Thursday, July 26, 2007

ಯಾರ್ಯಾರ ಗ್ರಹಚಾರ ಹೇಗೇಗಿದೆ?


ನನ್ನೂರಿನ ಸುಳ್ಳು ಸುಳ್ಳು ಶಾಸ್ತ್ರಿಗಳು ಭವಿಷ್ಯ ಹೇಳೋದಕ್ಕೆ ನಿಂತರೆ, ಅದು ನಿಜವಾಗುತ್ತೆ.. ಇಲ್ಲದಿದ್ದರೆ ಅದು ಸುಳ್ಳು ಆಗುತ್ತೆ. ಇವೆರಡು ಬಿಟ್ಟರೆ ಬೇರೇನೂ ಆಗೋದಿಲ್ಲ! ಅಷ್ಟೊಂದು ಕರಾರುವಕ್ಕಾಗಿ ಅವರು ಭವಿಷ್ಯ ನುಡಿಯುತ್ತಾರೆ.
'ನಮ್ಮಹಳ್ಳಿ ಕೆರೆಗೆ ಯಾವಾಗ ನೀರು ಬರುತ್ತೆ?' ಅಂದ್ರೆ, 'ಜೋರಾಗಿ ಮಳೆ ಬಂದ ಮಾರನೇ ದಿನ' ಎಂದು ಅವರು ಖಚಿತವಾಗಿ ಹೇಳುತ್ತಾರೆ. ಪೀಠಿಕೆ ಇಷ್ಟು ಸಾಕು. ಅವರು ರಾಶಿ ಭವಿಷ್ಯ ಬರೆದಿದ್ದಾರೆ. ನಿಮ್ಮ ಗ್ರಹಚಾರ ಏನಿದೆಯೋ ಓದಿ ತಿಳಿಯಿರಿ..
ಮೇಷ : ಧನಯೋಗವಿದೆ. ಹಾಗಂತ ನೀವು ಕೈಕಟ್ಟಿ ಕೂತರೇ ಆಗೋದಿಲ್ಲ. ಯಾರದಾದರೂ ತಲೆ ಹೊಡೆಯಲೇ ಬೇಕು ಅಥವಾ ಸೌಂಡ್‌ ಪಾರ್ಟಿಯಾಗಿರೋ ಹುಡುಗಿಗೆ ಡವ್‌ ಹೊಡೆದು ಮದುವೆಯಾಗಿ ಬಿಡಿ. ಅದೆಲ್ಲಾ ಕಷ್ಟ ಅನ್ನಿಸಿದರೇ ಯಾರನ್ನಾದರೂ ಕಿಡ್ನಾಫ್‌ ಮಾಡಿ. ರಾಜಯೋಗ ಬಂದಾಗ ನೀವು ಕಾರ್ಯಪ್ರವೃತ್ತರಾಗದಿದ್ರೆ ಬದುಕಿಡೀ ಪಶ್ಚತ್ತಾಪ ಅನುಭವಿಸಬೇಕಾಗುತ್ತೆ !
ಅದೃಷ್ಟ ಸಂಖ್ಯೆ -100, ಶುಭದಿನ -ವಾರದ ಎಲ್ಲಾ ದಿನ.
ವೃಷಭ : ವಿದ್ಯೆ ನೈವೇದ್ಯಆಗಿದೆ. ಆದರೂ ನಿಮಗೆ ಯಾಕೆ ಓದೋ ಹುಚ್ಚು? ನೇರವಾಗಿ ಸರಸ್ವತಿಬರೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಕಳ್ಳ ಬಾಗಿಲಲ್ಲಿ ಪ್ರಯತ್ನಿಸಿ. ಪರೀಕ್ಷೆ ಬರೆಯೋದನ್ನು ಯೋಚಿಸಲೇಬೇಡಿ. ಯಾರನ್ನಾದರೂ ಸರಿಯಾದ ಪಾರ್ಟಿಯನ್ನು ಹಿಡಿದು ರೇಟ್‌ ಫಿಕ್ಸ್‌ ಮಾಡಿ, ಮಾಕ್ಸ್‌ಕಾರ್ಡ್‌ನ ಖರೀದಿಗೆ ಪ್ರಯತ್ನಿಸಿ.
ಅದೃಷ್ಟ ಸಂಖ್ಯೆ -000, ಶುಭದಿನ- ಒಂದೂ ಇಲ್ಲ.
ಮಿಥುನ : ಸಿಡುಕುವುದರಿಂದ ನಿಮಗೆ ಸಾಕಷ್ಟು ಲಾಭಗಳಿವೆ. ಜನರು ನಿಮಗೆ ಗೌರವ ಕೊಡುತ್ತಾರೆ. ವಿಶೇಷವಾಗಿ ಮನೆಗೆ ಬರೋ ನೆಂಟರ ಸಂಖ್ಯೆ ಕಡಿಮೆಯಾಗಲಿದೆ. ಹೆಂಡತಿ ನಿಮ್ಮ ಕೆಂಡದಂತಹ ಮುಖ ನೋಡಿ, ಸೀರೆಗೀರೆ ಎಂದು ತಲೆ ತಿನ್ನೋದಿಲ್ಲ. ಮಕ್ಕಳು, ಚಾಕ್ಲೆಟ್‌-ಬಿಸ್ಕೆಟ್‌ ಅಂಥ ಪೀಡಿಸೋದಿಲ್ಲ.
ಅದೃಷ್ಟ ಸಂಖ್ಯೆ -ಹಾಗಂದ್ರೆ ಏನು?, ಶುಭದಿನ -ಮಂಗಳವಾರ
ಕರ್ಕಾಟಕ : ಫೋನ್‌ ಮೂಲಕ ಸುನಾಮಿ ಪ್ರವೇಶಿಸಲಿದೆ ಜಾಗೃತರಾಗಿರಿ! ನಿಮ್ಮ ಪ್ರೀತಿಯ ಹುಡುಗಿಗೆ ಈಗ ಮೂರು ತಿಂಗಳು. ನಿಮ್ಮನ್ನು ದೇವರೂ ಸಹಾ ಕಾಪಾಡೋ ಸ್ಥಿತಿಯಲ್ಲಿಲ್ಲ! ಮಹಿಳೆಯರಿಗೆ ಕೆಟ್ಟ ಸುದ್ದಿ. ನಿಮ್ಮ ಗುಟ್ಟುಗಳು ನಿಮ್ಮ ಗಂಡನಿಗೆ ಗೊತ್ತಾಗಲಿದೆ.
ಅದೃಷ್ಟ ಸಂಖ್ಯೆ -111, ಶುಭದಿನ -ಅದರ ಆಸೆ ಬಿಡಿ.
ಸಿಂಹ : ಪುರುಷರಿಗೆ ವಿವಾಹದ ಗಂಡಾಂತರವಿದೆ. ಹುಲಿ ಇಲಿಯಾಗುವ ದಿನಗಳನ್ನು ಎದುರಿಸಲು ಸಜ್ಜಾಗಿ. ಮದುವೆಯಾಗುವುದಕ್ಕಿಂತಲೂ ಬಾವಿಗೆ ಹಾರೋದೇ ಸುಲಭ ಅನ್ನಿಸೋದಾದ್ರೆ ನಿಮ್ಮ ನಿರ್ಣಯ ಸರಿಯಾಗಿದೆ. ಮಹಿಳೆಯರಿಗೆ ಅದೃಷ್ಟದ ದಿನಗಳು. ಅವು ಮುಗಿಯುವ ಮೊದಲೇ ಯಾರನ್ನಾದರೂ ಬಕ್ರನಾ ಕಟ್ಟಿಕೊಳ್ಳಿ.
ಅದೃಷ್ಟ ಸಂಖ್ಯೆ -1001, ಶುಭದಿನ -ಕಾದು ನೋಡಿ.
ಕನ್ಯಾ : ಬಹಳ ದಿನಗಳಿಂದಲೂ ನಾಯಿ ಸಾಕಬೇಕು ಅನ್ನೋ ಬಯಕೆ ಈಗ ಫಲಿಸಲಿದೆ. ಅಂದ್ರೆ ನಿಮಗೆ ಟೂ-ಇನ್‌-ಒನ್‌ ನಾಯಿ ಸಿಕ್ತಾಯಿದೆ! ಹೌದು ಹೆಣ್ಣುಮಕ್ಕಳಿಗೆ ಮದುವೆಯೋಗವಿದೆ. ಡೈವರ್ಸ್‌ ಯೋಗ ಸಹಾ...
ಅದೃಷ್ಟ ಸಂಖ್ಯೆ -501, ಶುಭದಿನ -ಶುಕ್ರವಾರ
ತುಲಾ : ನಿಮಗೆ ಟಿ.ವಿಯಲ್ಲಿ ಕಾಣಿಸೋ ಯೋಗವಿದೆ. ಬಹುಶಃ, ಕ್ರೆೃಂಡೈರಿ ಅಥವಾ ಕುರಿಗಳು ಸಾರ್‌ ಕಾರ್ಯಕ್ರಮದಲ್ಲೋ ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ.ಅದೃಷ್ಟ ಸಂಖ್ಯೆ-0000000000, ಶುಭದಿನ-ನಿಮಗೇ ಗೊತ್ತಲ್ಲ!
ವೃಶ್ಚಿಕ : ಬಾಸ್‌ಗೆ ನಿಮ್ಮ ಕರ್ತವ್ಯ ಪ್ರಜ್ಞೆ ತುಂಬಾ ಇಷ್ಟವಾಗಿದೆ. ಮತ್ತಷ್ಟು ಇಷ್ಟವಾಗಲಿದೆ. ಮಾಮೂಲಿನ ಹತ್ತುಗಂಟೆ ಜೊತೆಯಲ್ಲಿ, ಇನ್ನೂ ನಾಲ್ಕು ಗಂಟೆಯ ಕೆಲಸದ ಹೊರೆ ನಿಮ್ಮ ಮೇಲೆ ಬೀಳಲಿದೆ. ಭಾನುವಾರವೂ ಕೆಲಸಮಾಡಬೇಕಾದ ಪರಿಸ್ಥಿತಿ ಬರಬಹುದು. ಯಾವುದಕ್ಕೂ ರೆಡಿಯಾಗಿರಿ.
ಅದೃಷ್ಟ ಸಂಖ್ಯೆ -3333, ಶುಭದಿನ -ಎಲ್ಲವೂ ಮುಗಿದಿವೆ.
ಮಕರ : ಇನ್ನು ಮುಂದೆಯಾದ್ರೂ ನೀವು ನಗೋದನ್ನ ಕಲಿತರೆ, ಬಾಳು ಬಂಗಾರವಾಗುತ್ತೆ. ಇಲ್ಲದಿದ್ರೆ ಹೆಣಭಾರವಾಗುತ್ತೆ. ಬದುಕಿದ್ದಾಗಲೇ ನಗ್ರಿ, ಸತ್ತಮೇಲೆ ನಗೋದಕ್ಕೆ ಆಗೋದಿಲ್ಲ(ಬಾಯಲ್ಲಿ ಅಕ್ಕಿಕಾಳು ತುಂಬಿರ್ತಾರೆ!).
ಅದೃಷ್ಟ ಸಂಖ್ಯೆ -999, ಶುಭದಿನ -ಎಲ್ಲಾ ನಿಮ್ಮ ಕೈಯಲ್ಲೇ ಇದೆ.
ಧನು : ಈ ವಾರ ಅನಾರೋಗ್ಯ ಸಾಮಾನ್ಯ ಬಿಡಿ. ನಿಮ್ಮ ಕೆಮ್ಮನ್ನು ನೆವಮಾಡಿಕೊಂಡು, ನರ್ಸಿಂಗ್‌ ಹೋಮ್‌ನವರು ಸಾವಿರಗಟ್ಟಲೇ ಬಿಲ್‌ ಮಾಡ್ತಾರೆ. ನೀವು ಪಾರಾಗಲು ಸಾಧ್ಯವೇ ಇಲ್ಲ. ಆದರೂ ನಿಮ್ಮ ಕೆಮ್ಮು ನಿಲ್ಲೋದಿಲ್ಲ. ಮನೆಯಲ್ಲಿರೋ ಮೆಣಸು, ಅಥವಾ ಇಂಗ್ಲೀಷ್‌ ಟಾನಿಕನ್ನು ಪ್ರಯೋಗಿಸಿ ನೋಡಿ?
ಅದೃಷ್ಟ ಸಂಖ್ಯೆ -0, ಶುಭದಿನ -ವೈದ್ಯರಿಂದ ದೂರವಿದ್ದ ದಿನ
ಕುಂಭ : ನೀವು ಬಿಸ್ಕೆಟ್‌ ಹಾಕುತ್ತಿದ್ದ ಹುಡುಗಿ/ಹುಡುಗ ನಿಮಗೆ ಒಲಿಯುತ್ತಾರೆ. ಯಾವುದಕ್ಕೂ ಒಮ್ಮೆ ಅವರ ಗಂಡ/ಹೆಂಡತಿಯ ಅನುಮತಿ ಪಡೆದರೆ ಸೂಕ್ತ.
ಅದೃಷ್ಟ ಸಂಖ್ಯೆ -420, ಶುಭದಿನ -ವಾರದ ಎಲ್ಲಾ ದಿನ
ಮೀನ : ನಿದ್ರೆಯಲ್ಲಿ ಹೆಚ್ಚು ಕಾಲ ಕಳೆಯಲು ಪ್ರಯತ್ನಿಸಿ. ನಿದ್ರೆಯಲ್ಲಿಯೇ ಸುಖವಿದೆ. ನಿದ್ರೆಯಲ್ಲೂ ನಿಮ್ಮ ಹೆಂಡತಿ ಪ್ರಾಣ ಹಿಂಡಿದ್ರೆ ನಿಮ್ಮ ದುರಾದೃಷ್ಟ. ನಿಮ್ಮ ಗಂಡನ ಜೊತೆ ಹೆಣಗಿಹೆಣಗಿ ಸಾಕಾಗಿದೆಯೇ, ಪೋಲಿಸ್‌ಗೊಂದು ಕಂಪ್ಲೆಂಟ್‌ ಕೊಡಿ.
ಅದೃಷ್ಟ ಸಂಖ್ಯೆ -333, ಶುಭದಿನ -ವಾರದ ಎಂಟನೇ ದಿನ


Friday, July 20, 2007

ಸುರಿಯುತ್ತಲೇ ಇದೆ ಮಳೆ


ನನಗೆ ಈಚೀಚೆಗೆ ಮಳೆ
ಎಂದರೆ ಭಯ! ಅಸಹ್ಯ, ಜಿಗುಪ್ಸೆ..
ಒಂದೊಂದು ಹನಿ
ಮೈ ಮೇಲೆ ಬಿದ್ದರೂ ಯಾತನೆ
ಅಲ್ಲೆಲ್ಲ ಬೊಬ್ಬೆಗಳು!

ಸುರಿಯುತ್ತಲೇ ಇದೆ ಮಳೆ
ಮುಗಿಯದ ಕಣ್ಣೀರಿನಂತೆ!
ಯಾಕೆ ಮಗು ಮಲಗಲಿಲ್ವೇ
ನಿದ್ದೆ ಬರುತ್ತಿಲ್ವೇ ಎಂದು ಕೇಳೋರಿಲ್ಲ..
ನಾನು ಎಚ್ಚರವಾಗಿದ್ದೇನೆ ದೆವ್ವದಂತೆ!

ಹೊರಗಡೆ ಜಿಟಿಜಿಟಿ ಮಳೆ
ಒಳಗೆ ನಾ ಒಂಟಿ
ಮಳೆಯನ್ನು ನೋಡುವ ಬೆರಗು
ನನ್ನಲ್ಲಿ ಉಳಿದಿಲ್ಲ..
ನಾನು ನಿಜಕ್ಕೂ ಬದುಕಿದ್ದೇನೆಯೇ?

ಗಡಿಯಾರ ಓಡುತ್ತಿದೆ.. 10,11,12..
ನಿಂತ ಮಳೆ.. ಶುರುವಾದ ಮಳೆ
ಎಲ್ಲವೂ ಗೊತ್ತಾಗುತ್ತಿದೆ...
ದೀಪ ಆರಿಸಲು ಮನಸ್ಸಾಗುತ್ತಿಲ್ಲ..
ನನ್ನ ಪಾಲಿಗೆ ಉಳಿದ ಬೆಳಕು ಅದೊಂದೇ

ಸದ್ಯಕ್ಕೆಎಲ್ಲವೂ ಖಾಲಿ... ಹೆದರಿಸುವ
ನಾಳೆಗಳು ನಿದ್ದೆ ಕೆಡಿಸುವ ದೆವ್ವಗಳು..
ಮಳೆ ಬಂದು ಭೂಮಿ ತಂಪಾಗುತ್ತದೆ..
ನನ್ನ ಎದೆ ನೆನೆಯುವಂತಹ ಮಳೆ
ಮುಂದೆಯಾದರೂ ಇದೆಯೋ ಇಲ್ಲವೋ?

ಎಲ್ಲೋ ಗುಡುಗಿದ ಶಬ್ದ.. ಮತ್ತೆ ಮಳೆ..
ಹಾಸಿದ ಹಾಸಿಗೆ ಮೇಲೆ ನಾನು..
ನನ್ನ ಜೊತೆಗೆ ದಿಂಬು, ಅದರ ಮೇಲೆ
ಕಪ್ಪು ಹಸಿರು ಚೌಕಿನ ಉಲ್ಲನ್ ರಗ್ಗು..
ಅವಕ್ಕೂ ನನ್ನ ಸಂಗ ಬೇಡವೆನ್ನಿಸಿರಬೇಕು!

ಉಲ್ಲಾಸದ ಹೂಮಳೆ ಎಂದು
ಹೊಟ್ಟೆತುಂಬಿದವರು ಕುಣಿದು ಕುಪ್ಪಳಿಸಲಿ..
ದೇವರಿಗಿಂತಲೂ ಹೆಚ್ಚು ಮಳೆಯನ್ನು
ನಾ ದ್ವೇಷಿಸುತ್ತೇನೆ.. ಸಾಧ್ಯವಿದ್ದಿದ್ದರೆ,
ಕುತ್ತಿಗೆ ಹಿಡಿದು ಉಸಿರು ನಿಲ್ಲಿಸುತ್ತಿದ್ದೆ!

ಓ ಸುತ್ತಲೂ ಅಂಧಕಾರ..
ಇದ್ದಒಂದೇ ಒಂದು ಬೆಳಕು ಸಹಾ ಕಣ್ಮರೆ..
ಪಾಪಿ ಮಳೆ ದೀಪ ಆರಿಸಿತು..
ನೀನುಏನು ಬೇಕಾದರೂ ಆರಿಸಬಹುದು
ನನ್ನೆದೆಯ ಅಗ್ನಿಕುಂಡ ಆರಿಸಲಾರೇ..

ತಾಕತ್ತಿದ್ದರೆ ಪ್ರಯತ್ನಿಸು..
ನಿನಗೆ ಒಳ್ಳೆಯದಾಗಲಿ..

Wednesday, July 18, 2007

ಹೆಂಗಸರಿಗಾಗಿ ಮಾತ್ರ!


ಈ ಲೇಖನವನ್ನು ಹೆಂಗಸರಷ್ಟೇ ಓದಬೇಕು. ಹೆಂಗ(ಹ)ಸು ಅಲ್ಲದ ಗಂಡ(ಹ)ಸು ಓದಬೇಕು ಅನ್ನಿಸಿದರೆ, ಹೆಂಗಸರ ಅನುಮತಿ ಪಡೆಯುವುದು ಕಡ್ಡಾಯ.


ಮಾತೃ ಸ್ವರೂಪಿ, ದೈವ ಸ್ವರೂಪಿ ಎಂದೆಲ್ಲಾ ಹೊಗಳಿ ಅಟ್ಟಕ್ಕೇರಿಸಿರುವ ಪುರುಷ ಸಮುದಾಯ, ಯುಗಯುಗಗಳಿಂದಲೂ ಸ್ತ್ರೀಶೋಷಣೆಯನ್ನು ನಾನಾ ರೂಪದಲ್ಲಿ ತೀವ್ರಗೊಳಿಸುತ್ತಲೇ ಬಂದಿದೆ. ಆ ಬಾಣವನ್ನು ತಿರುಗುಬಾಣವನ್ನಾಗಿಸುವ ತಂತ್ರಗಳು ನಿಮಗಾಗಿ ಅನಾವರಣಗೊಂಡಿವೆ!


‘ಅಪ್ಪನಿಗೆ ತಕ್ಕ ಮಗ’ ಎಂಬ ಬಿರುದು ಪಡೆಯುವ ಹುಚ್ಚಲ್ಲಿ ಕಾಡಿಗೆ ಹೋದ ರಾಮ, ಪಾಪ ಸೀತೆಯನ್ನೂ ಜೊತೆಗೆ ಕರೆದೊಯ್ದ! ಗಂಡನ ಜೊತೆ ಕಲ್ಲು-ಮುಳ್ಳು ತುಳಿಯುವುದು ನನ್ನ ಹಣೆಬರಹ ಅಂದುಕೊಂಡ ಸೀತೆ ವನವಾಸ ಮುಗಿಸಿದ್ದಳು. ನಂತರ ಸಿಂಹಾಸನವೇರಿದ ರಾಮ, ಆದೇ ಸ್ವಾಮಿ ನಿಮ್ಮ ಮಹಾಮಹಿಮ ಶ್ರೀರಾಮ, ಸೀತಾದೇವಿಯನ್ನು ಕಾಡಿಗೆ ಅಟ್ಟಿದ್ದು ಸರಿಯೇ? ಅದೂ ತುಂಬು ಗರ್ಭಿಣಿಯನ್ನು. ಭ್ರೂಣಹತ್ಯೆಯ ಸಿಸ್ಟಮ್‌ ಆಗ ಇದ್ದಿದ್ದರೆ, ಅನುಮಾನದ ಪಿಶಾಚಿ ಅದಕ್ಕೂ ಹಿಂದೆ ಮುಂದೆ ನೋಡ್ತಾಯಿರಲಿಲ್ಲ ಅನ್ನಿಸುತ್ತೆ!


ಪತಿದೇವ ಸತ್ತ ಕೂಡಲೇ ಸತಿ, ಅವನ ಚಿತೆಗೆ ಹಾರಬೇಕಂತೆ. ‘ಗಂಡ ಸತ್ತರೆ ಹೆಂಡತಿ ವಿಧವೆ, ಹೆಂಡ್ತಿ ಸತ್ತರೆ ಗಂಡನಿಗೆ ಮದುವೆ’ -ಯಾಕೆ ಈ ದಬ್ಬಾಳಿಕೆಯ ಕಾನೂನು? ಸರಿ ಬಿಡಿ, ಕಾಲ ಬದಲಾಗಿದೆ. ಹೆಣ್ಣು ಬದಲಾಗಿದ್ದಾಳೆ. ಪ್ಯಾಂಟ್‌ಉ-ಶರ್ಟ್‌ಉ ತೊಟ್ಟು ಅವನಿಗೆ ಸರಿಸಮನಾಗಿ ಬೆಳೆದಿದ್ದಾಳೆ. ಆದ್ರೆ ಇಷ್ಟನ್ನೇ ಕ್ರಾಂತಿಯಂದ್ರೆ, ದೇವೇಗೌಡ್ರು ಸಹಾ ನಗ್ತಾರೇ? ನಿಜವಾದ ಕ್ರಾಂತಿ ಅಂದ್ರೆ; ಹೆಣ್ಣು ಗಂಡಿನ ಡ್ರೆಸ್‌ ತೊಟ್ಟಂತೆ, ಗಂಡಿಗೆ ಹೆಣ್ಣಿನ ಡ್ರೆಸ್‌ ತೊಡಿಸಬೇಕು? ಅರ್ಥವಾಯ್ತಾ?


ಮಹಿಳಾ ಮಣಿಗಳೇ, ಸ್ತ್ರೀಸಿಂಹಗಳೇ ನಿಮ್ಮ ಉನ್ನತಿಗಾಗಿ, ಪುರುಷರ ಅವನತಿಗಾಗಿ ನಾನು ಸಾಕಷ್ಟು ಅಧ್ಯಯನ ಮಾಡಿ ಒಂದಷ್ಟು ಸಂಗತಿಗಳನ್ನು ಕಂಡುಹಿಡಿದಿದ್ದೇನೆ. ಪುಣ್ಯಕ್ಕೆ ಯಾವ ವಿಶ್ವವಿದ್ಯಾಲಯವೂ ಪಿಎಚ್‌ಡಿ-ಗಿಎಚ್‌ಡಿ ಕೊಟ್ಟಿಲ್ಲ! ಅದನ್ನು ನೀವೆಲ್ಲಾ ಪಾಲಿಸಬೇಕು ಅನ್ನೋದು ನನ್ನ ವಿನಂತಿ.


ಸಂಡೇ ಹೀಗೆ ಮಾಡಿ : ಗಂಡನಿಗೆ ಭಾನುವಾರ ರಜೆ ಇದ್ದೇ ಇರುತ್ತೆ. ನೀವು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪೇಪರ್‌ನಲ್ಲಿ ಮತ್ತು ಟೀವಿಯಲ್ಲಿ ಬರೋ ಮಾಹಿತಿಗಳನ್ನು ಬರೆದಿಟ್ಟುಕೊಂಡು, ಸಂಡೇಗೆ ಸ್ಕೆಚ್‌ ಹಾಕಬೇಕು. ಶನಿವಾರದಿಂದಲೇ ಪತಿದೇವರನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ. ಕನಿಷ್ಟ ಆ ತರಹ ನಟಿಸಿ!


ಶನಿವಾರ ರಾತ್ರಿ ಮನೆಯಲ್ಲಿ ಆಡುಗೆ ಮಾಡಲೇ ಬೇಡಿ(ಕೆಲಸ ಕೆಡುತ್ತೆ) ಹೋಟೆಲ್‌ನಿಂದ ಊಟ ತನ್ನಿ! ಆದರೆ, ಅದನ್ನು ನಾನೇ ನಿಮಗಾಗಿ ತಯಾರಿಸಿದ್ದೆ ಅಂತ ಒಂದಿಷ್ಟು ಪೂಸಿ ಬಿಡಿ. ಅಲ್ಲಿಗೆ ನಿಮ್ಮ ಹಾದಿಗೆ ಗಂಡ ಅನ್ನೋ ಪ್ರಾಣಿ ಬಂದಿರ್ತಾನೆ!ಬೆಳಿಗ್ಗೆ ನಿಮ್ಮ ಸವಾರಿ ‘ಜುಂ’ ಅಂಥ ಶುರುವಾಗಲಿ. ನಿಮ್ಮ ಪಿಳ್ಳೆಪಿಸುಗನ್ನು ಬೇಕಾದರೆ ಜೊತೆಗೆ ಕಟ್ಟಿಕೊಳ್ಳಿ. ಹೇಗೂ ಅವನ್ನು ಸಮಾಧಾನ ಮಾಡೋಕೆ, ನಿಮ್ಮ ಪತಿದೇವರು ಇದ್ದೇ ಇರ್ತಾರೆ!


ಸರಿ, ಎಲ್ಲಾ ಆದ ಮೇಲೆ ಒಂದು ಸ್ಯಾರಿ ಅಂಗಡಿಗೆ ಗೂಳಿಯ ತರಹ ನುಗ್ಗಿ ಬಿಡಿ. ಗಡಿಯಾರದ ಹಂಗನ್ನು ಮರೆತು, ಸ್ಯಾರಿ ಸೆಲೆಕ್ಷನ್‌ನಲ್ಲಿ ಮೈಮರೆಯಿರಿ. ನಾನಾ ಸ್ಯಾರಿ ತೋರಿಸಿ-ತೋರಿಸಿ ಅಂಗಡಿಯವನಿಗೆ ಬೇಸರವಾದರೂ, ನೋಡಿ-ನೋಡಿ ನಿಮಗಂತೂ ಬೇಸರವಾಗಬಾರದು! ನಿಮ್ಮ ಮನಸ್ಸಿಗೆ ಇಷ್ಟ ಆಗಲಿಲ್ಲ ಅಂದ್ರೆ ಇನ್ನೊಂದು ನಾಲ್ಕು ಅಂಗಡಿಗೆ ನುಗ್ಗಿ.


ಮಧ್ಯಾಹ್ನ ಆಯಿತು ಹೊಟ್ಟೆ ಕಚ್ಚುತ್ತಿದೆ ಅನ್ನಿಸಿದ್ರೆ ಅಲ್ಲೇ ಪಕ್ಕದಲ್ಲಿರೋ ಹೋಟೆಲ್‌ಗೆ ದಾಳಿ ಮಾಡಿ. ಪಾಪ ನಿಮ್ಮನ್ನು ಕಟ್ಟಿಕೊಂಡ ಪುಣ್ಯ(?)ಕ್ಕೆ ಗಂಡ ಸುಮ್ಮನೇ ಹಿಂದೆ ಬರ್ತಾನೆ, ಬಿಲ್‌ ಕೋಡೋಕೆ!.


ಕೊನೆಗೆ ಯಾವುದಾದರೂ ಅಂಗಡಿಯಲ್ಲಿ ಇದೊಂದು, ಇದು ನಿಮ್ಮಮ್ಮನಿಗೆ, ಅದು ನಿಮ್ಮ ತಂಗಿಗೆ ಅಂತೆಲ್ಲಾ ಹೇಳಿ ಒಂದು ನಾಲ್ಕು ಸೀರೆ ಪ್ಯಾಕ್‌ ಮಾಡಿಸಿ. ಮನೆಗೆ ಬಂದ ಮೇಲೆ ಸೀರೆಗಳನ್ನು ನಿಮ್ಮ ಬೀರುವಿನಲ್ಲಿ ಜೋಪಾನವಾಗಿ ಎತ್ತಿಡಿ!


ಚಾಲೂ ಆಗಿ : ಅಡಿಗೆ ಮನೆ ಎನ್ನುವ ಸೆರೆಮನೆಯಿಂದ ಸದಾ ದೂರವಿಡಿ. ಹೊಸರುಚಿ ಹೆಸರಲ್ಲಿ ಅಡಿಗೆ ಗಬ್ಬೆಬ್ಬಿಸಿದ್ರೆ(ಉಪು, ಹುಳಿ, ಖಾರ), ಪಾಪ ನಿಮ್ಮ ಗಂಡನೇ ಶರಣಾಗ್ತಾನೆ. ಬೇರೆ ದಾರಿಯೇ ಇಲ್ಲ! ನಿಮ್ಮ ಗಂಡನ ಮೇಲೆ ಅತಿಯಾದ ಪ್ರೀತಿಯಿರುವವರಂತೆ ಆಗಾಗ ಕೆಲವು ಟ್ರಿಕ್ಸ್‌ ಮಾಡ್ತಾನೇ ಇರಬೇಕು(ಎಷ್ಟೆಲ್ಲಾ ಸೀರಿಯಲ್‌ ನೋಡ್ತೀರಾ? ನಿಮಗೆ ಇದು ಗೊತ್ತಿಲ್ಲವೇ?).


ನಿಮ್ಮ ಗಂಡ ಅಥವಾ ಮಕ್ಕಳು ಅಥವಾ ನಿಮ್ಮ ಅತ್ತೆ ಯಾರಿಗಾದರೂ ಸರಿ, ಸಣ್ಣಪುಟ್ಟ ಕಷ್ಟಕ್ಕೆಲ್ಲಾ ತಲೆಕೆಡಿಸಿಕೊಳ್ಳಿ(ಕೂದಲನ್ನು ಮಾತ್ರ ಕೆಡಿಸಿಕೊಳ್ಳಿ). ದೇವರಿಗೆ ಅವರ ಹೆಸರಲ್ಲಿ ಎಲ್ಲಾ ಹರಕೆ ಕಟ್ಟಿ. ಬೇಕು ಅಂದ್ರೆ ನಿಮ್ಮ ಯಜಮಾನ್ರ ಮಂಡೆ ಕೊಡ್ತೀನಿ ಅಂತಾ ಧಾರಾಳವಾಗಿ ಹರಕೆ ಕಟ್ಟಬಹುದು! ಹೀಗೆ ಹರಕೆ ನೆಪದಲ್ಲಿ ಕನಿಷ್ಟ ವರ್ಷಕ್ಕೆರಡು ಸಲ ಆದ್ರೂ ಟೂರ್‌ ಮಾಡಿ.


ಮನೆಯಲ್ಲಿದ್ದಾಗಲೂ ಅಷ್ಟೇ. ಆ ದೇವಸ್ಥಾನ, ಈ ದೇವಸ್ಥಾನ ಅಂತಾ ಬೇಕಾದ ಸಿನಿಮಾಗಳನ್ನು ನೋಡೋದು ಮರೀಬೇಡಿ!ಅಡಿಗೆ ಕೆಲಸದಿಂದ ತಪ್ಪಿಸಿಕೊಂಡಂತೆಯೇ, ಬಟ್ಟೆ ಒಗೆಯುವ ಕೆಲಸದಿಂದ ಸಹಾ ಪಾರಾಗಬಹುದು! ಬಟ್ಟೆ ತೊಳೆಯೋ ನೆಪದಲ್ಲಿ ಅಥವಾ ಐರನ್‌ ಮಾಡೋ ನೆಪದಲ್ಲಿ ನಿಮ್ಮ ಗಂಡನ ಒಳ್ಳೊಳ್ಳೆ ಬಟ್ಟೆಗಳನ್ನು ಚಿಂದಿ ಮಾಡಿ! ಮತ್ತೆ ನಿಮಗೆ ಆ ಕೆಲಸ ಹೇಳಿದ್ರೆ ನನ್ನನ್ನು ಕೇಳಿ.


ನಿಮ್ಮ ಮಾತನ್ನು ನಿಮ್ಮ ಗಂಡ ಕೇಳದೇ ಇನ್ಯಾರು ಕೇಳ ಬೇಕು? ಡೈವರ್ಸ್‌ ಮಂತ್ರವನ್ನು ಆಗಾಗ ಪಠಿಸುತ್ತಿರಿ. ‘ನಿಮ್ಮ ಹೆಸರು ಬರೆದಿಟ್ಟು ಆತ್ಯಹತ್ಯೆ ಮಾಡಿಕೊಳ್ತೇನೆ... ವರದಕ್ಷಿಣೆ ಕೇಸ್‌ಗೆ ಬೇಲ್‌ ಇಲ್ಲ...’ ಅನ್ನೋದನ್ನು ಆಗಾಗ ನೆನಪು ಮಾಡ್ತಾಯಿರಿ. ಅಂತಹ ಕ್ರೆೃಂ ಕಾರ್ಯಕ್ರಮಗಳು ಟೀವಿಯಲ್ಲಿ ಬಂದಾಗ, ಗಂಡನಿಗೆ ತಪ್ಪದೇ ತೋರಿಸುವುದು ನಿಮ್ಮ ಕರ್ತವ್ಯ.


ಅಭಿನಯಶ್ರೀ : ಜೀವನದಲ್ಲಿ ಅದರಲ್ಲೂ ಗಂಡನ ಮುಂದೆ ನೀವು ಎಷ್ಟು ಚೆನ್ನಾಗಿ ಅಭಿನಯಿಸುವಿರೋ, ಅಷ್ಟು ಸುಖ ನಿಮ್ಮದಾಗುತ್ತದೆ. ನಿಮ್ಮ ಗಂಡನ ಜುಜುಬಿ ಸಂಪಾದನೆ, ನಿಮ್ಮ ಮೇಕಪ್ಪಿಗೆ ಸಹಾ ಸಾಕಾಗುತ್ತಿಲ್ಲ ಅನ್ನಿಸಿದ್ರೆ, ಗಂಡನನ್ನು ಓಟಿ ಮಾಡಲು ಪ್ರೇರೇಪಿಸಿ. ಬಿಡುವಿನ ವೇಳೆಯಲ್ಲಿ(ಭಾನುವಾರವೂ ಸೇರಿದಂತೆ)ಪಾರ್ಟ್‌ ಟೈಂ ಕೆಲಸ ಮಾಡುವಂತೆ ಮೆದುಳನ್ನು ಕೆಡಿಸಿ, ಗೊಬ್ಬರ ಮಾಡಿ.


ಮದುವೆಯಾಗಿ ಗಂಡನ ಮನೆಗೆ ಹೆಜ್ಜೆಯಿಟ್ಟ ತಕ್ಷಣ, ಅತ್ತೆಯನ್ನು ‘ಅಮ’್ಮ ಅಂತಾ, ಮಾವನನ್ನು ‘ಅಪ್ಪ’ ಅನ್ನುತ್ತಾ ಮಾತಲ್ಲಿಯೇ ಮಂದಿರ ಕಟ್ಟಿ. ಮಗನನ್ನು ಅವರ ಪಾಲಿಗೆ ವಿಲನ್‌ನಂತೆ ಸೃಷ್ಟಿ ಮಾಡಿ. ಅತ್ತೆ ಮನೆಯಲ್ಲಿದ್ದರೆತಲೆಕೆಡಿಸಿಕೊಳ್ಳಬೇಡಿ. ನಯವಾದ ಮಾತುಗಳಿಂದಲೇ ಮನೆಕೆಲಸವನ್ನು ಅವಳಿಗೆ ಒರಗಿಸಿಬಿಡಿ.


ಬೆಳಿಗ್ಗೆಯಿಂದ ರಾತ್ರಿ 12ರವರೆಗೆ ಟೀವಿ ನೋಡಿ. ಸೀರಿಯಲ್‌ಗಳಲ್ಲಿ ಚೆಲುವೆಯರು ಧರಿಸಿರೋ ಸೀರೆಗಳನ್ನು ಗಮನಿಸಿದ್ರೆ, ನಿಮ್ಮ ಸೀರೆ ಸೆಲೆಕ್ಷನ್‌ ಸುಲಭವಾಗುತ್ತೆ. ಒಡವೆಗಳನ್ನು ವಿಶೇಷವಾಗಿ ಗಮನಿಸಿ. ಗ್ಲಿಸರಿನ್‌ ಬಾಟಲ್‌ ಅನ್ನು ಸದಾ ಪಕ್ಕದಲ್ಲಿಟ್ಟುಕೊಳ್ಳಿ. ಸಣ್ಣಪುಟ್ಟದ್ದಕ್ಕೆಲ್ಲಾ ಲೀಟರ್‌ಗಟ್ಟಲೇ ಕಣ್ಣೀರು ಸುರಿಸಿ. ಕಣ್ಣೀರಿಗೆ ಸೋಲದ ಗಂಡ(ಹ)ಸು ಯಾವುದೂ ಇಲ್ಲ! ಅದು ನಿಮಗೆ ಗೊತ್ತಿರಲಿ.


‘ನಮ್ಮಪ್ಪನ ಮನೇಲಿ ಹೆಂಗೆಲ್ಲಾ ಇದ್ದೆ? ಎಂಥೆಂಥ ಗಂಡುಗಳು ನನ್ನ ಮೆಚ್ಚಿದ್ದರು. ನನ್ನ ಗ್ರಹಚಾರ ನೀವು ಗಂಟು ಬಿದ್ರಿ’ ಅಂತ ಮೊಟಕುತ್ತಿರಿ. ಗಂಡ(ಹ)ಸು ಮೆತ್ತಾಗಾಗದಿದ್ರೆ ಕೇಳಿ. ನಿಮ್ಮ ಅಕ್ಕಪಕ್ಕದ ಮಹಿಳಾ ಸಂಘ ಹಾಗೂ ವನಿತಾ ಜಾಗೃತಿ ಮಂಡಳಿಗಳ ಸದಸ್ಯತ್ವ ಪಡೆಯಿರಿ.


ಮಹಿಳಾ ಸಂಘಗಳು ಪುರುಷರಿಗೆ ಮಂಗಳಾರತಿ ಎತ್ತಿದ್ದನ್ನು ರೆಕ್ಕೆಪುಕ್ಕ ಕಟ್ಟಿ ನಿಮ್ಮ ಗಂಡನ ಮುಂದೆ ಬಣ್ಣಿಸಿ. ನಿಮ್ಮ ಗತ್ತು-ದೌಲತ್ತುಗಳ ಪ್ರದರ್ಶನಕ್ಕೆ ಆಗಾಗ ಸನ್ಮಾನಗಳನ್ನು ಮಾಡಿಸಿಕೊಳ್ಳಿ. ಸಂಘ ಸಂಸ್ಥೆಗಳಿಗೆ ಉದಾರವಾಗಿ ದೇಣಿಗೆ ನೀಡಿದ್ರೆ ಸನ್ಮಾನಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆಗ ನಿಮ್ಮ ಬಗ್ಗೆ ಗಂಡನಿಗೆ ಒಂದು ಮೂಲೆಯಲ್ಲಿ ಭಯ ಹುಟ್ಟುತ್ತೆ! ಭಯಯಿದ್ರೆ ನಿಮ್ಮ ತಾಳಕ್ಕೆ ಹೆಜ್ಜೆ ಹಾಕ್ತಾನೆ.


ಸದ್ಯಕ್ಕೆ ಇಷ್ಟು ಸಾಕು. ಮತ್ತಷ್ಟು ‘ಮನೆಹಾಳ್‌’ ಐಡಿಯಾಗಳೊಂದಿಗೆ ಇನ್ನೊಂದು ಸಲ ಬರ್ತೇನೆ.


(ಎಚ್ಚರಿಕೆ : ಈ ಲೇಖನ ಓದುವುದು ಗಂಡಸರ ಆರೋಗ್ಯಕ್ಕೆ ಒಳ್ಳೆಯದು!)

ಹುಟ್ಟಿದ ಹಬ್ಬದದಿನ 'ದುರಂತ ನಾಯಕಿ' ಕಲ್ಪನಾ ನೆನಪು!


ಏನೇ ಆಗಲಿ, ಮಿನುಗುತಾರೆ ಕಲ್ಪನಾ ಇನ್ನು ಸ್ವಲ್ಪ ದಿನ ನಮ್ಮ ಜೊತೆ ಇರಬೇಕಿತ್ತು.


ಕನ್ನಡ ಚಿತ್ರರಂಗದ ದುರಂತ ನಾಯಕಿಯರಲ್ಲಿ ಕಲ್ಪನಾ ಸಹಾ ಒಬ್ಬರು! ಇಂದು ಅವರನ್ನು ನೆನೆಯಲೊಂದು ನೆಪ ಸಿಕ್ಕಿದೆ. ಬದುಕಿದ್ದಷ್ಟು ವರ್ಷ, ಚಿತ್ರರಸಿಕರ ರಂಜಿಸಿದವರು ಕಲ್ಪನಾ. ಇಂದು(ಜು.18) ಅವರು ನಮ್ಮೊಂದಿಗೆ ಇದ್ದಿದ್ದರೆ, ಸಂಭ್ರಮದ ಹ್ಯಾಪಿ ಬರ್ತ್‌ ಡೇ ಹೇಳಬಹುದಿತ್ತು.. ಆ ಅವಕಾಶ ನಮಗೆನಿಮಗೆ ಇಲ್ಲ ಬಿಡಿ.


ಬೆಳ್ಳಿಮೋಡ, ಶರಪಂಜರ, ಎರಡು ಕನಸು ಮತ್ತಿತರ ಚಿತ್ರಗಳಲ್ಲಿನ ಪಾತ್ರಗಳು ಕಲ್ಪನಾಗೆ 'ದುರಂತ ನಾಯಕಿ' ಎಂಬ ಬಿರುದನ್ನೇ ಕೊಟ್ಟಿದ್ದವು. ಬಾಳಸಂಗಾತಿಯಾಗಲು ಆತ ಬಂದೇ ಬರುತ್ತಾನೆ.. ನನ್ನನ್ನು ಆತ ಮದುವೆಯಾಗುತ್ತಾನೆ ಎಂಬ ಕಲ್ಪನಾರ ಕನಸು, ಕಲ್ಪನೆಯೇ ಆಯಿತು. ಮುರಿದ ಮನಸ್ಸು, ಆತ್ಮಹತ್ಯೆಗೆ ಪ್ರೇರಣೆ ನೀಡಿತು. ಕೈ ಬೆರಳಿನಲ್ಲಿದ್ದ ವಜ್ರದ ಉಂಗುರ , ಸಾವಿಗೆ ನೆರವು ನೀಡುವುದಾಗಿ ಹೇಳಿತು! ನೆರವನ್ನು ಕಲ್ಪನಾ ನಿರಾಕರಿಸಲಿಲ್ಲ. ಆ ಮೂಲಕ ಬದುಕಿಗೆ ಮಧ್ಯದಲ್ಲಿ ಫುಲ್‌ಸ್ಟಾಪ್ ಇಟ್ಟು, ನಿಜ ಬದುಕಿನಲ್ಲೂ ಕಲ್ಪನಾ 'ದುರಂತ ನಾಯಕಿ'ಯೇ ಆದರು ಎನ್ನುತ್ತಾರೆ ಕೆಲವರು. ಕಲ್ಪನಾಗೆ ಕೈಕೊಟ್ಟವರು ಯಾರು? ಉತ್ತರಿಸಲು ಅವರಿಲ್ಲ..


ಸ್ತ್ರೀ ನಾಟಕ ಮಂಡಳಿ ಮುಖಾಂತರ ಚಿತ್ರರಂಗಕ್ಕೆ ಕಾಲಿಟ್ಟ ಕಲ್ಪನಾ, ಮಿನುಗುತಾರೆ. ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ಕೃಷ್ಣಮೂರ್ತಿ ಮತ್ತು ಜಾನಕಮ್ಮ ದಂಪತಿಗಳ ಮಗಳಾದ ಕಲ್ಪನಾಗೆ, ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳತ್ತ ಆಸಕ್ತಿ. ಮುಖಕ್ಕೆ ಬಣ್ಣ ಬಳಿಸಿಕೊಳ್ಳುವ ಹಂಬಲ. ಅವರ ಅಭಿನಯಕ್ಕೆ ವೇದಿಕೆ ಕಲ್ಪಿಸಿದ್ದು ; ರಂಗಭೂಮಿಯ ಗುಡಿಗೇರಿ ಬಸವರಾಜು.


'ಸಾಕುಮಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕಲ್ಪನಾ, ಕೃಷ್ಣಗಾರುಡಿ, ಸಂಸಾರ ನೌಕೆ, ಬೆಳ್ಳಿ ಮೋಡ, ನಾಂದಿ, ಬಂಗಾರದ ಹೂ, ಗೆಜ್ಜೆಪೂಜೆ, ಶರಪಂಜರ, ಉಯ್ಯಾಲೆ, ಸರ್ವಮಂಗಳ ಹೀಗೆ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 3ಸಲ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದ ಕಲ್ಪನಾಗೆ ಪುಸ್ತಕ ಓದುವ ಹವ್ಯಾಸವೂ ಇತ್ತು.


ತಮ್ಮ ಹೃದಯಸ್ಪರ್ಶಿ ಅಭಿನಯದಿಂದಾಗಿಯೇ, ಕಲ್ಪನಾ ಇಂದಿಗೂ ಮಿನುಗುತಾರೆ ಆಗಿಯೇ ಉಳಿದಿದ್ದಾರೆ. 'ಮುದ್ದಿನ ಗಿಣಿಯೇ ಬಾರೋ....', 'ಅರೆರೆರೇ ಗಿಣಿರಾಮ..' ಮತ್ತಿತರ ಹಾಡುಗಳು ಟೀವಿಯಲ್ಲಿ ಬಂದಾಗಲೆಲ್ಲಾ ಕಲ್ಪನಾ ಕಣ್ಮುಂದೆ ನಿಲ್ಲುತ್ತಾರೆ. ಏನೇ ಆಗಲಿ, ಕಲ್ಪನಾ ಇನ್ನು ಸ್ವಲ್ಪ ದಿನ ನಮ್ಮ ಜೊತೆ ಇರಬೇಕಿತ್ತು.

Tuesday, July 17, 2007

ಇಂದು ಪ್ರೀತಿ! ನಾಳೆಯೇ ಮದುವೆ! ನಾಡಿದ್ದು ವಿಚ್ಛೇದನ!


ಹಿಂದೆ ಹೆಂಡತಿ ಬಿಟ್ಟವನು, ಗಂಡನ ಬಿಟ್ಟವಳು ಎಂದು ಸಂಬಂಧ ಒಲ್ಲೆ ಎಂದವರನ್ನು ಸಮಾಜ ದೂಷಿಸುತ್ತಿತ್ತು! ಆದರೆ ಇಂದು? ಯಾರು ಮನೆ ದೋಸೆ ನೆಟ್ಟಗಿದೆ?
ಉದ್ಯಾನ ನಗರಿ, ಐಟಿ ನಗರಿ ಎಂಬ ಖ್ಯಾತಿಯ ಬೆಂಗಳೂರು, ವಿಚ್ಛೇದಿತರ ನಗರಿ ಎಂದು ಸದ್ಯದಲ್ಲೇ ಕುಖ್ಯಾತವಾದರೆ ಅಚ್ಚರಿಯೇನಿಲ್ಲ!


ನವದೆಹಲಿಯನ್ನು ಹೊರತುಪಡಿಸಿದರೆ, ಬೆಂಗಳೂರಿನಲ್ಲಿಯೇ ವಿಚ್ಛೇದನಗಳು ಹೆಚ್ಚು. ಪ್ರತಿ ವರ್ಷ 4ಸಾವಿರಕ್ಕೂ ಅಧಿಕ ಮಂದಿ, ವೈವಾಹಿಕ ಸಂಬಂಧವನ್ನು ಮುರಿದುಕೊಳ್ಳುತ್ತಿದ್ದಾರೆ ಎನ್ನುತ್ತವೆ ಅಂಕಿಅಂಶಗಳು. ಈ ವಿಚಾರ ಕೇಳಿ ವಕೀಲರು, ಸಿಹಿ ಹಂಚಿದರಂತೆ ಎಂಬುದು ಕೇವಲ ಕುಹಕ!


ಹಿಂದಿನ ಮದುವೆಗೂ, ಇಂದಿನ ಮದುವೆಗೂ ವ್ಯತ್ಯಾಸಗಳಿವೆ. ಮದುವೆ ಎನ್ನುವುದು ಮೊದಲು, ಮನೆಮಂದಿ ಸಂಭ್ರಮಿಸುವ ಹಬ್ಬವಾಗಿತ್ತು. ಮನೆಗೆ ಬರುವ ಸೊಸೆ, ಗಂಡನ ಜೊತೆಗೆ ಮನೆಮಂದಿ ಜೊತೆಗೂ ಹೊಂದಿಕೊಳ್ಳಬೇಕಿತ್ತು. ಸಂಸಾರದಲ್ಲಿ ಸರಿಗಮವಿತ್ತು. ಎಲ್ಲೂ ಅಪಸ್ವರವಿರಲಿಲ್ಲ. ಗಂಡಹೆಂಡಿರ ಜಗಳ ಉಂಡು ಮಲಗಿದರೆ ಮುಗಿಯುತ್ತಿತ್ತು. ಮುಗಿಯದಿದ್ದರೆ, ಮನೆ ಹಿರಿಯರು ಬುದ್ಧಿ ಹೇಳಿ ಮುಗಿಸುತ್ತಿದ್ದರು. ಆದರೆ ಈಗ? ಇಂದು ಪ್ರೀತಿ, ನಾಳೆ ಮದುವೆ, ನಾಡಿದ್ದು ವಿಚ್ಛೇದನ!


ಈಗಿನ ಗಂಡಹೆಂಡಿರ ಜಗತ್ತಿನಲ್ಲಿ ಯಾರೂ ಇಲ್ಲ! ಯಾರೂ ಅವರಿಗೆ ಬೇಕಾಗಿಲ್ಲ! ಮುನಿದರೆ ಸಮಾಧಾನ ಹೇಳಲು ಮನೆಯಲ್ಲಿ ಹಿರಿಯರಿಲ್ಲ! ಇದ್ದರೂ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ. ಅವಸರದ ಆಧುನಿಕ ಜಗತ್ತು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆಯೋ?

Wednesday, July 4, 2007

ಟಾಪ್‌-5 : ಇದು ಒಂದು ಮುತ್ತಿನ ಕಥೆ!


ರಾಜ್‌ಕುಮಾರ್‌ ಎಲ್ಲಿಂದಲೋ ಬಂದವರಲ್ಲ.. ನಮ್ಮಂತೆಯೇ ನಮ್ಮ ಮಧ್ಯೆಯೇ ಇದ್ದವರು. ಎತ್ತರೆತ್ತರ ಬೆಳೆದವರು. ಅವರು ಬೆಳೆಯುವುದರ ಹಿಂದೆ ಶ್ರಮದ ಬೆವರಿತ್ತು. ರಾಜ್‌ರ 79ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪದೇ ಪದೇ ಕೇಳಲ್ಪಡುವ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು...


ರಾಜ್‌ ಇಷ್ಟವಾಗಲು 5 ಕಾರಣಗಳು :
1. ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋಗಲಿಲ್ಲ.
2. ಜಾತಿಯಿಂದ ಗುರ್ತಿಸಿಕೊಳ್ಳಲಿಲ್ಲ.
3. ರಾಜಕೀಯಕ್ಕೆ ಹೋಗಲಿಲ್ಲ.
4. ಕೀರ್ತಿ ಕಿರೀಟ ತಲೆ ಮೇಲೆ ಕುಂತರೂ, ವಿನಯವಂತಿಕೆ ಬಿಡಲಿಲ್ಲ.
5. ಹತ್ತಿದ ಏಣಿ ಒದೆಯದೇ, ಅಭಿಮಾನಿಗಳ ದೇವರೆಂದು ಗುರ್ತಿಸುವ ಬುದ್ದಿ.
ರಾಜ್‌ ಹೆಗ್ಗಳಿಕೆ ಕಾರಣವಾದ 5 ಅಂಶಗಳು :

1. ಗಾಯಕ ಮತ್ತು ನಾಯಕನಾಗಿ ಯಶಸ್ಸು.
2. ಸುಸ್ಪಷ್ಟ ಕನ್ನಡ.
3. ಎಲ್ಲಾ ಪಾತ್ರಕ್ಕೂ ಸೈ..
4. ಸ್ಯಾಂಡಲ್‌ವುಡ್‌ ಇತಿಹಾಸ ಶ್ರೀಮಂತಗೊಳಿಸಿದ್ದು.
5. ನಟನಾಗಿ ಉಳಿಯದೇ ನಾಡು-ನುಡಿಗಾಗಿ ಕೈ ಎತ್ತಿದ್ದು.
ರಾಜ್‌ ಬಗೆಗಿನ 5 ಟೀಕೆಗಳು :

1. ಅಗತ್ಯಕ್ಕಿಂತ ಹೆಚ್ಚಿನ ಮುಗ್ಧತೆ.
2. ನರಹಂತಕ ವೀರಪ್ಪನ್‌ ಅಂಗಳದಿ ನಿಂತು, ‘ನನ್ನನ್ನು ಇಲ್ಲಿಂದ ನಾಡಿಗೆ ಕರೆಸಿಕೊಳ್ಳಿ’ ಎಂದು ಸರ್ಕಾರಕ್ಕೆ ಧೈನ್ಯತೆಯಿಂದ ಕೈಜೋಡಿಸಿದ್ದು.
3. ರಾಜ್‌ ಅಭಿಮಾನಿ ಸಂಘ, ರಜನಿ ಮತ್ತು ಚಿರಂಜೀವಿ ಅಭಿಮಾನಿ ಸಂಘದಂತೆ ಹೆಚ್ಚು ಸಮಾಜಮುಖಿಯಾಗಲಿಲ್ಲ. ಕೆಲವು ಸಲ ಅಭಿಮಾನಿ ಸಂಘದ ಪುಂಡಾಟಕ್ಕೆ ರಾಜ್‌ ಕಡಿವಾಣ ಹಾಕಲಿಲ್ಲ.
4. ತಮ್ಮೊಳಗಿನ ಶಕ್ತಿಯನ್ನು ಬಳಸಿಕೊಂಡು, ಕರ್ನಾಟಕವನ್ನು ಸಮರ್ಥವಾಗಿ ಬಲಪಡಿಸಲಿಲ್ಲ.
5. ಟೀಕೆ ಮಾಡುವುದಕ್ಕಾಗಿಯೇ ಕೆಲವು ಟೀಕೆಗಳು..
ರಾಜ್‌ ನಾಡಿಗೇನು ಕೊಟ್ಟರು? 5 ವಿಚಾರಗಳು...

1. ತಮ್ಮೆರಡು ಕಣ್ಣುಗಳ ಕೊಟ್ಟು, ಕೋಟ್ಯಂತರ ಅಭಿಮಾನಿಗಳಿಗೆ ಪ್ರೇರಣೆ ನೀಡಿದರು. ಸಾವಿರಾರು ದೃಷ್ಟಿಹೀನರಿಗೆ ಈ ಪರಿಣಾಮ, ಭರವಸೆಯ ಬೆಳಕು.
2. ತಮ್ಮ ಚಿತ್ರಗಳ ಮೂಲಕ ಕೌಟುಂಬಿಕ ಸಾಮರಸ್ಯಕ್ಕೆ ಕೊಡುಗೆ.
3. ಕೊನೆ ಉಸಿರಿಡುವ ತನಕ, ಅಭಿಮಾನಿಗಳಿಗೆ ಪ್ರೀತಿಯ ಸಿಂಚನ.
4. ಇತಿಹಾಸ, ಪುರಾಣ, ಸಂತರ ಚಿತ್ರವನ್ನು ಮತ್ತು ನಾಡ ಸಂಸ್ಕೃತಿಯನ್ನು ತಮ್ಮ ಪಾತ್ರಗಳ ಮೂಲಕ, ರಾಜ್‌ ಎಲ್ಲರ ಎದೆಯಲ್ಲಿ ಬಿತ್ತಿದ್ದು..
5. ತಮ್ಮ ಚಿತ್ರಗಳ ಮೂಲಕ ಶಿಕ್ಷಕನಂತೆ ನಿಂತು, ಸಭ್ಯ ಪ್ರಜೆಗಳ ಸೃಷ್ಟಿಸಿದ್ದು..
ರಾಜ್‌ ಯಶಸ್ಸಿನಿಂದಿನ 5 ಕಾರಣಗಳು :
1. ಪಾರ್ವತಮ್ಮ ರಾಜ್‌ ಕುಮಾರ್‌.
2. ಕನ್ನಡತನಕ್ಕೆ ಅಂಟಿಕೊಂಡದ್ದು.
3. ಅಭಿಮಾನಿಗಳ ಪ್ರೀತಿ.
4. ಪ್ರತಿಭೆ ಮತ್ತು ಶ್ರಮದ ಸಮ್ಮಿಲನ.
5. ಅದೃಷ್ಟ
ಮೇಲಿನ ವಿಚಾರಗಳಿಗೆ ನಿಮ್ಮ ಸಮ್ಮತಿ ಇದೆಯಾ? ಅಥವಾ ಏನಾದರೂ ತಕರಾರಿದ್ದರೇ ನಾಲ್ಕು ಸಾಲು ಬರೆಯಿರಿ..