Saturday, September 20, 2008

ಕನಸಿನರಮನೆಯ ಅತಿಥಿ ದೇವರುಗಳ ಗಮನಕ್ಕೆ

ನಾನು ಜಾಗ ಬದಲಿಸಿದ್ದೇನೆ. ಅಂದರೆ ಈವರೆಗೆ ಬ್ಲಾಕ್‌ಸ್ಪಾಟ್‌ನಲ್ಲಿದ್ದ ನನ್ನ ಬ್ಲಾಗ್, ಇನ್ಮುಂದೆ ವರ್ಡ್‌ಪ್ರೆಸ್‌ನಲ್ಲಿ ಮುಂದುವರಿಯಲಿದೆ. ಬದಲಾದ ಹೊಸ ವಿಳಾಸ; http://kanasinaramane.wordpress.com/
ಅಲ್ಲಿಗೆ ದಯಮಾಡಿ ಬನ್ನಿ..

Monday, August 18, 2008

ದೊಡ್ಡ ಮುಳ್ಳು, ಚಿಕ್ಕಮುಳ್ಳು ಮತ್ತು ನಾನು!

ಒಂದು ದೊಡ್ಡಮುಳ್ಳು, ಇನ್ನೊಂದು ಚಿಕ್ಕ ಮುಳ್ಳು.. ಜತೆಗೊಂದು ಸೆಕೆಂಡ್ ಮುಳ್ಳು.. ಈ ಮುಳ್ಳುಗಳ ಗೊಂದಲದಲ್ಲಿ ಗಡಿಯಾರದಲ್ಲಿ ಟೈಮ್ ಹೇಳೋದು ನನ್ಗೆ ಗೊತ್ತಾಗುತ್ತಿರಲಿಲ್ಲ. ಆ ಕೆಲಸ ಅಂಬರದ ಚುಕ್ಕೆಗಳನ್ನು ಎಣಿಸಿದಷ್ಟೆ ತ್ರಾಸದಾಯಕ ಅನ್ನಿಸಿತ್ತು. ಗಡಿಯಾರ ನೋಡಿ ಟೈಮ್ ಹೇಳೋರನ್ನು ಜಾಣರೆಂದು, ವಿದ್ಯಾವಂತರೆಂದು ಆಗ ಪರಿಗಣಿಸಲಾಗಿತ್ತು. ನಾನಂತೂ ೫ನೇ ಕ್ಲಾಸ್ ದಾಟಿದರೂ ಮುಳ್ಳಿನ ಗೊಂದಲದಿಂದ ಹೊರಬಂದಿರಲಿಲ್ಲ. ಆಗಷ್ಟೆ ಬಂದಿದ್ದ ನಂಬರ್ ವಾಚುಗಳು ನನಗೆ ಇಷ್ಟವಾಗಿದ್ದವು. ಮುಳ್ಳುಗಳಿಲ್ಲ ಎಂಬುದು, ನನ್ನ ಇಷ್ಟಕ್ಕೆ ಇನ್ನೊಂದು ಕಾರಣ.
ಅಂಕೆಗಳಿಲ್ಲದಿದ್ದರೂ ಗೆರೆಗಳನ್ನು ನೋಡಿ ಕಾಲ ಹೇಳುವ ಪರಿ ನನ್ನಲ್ಲಾಗ ಕುತೂಹಲದ ವಿಷಯ. ಮೊದಮೊದಲು ‘ನೀನು ದೊಡ್ಡವನಾಗು ಗೊತ್ತಾಗುತ್ತೆ ’ ಎಂದು ಮನೆಯಲ್ಲಿ ಹೇಳುತ್ತಿದ್ದರು. ಕೆಲವು ಸಲ ಅಣ್ಣ, ಅಮ್ಮ, ಅಪ್ಪ -ಹೀಗೆ ಎಲ್ಲರೂ ಟೈಮ್ ನೋಡೋದನ್ನು ಕಲಿಸಲು ತಿಣುಕಿ ವಿಫಲರಾಗಿ, ಕೈಚೆಲ್ಲಿದ್ದರು. ಹಾಗೆಂದು ನಾನು ಲೆಕ್ಕದಲ್ಲಿ ವೀಕೇನು ಇರಲಿಲ್ಲ.
ಅಣ್ಣ ಆಗಷ್ಟೆ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದ. ಅವನಿಗೆ ಬಂದಿದ್ದ ಸ್ಕಾಲರ್‌ಶಿಪ್‌ನಲ್ಲಿ ಒಂದು ಎಚ್‌ಎಂಟಿ ವಾಚನ್ನು ಬೆಂಗಳೂರಿಂದ ಅಪ್ಪ ತಂದುಕೊಟ್ಟಿದ್ದರು. ಜಗಳ ಮಾಡ್ತೀನಿ ಅಂಥ ಒಂದು ಶೆಲ್ ವಾಚನ್ನು ನನಗೆ ತಂದಿದ್ದರು. ‘ನೀನು ಎಸ್ಸೆಸ್ಸೆಲ್ಸಿಯಲ್ಲಿ ಒಳ್ಳೆ ನಂಬರ್ ತಗೊಂಡ್ರೆ ನಿನಗೂ ವಾಚ್ ಕೊಡಿಸ್ತೀವಿ’ ಎಂದಿದ್ದರು. ಎಚ್‌ಎಂಟಿ ವಾಚ್‌ಗಿಂತಲೂ ಅದರ ಬಾಕ್ಸೇ ನನಗಾಗ ಬಲು ಇಷ್ಟ. ಅಣ್ಣನಂತೂ ವಾಚ್ ಧರಿಸಿ ಠೀವಿಯಿಂದ ಹೆಜ್ಜೆಹಾಕುತ್ತಿದ್ದ. ಮನೆಗೆ ಬಂದ ತಕ್ಷಣ ಬಾಕ್ಸ್‌ನಲ್ಲಿ ಶಿಸ್ತಿನಿಂದ ಬಿಚ್ಚಿಡುತ್ತಿದ್ದ. ನಾನು ಅವನಿಲ್ಲದ ಹೊತ್ತಲ್ಲಿ ಮನೆಯಲ್ಲಿಯೇ ಗಡಿಯಾರ ಧರಿಸಿ ಖುಷಿಪಡುತ್ತಿದ್ದೆ.
ನನಗೆ ಅಪ್ಪ ತಂದು ಕೊಟ್ಟಿದ್ದ ಶೆಲ್ ವಾಚ್‌ನ ಚೈನ್ ಎರಡು ದಿನಕ್ಕೆ ತುಂಡಾಗಿತ್ತು. ಅಪ್ಪ ಮನೆಯಲ್ಲಿನ ಚಾಕು, ಕಟಿಂಗ್ ಪ್ಲೇಯರ್ ತಕೊಂಡು ಸರಿಮಾಡಿದ್ದರು. ಆದರೂ ಆ ಚೈನ್ ಆಗಾಗ ಕಳಚಿ ಬೀಳುತ್ತಿತ್ತು. ಆಮೇಲಾಮೇಲೆ ನಾನೇ ರಿಪೇರಿ ಮಾಡೋದನ್ನು ಕಲಿತೆ. ರಿಪೇರಿ ಮಾಡೋದರಲ್ಲಿ ನಾನು ಮೊದಲಿಂದಲೂ ಎತ್ತಿದ ಕೈ. ಯಾರಾದರೂ ಟೈಮ್ ಕೇಳಿದರೆ, ೧೦.೧೬ ಅನ್ನುತ್ತಿದ್ದೆ. ೧೧.೨೯ಅನ್ನುತ್ತಿದ್ದೆ. ನಿಮಿಷಗಳು ಬದಲಾಗುವ ಪರಿ, ಈಗಲೂ ನನ್ನ ಪಾಲಿಗೆ ದೊಡ್ಡ ಬೆರಗು.
ಈ ಕೈಗಡಿಯಾರದ ವಿಷಯಕ್ಕೆ ಆಮೇಲೆ ಬರೋಣ. ಟೈಮನ್ನು ಪಕ್ಕದ ಮಸೀದಿಯವರು ಅಲ್ಲಾ ಕೂಗೋದನ್ನು ಅನುಸರಿಸಿ ಅಮ್ಮ ಹೇಳುತ್ತಿದ್ದಳು. ‘ಓ ಈಗ ೮ ಗಂಟೆ, ಆಗಲೇ ೧೨ ಗಂಟೆಯಾಯ್ತಾ..’ ಎಂದು ಅಮ್ಮ ಗೊಣಗುತ್ತಿದ್ದದ್ದು ಈಗಲೂ ಒಂದು ಸವಿನೆನಪು. ಮನೆಯಲ್ಲಿ ಆಗ ಗಡಿಯಾರ ಅಂಥ ಇದ್ದಿದ್ದು, ಅಪ್ಪನದೊಂದೆ. ಅಪ್ಪ ಸ್ಕೂಲ್ ಮೇಷ್ಟ್ರು. ಅಪ್ಪನ ಎಚ್‌ಎಂಟಿ ವಾಚಿನ ಮೇಲೆ ನಮಗೆಲ್ಲ ಏನೋ ಮೋಹ. ಅದರ ಟಿಕ್‌ಟಿಕ್ ನಾದ, ಮುಳ್ಳುಗಳು ಸುತ್ತೋ ಶಿಸ್ತು ನಿಜಕ್ಕೂ ಇಷ್ಟವಾಗಿತ್ತು.
ಬೆಳಬೆಳಗ್ಗೆ ಪೇಪರ್ ಓದಲು ಅಪ್ಪ ಬಸ್ ಸ್ಟಾಂಡ್‌ನತ್ತ ಹೆಜ್ಜೆ ಹಾಕುತ್ತಿದ್ದರು. ಪೇಪರ್ ಎಲ್ಲಾ ಮುಗಿಸಿ ದೇಶ ಮತ್ತು ಊರಿನ ಸಮಾಚಾರವನ್ನು ಚೆನ್ನಪ್ಪನ ಹೋಟೆಲ್‌ನಲ್ಲಿ ಚರ್ಚಿಸಿ, ಗೆಳೆಯರ ಕಾಲೆಳೆದು ಅಲ್ಲಿ ಮಾತಿನ ಮಂಟಪ ಕಟ್ಟುವಲ್ಲಿ ಅಪ್ಪ ಎತ್ತಿದ ಕೈ. ಆ ಸುಖದಲ್ಲಿ ಸಮಯ ಹೋಗಿದ್ದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಹೋಟೆಲ್ ಹಿಂದೆಯೇ ಇದ್ದ ಶಾಲೆಯ ಗಂಟೆ ಹೊಡೆದ ತಕ್ಷಣ , ಅಪ್ಪ ಮನೆಯತ್ತ ಬಿರಬಿರನೆ ಬರ್ತಾಯಿದ್ದರು. ೫-೧೦ ನಿಮಿಷದಲ್ಲಿಯೇ ಅವರ ಸ್ನಾನ-ತಿಂಡಿ ಎಲ್ಲಾ ಮುಗಿದು, ಶಾಲೆಯ ಪ್ರಾರ್ಥನೆ ಮುಗಿವ ಹೊತ್ತಿಗೆ ಶಾಲೆಯಲ್ಲವರು ಹಾಜರು.
ಇಲ್ಲಿ ಅಪ್ಪ ಇಲ್ಲದ ಹೊತ್ತಿನಲ್ಲಿ ನಮಗೆ ಸಮಯ ತಿಳಿಯುತ್ತಿರಲಿಲ್ಲ. ನಾನು ಮತ್ತು ಅಣ್ಣ ರಸ್ತೆಯಲ್ಲಿ ನಿಂತು, ಹೋಗಿ ಬರೋರ ಬಳಿ ಸಮಯ ಕೇಳ್ತಾಯಿದ್ವಿ. ‘ಅಣ್ಣಾ ಟೈಮೆಷ್ಟಣ್ಣ ’, ‘ಸಾರ್ ಟೈಮೆಷ್ಟಾಯಿತು ಸಾರ್’ ಎಂಬ ನಮ್ಮ ದಿನನಿತ್ಯದ ಪ್ರಶ್ನೆ, ಆ ರಸ್ತೆಯಲ್ಲಿ ಸುತ್ತಾಡುವ ಅನೇಕರಿಗೆ ಚಿರಪರಿಚಿತ. ಅವರು ೯.೩೦ ಅಂದರೆ, ಕೂಡಲೇ ಮನೆಗೆ ಬಂದು ‘ಅಮ್ಮಾ ಆಗಲೇ ೧೦ ಗಂಟೆ ಆಯಿತು, ಬೇಗ ತಿಂಡಿ ರೆಡಿ ಮಾಡು.. ಸ್ಕೂಲ್‌ಗೆ ಟೈಮಾಯ್ತು’ ಎಂದು ಪೀಡಿಸುತ್ತಿದ್ದೆವು.
ರಸ್ತೆಯಲ್ಲಿ ಬರೋ ೧೦ ಜನರಲ್ಲಿ ಒಬ್ಬರೋ ಇಬ್ಬರೋ ಗಡಿಯಾರ ಹೊಂದಿರುತ್ತಿದ್ದರು. ನಾವು ಟೈಂ ಕೇಳಿದಾಗ, ಠೀವಿಯಿಂದ ಕೈಯೆತ್ತಿ ಸಮಯ ಹೇಳುತ್ತಿದ್ದರು. ಕೆಲವರಿಗೆ ಸಮಯ ಹೇಳೋದು ಗೊತ್ತಿರಲಿಲ್ಲ. ಅವರು ಫ್ಯಾಷನ್‌ಗಾಗಿ ಕಟ್ಟುತ್ತಿದ್ದರು. ಅಂಥವರು ‘ಗಡಿಯಾರ ಯಾಕೋ ಬೆಳಗ್ಗೆಯಿಂದ ನಿಂತೋಗಯ್ತೆ..’ ಎನ್ನುತ್ತಾ ನಮ್ಮಿಂದ ತಪ್ಪಿಸಿಕೊಳ್ಳುತ್ತಿದ್ದರು.
‘ಮಕ್ಕಳು ರಸ್ತೆಯಲ್ಲಿ ನಿಂತು ಕಂಡೋರ ಬಳಿ ಟೈಮ್ ಕೇಳೋದನ್ನು ನೋಡೋಕೆ ಆಗೋದಿಲ್ಲ. ಮೊದಲು ಗೋಡೆ ಗಡಿಯಾರ ತನ್ನಿ’ ಎಂದು ಅಮ್ಮ ಕೇಳುತ್ತಿದ್ದಳು. ಅಪ್ಪ , ‘ತರೋಣ. ಈ ಸಲ ಪೇಪರ್ ವ್ಯಾಲ್ಯುಯೇಷನ್‌ಗೆ ಬೆಂಗಳೂರ್‌ಗೆ ಹೋದಾಗ ತರ್ತಿನಿ’ ಎನ್ನುತ್ತಿದ್ದರು. ಈ ಮಧ್ಯೆ ವೀರಗಾನಹಳ್ಳಿಯಲ್ಲಿದ್ದ ಚಿಕ್ಕಪ್ಪನ ಮನೆಯ ಗೋಡೆಯನ್ನು ‘ಮಾಸ್ಟರ್ ಬಿಂ-ಬಾಂ’ ಗಡಿಯಾರ ಅಲಂಕರಿಸಿತ್ತು. ಮಧುಗಿರಿಯಲ್ಲಿ ಸಿಕ್ಕಿದ್ದ ಚಿಕ್ಕಪ್ಪನ ಮಗ ರವಿ, ಈ ವಿಷಯವನ್ನು ನನ್ನ ಕಿವಿಗೆ ಹಾಕಿದ್ದ. ಅವನು ಅದ್ಯಾಕೆ ಹೇಳಿದನೋ ಗೊತ್ತಿಲ್ಲ.
ಈ ಮಧ್ಯೆ ಅಪ್ಪ-ಅಮ್ಮ ಮತ್ತು ನಾನು ವೀರಗಾನಹಳ್ಳಿಗೆ ಹೋಗಿದ್ದೆವು. ಮಾರಮ್ಮನ ಹಬ್ಬವೋ ಅಥವಾ ಇನ್ನೇನೋ ಇತ್ತು. ಹಬ್ಬಕ್ಕಿಂತಲೂ ನಮಗೆ ಗೋಡೆ ಗಡಿಯಾರದ ಮೇಲೆಯೇ ಗಮನ. ಅದು ಗಂಟೆಗೊಮ್ಮೆ ಬಿಂ-ಬಾಂ ಎಂದು ಸದ್ದು ಮಾಡಿದಾಗಲೆಲ್ಲ, ಎದೆಯಲ್ಲಿ ಪುಳಕ. ಕೆಲವೇ ದಿನಗಳಲ್ಲಿ ಅಂಥದ್ದೇ ಗಡಿಯಾರ ತರಲು ಮನೆಯಲ್ಲಿ ಸಿದ್ಧತೆಗಳು ನಡೆದವು. ತುಮಕೂರಿಂದ ನಾವಿದ್ದ ಪಟ್ಟನಾಯ್ಕನಳ್ಳಿಗೆ ಬರ್‍ತಾಯಿದ್ದ ಸದಾಶಿವಯ್ಯ ಮೇಷ್ಟ್ರು ಗಡಿಯಾರ ತರುವ ಹೊಣೆ ಹೊತ್ತುಕೊಂಡರು. ಮಾಸ್ಟರ್ ಬಿಂ-ಬಾಂ ತರಲು, ಗಡಿಯಾರದಂಗಡಿಗೆ ಹೋಗಿದ್ದ ಅವರಿಗೆ, ಅದು ಓಲ್ಡ್ ಫ್ಯಾಷನ್‌ನಂತೆ ಕಂಡಿರಬೇಕು. ಅವರು ಕೀ ರಗಳೆ ಇಲ್ಲದ ಅಜಂತ ಕ್ವಾರ್ಟ್ಜ್ ಗಡಿಯಾರ ತಂದಿದ್ದರು. ಆ ಗಡಿಯಾರಕ್ಕಾಗಿ ಅವರು ಇನ್ನೂ ೫೦ ರೂಪಾಯಿ ಸೇರಿಸಿದ್ದರು.
ಆ ಗಡಿಯಾರ ನೋಡಿದ ಅಪ್ಪನಿಗೆ ಇಷ್ಟವಾಯಿತು. ಆದರೆ ನಮಗ್ಯಾರಿಗೂ ಸುತಾರಾಂ ಇಷ್ಟವಾಗಲಿಲ್ಲ. ರಾತ್ರಿ ೧೨ಗಂಟೆಗೆ ೧೨ ಸಲ ಗಂಟೆ ಹೊಡೆದರೆ, ನಿದ್ದೆ ಹೋಗುತ್ತೆ, ಇದು ಚೆನ್ನಾಗಿದೆ. ಕೀ ಕೊಡಬೇಕಿಲ್ಲ. ವರ್ಷಕ್ಕೊಂದು ಸೆಲ್ ಹಾಕಿದರೆ ಸಾಕು’ ಎಂದು ಸದಾಶಿವಯ್ಯ ಮೇಷ್ಟ್ರು ಏನೇನೋ ವಿವರಣೆ ನೀಡಿ, ನಮ್ಮನ್ನು ಒಪ್ಪಿಸಲು ನೋಡಿದರು. ಒಲ್ಲದ ಮನಸ್ಸಿನಲ್ಲಿಯೇ ಗೋಡೆಗೆ ಮೊಳೆ ಹೊಡೆದು ನೇತು ಹಾಕಿದೆವು. ಯಾಕೋ ಅದರ ಅಸ್ತಿತ್ವ ಯಾರಿಗೂ ಕಾಣಿಸುತ್ತಿಲ್ಲ ಎಂದು ನಮಗೆಲ್ಲ ಅನ್ನಿಸಿತ್ತು. ಗಂಟೆ ಬದಲಿಗೆ ಅದು ಮಂಜುಳ ನಿನಾದವನ್ನು ಹೊರಚೆಲ್ಲುತ್ತಿತ್ತು.
ರಾತ್ರಿ ವೇಳೆ ಆ ಸುಮಧುರ ಸಂಗೀತ ಬಂದ್! ರಾತ್ರಿ ೧೦ ಗಂಟೆ ತನಕ ಮ್ಯೂಸಿಕ್ ನುಡಿಸೋ ಗಡಿಯಾರ, ಆಮೇಲೇಕೆ ಸುಮ್ಮನಾಗುತ್ತೆ ಅನ್ನೋದು ನಮಗೆಲ್ಲ ಚಿದಂಬರ ರಹಸ್ಯ. ಗಡಿಯಾರದ ಮೇಲೆ ಬೆಳಕು ಬಿದ್ದರಷ್ಟೆ ಮ್ಯೂಸಿಕ್ ಬರುತ್ತೆ ಅನ್ನೋದನ್ನು ನಾನು ಕಂಡು ಹಿಡಿದು ಜಾಣನಂತೆ ಬೀಗಿದೆ. ಅಪ್ಪ ನನ್ನ ವಾದವನ್ನು ಒಪ್ಪಿಕೊಂಡರು.
ಗಡಿಯಾರದ ಬಗ್ಗೆ ನಮ್ಮ ಪ್ರೀತಿ ಚಿಗುರಲೇ ಇಲ್ಲ. ಯಾಕೋ ಅದನ್ನು ಕಂಡಾಗಲೆಲ್ಲಾ ಎಲ್ಲೋ ಮೋಸ ಹೋದೆವು ಅನ್ನಿಸುತ್ತಿತ್ತು. ನಮ್ಮ ಮನಸ್ಥಿತಿ ಸದಾಶಿವಯ್ಯ ಮೇಷ್ಟ್ರುಗೆ ಅರ್ಥವಾಯಿತು ಅನ್ನಿಸುತ್ತೆ. ಅವರು ಹೊಸದೊಂದು ಮಾಸ್ಟರ್ ಬಿಂ-ಬಾಂ ಗಡಿಯಾರ ತಂದು ಕೊಟ್ಟರು. ಅಜಂತ ಕ್ವಾರ್ಟ್ಜ್ ಗಡಿಯಾರವನ್ನು ತಮ್ಮ ಮನೆಯಲ್ಲಿ ಹಾಕಿಕೊಂಡರು. ಹೊಸ ಗಡಿಯಾರ ಬಂದ ದಿನ ನಮಗೆಲ್ಲ ಏನೋ ಸಡಗರ. ಅಮ್ಮ ಅರಿಷಿಣ-ಕುಂಕುಮ ಇಟ್ಟು ಪೂಜೆ ಮಾಡಿದರು. ಪೆಂಡಿಲಮ್‌ಗೂ ಅರಿಷಿಣ-ಕುಂಕುಮದ ಜತೆ ವಿಭೂತಿ ಸವರಿದೆವು. ಅದು ಗಂಟೆಗೆ ಮತ್ತು ಅರ್ಧ ಗಂಟೆಗೆ ಸದ್ದು ಮಾಡುತ್ತಿತ್ತು. ಹನ್ನೆರಡು ಗಂಟೆ ಬರೋದನ್ನು ಕಾಯುತ್ತಿದ್ದೆವು. ಗಡಿಯಾರ ಒಂದೊಂದು ಗಂಟೆ ಹೊಡೆದಾಗಲೂ ನಾವು ಒಂದು, ಎರಡು, ಮೂರು.. ಹನ್ನೊಂದು, ಹನ್ನೆರಡು ಎಂದು ಎಚ್ಚರಿಕೆಯಿಂದ ಎಣಿಸುತ್ತಿದ್ದೆವು.
ವಾರಕ್ಕೊಮ್ಮೆ ಕೀ ಕೊಡಲು ಅಪ್ಪ ಕುರ್ಚಿ ಮೇಲೆ ಹತ್ತುತ್ತಿದ್ದರು. ಅವರಿಗೆ ಕುರ್ಚಿ ತಂದು ಕೊಡುವುದು ಮತ್ತು ಕೀ ನೀಡುವ ಪ್ರಕ್ರಿಯೆ ವೀಕ್ಷಿಸುತ್ತಿದ್ದೆ. ಆರಂಭದಲ್ಲಿ ಹಿತವಾಗಿದ್ದ ಘಂಟಾನಾದ, ನಂತರ ಕರ್ಣ ಕಠೋರ ಅನ್ನಿಸತೊಡಗಿತು. ಆಮೇಲಾಮೇಲೆ ಕೀ ಕೊಡುವ ಉತ್ಸಾಹ ಅಪ್ಪ ಮತ್ತು ನನ್ನಲ್ಲಿ ಇಲ್ಲವಾಯಿತು. ‘ಮನೆಯಲ್ಲಿನ ಗಡಿಯಾರ ನಿಲ್ಲ ಬಾರದು, ಕೀ ಕೊಡಿ’ ಎಂದು ಅಮ್ಮ ಹೇಳುತ್ತಿದ್ದಳು. ಅವಳ ಬಲವಂತಕ್ಕೆ ಕೀ ಕೊಡುತ್ತಿದ್ದೆವು. ನಮ್ಮ ನಿರುತ್ಸಾಹ ಕಂಡು ಗಡಿಯಾರಕ್ಕೆ ಬೇಸರವಾಗಿರಬೇಕು. ಒಂದು ಒಳ್ಳೆ ದಿನ ಅದು ಕೆಟ್ಟು ನಿಂತಿತು. ಅದನ್ನೇ ಕಾಯುತ್ತಿದ್ದ ನಾನು ಅದನ್ನೆತ್ತಿ ಅಟ್ಟದ ಮೇಲಿಟ್ಟೆ. ಆ ಜಾಗಕ್ಕೆ ಮತ್ತೆ ಕ್ವಾರ್ಟ್ಜ್ ಗಡಿಯಾರವನ್ನು ಅಣ್ಣ ತಂದು ಹಾಕಿದ.
ಈಗ ಮತ್ತೆ ಕೈಗಡಿಯಾರದ ವಿಷಯಕ್ಕೆ ಬರೋಣ. ಆಗ ಯಾರದಾದ್ರೂ ಕೈಯಲ್ಲಿ ಚಿನ್ನದ ಬಣ್ಣದ ವಾಚು ಹೊಳೆಯುತ್ತಿದೆ ಎಂದರೆ, ಹೊಸದಾಗಿ ಮದುವೆಯಾಗಿದ್ದಾನೆ ಎಂದು ಸುಲಭವಾಗಿ ಊಹಿಸಬಹುದಿತ್ತು. ‘ವರದಕ್ಷಿಣೆ, ಉಂಗುರ ಮತ್ತು ಚೈನ್ ಜತೆಗೆ ಗೋಲ್ಡ್ ಕೇಸ್ ವಾಚ್ ಕೊಡಬೇಕು’ ಎಂಬ ಬೇಡಿಕೆಯನ್ನು ವರಮಹಾಶಯರು ಮುಂದಿಡುತ್ತಿದ್ದರು. ಅಂಥಾ ವಾಚ್ ಕಟ್ಟುವ ಬಯಕೆ ನಾವು ಹುಡುಗರಾಗಿದ್ದಾಗಲೇ ಎದೆಯಲ್ಲಿ ಗರಿಗೆದರಿತ್ತು. ನಾನು ಎಸ್ಸೆಸ್ಸೆಲ್ಸಿ ಯನ್ನು ಸೆಕಂಡ್ ಕ್ಲಾಸಲ್ಲಿ ಪಾಸ್ ಮಾಡಿದ್ದು ನಮ್ಮ ಮನೆಮಂದಿಗೆಲ್ಲಾ ಆಶ್ಚರ್ಯದ ಸಂಗತಿ! ಒಂದೋ ಎರಡೋ ಸಬ್ಜೆಕ್ಟ್‌ನಲ್ಲಿ ಡುಮ್ಕಿ ಹೊಡಿತಾನೆ ಎಂದು ಅವರು ಭಾವಿಸಿದ್ದರು. ಬೆಂಗಳೂರಿನಲ್ಲಿದ್ದ ಅಣ್ಣನಿಗಂತೂ ಖುಷಿಯೋ ಖುಷಿ. ಅವನು ಪ್ರತಿ ಸಲ ಊರಿಗೆ ಬಂದಾಗ ೧೦೦ ಗ್ರಾಂ ಚೌಚೌನ್ನು ನನಗಾಗಿ ತರ್ತಾಯಿದ್ದ. ಆ ಸಲ ಸ್ವೀಟನ್ನು ತಂದಿದ್ದ. ಅದೇ ಟೈಮಲ್ಲಿ ಅಪ್ಪನೊಂದಿಗೆ ಬೆಂಗಳೂರಿಗೆ ಹೋಗಿದ್ದೆ. ಜತೆಯಲ್ಲಿದ್ದ ಅಣ್ಣ, ‘ಅಪ್ಪಾ ಬಾಬುಗೊಂದು ಗಡಿಯಾರ ಕೊಳ್ಳೋಣವೇ’ ಎಂದ. ಎಚ್‌ಎಂಟಿ ಶೋರೂಂಗೆ ಹೊರಟಿತು ನಮ್ಮ ಸವಾರಿ.
ಅಲ್ಲಿ ಕೀ ಕೊಡುವ ಗಡಿಯಾರಗಳನ್ನು ಅಪ್ಪಾ ನೋಡ್ತಾಯಿದ್ದರು. ಆದರೆ ಅಣ್ಣ, ಕ್ವಾರ್ಟ್ಜ್ ಗಡಿಯಾರಗಳನ್ನು ಕೈಯಲ್ಲಿಡಿದಿದ್ದ. ‘ಅವೆಲ್ಲಾ ಜಾಸ್ತಿ ರೇಟು, ಇದ್ಯಾವುದಾದರೂ ನೋಡು’ ಎಂದರು. ಆದರೆ ಅಣ್ಣ ಅತ್ತ ಸುಳಿಯಲೇ ಇಲ್ಲ. ೬೬೮ ರೂಪಾಯಿ ನೀಡಿ ಕ್ವಾರ್ಟ್ಜ್ ಗಡಿಯಾರ ಕೊಡಿಸಿದ. ಆಗಿನ ಕಾಲಕ್ಕೆ ಅದು ಒಳ್ಳೆ ಗಡಿಯಾರ(ಈಗಲೂ ಸಹಾ). ಹೀರೊ ಹೊಂಡಾ ಸರ್ವೀಸ್ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಆಗ ಬರ್ತಾಯಿದ್ದ ಸಂಬಳ ಬರೀ ೪೦೦ ರೂಪಾಯಿ. ಗಡಿಯಾರ ಖರೀದಿಸಿದ ಮೇಲೆ ಹೋಟೆಲ್‌ಗೆ ಹೋಗಿ ಮಸಾಲೆ ದೋಸೆ ತಿಂದೆವು. ಬೆಂಗಳೂರಿನ ಅಂದಿನ ಟ್ರಾಫಿಕ್, ಬಿಎಂಟಿಸಿ ಬಸ್‌ಗಳು, ಜನ ಜಾತ್ರೆ -ಇವೆಲ್ಲವೂ ನನ್ನ ಕಣ್ಣಿಂದ ಕದಲದ ಚಿತ್ರಗಳು.
ಅಣ್ಣ, ಗಡಿಯಾರ ಕೊಡಿಸಿ ಇಂದಿಗೆ ದಶಕಗಳು ಸವೆದಿವೆ. ಆಗಾಗ ಸೆಲ್ ಹಾಕಿಸಿದ್ದು ಬಿಟ್ಟರೇ ರಿಪೇರಿ ತಂಟೆಗೆ ಹೋಗಿಲ್ಲ. ಯಾಕೋ ಗಡಿಯಾರ ಕಂಡಾಗಲೆಲ್ಲ, ಅಣ್ಣ ನೆನಪಾಗುತ್ತಾನೆ. ಅಣ್ಣನೊಂದಿಗೆ ನಮ್ಮ ಮನೆಮಂದಿ ನೆನಪಾಗುತ್ತಾರೆ. ಬೆಂಗಳೂರಿಗೆ ಬಂದಾಗ ಅದು ನನ್ನ ಕೈಯಲ್ಲಿತ್ತು. ಅದರ ಗಾಜು ಒಡೆದದ್ದು, ಅದನ್ನು ಹಾಕಿಸಿದ್ದು ಬಿಟ್ಟರೆ ಬೇರೇನು ಕಿರಿಕಿರಿಗಳಿರಲಿಲ್ಲ. ಈ ಮಧ್ಯೆ ವಾಚನ್ನು ಎಲ್ಲಾದರೂ ನಾನು ಕಳೆದುಕೊಳ್ಳುತ್ತೇನೆ ಎಂದು ಮನಸಿಗೆ ಅನ್ನಿಸತೊಡಗಿತು. ಮತ್ತೊಬ್ಬ ಅಣ್ಣ ಮೊಬೈಲ್ ಕೊಡಿಸಿದ ಮೇಲೆ ಗಡಿಯಾರದ ಅವಶ್ಯಕತೆ ಇಲ್ಲ ಎಂದು ನನಗೆ ನಾನೇ ಅಂದುಕೊಂಡೆ. ಆ ನೆಪದಲ್ಲಿ ಅಣ್ಣನ ಎಚ್‌ಎಂಟಿ ವಾಚನ್ನು ಜೋಪಾನ ಮಾಡುವುದು ಒಳ ಹುನ್ನಾರ! ಅಂದಿನಿಂದ ಗಡಿಯಾರ ಮನೆಯ ಶೋಕೇಸ್‌ನಲ್ಲಿ ಭದ್ರವಾಗಿ ಕೂತು ಬಿಟ್ಟಿದೆ.
ಗಡಿಯಾರ ಧರಿಸುವುದು ಹಿಂದೆ ದೌಲತ್ತಿನ ಸಂಕೇತ. ಜತೆಗೆ ಶ್ರೀಮಂತಿಕೆ ಮತ್ತು ಗಣ್ಯತೆ ಪ್ರದರ್ಶಿಸುವ ನೆಪವಾಗಿತ್ತು. ಆದರೆ ದಿನಗಳು ಬದಲಾಗಿವೆ. ಕಂಪನಿ ಸಿಇಒ ಸೇರಿದಂತೆ ಬಹುತೇಕರ ಕೈಯಲ್ಲೀಗ ಗಡಿಯಾರ ಉಳಿದಿಲ್ಲ. ಮಾತಿಗೂ, ಸಮಯಕ್ಕೂ ಎಲ್ಲಕ್ಕೂ ಎಲ್ಲರ ಕೈಯಲ್ಲೂ ಕಿಣಿಕಿಣಿ ಮೊಬೈಲ್.
ಎಲ್‌ಕೆಜಿ ಓದುವ ಮಗಳಿಗೆ ಅಣ್ಣ ನಂಬರ್ ತೋರಿಸುವ ಗಡಿಯಾರ ತಂದುಕೊಟ್ಟಿದ್ದಾನೆ. ಬಯಸುವ ಮೊದಲೇ ಗಡಿಯಾರ ಅವಳ ಕಾಲಬುಡಕ್ಕೆ ಬಿದ್ದಿದೆ. ಹೀಗಾಗಿ ಅವಳಲ್ಲಿ ಗಡಿಯಾರದ ಕನಸಿಲ್ಲ. ಮುಳ್ಳುಗಳ ಗೊಂದಲಗಳೂ ಇಲ್ಲ.

Wednesday, August 13, 2008

ಗ್ರಾಮೀಣ ಭಾರತದ ಇಷ್ಟ-ಕಷ್ಟಗಳು!


ಯಾರನ್ನಾದರೂ ಮಾತನಾಡಿಸಿ ನೋಡಿ, ತಮ್ಮ ಊರಿನ ವಿಷಯ ಬಂದಾಗ ಎಲ್ಲರೂ ಭಾವುಕರಾಗುತ್ತಾರೆ. ‘ನಮ್ಮ ಊರು(ಹಳ್ಳಿ) ಆಗಿದೆ, ಹೀಗಿದೆ.. ಇಲ್ಲೇನಿದೆ ಮಣ್ಣು’ ಎನ್ನುತ್ತಾ ತಮ್ಮ ನೆನಪಿನ ಮೆರವಣಿಗೆಗೆ ಕರೆದೊಯ್ಯುತ್ತಾರೆ. ‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎಂಬ ವೈರಾಗ್ಯದ ಮಾತಾಡುತ್ತಾರೆ. ತಮ್ಮ ಜೀವನ ಸಂಧ್ಯಾಕಾಲವನ್ನು ಹಳ್ಳಿಯಲ್ಲಿ ಸವೆಸಬೇಕು ಎನ್ನುತ್ತಾರೆ.‘ಈಗಲೇ ಹೋಗಲು ಇಷ್ಟ, ಆದರೆ ನಮ್ಮ ಕಮಿಟ್‌ಮೆಂಟ್‌ಗಳು ನಾವು ನಮ್ಮಿಷ್ಟದಂತೆ ಬದುಕಲು ಬಿಡುತ್ತಿಲ್ಲ’ ಎಂದು ನೂರೊಂದು ಸಬೂಬು ಹೇಳುತ್ತಾರೆ. ಒಟ್ಟಿನಲ್ಲಿ ಹಳ್ಳಿಗಳ ಕುರಿತಾದ ರೊಮ್ಯಾಂಟಿಕ್ ಕಲ್ಪನೆ ಜಾರಿಯಲ್ಲಿದೆ. ಒಂದರ್ಥದಲ್ಲಿ ಹಳ್ಳಿಗಳು ಹಳ್ಳಿಗಳಾಗೇ ಇರಬೇಕಾ ಎಂಬ ಪ್ರಶ್ನೆಯೂ ಬರುತ್ತದೆ. ಆದರೆ ಒಂದರ್ಥದಲ್ಲಿ ಹಳ್ಳಿಗಳು ಬದಲಾಗಿವೆ. ಅತ್ತ ಪಟ್ಟಣಗಳೂ ಆಗದೇ, ಇತ್ತ ಹಳ್ಳಿಯ ಸೊಗಡನ್ನೂ ಕಳೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿವೆ. ಸ್ವಾತಂತ್ರ್ಯಾನಂತರ ಹಳ್ಳಿಗಳ ಸ್ಥಿತಿ ಸುಧಾರಿಸಬೇಕಾಗಿತ್ತು. ಆದರೆ ಬಹುತೇಕ ಹಳ್ಳಿಗಳು ಇನ್ನೂ ವಿದ್ಯುತ್ ದೀಪವನ್ನೇ ಕಂಡಿಲ್ಲ. ರಸ್ತೆಗಳಿಲ್ಲದೇ ಅನೇಕ ಹಳ್ಳಿಗಳು ದ್ವೀಪದಂತೆ ಉಳಿದಿವೆ. ಒಂದು ಬೆಂಕಿಪೊಟ್ಟಣಕ್ಕಾಗಿ ಎರಡು ಮೂರು ಮೈಲು ಸವೆಸಬೇಕಾದ ಸ್ಥಿತಿ ಕೆಲವು ಹಳ್ಳಿಗಳಲ್ಲಿ ಈಗಲೂ ಇದೆ. ನನ್ನಳ್ಳಿಯ ಕಾಣುತ್ತಲೇ ಗ್ರಾಮೀಣ ಭಾರತವನ್ನು ಊಹಿಸುವ ಯತ್ನ ನನ್ನದು. ಹೊಟ್ಟೆಪಾಡಿಗಾಗಿ(ವೃತ್ತಿ) ಮಾಯಾನಗರಿ ಬೆಂಗಳೂರಿನಲ್ಲಿ ನಾನಿದ್ದರೂ, ನನ್ನ ಮೂಲ ಬೇರುಗಳು ನನ್ನೂರಿನಲ್ಲಿಯೇ ಇವೆ. ಆನೂಡಿ, ನನ್ನಮ್ಮನ ಊರು. ನನ್ನ ಊರು ಸಹಾ ಹೌದು. ಬಾಲ್ಯಕ್ಕೊಂದು ಬೆರಗುಕೊಟ್ಟ, ಬದುಕಿಗೊಂದಿಷ್ಟು ಮೌಲ್ಯಗಳನ್ನು ಬಳುವಳಿಯಾಗಿ ಕೊಟ್ಟ ಆನೂಡಿಯನ್ನು ಮರೆಯುವುದಾದರೂ ಹೇಗೆ? ಹೀಗಾಗಿಯೇ ಅಲ್ಲಿನ ತವಕ-ತಲ್ಲಣಗಳು ಈಗಲೂ ನನ್ನನ್ನು ಕಾಡುತ್ತವೆ. ಜನಪ್ರತಿನಿಗಳ ನಿರ್ಲಕ್ಷ್ಯ, ಜನ ಸಾಮಾನ್ಯರಲ್ಲಿ ಜಾಗೃತಿಯ ಕೊರತೆಯಿಂದಾಗಿ ನಾನಾ ಪರಿಸರ ಸಂಬಂ ಸಮಸ್ಯೆಗಳು ಇಂದೂ ಜೀವಂತವಾಗಿ ಉಳಿದಿವೆ, ನಾಳೆಯೂ ಸಮಸ್ಯೆಗಳು ತೀರುತ್ತವೆ ಎಂದು ನನಗನಿಸುವುದಿಲ್ಲ. ಯಾವುದಿದು ಆನೂಡಿ? ಎಲ್ಲಿಯದಿದು ಆನೂಡಿ? -ಆನೂಡಿಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡ ಖ್ಯಾತನಾಮರು ಇಲ್ಲದ ಕಾರಣ, ಈ ಬಗ್ಗೆ ತುಸು ಹೇಳುವುದು ಉಚಿತ. ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿದೆ ಆನೂಡಿ. ವಿಚಾರವಾದಿ ಎಚ್.ನರಸಿಂಹಯ್ಯ ಅವರ ಹುಟ್ಟೂರಾದ ಹೊಸೂರು ಪಕ್ಕದಲ್ಲಿರುವ ಆನೂಡಿಯ ಏಕೈಕ ಹೆಗ್ಗಳಿಕೆ, ಅಲ್ಲಿನ ಆಂಜನೇಯ ದೇವಸ್ಥಾನ. ಊರ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿರುವ ದೇವಸ್ಥಾನ ಬಿಟ್ಟರೆ, ಇಲ್ಲಿನ ಬಗ್ಗೆ ಮಾತನಾಡಲು ಇನ್ನೊಂದು ವಿಷಯ ಸಿಗುವುದಿಲ್ಲ.ಎಲ್ಲಾ ಹಳ್ಳಿಗಳಂತೆಯೇ ಆನೂಡಿಯಲ್ಲೂ ಶೌಚದ್ದೊಂದು ಸಮಸ್ಯೆ. ಬಯಲುಗಳಲ್ಲಿನ ಮೋಟು ಗಿಡಗಳ ಮರೆಯಲ್ಲಿ ಅಡಗಿ ಕೊಳ್ಳುವ ಪರಿಸ್ಥಿತಿ ಈಗಲೂ ಇದೆ. ಮೊದಲು ಊರ ಮುಂದಿನ ನಮ್ಮ ಬಣವೆಯಲ್ಲಿನ ತಿಪ್ಪೆ ಹೆಂಗಸರು ಮತ್ತು ಮಕ್ಕಳ ಶೌಚ ಕೇಂದ್ರವಾಗಿತ್ತು. ಅಲ್ಲಿನ ಅರಳೀಕಟ್ಟೆಯಲ್ಲಿ ಮೈಗಳ್ಳರ ಚೌಕಾಭಾರ, ಬಸವನಕಟ್ಟೆ, ಹೆಡ್ ಮತ್ತಿತರ ದುಡ್ಡಿನ ಆಟಗಳ ಪರಿಣಾಮ ಜನಸಂದಣಿ ಹೆಚ್ಚಿದ ಮೇಲೆ ಅಲ್ಲಿಗೆ ಹೋಗಲು ಹೆಣ್ಣು ಮಕ್ಕಳು ಹಿಂದೆ ಮುಂದೆ ನೋಡುವಂತಾಯಿತು. ಸೂರ್ಯ ಹುಟ್ಟುವ ಮುನ್ನ ಅಥವಾ ಸೂರ್ಯ ಮುಳುಗಿ ಕತ್ತಲಾದ ಮೇಲೆ ಇಬ್ಬರು ಮೂವರು ಹೆಂಗಸರು ಜತೆಯಾಗಿ ಬಣವೆ ಕಡೆ ಹೋಗುತ್ತಿದ್ದರು. ಶೌಚದ ಸ್ವಾಭಾವಿಕ ಪ್ರಕ್ರಿಯೆಗೆ, ಸಮಯ ಕಾಯುವಂಥ ಸ್ಥಿತಿ ನಿರ್ಮಾಣವಾಗಿತ್ತು. ಊರಿನ ಗಂಡಸರು ಕೆರೆ ಬದಿಗೋ, ತಮ್ಮ ಕರೆಂಟ್ ರೂಂನ ಬಳಿಗೋ ಹೋಗುತ್ತಾರೆ. ಮೂತ್ರ ವಿಸರ್ಜನೆ ನಂತರ, ಸ್ವಚ್ಛತಾ ಕಾರ್ಯಕ್ಕೆ ನೀರು ಬೇಕೇಬೇಕೆಂಬ ನಿಯಮ ಕೆಲವರಿಗಿಲ್ಲ. ಯಾವುದೋ ಹಸಿರು ಗಿಡದ ಸೊಪ್ಪೋ, ಅಂಗೈ ಅಗಲದ ಕಾಗದ ಸಿಕ್ಕಿದರೂ ಸಾಕು! ಆನೂಡಿ ರಸ್ತೆಯಲ್ಲಿ ಬಸ್ ಇಳಿದು, ಊರು ಪ್ರವೇಶಿಸಲಿರುವ ೪-೫ ಅಡಿ ಅಗಲದ ರಸ್ತೆಯಲ್ಲಿ ಬರುವ ಪ್ರತಿಯೊಬ್ಬರೂ, ಮೂಗಿಗೆ ಕರವಸ್ತ್ರವೊಡ್ಡುವುದು ಅನಿವಾರ್ಯ. ಪ್ರತಿಯೊಂದು ಹೆಜ್ಜೆಯನ್ನೂ ಬಹಳ ಲೆಕ್ಕಾಚಾರ ಹಾಕಿ, ರೇಖಾಗಣಿತದಲ್ಲಿ ರೇಖೆ ಎಳೆದಂತೆ, ಕೋನಗಳನ್ನು ಸೇರಿಸಿದಂತೆ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಕಾಲಿನ ಜತೆ ಗಲೀಜು ಸಂಬಂಧ ಬೆಳೆಸುತ್ತದೆ! ಯಾಕೆ ಹೀಗೆ? ಕಂಪ್ಯೂಟರ್ ಯುಗದಲ್ಲೂ ಇಂಥ ಅಜ್ಞಾನ ಉಳಿದಿರುವುದನ್ನು ಕಂಡಾಗ, ತುಸು ಬೇಸರವಾಗುತ್ತದೆ. ನೈರ್ಮಲ್ಯದ ಬಗ್ಗೆ ಕಾಳಜಿ ಮೂಡಿಸುವ ನಾನಾ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಂಡಿದ್ದರೂ, ಅವು ಆನೂಡಿಯನ್ನು ತಲುಪಿದಂತಿಲ್ಲ. ಜನರಿಗೆ ರಸ್ತೆಬದಿ ಕೂತು, ಹೊಟ್ಟೆಯಲ್ಲಿರುವುದನ್ನು ಖಾಲಿ ಮಾಡಿದರಷ್ಟೆ ಸಮಾಧಾನ! ನಿಮ್ಮೂರಿನಲ್ಲಿ ಏನಿಲ್ಲದಿದ್ದರೂ ಎಲ್ಲಾ ಕಾಲ ಸೂರ್ಯಕಾಂತಿ ಹೂವುಗಳು ರಸ್ತೆ ಬದಿಯಲ್ಲಿ ಮಾತ್ರವಲ್ಲ, ರಸ್ತೆ ಮೇಲೂ ಹರಡಿರುತ್ತವೆ ಎಂದು ಪಟ್ಟಣದ ಗೆಳೆಯನೊಬ್ಬ ಗೇಲಿ ಮಾಡುತ್ತಿರುತ್ತಾನೆ. ನಿರ್ಮಲ ಕರ್ನಾಟಕ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಒಂದಿಷ್ಟು ಹಣವನ್ನು ಸರಕಾರ ನೀಡಿದ್ದು, ಜನರು ಆ ಹಣವನ್ನು ಪಡೆದದ್ದು ಎಲ್ಲವೂ ಆಗಿದೆ. ಕೆಲವು ಶೌಚಾಲಯಗಳು ಅರ್ಥದಲ್ಲೇ ನಿಂತಿವೆ. ಪೂರ್ಣಗೊಂಡಿರುವ ಕೆಲವು ಶೌಚಾಲಯಗಳನ್ನು ಸ್ಟೋರ್ ರೂಂನಂತೆ ಮೂಟೆಗಳನ್ನು ಹಾಕಲು ಬಳಸುತ್ತಿದ್ದಾರೆ!. ಶೌಚ ಕೊಠಡಿ ಬಳಸಲು ಇಲ್ಲಿನ ಜನರಿಗೆ ಎಂಥದ್ದೋ ಮುಜುಗರ! ಇಲ್ಲಿನ ಶೌಚ ಪುರಾಣ ಕೇಳಿ, ನಿಮಗೆ ಅಚ್ಚರಿಯಾಗಬಹುದು. ಆನೂಡಿಗೆ ಬಂದರೆ ಅದು ಅನುಭವಕ್ಕೆ ಬರುತ್ತದೆ. ದಟ್ಟ ಬಿಸಲಿನ ಬೆನ್ನುತಟ್ಟುವಂತೆ ಎದ್ದು ನಿಂತ ಜಾಲಿ ಗಿಡಗಳು, ಅವುಗಳ ಅಡಿಯಲ್ಲಿ ಮಲಮೂತ್ರದ ರಾಶಿ. ಅದರಿಂದ ಸೂಸುವ ತಾಜಾ ಪರಿಮಳ! ಆನೂಡಿ ಬಗ್ಗೆ ಅಸಹ್ಯ ಪಟ್ಟುಕೊಳ್ಳಲು, ಹೊಸಬರಿಗೆ ಇನ್ನೇನು ಬೇಕು? ಆನೂಡಿ ಎಂದಾಗ ಅಜ್ಜಿಮನೆಯ ಹಿತ್ತಲಿನಲ್ಲಿದ್ದ ದಾಳಿಂಬೆ ಗಿಡ ನೆನಪಾಗುತ್ತದೆ. ಗಿಡ ಸಣ್ಣದಾದರೂ, ಮೈತುಂಬ ಹಣ್ಣು! ಮನೆ ಮಗನಂತಿದ್ದ ನರಸಪ್ಪ (ನಾನು ಈ ಮನೆಯ ದೊಡ್ಡ ಮಗ ಎಂದು ಆತನೇ, ಊರು ಜನರಿಗೆ ಆಗಾಗ ಹೇಳುತ್ತಿದ್ದ. ಜೀತದ ಪರಿಕಲ್ಪನೆ ಆಗಂತೂ ಇರಲಿಲ್ಲ. ನನ್ನ ಅಜ್ಜಿಯ ಸೆರಗಿನಡಿಯಲ್ಲಿ ಸುಖ ಉಂಡಿದ್ದ ನರಸಪ್ಪ ಮನೆಯವನೇ ಆಗಿ ಬಿಟ್ಟಿದ್ದ) ತರುತ್ತಿದ್ದ ಹಲಸಿನ ಹಣ್ಣು, ಮಾವಿನ ಹಣ್ಣು ಈಗಲೂ ಬಾಯಲ್ಲಿ ನೀರೂರುತ್ತದೆ. ಕಬ್ಬನ್ನು ತಂದು, ಸಣ್ಣಗೆ ಪಿಚ್ಚಗೆ ಮಾಡಿ ಕೊಡುವಲ್ಲಿ ಆತನಿಗೆ ಎಂಥದ್ದೋ ಅಕ್ಕರೆ. ನಾವು ಸಾಕು ಎಂದಷ್ಟು, ಇನ್ನಷ್ಟು ಮತ್ತಷ್ಟು ಎಂದು ಕೊಡುತ್ತಲೇ ಇದ್ದ. ತೋಟಗಳು ಬೋಳಾಗಿ, ಈಗ ಅವೆಲ್ಲಾ ಸೈಟುಗಳಾಗಿವೆ. ಊರು ಮುಂದಿನ ನಮ್ಮಜ್ಜಿಯವರ ತಿಪ್ಪೆಯಿದ್ದ ಹೊಲವನ್ನು ಸರಕಾರವೇ ಖರೀದಿಸಿ, ಆಶ್ರಯ ಯೋಜನೆಯಡಿ ನಿವೇಶನವಾಗಿ ಪರಿವರ್ತಿಸಿದೆ. ಅಲ್ಲಿನ ನೀರಿನ ಆಸರೆಯಾಗಿದ್ದ ವೊಡ್ಡು ಮತ್ತು ಬಣವೆಯಲ್ಲಿದ್ದ ಹತ್ತಾರು ಹಣ್ಣಿನ ಮರಗಳು ಈಗ ನೆನಪಷ್ಟೆ. ಮಳೆಯನ್ನೇ ಕೃಷಿಗಾಗಿ ನಂಬಿರುವ ಇಲ್ಲಿನ ಜನರು ಮೊದಲು ಸಮೃದ್ಧವಾಗಿಯೇ ಇದ್ದರು. ಕಾಲಕಾಲಕ್ಕೆ ಮಳೆಯಾಗುತ್ತಿತ್ತು. ಕೆರೆಯಲ್ಲಿ ನೀರಿರುತ್ತಿತ್ತು. ಭತ್ತ, ಕಬ್ಬು, ರಾಗಿ, ಅಲಸಂದೆ, ಅವರೆ, ಹೆಸರುಕಾಳು, ಸೂರ್ಯಕಾಂತಿ, ಮೆಣಸಿನಕಾಯಿ -ಹೀಗೆ ಎಲ್ಲವನ್ನೂ ಬೆಳೆಯುತ್ತಿದ್ದರು. ಅವುಗಳನ್ನು ಕಟ್ಟಿಡಲು ಗೋಣಿ ಚೀಲಗಳು ಸಾಕಾಗದೇ, ಮನೆಯ ಮೂಲೆಗಳಿಗೆ ರಾಶಿ ಸುರಿಯುತ್ತಿದ್ದರು. ಮನೆಯಲ್ಲಿನ ವಾಡೆಗಳಲ್ಲಿ ಧಾನ್ಯ ಲಕ್ಷ್ಮಿ ನೆಲೆ ನಿಂತಿದ್ದಳು. ಭೂಮಿಯೊಳಗಿನ ಕಣಜಗಳು ಸಮೃದ್ಧವಾಗಿರುತ್ತಿದ್ದವು. ಮಾವಿನ ತೋಪು, ಆಲೆಮನೆ, ತೋಟಗಳು ಕಣ್‌ಕುಕ್ಕುವಂತಿದ್ದವು. ಬಾಂಬೆ ಮಿಠಾಯಿ, ಪಾಪನ್ ಪಪ್ಪು, ಐಸ್ ಕ್ಯಾಂಡಿ, ಬಟ್ಟೆ ಪಿನ್ -ಹೀಗೆ ಏನೇ ಬರಲಿ, ನಮ್ಮಜ್ಜಿ ದುಡ್ಡು ಕೊಟ್ಟದ್ದಕ್ಕಿಂತ ರಾಗಿ ಕೊಟ್ಟಿದ್ದೆ ಹೆಚ್ಚು. ಮೊರಗಳಲ್ಲಿ ತುಂಬಿತುಂಬಿ ಕೊಡುವುದು ನಮ್ಮಜ್ಜಿ ಪದ್ಧತಿಯಾಗಿತ್ತು. ಮನೆಯಲ್ಲಿ ಹಸು, ಎಮ್ಮೆ, ಎತ್ತು, ಕರು -ಹೀಗೆ ಜಾನುವಾರುಗಳಿಗೊಂಡು ಜಾಗ. ಮನೆಯಲ್ಲಿ ಬೆಣ್ಣೆ, ತುಪ್ಪ, ಮೊಸರಿಗೆ ಎಂದೂ ಕೊರತೆ ಇರಲಿಲ್ಲ. ಊರಿನ ನಾನಾ ಮಂದಿ ಮಜ್ಜಿಗೆ ಕೊಡಕ್ಕಾ, ಮೊಸರು ಕೊಡಕ್ಕಾ ಎಂದು ಬಟ್ಟಲಿಡಿದು ಬರುತ್ತಿದ್ದರು. ನಮ್ಮಜ್ಜಿ ಇಲ್ಲ ಎಂಥದ್ದು ನನಗಂತೂ ನೆನಪಿಲ್ಲ. ಆದರೆ ಅದೆಲ್ಲವೂ ಈಗ ಗತಕಾಲದ ವೈಭವ. ಕಳೆದ ೧೦-೧೫ ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ. ಬಾವಿಯಲ್ಲಿನ ನೀರು ಬತ್ತಿ ಬಹಳ ವರ್ಷಗಳಾಗಿವೆ. ಪೈಪೋಟಿಗೆ ಬಿದ್ದವರಂತೆ ಕೊರೆಸಿದ ಕೊಳಾಯಿಗಳಲ್ಲಿ ಕೆಲವು ಕಾಲೆತ್ತಿವೆ. ಬೋರು, ಮೋಟರ್‌ಗೆ ಸಾವಿರಾರು ರೂಪಾಯಿ ಸುರಿದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಕೆರೆ ತುಂಬಿ ಎಷ್ಟು ವರ್ಷವಾಯಿತೋ ಗೊತ್ತಿಲ್ಲ. ಮುತ್ಯಾಲಮ್ಮನ ಪರಿಸೆ ಮಾಡದ ಕಾರಣ, ಮಳೆಯಿಲ್ಲ ಎಂದು ಮೊನ್ನೆ ಪೂಜಾರಿ ಮೈತುಂಬಿಕೊಂಡಿದ್ದ ಆಂಜನೇಯ ಸ್ವಾಮಿ ಹೇಳಿದನಂತೆ. ನನ್ನಪ್ಪನಿಗೆ ನನ್ನಜ್ಜ ಬರೆಯುತ್ತಿದ್ದ ಬಹುತೇಕ ಕಾಗದಗಳಲ್ಲಿ, ‘ಇಲ್ಲಿ ಮಳೆಯಿಲ್ಲ‘ ಎಂಬ ಸಾಲು ಸಾಮಾನ್ಯವಾಗಿಬಿಟ್ಟಿದೆ. ಮೊನ್ನೆ ಸಿಕ್ಕಿದ್ದ ತಾತಾ, ಮಳೆ ಕೊರತೆಯ ಬಗ್ಗೆಯೇ ಮಾತಾಡುತ್ತಿದ್ದರು. ವ್ಯವಸಾಯ ಲಾಸಿನ ಬಾಬತ್ತು ಎಂದು ಇಲ್ಲಿನ ಜನರು ಭಾವಿಸಿದ್ದಾರೆ. ಮನೆ ಮಕ್ಕಳು ಪಟ್ಟಣ ಸೇರಿ, ಹೊಟ್ಟೆ ಪಾಡು ನೋಡಿಕೊಂಡಿದ್ದಾರೆ. ನಮ್ಮ ಕಾಲವಂತೂ ಹೀಗಾಯಿತು ಅವರಾದರೂ ಸುಖವಾಗಿರಲಿ ಎಂಬುದು ಅನೇಕರ ಮಾತು. ಹಸಿರ ಜಾಗದಲ್ಲೀಗ ಬರೀ ಸೀಮೆ ಜಾಲಿಯೇ ನಿಂತಿದೆ. ‘ಏಕೆ ಓಡುವಿರಿ ನಿಲ್ಲಿ ಮೋಡಗಳೇ, ನಾಲ್ಕು ಹನಿಯ ಚೆಲ್ಲಿ’ ಎಂಬ ಕೂಗು ಮುಷ್ಕರ ಹೂಡಿರುವ ಮಳೆ ಮೋಡಗಳಿಗೆ ಕೇಳಿಸುತ್ತಿಲ್ಲ. ಮನೆಮಂದಿಗಾಗುವಷ್ಟು ಬೆಳೆದು ಸಂತೃಪ್ತರಾಗಿದ್ದ ನನ್ನ ಅಜ್ಜಿ ಮನೆಯವರೇ ಈಗ, ಅಂಗಡಿಯಲ್ಲಿ ಅಕ್ಕಿ ತರುತ್ತಿದ್ದಾರೆ. ಆಲೆಮನೆ ಎಂಬುದು ಎಲ್ಲಿ ಹೋಯಿತೋ? ಬೆಲ್ಲದ ಘಮಲು ಮನೆಯಲ್ಲೀಗ ಉಳಿದಿಲ್ಲ. ಪ್ಲಾಸ್ಟಿಕ್ ಕವರ್‌ನಲ್ಲಿ ಕೆ.ಜಿ.ಲೆಕ್ಕದಲ್ಲಿ ಸಕ್ಕರೆ ತರುವ ನನ್ನ ತಾತನ ಕಂಡಾಗ, ಸಕ್ಕರೆ ರಾಜನಿಗೆ ಎಂಥಾ ಸ್ಥಿತಿ ಬಂತು ಅನ್ನಿಸುತ್ತದೆ? ಬೆಂಗಳೂರಿನಲ್ಲಿರುವ ಮಗ, ಜಮೀನನ್ನು ಮಾರೋಣ ಅನ್ನುತ್ತಿದ್ದಾನಂತೆ. ಹಳ್ಳಿಯಲ್ಲಿ ಭೂಮಿ ಕೇಳೋರಿಲ್ಲ. ಇಲ್ಲಿ ಆ ಹಣದಲ್ಲಿ ಸೈಟು ತೆಗೆದರೆ, ಒಂದೆರಡು ವರ್ಷಕ್ಕೆ ದ್ವಿಗುಣವಾಗುತ್ತೆ ಅನ್ನೋದು ಅವರ ಲೆಕ್ಕಾಚಾರ.

Sunday, August 3, 2008

ಗಾಂಧಿ ‘ಹನಿ’ಗಳು

ಗಾಂಧಿ!

ಕೈಲಾಗದ ಕಾರಣ
ಅಹಿಂಸೆಯೆಂದನಲ್ಲ
ಸುಳ್ಳು ಹೇಳಿದ್ನಲ್ಲ
ಬೀಡಿ ಸೇದಿದ್ನಲ್ಲ
ಕಳ್ಳತನ ಮಾಡಿದ್ನಲ್ಲ
ಆ ಬೊಕ್ಕತಲೆಯ
ಮಾಂಸವಿಲ್ಲದ
ಬಡಕಲ ದೇಹದ
ಹರೆ ಹುಚ್ಚಮುದುಕನೇ
ತಾನೇಗಾಂಧಿ ಅಂದ್ರೆ!

ವಿಳಾಸ

ಸ್ವಲ್ಪ ಮುಂದೆ ಹೋಗಿ
ಅಲ್ಲಿದೆ ರಾಜೀವ್‌ ಗಾಂಧಿ
ಸಮುದಾಯ ಭವನ !
ಅದರ ಬಲಕ್ಕೆ ಕತ್ತು
ತಿರುಗಿಸಿದರೆ ಕಾಣುತ್ತೆ
ಶ್ರೀ ಬಸವೇಶ್ವರ ಆಸ್ಪತ್ರೆ!
ಅದರ ಎಡದಲ್ಲಿದೆ
ಬಿ.ಆರ್‌.ಅಂಬೇಡ್ಕರ್‌ ರಸ್ತೆ !
ರಸ್ತೆಯ ಎಡ ಭಾಗದಲ್ಲಿ
ನೆಹರು ಕ್ರೀಡಾಂಗಣವಿದೆ!
ತಣ್ಣನೆಯ ಸೋನಿಯಾಗಾಂಧಿ ಉದ್ಯಾನವಿದೆ!
ಇನ್ನು ಕಣ್ಣಳತೆಯ ದೂರದಲ್ಲಿದೆ
ಇಂದಿರಾಗಾಂಧಿ ವಿಶ್ವವಿದ್ಯಾಲಯ!
ಅಲ್ಲೇ ಅಲ್ಲೇ
ನಮ್ಮ ಬಡ-ಬಡವ
ಗಾಂಧಿಮನೆ...ಮನೆಯಲ್ಲ... ಗುಡಿಸಲು!

ಕೊಲೆ

ಅಂದು ಗೋಡ್ಸೆಯಿಂದ
ಗಾಂಧಿಯ ಭೌತಿಕ ಕೊಲೆ!
ಇಂದು ನಮ್ಮಿಂದ
ಗಾಂಧಿಯ ಸೈದ್ಧಾಂತಿಕ ಕೊಲೆ!

ಸುರಿಯುತ್ತಲೇ ಇದೆ ಪಾಪಿ ಮಳೆ ಮುಗಿಯದ ಕಣ್ಣೀರಿನಂತೆ...

ನನಗೆ ಈಚೀಚೆಗೆ ಮಳೆ
ಎಂದರೆ ಭಯ! ಅಸಹ್ಯ, ಜಿಗುಪ್ಸೆ..
ಒಂದೊಂದು ಹನಿ
ಮೈ ಮೇಲೆ ಬಿದ್ದರೂ ಯಾತನೆ
ಅಲ್ಲೆಲ್ಲ ಬೊಬ್ಬೆಗಳು!

ಸುರಿಯುತ್ತಲೇ ಇದೆ ಮಳೆ
ಮುಗಿಯದ ಕಣ್ಣೀರಿನಂತೆ! ?
ಯಾಕೆ ಮಗು ಮಲಗಲಿಲ್ವೇ
ನಿದ್ದೆ ಬರುತ್ತಿಲ್ವೇ ಎಂದು ಕೇಳೋರಿಲ್ಲ..
ನಾನು ಎಚ್ಚರವಾಗಿದ್ದೇನೆ ದೆವ್ವದಂತೆ!

ಹೊರಗಡೆ ಜಿಟಿಜಿಟಿ ಮಳೆ
ಒಳಗೆ ನಾ ಒಂಟಿ
ಮಳೆಯನ್ನು ನೋಡುವ
ಬೆರಗು ನನ್ನಲ್ಲಿ ಉಳಿದಿಲ್ಲ..
ನಾನು ನಿಜಕ್ಕೂ ಬದುಕಿದ್ದೇನೆಯೇ?

ಗಡಿಯಾರ ಓಡುತ್ತಿದೆ.. 10,11,12..
ನಿಂತ ಮಳೆ.. ಶುರುವಾದ ಮಳೆ
ಎಲ್ಲವೂ ಗೊತ್ತಾಗುತ್ತಿದೆ...
ದೀಪ ಆರಿಸಲು ಮನಸ್ಸಾಗುತ್ತಿಲ್ಲ..
ನನ್ನ ಪಾಲಿಗೆ ಉಳಿದ ಬೆಳಕು ಅದೊಂದೇ ಸದ್ಯಕ್ಕೆ

ಎಲ್ಲವೂ ಖಾಲಿ... ಹೆದರಿಸುವ ನಾಳೆಗಳು
ನಿದ್ದೆ ಕೆಡಿಸುವ ದೆವ್ವಗಳು..
ಮಳೆ ಬಂದು ಭೂಮಿ ತಂಪಾಗುತ್ತದೆ..
ನನ್ನ ಎದೆ ನೆನೆಯುವಂತಹ ಮಳೆ
ಮುಂದೆಯಾದರೂ ಇದೆಯೋ ಇಲ್ಲವೋ?

ಎಲ್ಲೋ ಗುಡುಗಿದ ಶಬ್ದ.. ಮತ್ತೆ ಮಳೆ..
ಹಾಸಿದ ಹಾಸಿಗೆ ಮೇಲೆ ನಾನು..
ನನ್ನ ಜೊತೆಗೆ ದಿಂಬು, ಅದರ ಮೇಲೆ
ಕಪ್ಪು ಹಸಿರು ಚೌಕಿನ ಉಲ್ಲನ್ ರಗ್ಗು..
ಅವಕ್ಕೂ ನನ್ನ ಸಂಗ ಬೇಡವೆನ್ನಿಸಿರಬೇಕು!

ಉಲ್ಲಾಸದ ಹೂಮಳೆ ಎಂದು ಹೊಟ್ಟೆ
ತುಂಬಿದವರು ಕುಣಿದು ಕುಪ್ಪಳಿಸಲಿ..
ದೇವರಿಗಿಂತಲೂ ಹೆಚ್ಚು ಮಳೆಯನ್ನು
ನಾ ದ್ವೇಷಿಸುತ್ತೇನೆ.. ಸಾಧ್ಯವಿದ್ದಿದ್ದರೆ,
ಕುತ್ತಿಗೆ ಹಿಡಿದು ಉಸಿರು ನಿಲ್ಲಿಸುತ್ತಿದ್ದೆ!

ಓ ಸುತ್ತಲೂ ಅಂಧಕಾರ.. ಇದ್ದ
ಒಂದೇ ಒಂದು ಬೆಳಕು ಸಹಾ ಕಣ್ಮರೆ..
ಪಾಪಿ ಮಳೆ ದೀಪ ಆರಿಸಿತು.. ನೀನು
ಏನು ಬೇಕಾದರೂ ಆರಿಸಬಹುದು
ನನ್ನೆದೆಯ ಅಗ್ನಿಕುಂಡ ಆರಿಸಲಾರೇ..

ತಾಕತ್ತಿದ್ದರೆ ಪ್ರಯತ್ನಿಸು..
ನಿನಗೆ ಒಳ್ಳೆಯದಾಗಲಿ..

Friday, June 13, 2008

ನಿನ್ನೆ ಅಲ್ಲಿ.. ಇಂದು ಇಲ್ಲಿ.. ನಾಳೆ ಎಲ್ಲೋ?

‘ ಸ್ಥಾವರಕ್ಕಳಿವುಂಡು, ಜಂಗಮಕ್ಕಳಿವಿಲ್ಲ ’ ಎಂಬ ಮಾತಿನಲ್ಲಿ ಈಗಿನ ಯುವಕರಿಗೆ ನಂಬಿಕೆ. ಈಗೀಗ ಕೆಲಸ ಹುಡುಕುವುದೆಷ್ಟು ಸಾಮಾನ್ಯವೋ, ಕೆಲಸ ಬಿಡುವ ಪ್ರವೃತ್ತಿಯೂ ಸಾಮಾನ್ಯವೆನ್ನಿಸಿದೆ. ಪದೇಪದೇ ಕೆಲಸ ಬದಲಿಸುವ ಮನಸ್ಥಿತಿಯನ್ನು ಯುವಕರು ಬೆಳೆಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಐಟಿ ರಂಗದಲ್ಲಿ ಈ ವಲಸೆಯಾಟ ಹೆಚ್ಚು.
ಸರಕಾರಿ ಉದ್ಯೋಗ ಸಿಕ್ಕಿದರೆ, ಬದುಕು ಸಾರ್ಥಕವಾಯಿತು ಎನ್ನುವ ಭಾವನೆ ಮೊದಲು ಅನೇಕರಲ್ಲಿತ್ತು. ಆದರೆ, ಸಾಫ್ಟ್‌ವೇರ್ ಹಕ್ಕಿ ರೆಕ್ಕಿ ಬಿಚ್ಚಿದ ಮೇಲೆ ಪರಿಸ್ಥಿತಿ ಬದಲಾಗಿದೆ. ಡಾಲರ್‌ಗಳಲ್ಲಿ ಸಂಬಳವನ್ನು ಲೆಕ್ಕ ಹಾಕಲಾಗುತ್ತಿದ್ದು, ಸಂಬಳ ನಾಲ್ಕೈದು ಅಂಕೆಗಳನ್ನು ತಲುಪಿದೆ. ಕೆಲಸ ಎಲ್ಲಿ, ಹೇಗೆ ಅನ್ನುವುದಕ್ಕಿಂತಲು ಸಂಬಳ ಎಷ್ಟು ಅನ್ನೋದು ಈಗಿನ ಪೀಳಿಗೆಯ ಮೂಲಭೂತ ಪ್ರಶ್ನೆ. ಸಂಬಳದ ಅಂಕೆ-ಸಂಖ್ಯೆಗಳ ಬೆನ್ನತ್ತಿಯೋ ಅಥವಾ ಬೇರೆ ಕಾರಣಕ್ಕೋ, ಕಂಪನಿಯಿಂದ ಕಂಪನಿಗೆ ಜಿಗಿಯುತ್ತಲೇ ಇರುತ್ತಾರೆ.
ಗೂಡಿಂದ ಗೂಡಿಗೆ ಹಾರುವ ಪ್ರವೃತ್ತಿ ತಡೆಯಲು, ಪ್ರತಿಭಾವಂತರು ಮತ್ತು ಅನುಭವಿಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಕಂಪನಿಗಳು ಅನೇಕ ಕಸರತ್ತುಗಳನ್ನು ಮಾಡುತ್ತವೆ. ಆರು ತಿಂಗಳಿಗೊಮ್ಮೆ ಸಂಬಳದಲ್ಲಿ ಹೆಚ್ಚಳ(ಕನಿಷ್ಠ ಶೇ.೧೫ರಿಂದ ೨೦), ವರ್ಷಕ್ಕೆರಡು ಸಲ ಮನರಂಜನೆಗಾಗಿ ಪಿಕ್ನಿಕ್, ಆಗಾಗ ಕೆಲಸದ ಒತ್ತಡ ಕಡಿಮೆ ಮಾಡಲು ನಾನಾ ಕಾರ್ಯಕ್ರಮ, ತರಬೇತಿ -ಹೀಗೆ ಕಂಪನಿಗಳು ಉದ್ಯೋಗಿಗಳನ್ನು ಹಿಡಿದಿಡಲು ಸೌಲತ್ತುಗಳನ್ನು ಒದಗಿಸುತ್ತವೆ. ಆದರೆ ಈ ಟೆಕ್ಕಿಗಳು ವರ್ಷಗಳಿರಲಿ ಒಂದಷ್ಟು ತಿಂಗಳೂ ಒಂದೆಡೆ ನಿಲ್ಲುವ ಜಾಯಮಾನವನ್ನೇ ಹೊಂದಿಲ್ಲ. ಕೆಲಸಕ್ಕೆ ಸೇರಿದ ದಿನವೇ, ಕಾಲು ತೆಗೆಯುವ ಲೆಕ್ಕಾಚಾರ ಅವರ ಮನದಲ್ಲಿ!
ನುರಿತ ಕೆಲಸಗಾರನಿಗೆ ರತ್ನಗಂಬಳಿ
ಬಿಸಿಲಲ್ಲಿ ಅಲೆದಲೆದು ಕೆಲಸ ಹುಡುಕುವ ದಿನಗಳು ಇವಲ್ಲ. ಮರ್ಜಿ, ಬಕೆಟ್ ಹಿಡಿಯೋದು, ದಕ್ಷಿಣೆ ಸಲ್ಲಿಸೋದು ಇವೆಲ್ಲ ಇಲ್ಲಿಲ್ಲ. ‘ಕೆಲಸ ಗೊತ್ತಿದೆಯಾ? ನೀವು ನಮ್ಮಲ್ಲಿಗೆ ಬನ್ನಿ ’ ಎಂದು ಐಟಿ ಕಂಪನಿಗಳು ರತ್ನಗಂಬಳಿ ಹಾಸಿ ಕೈಬೀಸಿ ಕರೆಯುತ್ತವೆ. ಫೋನಲ್ಲಿಯೇ ಕೆಲವು ಸಲ ಸಂದರ್ಶನಗಳು ನಡೆಯುತ್ತವೆ. ಸಂಬಳದ ಬಗ್ಗೆ ಚೌಕಾಶಿ ನಡೆದು, ಕೊನೆಗೆ ಜಾಣರ ಬೆನ್ನತ್ತುತ್ತವೆ. ದಿನಕ್ಕೆ ಎರಡು ಸಲ ಕಾಲ್ ಮಾಡಿ, ಆಹ್ವಾನಿಸುತ್ತವೆ.
ಒಂದಷ್ಟು ವೆಬ್‌ಸೈಟ್‌ಗಳಲ್ಲಿ ಬಯೋಡೇಟಾ ತೇಲಿಬಿಟ್ಟು, ದಿನವೂ ಇ-ಮೇಲ್ ಚೆಕ್ ಮಾಡುವುದು, ಈಗಿನ ಹುಡುಗರ ದಿನಚರಿ. ಕ್ಯಾಂಪಸ್ ಸಂದರ್ಶನಗಳು ಜನಪ್ರಿಯವಾಗುತ್ತಿದ್ದು, ಕೋರ್ಸ್ ಮುಗಿಸುವ ಮುನ್ನವೇ ಉದ್ಯೋಗ ಸಿದ್ಧವಾಗಿ ಕೂತಿರುತ್ತದೆ. ಡಿಗ್ರಿ ನಂತರ ಉದ್ಯೋಗ ಸಂಬಂ ಕೋರ್ಸ್‌ಗಳನ್ನು ಮುಗಿಸಿದರೆ , ಇಂಗ್ಲಿಷ್ ಭಾಷೆ ಮೇಲೆ ತುಸು ಹಿಡಿತ ಸಾಸಿ, ಪಿಯುಸಿ ಓದುವಾಗಲೇ ಒಂದಿಷ್ಟು ಕಂಪ್ಯೂಟರ್ ಕಲಿತು ಬಿಟ್ಟರೆ, ನಿರುದ್ಯೋಗದ ಶಾಪ ಎಂದಿಗೂ ಕಾಡುವುದಿಲ್ಲ. ಆರಂಭದಲ್ಲಿಯೇ ೬-೭ ಸಾವಿರದ ಕೆಲಸ ಸಿಕ್ಕೋದು ಕಷ್ಟ ಅಲ್ಲವೇ ಅಲ್ಲ. ಅನುಭವ ಹೆಚ್ಚಿದಂತೆಲ್ಲ, ಸಂಬಳ ಮತ್ತು ಸವಲತ್ತುಗಳು ಸಹಾ ಹೆಚ್ಚುತ್ತಿರುತ್ತದೆ. ಪಡೆದ ಅನುಭವ, ಇನ್ನೊಂದು ಕಂಪನಿ ಪ್ರವೇಶಿಸಲು ರಹದಾರಿ. ಹೀಗಾಗಿಯೇ ಬಿಇ ಮುಗಿಸಿದ ಯುವಕರು ಆರಂಭದಲ್ಲಿ ಐದಾರು ಸಾವಿರ ಸಂಬಳದ ಕೆಲಸ ಸಿಕ್ಕರೂ ನಿರಾಳವಾಗಿಯೇ ಕೆಲಸ ಮಾಡುತ್ತಾರೆ. ಸಣ್ಣಪುಟ್ಟ ಕಂಪನಿಗಳಲ್ಲಿ ಕೆಲಸ ಕಲಿಯುವುದು ಮತ್ತು ಅನುಭವ ಗಳಿಸುವುದು ಅವರ ಮುಂದಿರುವ ತಕ್ಷಣದ ಗುರಿ.
ಕೇವಲ ಐದಾರು ಸಾವಿರದಿಂದ ವೃತ್ತಿ ಆರಂಭಿಸಿದ ನನ್ನ ಗೆಳೆಯ ಪ್ರಹ್ಲಾದನ ಈಗಿನ ಸಂಬಳ ೪೦ಸಾವಿರ ರೂಪಾಯಿ. ಬಿ.ಕಾಂ. ಮುಗಿಸಲಾಗದೇ ಒದ್ದಾಡುತ್ತಿದ್ದ ಆತ, ಡೇಟಾ ಎಂಟ್ರಿ ಕೆಲಸಕ್ಕೆ ಸೇರಿಕೊಂಡ. ಆರಂಭದಲ್ಲಿ ಟ್ರೈನಿಯಾಗಿ ಕಂಪನಿಯೊಂದಕ್ಕೆ ಪ್ರವೇಶ ಪಡೆದ. ಕಲಿಯುವ ಉತ್ಸಾಹವಿತ್ತು, ಅವಕಾಶವೂ ಇತ್ತು. ಸಮಯ ಪರಿಪಾಲನೆ, ಕೆಲಸದ ಮೇಲಿನ ಶ್ರದ್ಧೆಯಿಂದ ಕಂಪನಿಯ ಆಡಳಿತ ಮಂಡಳಿಗೆ ಆತ ಅಚ್ಚುಮೆಚ್ಚು. ಒಂದೊಂದೇ ಮೆಟ್ಟಿಲನ್ನು ಆತ ಏರಿದ್ದ. ಕೆಲಸದಲ್ಲಿ ಪರಿಣತನಾಗಿದ್ದ. ಟೀಮ್ ಮೆಂಬರ್ ಆಗಿ, ಟೀಮ್ ಲೀಡರ್ ಆಗಿ ಆತ ಈಗ ಬೆಳೆದು ನಿಂತಿದ್ದಾನೆ.
ಆತನ ಗುರಿ ವಿಸ್ತಾರಗೊಂಡಿದೆ, ಪಯಣ ಇನ್ನಷ್ಟು ಬೆಳೆದಿದೆ. ‘ಒಬ್ಬರ ಕೈಕೆಳಗಿನ ಕೆಲಸ ಸಾಕು ಗುರೂ.. ಒಂದು ಚೂರು ದುಡ್ಡು ಸಿಕ್ಕರೆ, ನಾನೇ ಪುಟ್ಟದೊಂದು ಕಂಪನಿ ಶುರು ಮಾಡುತ್ತೇನೆ ’ ಎನ್ನುತ್ತಾನೆ ಪ್ರಹ್ಲಾದ.
ಗೂಡು ಬಿಡಲೊಂದು ಕಾರಣ
‘ನಿಮ್ಮ ಕೆಲಸ ನಮಗೆ ತೃಪ್ತಿಯಾಗುತ್ತಿಲ್ಲ’ ಎಂದು ಕೆಲವು ಸಲ ಕಂಪನಿಗಳೇ ಗೂಡು ಬಿಡಿಸುತ್ತವೆ. ಆದರೆ ಬಹುತೇಕ ಸಲ ಉದ್ಯೋಗಿಗಳೇ ಕೆಲಸ ಬದಲಿಸುತ್ತಾರೆ.
ಸಂಬಳದ ಆಮಿಷ, ಪ್ರತಿಷ್ಠಿತ ಕಂಪನಿಗಳ ಬಗೆಗಿನ ಮೋಹ, ಇನ್ನಷ್ಟು ಕೆಲಸ ಕಲಿಯುವ ಬಯಕೆ, ಹೊಸತಿಗಾಗಿ ಅನ್ವೇಷಣೆ, ಹಾಲಿ ಕಂಪನಿಯಲ್ಲಿನ ಕೆಲವು ಕಿರಿಕಿರಿಗಳು -ಇವು ಕೆಲಸ ಬಿಡಲು ಮುಖ್ಯವಾದ ನಾಲ್ಕು ಕಾರಣಗಳು.
ನೈಟ್ ಶಿಫ್ಟ್‌ಗಳ ಕಿರಿಕಿರಿ, ಅಕ ಕೆಲಸದೊತ್ತಡ, ರಜೆಗಳ ಕೊರತೆ, ಉದ್ಯೋಗದಲ್ಲಿ ಅಸ್ಥಿರತೆ ಅಂಶಗಳು ಕೆಲವರನ್ನು ಸರಕಾರಿ ನೌಕರಿಯತ್ತ ಸೆಳೆಯುತ್ತವೆ. ಆದರೆ ಇಂಥ ಉದಾಹರಣೆಗಳು ಅತಿ ವಿರಳ.

Sunday, May 18, 2008

ಯಾರೋ ಪಾಪಿಗಳು ಬಾಗಿಲು ತಟ್ಟುತ್ತಿದ್ದಾರೆ?

ನಿನ್ನನ್ನು ಬಿಟ್ಟಿರಲಾರೆ. ಏನೋ ಸೆಳೆತ, ಎಂಥದ್ದೋ ಮೋಹ? ಮೊದಲು ನಾನು ಹೀಗಿರಲಿಲ್ಲ.. ನಿನ್ನ ಸಹವಾಸ ಮಾಡಿದ ಮೇಲೆ ಹೀಗಾದೆ! ಎಲ್ಲರೂ ಹೇಳುವಂತೆ ಕೆಟ್ಟು ಗ್ಯಾರೇಜು ಸೇರಿದೆ. ನಾನಂತೂ ಹಾಗೆ ಭಾವಿಸಿಲ್ಲ. ನೀನು ನನ್ನವಳಾದ ಮೇಲೆ, ಹೊಸ ಲೋಕ ನನ್ನದಾಯಿತು. ಇನ್ನಷ್ಟು ಬೆಳೆದಿದ್ದೇನೆಂಬ ಭಾವ ಮೈಮನಗಳ ಸುಳಿಯಲ್ಲಿ.
ಒಂದು ಕ್ಷಣ ನೀ ದೂರವಾದರೂ ತಲೆ ಗಿರ್ರೆನ್ನುತ್ತೆ. ನಿನ್ನ ಬಗ್ಗೆ ನನಗೆ ಮೊದಲಿಂದಲೂ ಕೆಟ್ಟ ಕುತೂಹಲ. ಮನೆಯಲ್ಲಿ ಯಾರು ಏನನ್ನುತ್ತಾರೋ ಎಂಬ ಅಳುಕಿನಿಂದ ನಿನ್ನನ್ನು ದೂರದಿಂದಲೇ ನೋಡಿ ಸುಮ್ಮನಾಗುತ್ತಿದ್ದೆ. ನಿನಗೆ ತಿಳಿದಿರಲಿಕ್ಕಿಲ್ಲ, ಸಮಯ ಸಿಕ್ಕಾಗಲೆಲ್ಲ ನಾನು ನಿನ್ನ ಬೆನ್ನು ಸವರುತ್ತಿದ್ದೆ. ತೊಡೆ ಚಿವುಟುತ್ತಿದ್ದೆ. ಗಲ್ಲ ಹಿಡಿದು ಏನೇ ಸುಂದರಿ ಎನ್ನುತ್ತಿದ್ದೆ. ನೀನು ನನ್ನನ್ನು ಗುರುತಿಸಿರಲಿಕ್ಕಿಲ್ಲ.
ಶ್ವೇತವರ್ಣೆಯಾದ ನೀನು ಈ ಕರಿಯನಿಗೆ ಸ್ವಂತವಾದ ಆ ದಿನ ಚೆನ್ನಾಗಿ ನೆನಪಿದೆ. ಗೆಳೆಯರ ಬಳಗದ ಮಧ್ಯೆ ನನ್ನ ಪುರುಷತ್ವ ಪರೀಕ್ಷೆಗೊಳಗಾದ ಅಗ್ನಿ ಪರೀಕ್ಷೆಯ ಸಂದರ್ಭವದು! ನಿನ್ನೊಳಗೆ ಒಂದಾಗದ ಹೊರತು, ಅಂದು ಅನ್ಯಮಾರ್ಗವಿರಲಿಲ್ಲ. ಮೊದಲ ಮಿಲನ ಮಹೋತ್ಸವಕ್ಕೆ ಗೆಳೆಯರು ಹುರಿದುಂಬಿಸಿದರು. ಲಿಮಿಟ್ಟುಗಳ ಮೀರುವುದರಲ್ಲೇ ಮುದವಿದೆ, ಗೆಲುವಿದೆ ಎಂದು ನನಗ್ಯಾಕೋ ಅನ್ನಿಸಿತ್ತು.
ಮೊದಲ ಸ್ಪರ್ಶಕ್ಕೇ ನಾ ನಿಜಕ್ಕೂ ಸೋತೆ. ಮುಖದ ಮೇಲೆ ಮೀಸೆ ಚಿಗುರುತ್ತಿವೆ ಎಂದು ಅನಿಸಿದ್ದು, ಆಗಲೇ.
ಆ ಪ್ರಥಮ ಚುಂಬನ ಹಿತಕರವಾಗೇನೂ ಇರಲಿಲ್ಲ. ಪುಣ್ಯಕ್ಕೆ ಹಲ್ಲು ಬೀಳಲಿಲ್ಲ ಅಷ್ಟೆ! ನಿನ್ನ ಸಂಗ, ಬಿಸಿಯುಸಿರಿನ ಹಸಿಬಿಸಿ ಅಪ್ಪುಗೆ ಮೊದಮೊದಲು ಕಷ್ಟವಾಯಿತು. ನಿನ್ನಿಂದ ಬಿಡುಗಡೆ ಪಡೆದಾಗ ಮುಖದ ಮೇಲೆ ಬೆವರ ಹನಿಗಳ ಮುತ್ತಿನ ಮಾಲೆ. ಬರ್ತಾಬರ್ತಾ ನಿನ್ನ ಸಂಗ ಇಷ್ಟವಾಯಿತು. ನನ್ನ ಎದೆಗೂಡಲ್ಲಿ ನಿನಗೆ ಜಾಗ ಕೊಟ್ಟೆ(ನಾ ಕೊಡುವುದೇನು? ನೀನೇ ಬಂದು ಕೂತೆ! ) ‘ನೀನಿಲ್ಲದೇ ನನಗೇನಿದೆ.. ನಿನ್ನಲ್ಲೇ ಈ ಜೀವ ಒಂದಾಗಿದೆ ’ ಎಂಬ ಸಾಲುಗಳನ್ನು ನಮ್ಮಿಬ್ಬರ ಕಂಡೇ ಬರೆದಿರಬೇಕು!
ನಿದ್ದೆ ಬಾರದ ರಾತ್ರಿಯಲ್ಲಿ ನೀನು ನೆನಪಾಗುವೆ. ಆದರೆ ಏನು ಮಾಡಲಿ? ನೀನಿಲ್ಲದ ಹೊತ್ತು, ಗಡಿಯಾರ ಮುಂದಕ್ಕೆ ಹೋಗುವುದೇ ಇಲ್ಲ. ಬೆಳಕಿನ ಸುರುಸುರು ಬತ್ತಿಗಳ ಹಿಡಿದು ಭೂಮಿಗಿಳಿಯಲು ಆ ಸೂರ್ಯನಿಗೇನು ದಾಡಿ? ಕಿಟಕಿಯ ತೆರೆದು ಕತ್ತಲಲ್ಲಿ ಬೆಳಕನ್ನು ಹುಡುಕುತ್ತೇನೆ. ವಿರಹ ವೇತನೆಯಿಂದ ಬಳಲಿ ಬೆಂಡಾದ ನನ್ನ ಮೇಲೆ ನಿನಗೆ ಒಂದಿಷ್ಟೂ ಅನುಕಂಪವಿಲ್ಲ!
ನಿನ್ನ ಸಂಗ ಮಾಡಿದ ಮೇಲೆ, ಕೆಲವರು ನನ್ನಿಂದ ದೂರವಾದರು. ಹೋಗಲಿ ಬಿಡು, ನನಗೇನು? ಜಗತ್ತಿನಲ್ಲಿ ನೀನು ನನ್ನೊಟ್ಟಿಗಿದ್ದರೆ ಸಾಕು, ನೂರೇನು ಸಾವಿರ ವರ್ಷ ಬೇಕಿದ್ದರೂ ಬೆಂಗಳೂರಿನ ಹೊಗೆ ಕುಡಿದು, ಟ್ರಾಫಿಕ್ ಜಾಮ್‌ನಲ್ಲಿ ನರಳುತ್ತಾ ಬಾಳಬಲ್ಲೆ. ಯಾಕೆಂದರೆ; ನೀನು ಬಂದ ಮೇಲೆ ತಾನೇ ಇಷ್ಟು ಚೆಂದ ಈ ಬಾಳು.. ಹೌದು ನೀನು ನನ್ನೊಟ್ಟಿಗೆ ಹೆಜ್ಜೆ ಹಾಕುತ್ತಿರುವೆ. ನಮ್ಮಿಬ್ಬರ ಸಂಬಂಧವನ್ನು ಕೆಲವರು ತಮಗೆ ದೋಚಿದಂತೆ ಅರ್ಥೈಸುತ್ತಾರೆ. ಅದು ಅವರ ಲಿಮಿಟ್ಟು. ನಿನ್ನ ಸಂಗ ಬಿಡುವಂತೆ ನಾನಾ ರೀತಿ ಹೇಳುತ್ತಾರೆ. ನನ್ನ ಜೀವದ ಉಸಿರಲ್ಲಿ ನಿನ್ನ ಉಸಿರು ಬೆರೆತಿದೆ. ಹೀಗಾಗಿ ಬೇರೆಯಾಗುವುದಾದರೂ ಹೇಗೆ ಎಂದು ಯೋಚಿಸುವಾಗಲೇ, ಅಗಲಿಕೆಯ ದಿನ ಸಮೀಪಿಸಿದೆ.
ನಾವಿಬ್ಬರೂ ಒಂದೇ ದೇಹವಾಗಿ ಸುಖಿಸುತ್ತಿರುವ ವೇಳೆಯಲ್ಲಿಯೇ ಅದ್ಯಾರೋ ಪಾಪಿಗಳು ಬಾಗಿಲು ತಟ್ಟುತ್ತಿದ್ದಾರೆ. ನಿನ್ನನ್ನು ಅಲ್ಲಿಗೆ ಕರೆದೊಯ್ಯಲು ನಾನಂತೂ ರೆಡಿ. ಆದರೆ ಅದೆಲ್ಲ ಆಗದ ಮಾತು. ನೀನಿಲ್ಲದೇ ನಾ ಹೇಗಿರಲಿ? ತಲೆ ಮತ್ತೆ ಗಿರ್ರೆನ್ನುತ್ತಿದೆ, ಬಾ ಕೊನೆಯದಾಗಿ ಒಂದು ಸಲ ಒಂದಾಗೋಣ. ಜಗತ್ತು ನಾಚುವಂತೆ, ಸುಖ ಉಣ್ಣೋಣ.