚಿತ್ರಗಳು?ರೇಖಾ ಜೊತೆ ‘ಹುಡುಗಾಟ’ ಚಿತ್ರೀಕರಣ ನಡೆದಿದೆ. ಎಸ್‌. ನಾರಾಯಣ್‌ರ ‘ಚೆಲುವಿನ ಚಿತ್ತಾರ’ ಮತ್ತು ರಮೇಶ್‌ ಯಾದವ್‌ರ ‘ಕೃಷ್ಣ’ ಚಿತ್ರಗಳನ್ನು ಸದ್ಯಕ್ಕೆ ಒಪ್ಪಿಕೊಂಡಿದ್ದೇನೆ. ಮುಂದೆ ನೋಡೋಣ.

ತೆಲುಗು-ತಮಿಳಿನಿಂದ ಆಫರ್‌ ಬಂದ್ರೆ, ಗಣೇಶ್‌ ಹೋಗ್ತಾರಾ?

ಯಾಕೆ ಹೋಗಬೇಕು ಸಾರ್‌.. ಕನ್ನಡದವರು ನನ್ನನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರಲ್ಲ.. ಊಟಕ್ಕಂತೂ ಕೊರತೆಯಿಲ್ಲ. ಅಲ್ವಾ?

ನಿಮ್ಮ ಯಶಸ್ಸಿನ ಬಗ್ಗೆ ತವರೂರು ಅಡಕೆಮಾರನಹಳ್ಳಿ ಜನ ಏನ್‌ ಅಂತಾರೆ?

ಅವರಿಗೆ ಸಕತ್ತು ಖುಷಿಯಾಗಿದೆ. ಆ ಜನ ತೋರಿಸಿದ ಅಕ್ಕರೆಗೆ ನಾನು ಋಣಿ.

ನಿಮ್ಮ ಅಭಿಮಾನಿಗಳಿಗೆ ಏನ್‌ ಹೇಳ್ತೀರಾ?

ನಗಿಸುತ್ತಾ ಇರಿ.. ಯಾರನ್ನೂ ನೋಯಿಸಬೇಡಿ.. ಬದುಕಿನಲ್ಲಿ ಏನಾದರೂ ಸಾಧನೆ ಮಾಡಿ... ಗಣೇಶ್‌ ನಿಮ್ಮವನು... ನಿಮ್ಮ ಹುಡುಗ...

Saturday, June 23, 2007

ಕತ್ತಲೊಳಗಿನ ಮಾಸಿದ ಬಣ್ಣಗಳು!




ನಾನೂ ಬದುಕಬೇಕೆಂದು ಇಲ್ಲಿಗೆ ಬಂದವಳು
ಬಂದು ಏನೇನನ್ನೋ ಪಡೆದವಳು!
ಪಡೆದೆನೆಂದು ಖುಷಿಯಿಂದ ನಲಿದವಳು!
*
ಹೀಗೆ ಬದುಕಬೇಕೆಂದು ಕನಸುಕಂಡವಳಲ್ಲ..
ಇಲ್ಲಿಂದ ಹೊರಹೋಗಲು ಬಾಗಿಲುಗಳಿಲ್ಲ
ಈಗ ಹೋದರೂ ಪ್ರಯೋಜನವೇನಿಲ್ಲ..
ನನ್ನಲ್ಲೀಗ ಕಳೆದುಕೊಳ್ಳುವುದಕ್ಕೆ ಏನೂ ಉಳಿದಿಲ್ಲ..
*
ನನ್ನ ನಂಬಿದವರನ್ನು ಬದುಕಿಸುತ್ತಿರುವೆ
ಸುಳ್ಳುಸುಳ್ಳೇ ನಾನೂ ಬದುಕುತ್ತಿರುವೆ
ನನ್ನದೂ ಒಂದು ಬದುಕೇ ಎನ್ನುವೆ!
*
ನನ್ನ ಬದುಕಿನ ಪುಟಗಳಲ್ಲಿನ ವ್ಯತ್ಯಾಸ
ನಾನು ಮಾಡುತ್ತಿರುವ ಈ ವ್ಯವಸಾಯ
ಹೆತ್ತವಳಿಗೆ, ಹೆತ್ತವನಿಗೆ ಚೆನ್ನಾಗಿ ಗೊತ್ತು..
ಹಣದ ವಾಸನೆ, ಹೆಣದ ವಾಸನೆಯ ಇಲ್ಲವಾಗಿಸಿದೆ.
*
ಮುಡಿದ ಮಲ್ಲಿಗೆ ಹೂವು ಮತ್ತೇರಿಸುತ್ತಿಲ್ಲ
ಅವನು ಕೊಟ್ಟ ಮುತ್ತು ಕಾವೇರಿಸುತ್ತಿಲ್ಲ
ಆ ಆಲಿಂಗನದಲ್ಲಿ ನಿಜಕ್ಕೂ ನಾನಿಲ್ಲ!
*
ಎಷ್ಟು ದಿನವೋ ಈ ದೇಹದ ವ್ಯಾಪಾರ..
ನಾನಂತೂ ಬಲುಬಲು ದಣಿದಿದ್ದೇನೆ?
ನೀವುಗಳೂ ಸಕತ್ತು ಹಸಿದಿದ್ದೀರಿ!
ನನ್ನ ಸುತ್ತಲ ಕತ್ತಲ ಜಗತ್ತಿಗೆ ಜಯವಾಗಲಿ..

Friday, June 22, 2007

ನ್ಯಾನೋ ಕವಿತೆಗಳು: ನಿಮ್ಮ ಬೊಗಸೆಗೆ ಒಂದೈದು ಮಳೆ ಹನಿಗಳು!


ಮತ್ತೆ ಮಳೆ ಸುರಿಯುತಿದೆ... ಎಲ್ಲ ನೆನಪಾಗುತಿದೆ...

ಹನಿ 1

ಮೊದಲು ತಲೆ ಸವರಿದ
ನಾನು ಅಮ್ಮನೆಂದುಕೊಂಡೆ!
ಆಮೇಲೆ ಹಣೆಗೆ ಮುತ್ತಿಟ್ಟ...
ಕೆನ್ನೆ ಸವರಿದ.. ಅರೇರೇರೇ...
ತುಟಿಗೆ ತುಟಿ ಸೇರಿಸಿದ...
ಮೈತುಂಬ ಅವನ ಮುತ್ತಿನ ಮುದ್ರೆಗಳು!
ಸಹಿಸಲಾರೇ ಈ ಅತ್ಯಾಚಾರ..
ನಾನು ನನ್ನ ಹುಡುಗನಿಗಷ್ಟೇ ಸ್ವಂತ!
ಸಂಜೆಯೇ ಅಂಗಡಿಗೆ ಹೋಗಿ
ಛತ್ರಿ ತಂದೆ!ಇನ್ನು ನಾನು ನನ್ನಿಷ್ಟ!

ಹನಿ 2

ಬಾ ಎಂದಾಗ ಬರಲಿಲ್ಲ
ಎರಡು ಹನಿಗಳನ್ನು ಚೆಲ್ಲಲಿಲ್ಲ
ಬೇಡ ಎಂದಾಗ ಬಂದೆ...
ಹೋಗು ಎಂದರೂ ಹೋಗಲಿಲ್ಲ...
ಈಗ ನಿನಗೇನು ತಲೆಕೆಟ್ಟಿದೆಯಾ?
ನಿನ್ನ ಹುಡುಗಿ ಕೈ ಕೊಟ್ಟಳೆಂದು
ಅಳುತ್ತಿರುವೆಯಾ?

ಹನಿ 3

ಅವಳು ಮಳೆ!
ಅವಳು ಬಂದಾಗಲೆಲ್ಲಾನಾ ಕುಣಿಯುತ್ತೇನೆ!
ನಾ ಕುಣಿಯಲೆಂದೇ ಅವಳು ಬರುತ್ತಾಳೆ!
ಅವಳು ಬರಲೆಂದೇ ನಾನು ಕುಣಿಯುತ್ತೇನೆ!

ಹನಿ 4

ಮೋಡ ಮೋಡ ಡಿಕ್ಕಿ ಹೊಡೆದಾಗ
ಭಯಾನಕ ಗುಡುಗು...
ನನ್ನೆದೆಯಲ್ಲಿ ನಡುಕ!
ಗುಡುಗಿನ ಭಯಕ್ಕೆ
ಅವನ ತೆಕ್ಕೆಯಲ್ಲಿ ನಾನು
ನನ್ನ ತೆಕ್ಕೆಯಲ್ಲಿಅವನು!

ಹನಿ 5

ಮಳೆಯ ಒಂದೊಂದೇ ಹನಿಗಳನ್ನು
ಜೋಪಾನವಾಗಿ ಸಂಗ್ರಹಿಸುತ್ತಿರುವೆ.
ಆ ಹನಿಗಳ ಮಣಿಗಳಂತೆ ಪೋಣಿಸಿ
ಹಾರ ಮಾಡುವ, ಆ ಹಾರದಿಂದಲೇ
ನನ್ನ ಹುಡುಗಿಯ ಸಿಂಗರಿಸುವ
ಹಂಬಲ,ಆಕಾಂಕ್ಷೆ, ಅತಿಯಾಸೆ ನನ್ನದು!

Tuesday, June 19, 2007

ಸೌಂದರ್ಯ ಮರೆಯಾಗಿ ಆಯಿತು 3 ವರ್ಷ!



ಇತ್ತಿಚೆಗಷ್ಟೇ ರಾಜ್‌ಕುಮಾರ್‌ರ ಪ್ರಥಮ ಪುಣ್ಯತಿಥಿ ಆಯಿತು. ಆ ಬೆನ್ನಲ್ಲಿಯೇ ಕನ್ನಡದ ಮನೆಮಗಳು ಸೌಂದರ್ಯಳ ಪುಣ್ಯತಿಥಿ. ಇಬ್ಬರಲ್ಲೂ ಇದ್ದ ಕಾಮನ್ ಗುಣವೆಂದರೇ; ನಿರ್ಮಲ ಕನ್ನಡ ಪ್ರೀತಿ!


ರಾಜ್ ಜೊತೆ ಅಭಿನಯಿಸಬೇಕು ಎಂದು ಪದೇಪದೇ ಹೇಳುತ್ತಿದ್ದ ಸೌಂದರ್ಯಗೆ ಅವಕಾಶ ಕೂಡಿ ಬರಲಿಲ್ಲ. ಆ ಮಾತು ಬಿಡಿ. ನಮ್ಮ ಜನರಿಗೆ ಮರೆವು ಜಾಸ್ತಿ. ಹೀಗಾಗಿಯೇ ಪಂಚಭಾಷಾ ತಾರೆಯಾಗಿ ಮಿಂಚಿದ ಸೌಂದರ್ಯ , ಇಂದು ಯಾರಿಗೂ ನೆನಪಾಗುತ್ತಿಲ್ಲ!


ಒಂದರ್ಥದಲ್ಲಿ ಸೌಂದರ್ಯ ಮತ್ತು ಕನ್ನಡ ಚಿತ್ರಪ್ರೇಮಿಗಳ ಮಧ್ಯೆ ಅಂತಹ ಬಾಂಧವ್ಯ ಕುದುರಲೇ ಇಲ್ಲ. ಹೀಗಾಗಿ ನೆರೆರಾಜ್ಯದಲ್ಲಿ ಸೌಂದರ್ಯ, ಕೆಲಸ ಹುಡುಕುತ್ತಾ ಹೊರಟರು. ಆದರೂ ಕನ್ನಡ ಚಿತ್ರರಂಗದ ಬಗ್ಗೆ ಆಕೆಗೆ ಅಪಾರ ಅಕ್ಕರೆ.

ದುಡಿದ ದುಡ್ಡನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಬಚ್ಚಿಡುವ ನಾಯಕ ಅಥವಾ ನಾಯಕಿಯರ ಪರಂಪರೆ ಮುರಿದ ಸೌಂದರ್ಯ, `ದ್ವೀಪ'ದಂತಹ ಚಿತ್ರಕ್ಕೆ ನಾಯಕಿ ಮತ್ತು ನಿರ್ಮಾಪಕಿಯಾದರು. ಅವರ ಒಳತುಡಿತ ಬೇರೆಯೇ ಇತ್ತು. ಒಳ್ಳೆ ಚಿತ್ರಗಳ ನೀಡುವ ಕನಸು ಅವರ ಕಣ್ಣುಗಳಲ್ಲಿತ್ತು. ಆ ಮಧ್ಯೆಯೇ ಅವರು ಕಣ್ ಮುಚ್ಚಿದರು.


ಗ್ಲಾಮರ್‌ಗಿಂತಲೂ, ಸೌಂದರ್ಯರಲ್ಲಿ ಸಿನಿಮಾದ ಗ್ರಾಮರ್ ತುಂಬಿತುಳುಕುತ್ತಿತ್ತು. ಹೀಗಾಗಿ ಸೌಂದರ್ಯ ಅಂದರೆ ಅಭಿಮಾನಿಗಳಿಗೆ ವಿಶೇಷ ಅಕ್ಕರೆ. ವಿಶೇಷ ಗೌರವ. ವಿಶೇಷ ಭಾವ. ಸೌಂದರ್ಯ, ಪ್ರೇಕ್ಷಕರ ನಿದ್ದೆ ಕೆಡಿಸುವ ಕಾಮಿನಿಯಾಗಲಿಲ್ಲ.. ಗೆಳತಿಯಾದಳು.. ಅಮ್ಮನಾದಳು.. ತಂಗಿಯಾದಳು.. ಅಕ್ಕನಾದಳು.. ಇನ್ನು ಏನೇನೋ.. ದಟ್ ಈಸ್ ಸೌಂದರ್ಯ!

ಸೌಂದರ್ಯ ನಮ್ಮಿಂದ ದೂರಾವಾಗಿ ಮಂಗಳವಾರ(ಏ.೧೭)ಕ್ಕೆ ಮೂರು ವರ್ಷ. ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡದಲ್ಲಿ ಮಿಂಚಿದ್ದ ಈ ಪಂಚಭಾಷಾ ತಾರೆಗಿದ್ದ ರಾಜಕೀಯದ ಹುಚ್ಚು, ಸಾವಿನ ಮನೆವರೆಗೆ ಕರೆದೊಯ್ದದ್ದು ನಿಜಕ್ಕೂ ನೋವಿನ ವಿಚಾರ.


ಬಿಜೆಪಿ ಕಾರ್ಯಕರ್ತೆಯಾಗಿದ್ದ ಸೌಂದರ್ಯ, ಹೈದರಾಬಾದ್‌ನ ವಿಧಾನಸಭಾ ಕ್ಷೇತ್ರವೊಂದಕ್ಕೆ ಚುನಾವಣಾ ಪ್ರಚಾರಕ್ಕೆ ಹೊರಟರು. ಅದು ೨೦೦೪ರ ಏ.೧೭. ಜಕ್ಕೂರು ವಿಮಾನ ನಿಲ್ದಾಣದಿಂದ ಹೊರಟ ಖಾಸಗಿ ವಿಮಾನ, ಕೆಲವೇ ಕ್ಷಣಗಳಲ್ಲಿ ಕೆಳಗಿಳಿಯಿತು. ಬೆಂಕಿ ಚೆಂಡಿನಂತೆ ಸೋಟಿಸಿತು. ನೋಡನೋಡುತ್ತಿದ್ದಂತೆಯೇ ಚೆಲುವಿನ ರಾಶಿ ಸೌಂದರ್ಯ, ಆಕೆಯ ಹೊಟ್ಟೆಯೊಳಗಿದ್ದ ಮಗು ಇಬ್ಬರೂ ಭಸ್ಮ. ಆಗವಳಿಗೆ ೩೨ವರ್ಷ.


`ಆಪ್ತಮಿತ್ರ' ನೋಡಿದಾಗಲೆಲ್ಲ, ಸೌಂದರ್ಯ ಕಾಡುತ್ತಾರೆ. ರಾರಾ ಎಂದಂತೆ ನನಗಂತೂ ಭಾಸವಾಗುತ್ತದೆ. ನಿಮಗೆ?



Thursday, June 14, 2007

ತನುತನುವಿನಲೂ ಮಜವೊಂದೇ ನಿಜ!


ತನುತನುವಿನಲೂ ಮಜವೊಂದೇ ನಿಜ!ಕನ್ನಡದ ಮಟ್ಟಿಗೆ ಇದೊಂದು ಹೊಸ ಪೀಳಿಗೆಯ ಚಿತ್ರ! ಯಾವುದೇ ಅಬ್ಬರಗಳಿಲ್ಲದೇ, ನಯವಾದ ಶೃಂಗಾರ ಕ್ರೀಡೆಯಂತೆ `ಗಂಡ ಹೆಂಡತಿ' ಚಿತ್ರ ಸುದೀರ್ಘವಾಗಿ ಮುಂದುವರೆಯುತ್ತದೆ. ಚಿತ್ರ ಬೋರ್ ಆಗುತ್ತದೆ ಅನ್ನಿಸಿದಾಗಲೆಲ್ಲ, ಸಚಿನ್(ತಿಲಕ್) ಮತ್ತು ಸಂಜನಾರ ಚುಂಬನೋತ್ಸವ ಹಾಜರಾಗುತ್ತದೆ. ತುಟಿತುಟಿಗಳು ಸೇರಿದಾಗ..

`ನನ್ನ ಎದೆಯ ಮೇಲೆ ನಿನ್ನ ಹಚ್ಚೆಯಿದೆ. ನನ್ನ ಉಸಿರನ್ನು ಹಿಡಿದು ನಿನ್ನ ಹೆಸರ ಬರೆಯಬಲ್ಲೆ.. ಮೈ ಬಿಸಿ ಏರಿದಾಗ ಇಳಿಸೋಕೆ ನಾನು ಬೇಕು. ಬಿಸಿ ಕಮ್ಮಿಯಾದ ಮೇಲೆ ಗಂಡ ಬೇಕಾ' ಎನ್ನುತ್ತಾನೆ ಬಾಯ್ ಫ್ರೆಂಡ್.

`ನಾವಿಬ್ಬರೂ ಗಂಡ ಹೆಂಡತಿ ಆದ್ವಿ ಮುಂದೇನು? ಫ್ಯಾಮಿಲಿ ಫೋಟೊ ಬಂದದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ನಿಮಗೆ ಭಾವನೆಗಳೇ ಇಲ್ಲ ' ಅನ್ನೋದು ಹೆಂಡತಿ ದೂರು.

`ನಿನ್ನ ಮದುವೆಯಾಗೋದಕ್ಕೆ ನಾನು ನಿಮ್ಮಪ್ಪನ ಕಾಲು ಹಿಡಿಯಲಿಲ್ಲ. ನೀನೇ ಬಯಸಿ ಮದುವೆಯಾದೆ. ಸ್ವಾರ್ಥ ಬಿಟ್ಟು ನಿನಗೆ ಬೇರೇನೂ ಗೊತ್ತಿಲ್ಲ. ನೀನು ನಿನ್ನ ಬಗ್ಗೆಯಷ್ಟೇ ಯೋಚಿಸ್ತೀಯ. ನಾವು ಬ್ಯಾಂಕಾಕ್‌ಗೆ ಬಂದದ್ದೇಕೆ? -ದುಡಿಯೋದಕ್ಕೆ. ಭಾವನೆಗಳಿಗಿಂತ ನನಗೆ ಬ್ಯುಸಿನೆಸ್ ದೊಡ್ಡದು' ಅನ್ನೋದು ಗಂಡನ ಸಮಜಾಯಿಷಿ.

ಮೇಲಿನ ಈ ಮೂರು ಹೇಳಿಕೆಗಳೇ, ಚಿತ್ರದ ನಾಯಕಿ ಸಂಜನಾ ಬಟ್ಟೆ ಕಳಚಿದಂತೆ, ಕತೆಯನ್ನು ಕಳಚುತ್ತವೆ. ಈ ಮಧ್ಯೆ ಸಂಜನಾ ಮತ್ತು ತಿಲಕ್‌ರ ಚುಂಬನೋತ್ಸವಗಳು ಒಂದಾದ ಮೇಲೆ ಮತ್ತೊಂದರಂತೆ ಹಾಜರಾಗುತ್ತವೆ. ಈ ಸಂದರ್ಭ ಕನ್ನಡ ಪ್ರೇಕ್ಷಕರಿಗೆ ತುಸು ಹೊಸತು ಅನ್ನಿಸಬಹುದು. ಆಗ ಟಾಕೀಸ್‌ನಲ್ಲಿ ಪರಿಚಿತರ್‍ಯಾರಾದರೂ ಇದ್ದಾರಾ ಅಂತ ಕಣ್ಣಾಡಿಸಬಹುದು! ತೆರೆ ಮೇಲೆ ಬಿಸಿಯೇರುತ್ತಿದ್ದಂತೆಯೇ, ಪ್ರೇಕ್ಷಕರೂ ಬೆಚ್ಚಗಾಗಿರುತ್ತಾರೆ!

ಅಂದ ಹಾಗೇ ಈ ಚಿತ್ರದಲ್ಲಿ ಮರ್ಡರ್ ಇದ್ದರೂ ಮಿಸ್ಟರಿ ಇಲ್ಲ. ರವಿಬೆಳಗೆರೆ ಇದ್ದರೂ ಕಡಕ್ ಮಾತಿಲ್ಲ(ಪಾತ್ರಕ್ಕೆ ಬೇರೊಬ್ಬರಿಂದ ಡಬ್ಬಿಂಗ್ ಮಾಡಿಸಲಾಗಿದೆ). ಚಿತ್ರ ಪೂರ್ತಿ ನಡೆಯೋದು ಬ್ಯಾಂಕಾಕ್‌ನಲ್ಲಿ. ಬಾಯ್ ಫ್ರೆಂಡ್‌ನ ಯಾಕೆ ಕೊಂದೆ ಅನ್ನೋದನ್ನು ಒಂದು ಕಡೆ ಸಂಜನಾ(ಆಕೆ ನಿಜ ನಾಮವೂ ಸಂಜನಾ! ಪೂರ್ವ ನಾಮ -ಅರ್ಚನಾ), ಇನ್ನೊಂದು ಕಡೆ ಸುಶೀಲ್(ವಿಶಾಲ್ ಹೆಗಡೆ) ಪೊಲೀಸ್ ಅಕಾರಿ(ರವಿ ಬೆಳಗೆರೆ)ಗೆ ಹೇಳ್ತಾ ಹೋಗ್ತಾರೆ. ಆ ಮೂಲಕ ಕತೆ ಬಿಚ್ಚಿಕೊಳ್ಳುತ್ತದೆ.

ಕ್ರೈಂ ಇದ್ದರೂ, ಅನಗತ್ಯ ಕಿರುಚಾಟಗಳಿಲ್ಲ. ಯಾವುದೇ ಅಬ್ಬರಗಳಿಲ್ಲದೇ, ನಯವಾದ ಶೃಂಗಾರ ಕ್ರೀಡೆಯಂತೆ ಚಿತ್ರ ಸುದೀರ್ಘವಾಗಿ ಮುಂದುವರೆಯುತ್ತದೆ. ಚಿತ್ರ ಬೋರ್ ಆಗುತ್ತದೆ ಅನ್ನಿಸಿದಾಗಲೆಲ್ಲ, ಸಚಿನ್(ತಿಲಕ್) ಮತ್ತು ಸಂಜನಾರ ಚುಂಬನೋತ್ಸವ ಹಾಜರಾಗುತ್ತದೆ. ತುಟಿತುಟಿಗಳು ಸೇರಿದಾಗ ದೃಶ್ಯದ ಹಿನ್ನೆಲೆಯಲ್ಲಿ -
ನಿದಿರಿಗೆ ರಜಾ
ನೋವೆಲ್ಲ ವಜಾ
ಇನ್ನೆಲ್ಲ ಮಜಾ
ತನುತನುವಿನಲೂ
ಮಜವೊಂದೇ ನಿಜ
ತುಟಿ ಸಿಹಿಕಣಜ
ಈ ಪ್ರತಿ ಇರುಳು
ಕೊಡುಸುಖದ ಸಜ


ಎನ್ನುವ ಹಾಡು ಕೇಳುಗರ ಆವರಿಸುತ್ತದೆ. ಬೆಳ್ಳೆತೆರೆಯನ್ನು ಮೊದಲ ಸಲ ಪ್ರವೇಶಿಸಿದ್ದರೂ ಬಾಯ್ ಫ್ರೆಂಡ್ ಪಾತ್ರದಲ್ಲಿ ತಿಲಕ್ ನೈಜವಾಗಿ ಅಭಿನಯಿಸಿದ್ದಾರೆ. ಜೊತೆಗೆ ಅನುಭವಿಸಿದ್ದಾರೆ. `ಓ ಮಲ್ಲಿಗೆಯೇ ವಿಲಾಸಿ, ಕಾಮದರಸಿ ಆಸೆ ತಂದವಳೇ..' ಅನ್ನುತ್ತಾ ಸಂಜನಾ ಕಂಡಾಗಲೆಲ್ಲ, ತೋಳ್ಬಲಗಳ ಪ್ರದರ್ಶಿಸುತ್ತಾರೆ. ಇವರಿಬ್ಬರ ಚೆಲ್ಲಾಟ.. ಮುದ್ದಾಟ.. ತುಂಟಾಟ ಕಂಡು ಸುಶೀಲ್ `ಮಾತು ಮುರಿದೇ ಮಾತಾಡದೇ . ಮೋಹಕ ಮೋಸವ ಮಾಡಿದೆ.. ' ಎಂದು ಗೋಳಾಡುತ್ತಾರೆ. ಹೆಂಡತಿಯನ್ನು ಉಳಿಸಿಕೊಳ್ಳಬೇಕು ಅಂತ ಮತ್ತೊಂದು ಕಡೆಯಿಂದ ಪ್ರಯತ್ನಿಸುತ್ತಾರೆ.

`ಕಣ್ ಮುಚ್ಚಿಕೊಂಡು ಬೆಕ್ಕಿನಂತೆ ಹಾಲು ಕುಡಿಯಬೇಡ.. ನಿನ್ನ ಕತೆ ಎಲ್ಲ ನನಗೆ ಗೊತ್ತು' ಎಂದು ಗೆಳತಿ(ಮಂಜುಭಾಷಿಣಿ)ಒಂದು ಸಲ ಸಂಜನಾಗೆ ಕ್ಲಾಸ್ ತಗೋಳ್ತಾಳೆ. ಮನೆಯಲ್ಲಿನ ಮುದ್ದಾದ ಮಗಳು(ಅದವರ ಅಕ್ಕನ ಮಗಳಂತೆ, ಅವಳಿಗಾಗಿಯೇ ಸುಶೀಲ್‌ನ ಮದ್ವೆಯಾದದ್ದಂತೆ) ಸಂಚಲಿ, ಅಮ್ಮ ನನಗೆ ನೀನು ಬೇಕು ಎಂದು ಒಂದೇ ಕಣ್ಣಲ್ಲಿ ಅಳುತ್ತಿರುತ್ತಾಳೆ. ಆದರೂ ಈಯಮ್ಮನಿಗೆ ಸುಖದ ಮಜದ ಚಿಂತೆ.

ಚಿತ್ರದ ಮೂಲಕ ನಿರ್ದೇಶಕ ರವಿ ಶ್ರೀವತ್ಸ, ಆಧುನಿಕ ಪ್ರೇಮಾಯಣವನ್ನು ಪರಿಚಯಿಸಿದ್ದಾರೆ. `ನಾವು ನೂರು ಸರಿ ಹೆಜ್ಜೆ ಹಾಕಿದರೂ ಪ್ರಯೋಜನವಿಲ್ಲ. ಒಂದೇ‌ಒಂದು ತಪ್ಪಿನ ಹೆಜ್ಜೆಯಿಂದ ಸಂಸಾರ ನರಕವಾಗುತ್ತದೆ' ಎಂಬುದನ್ನು ಪದೇಪದೇ ಪಾತ್ರಗಳ ಮೂಲಕ ಹೇಳಿಸುವ ಮೂಲಕ, ಒಂದು ಸಂದೇಶ ನೀಡಲು, ಚುಂಬನ ಚಳವಳಿ ಸಮರ್ಥಿಸಿಕೊಳ್ಳಲು ತಿಣುಕಾಡಿದ್ದಾರೆ. ಜೊತೆಗೆ ಗೆದ್ದಿದ್ದಾರೆ. ಜೊತೆಗೆ ಅಂಥದ್ದೊಂದು ಹಾಡು ಸಹಾ ಇದೆ -

ಸಂಸಾರಕ್ಕೆ ಹೆಣ್ಣೆ ಕಣ್ಣು
ಸಂಸಾರದಾದಿ ಹೆಣ್ಣು
ಶೋಕೀಯಾ ಮೂಲ ಹೆಣ್ಣು
ಶೋಕದ ಮೂಲ ಹೆಣ್ಣು
ಸಂಗ್ರಾಮದಾದಿ ಹೆಣ್ಣು
ಸಂತಾಪಕೆ ಕಾರಣ ಹೆಣ್ಣು


`ಎಲ್ಲಾ ಕುಟುಂಬಗಳಲ್ಲೂ ಸಮಸ್ಯೆಗಳಿರುತ್ತವೆ. ಅದಕ್ಕೆ ನಾನು ಆರಿಸಿಕೊಂಡ ಮಾರ್ಗ ತಪ್ಪು. ಅದು ಪರಿಹಾರವಲ್ಲ' ಎಂದು ಹೆಂಡತಿ ಬಾಯಲ್ಲಿ ಹೇಳಿಸಿದ್ದಾರೆ. ಚಿತ್ರದ ಕಡೆಯ ಹದಿನೈದು ನಿಮಿಷ, ಈ ಬಗ್ಗೆಯೇ ರವಿ ಬೆಳಗೆರೆಯವರಿಂದ ಭಾಷಣ ಹೊಡೆಸಿದ್ದಾರೆ.

ಅದೆಲ್ಲಾ ಸರಿ ಶ್ರೀವತ್ಸಾ, ಇಂಥ ಸಬ್ಜೆಕ್ಟ್‌ಗಳನ್ನು ಸಭ್ಯವಾಗಿ ಹೇಳೋದಕ್ಕೆ ಸಾಧ್ಯವಿಲ್ಲವೇ ಅನ್ನೋ ಪ್ರಶ್ನೆ ಕೇಳಬೇಕಾಗುತ್ತದೆ. `ಎಡಕಲ್ಲು ಗುಡ್ಡದ ಮೇಲೆ' ಚಿತ್ರದಲ್ಲಿ ಇಂಥದ್ದೇ ಕತೆಯಿದೆ. ಆದರೆ ಅಲ್ಲಿ ಒಂದಿಷ್ಟೂ ಅಸಭ್ಯತೆ ಇಲ್ಲ. ಮುತ್ತು-ಮತ್ತು-ರೋಮಾಂಚಕತೆಗಳನ್ನು ನಮ್ಮ ಹಳೆಯ ಚಿತ್ರಗಳಲ್ಲಿ ಸಂಕೇತಗಳ ಮೂಲಕ ಇನ್ನೂ ಪವರ್‌ಫುಲ್ ಆಗಿಯೇ ಹೇಳಿದ್ದಾರೆ ಅನ್ನೋ ಕೊಂಕು ತೆಗೆಯಬಹುದು.

ನಮ್ಮ ಕನ್ನಡ ಮಾರ್ಕೆಟ್ ಇಂಥ ಚಿತ್ರಗಳನ್ನು ಹೇಗೆ ಸ್ವೀಕರಿಸುತ್ತೆ ಅನ್ನೋದು ಈ ಸಂದರ್ಭದಲ್ಲಿಯೇ ಪ್ರಕಟವಾಗಲಿದೆ. ಚಿತ್ರದ ಹಾಟ್ ದೃಶ್ಯಗಳನ್ನು ಇನ್ನಷ್ಟು ಹಾಟ್ ಆಗಿ ಮೂಡಿಸಲು ಸಂಜನಾ ಮೇಡಂ ಸಹಕರಿಸಿದ್ದಾರೆ. ನಿರ್ದೇಶಕರು ನಿರ್ದೇಶಿಸಿದ್ದಾರೆ. ನಿರ್ಮಾಪಕ ಶೈಲೇಂದ್ರ ಬಾಬು(ಗೌರಮ್ಮ, ಕುಟುಂಬ ನಿರ್ಮಾಪಕ) ನಿರ್ಮಾಣ ಮಾಡಿದ್ದಾರೆ. ಕಾಫಿ ರಾಘವೇಂದ್ರರ ಸಂಭಾಷಣೆ ಕೆಲವೆಡೆ ಕೈತಟ್ಟುವಂತಿದೆ. ಗುರುಕಿರಣ್ ಹಾಡುಗಳ ಕೆಲವು ಟ್ಯೂನ್‌ಗಳ ಅನುಕರಿಸಿದ್ದರೂ ಕೇಳಲು ಅಡ್ಡಿಯಿಲ್ಲ. ಛಾಯಾಗ್ರಹಣದ ಬಗ್ಗೆ ಹೆಸರಿಡುವಂತಿಲ್ಲ.

ಚಿತ್ರ : ಗಂಡ ಹೆಂಡತಿ
ನಿರ್ಮಾಣ : ಶೈಲೇಂದ್ರ ಬಾಬು
ನಿರ್ದೇಶನ : ರವಿ ಶ್ರೀವತ್ಸ
ಸಂಗೀತ : ಗುರು ಕಿರಣ್
ತಾರಾಗಣ : ಸಂಜನಾ, ತಿಲಕ್, ವಿಶಾಲ್ ಹೆಗಡೆ, ರವಿ ಬೆಳಗೆರೆ, ಮಂಜು ಭಾಷಿಣಿ ಮತ್ತಿತರರು.

ಎಲ್ಲವೂ ಸರಿ; ಮಡದಿ-ಮಕ್ಕಳೊಂದಿಗೆ ಇಂಥ ಚಿತ್ರ ನೋಡೋದು ಹೇಗ್ರೀ?

Saturday, June 9, 2007

ನ್ಯಾನೋ ಕತೆಗಳು: ಅಮ್ಮಯ್ಯ ಅಮ್ಮಯ್ಯ ಬಾರೇ.. ಅಕ್ಕರೆ ಸಕ್ಕರೆ ತಾರೇ..

ಇವು ನನಗೆ ಎಲ್ಲೋ ಸಿಕ್ಕ ಕತೆಗಳು? ನಂಬೋದಿಲ್ವಾ? -`ವಿಶ್ವ ಅಮ್ಮಂದಿರ ದಿನ'(ಮೇ.೧೩)ದ ಸಂದರ್ಭದಲ್ಲಿ ಮೂವರು ಅಮ್ಮಂದಿರ ಚಿತ್ರ ಇಲ್ಲಿದೆ.

ಅವಳ ಹೆಸರೇ ಅಮ್ಮ ಅಲ್ವಾ?
ನನ್ನಮ್ಮನ ಮೇಲೆ ನನಗೆ ಆವತ್ತು ಸಕತ್ತು ಸಿಟ್ಟು ಬಂದಿತ್ತು. ಎಲ್ಲಾ ಅನರ್ಥಕ್ಕೂ ಅವಳೇ ಕಾರಣ ಎನ್ನುವಷ್ಟು ದ್ವೇಷವೂ, ಜಿಗುಪ್ಸೆಯೂ ಉಂಟಾಗಿತ್ತು. ಅವಳನ್ನು ಕೊಂದು ಜೈಲಿಗೆ ಹೋಗಲೇ ಅನ್ನಿಸುವಷ್ಟು ಮನಸ್ಸಿನಲ್ಲಿದ್ದ ರಾಕ್ಷಸ ಅಬ್ಬರಿಸುತ್ತಿದ್ದ. ತಪ್ಪು ನನ್ನದೂ ಇರಬಹುದು!

ನನಗೆ ಅಪ್ಪ ಯಾರು ಎಂಬುದೇ ಗೊತ್ತಿಲ್ಲ. ನಾನು ಹುಡುಗನಾಗಿದ್ದಾಗ, ಮನೆಗೆ ಯಾರ್‍ಯಾರೋ ಬರ್ತಾ ಇದ್ದರು. ಬಂದವರು ನನಗೆ ಚಾಕಲೇಟ್ ಕೊಡ್ತಾಯಿದ್ದರು. ಅಮ್ಮ ಅವರ ಜೊತೆ ನಗ್ತಾನಗ್ತಾ ಮಾತಾಡ್ತಾಯಿದ್ದರು. ಅಕ್ಕಪಕ್ಕದ ಜನ ನನ್ನನ್ನು ಕಂಡು, ಒಂದು ಥರಾ ನಗ್ತಾಯಿದ್ದರು. ಯಾಕೋ ನನಗೆ ಅದೆಲ್ಲ ಆವಾಗ ಅರ್ಥವಾಗ್ತಾ ಇರಲಿಲ್ಲ.

ಏನೇನೋ ಮಾಡಿ, ಅಮ್ಮ ನನ್ನ ಓದಿಸಿದಳು. ನಾನು ಜ್ಞಾನವಂತನಾಗೋ ಹೊತ್ತಿಗೆ, ಅಮ್ಮ ದಣಿದಿದ್ದಳು. ಅಮ್ಮ ದಣಿಯಲು ಕಾರಣ ಸಹಾ ನನಗೆ ಗೊತ್ತಾಗಿತ್ತು! ಆದರೆ ಕೇಳುವಂತಿರಲಿಲ್ಲ. ಆ ಬಗ್ಗೆ ಚರ್ಚೆ ಮಾಡುವಂತಿರಲಿಲ್ಲ. ಆದರೆ ಮೊನ್ನೆ ಮನೆಗೆ ಬಂದಾಗ, ಅಂದು ಚಾಕಲೇಟ್ ಕೊಟ್ಟಿದ್ದ ಗಂಡಸು ಮನೆಯಲ್ಲಿದ್ದ! ನನ್ನ ಹೃದಯದ ಮೇಲೆ ಕೆಂಡದ ಮಳೆ.

ಬೆಳಗ್ಗೆ ಓದಿದ್ದ ಸುಭಾಷಿತ ನನ್ನನ್ನು ತಣ್ಣಗಾಗಿಸಿತು. `ಆಕೆ ಏನೇ ತಪ್ಪು ಮಾಡಿರಬಹುದು. ನೀವು ಕ್ಷಮಿಸಿ ಬಿಡಿ. ಯಾಕೆಂದರೆ, ಆಕೆ ನಿಮ್ಮ ತಾಯಿ'. ಹೌದು, ಅವಳು ನನ್ನಮ್ಮ. ಅವಳ ರಕ್ತ-ಮಾಂಸ ಹಂಚಿಕೊಂಡು, ಭೂಮಿಗೆ ಬಂದವನು ನಾನು! ಅವಳು ಅಮ್ಮ..
***
ಅಮ್ಮನ ನೆನಪೇ ಸಾಕು..

ಎಲ್ಲವೂ ಮುಗಿದು ಹೋಯಿತು ಎಂದು ಅನ್ನಿಸುತ್ತಿತ್ತು. ಪ್ರಾಣ ಕಳೆದುಕೊಳ್ಳುವ ಬಯಕೆ ಮನದಲ್ಲಿ ಮೊಳೆಯುತ್ತಿತ್ತು. ಕಷ್ಟಪಟ್ಟು ಸಂಪಾದಿಸಿದ್ದ ಕೆಲಸವನ್ನು ಕಳೆದುಕೊಂಡು ಅಂದಿಗೆ, ನಾಲ್ಕು ದಿನ. ಕೆಲಸ ಹೋದದ್ದಕ್ಕಿಂತ ಅವಮಾನವೇ ಮನವನ್ನು ಕೊರೆಯುತ್ತಿತ್ತು. ಮೋಸಗಾರ ಎಂದು ಜಗತ್ತು ಕೇಕೆ ಹಾಕುತ್ತಿತ್ತು.

ಯಾವುದೋ ಒಂದು ಕ್ಷಣದ ದುರಾಸೆ, ನನ್ನನ್ನು ಬೆತ್ತಲು ಮಾಡಿ ಜಗದ ಮುಂದೆ ನಿಲ್ಲಿಸಿತ್ತು. ಇಷ್ಟು ವರ್ಷದ ನಿಯತ್ತು ಎಲ್ಲರಿಗೂ ಮರೆತು ಹೋಗಿತ್ತು. ಕೆಲಸ ಕಳೆದುಕೊಂಡ ವಿಚಾರ ಗೊತ್ತಾದ ಮರುಕ್ಷಣವೇ, ನನ್ನ ನಿಶ್ಚಿತಾರ್ಥ ಮುರಿದು ಬಿತ್ತು. ಜೀವಕ್ಕೆ ಜೀವ ಕೊಡ್ತೀನಿ ಎನ್ನುತ್ತಿದ್ದ ಮಾವನ ಮಗಳು, `ನಮ್ಮಪ್ಪ ಅಮ್ಮನ ಮನಸ್ಸು ನೋಯಿಸೋದು ಹೇಗೆ?' ಅಂದಳು.
ಎಲ್ಲರೂ ನನ್ನನ್ನು ಕೈಬಿಟ್ಟಿದ್ದಾರೆ ಅನ್ನಿಸಿದಾಗ, ಅಮ್ಮ ನೆನಪಾದಳು. ಅಮ್ಮ ನೆನಪಾದ ತಕ್ಷಣ ಬೆಳಕು ಕಾಣಿಸಿತು.
***

ಅಮ್ಮನ ಹಂಬಲ

ಬದುಕಿದ್ದಾಗ ಎರಡು ಹನಿ ನೀರು ಬಿಡಲು ಬರಲು ಅವನಿಗೆ ಪುರುಸೊತ್ತಿಲ್ಲ. ಫೋನ್ ಮಾಡಿ, `ಜೀವ ಆಗಲೋ ಈಗಲೋ ಎನ್ನುವಂತಿದೆ. ಬೇಗ ಬನ್ನಿ' ಅಂದ್ರೆ, `ಇಗೋ ಬಂದೆ' ಅಂದವನು ಬಂದದ್ದು ಎಲ್ಲಾ ಮುಗಿದ ಮೇಲೆ! ಸಾಯೋ ಮುನ್ನ ಮಗನ ಮುಖ ನೋಡಬೇಕು ಎಂದು ಆ ತಾಯಿ ಎಷ್ಟು ಹಂಬಲಿಸಿದ್ದಳು. ಒಂದು ಸಣ್ಣ ಹಂಬಲವನ್ನು ಈಡೇರಿಸಲು ಅವನಿಂದ ಆಗಲಿಲ್ಲ. ಛೇ ಛೇ.

ಜನರಿಗೆ ಅಂಜಿ, ಹೆಣದ ಮುಂದೆ ಬಲವಂತದ ಕಣ್ಣೀರು ಸುರಿಸುತ್ತಿದ್ದಾನೆ. ಬದುಕಿದ್ದಾಗ ತಿರುಗಿ ನೋಡದೇ, ಈಗ ಸಮಾ, ಸಮಾ ತುಂಬಾ ಹೂವು.. ಕಾಯಿ ಮೇಲೆ ಕಾಯಿ ಒಡೆಯುತ್ತಿದ್ದಾನೆ.. ಬಡ್ಡೀ ಮಗ.. ಛೇ ಛೇ.

ಅವನು ಆ ತಾಯಿಗೆ ಒಂದು ರೀತಿ ಮೋಸ ಮಾಡಿದ. ನಾನು ಮಾಡಿದ್ದೇನು? ಹಾಸಿಗೆ ಕೆಳಗಿದ್ದ ಅಡಿಕೆ‌ಎಲೆ ಚೀಲದಿಂದ ಕವರ್‌ನಲ್ಲಿ ಸುತ್ತಿದ್ದ ನೋಟುಗಳನ್ನು ನನ್ನ ಮುಂದೆ ಹಾಕಿದ್ದಳು ಪುಣ್ಯಾತ್ಗಿತ್ತಿ. `ಇದರಲ್ಲಿ ೩೦೦೦ ಇದೆ. ನನ್ನ ಬೆಂಗಳೂರು ಆಸ್ಪತ್ರೆಗೆ ಸೇರಿಸೋ' ಎಂದು ಅಂಗಲಾಚಿದ್ದಳು.

`ಮಗ ಇರೋವಾಗ, ನಾನು ಆ ಕೆಲಸ ಮಾಡಿದ್ರೆ ಏನ್ ಚೆನ್ನಾಗಿರುತ್ತೆ. ಒಂದು ಸಲ ಅವನಿಗೆ ವಿಷಯ ತಿಳಿಸ್ತೀನಿ. ಅವನು ಆಸಕ್ತಿ ತೋರಿಸದಿದ್ದರೇ, ನಾನಿದ್ದೀನಿ' ಎಂದು ಭರವಸೆ ನೀಡಿದ್ದೆ. ಮಲಗಿದ ಜಾಗದಲ್ಲೇ ನಕ್ಕಿದ್ದಳು. ಅವಳು ಅಂದು ನಕ್ಕದ್ದರ ಅರ್ಥ ಇಂದು ಗೊತ್ತಾಗುತ್ತಿದೆ. ಆದರೆ ಸಮಯ ಮೀರೋಯ್ತಲ್ಲಾ..

(ಇಂಥ ಒಂದೆರಡು ಪ್ಯಾರದ ಕತೆಗಳನ್ನು 'ನ್ಯಾನೋ ಕತೆ'ಗಳು ಎಂದು ಕರೆದಿದ್ದೇನೆ.. ಇದು ಕಥೆಯಾ? ಕನವರಿಕೆಯಾ?)

ಕನಸಿನ ಮನೆಗೆ ಸ್ವಾಗತ

ಗೆಳೆಯರೇ,
ಬದುಕಿಗೆ ಕನಸುಗಳು ಬೇಕು..
ನಾನಂತೂ ಕನಸುಗಾರ..
ನೀವು ಕನಸುಗಾರರಾದರೇ ಮಾತ್ರ ನನ್ನ ಮನೆಗೆ ಬನ್ನಿ..