Saturday, December 8, 2007

ರಮ್ಯಾ ಸ್ವಲ್ಪ ಗಂಭೀರವಾಗಿ ಕೂತು ಈ ಪತ್ರ ಓದು ಪ್ಲೀಸ್..

ರಮ್ಯಾ ಮೇಡಂಗೆ ನಮಸ್ಕಾರ.

ಹುಟ್ಟುಹಬ್ಬದ ಸಂಭ್ರಮ(ನ.29)ದಲ್ಲಿರುವ ನಿಮಗೆ ಮೊದಲು ಶುಭಾಶಯಗಳು.

ನೀವು ಚೆನ್ನಾಗಿರಬೇಕು.. ಇನ್ನಷ್ಟು ಚಿತ್ರಗಳಲ್ಲಿ ಅಭಿನಯಿಸಬೇಕು... ಇದು ನನ್ನೊಬ್ಬನ ಆಶಯ ಮಾತ್ರವಲ್ಲ. ನನ್ನಂಥ ಲಕ್ಷಾಂತರ ಕನ್ನಡ ಪ್ರೇಮಿಗಳ ಆಶಯ. ಜನ್ಮದಿನದ ಖುಷಿಯಲ್ಲಿರುವ ನಿಮಗೆ ಒಂದಷ್ಟು ಕಹಿಗುಳಿಗೆ ಸಹಾ ನೀಡುತ್ತಿದ್ದೇನೆ. ಕಹಿಗುಳಿಗೆಗಳು ಆರೋಗ್ಯಕ್ಕೆ ಹಿತಕರ ಅನ್ನೋದು ನಿಮಗೆ ಗೊತ್ತಿದೆ ಎನ್ನುವುದು ನನ್ನ ಭಾವನೆ. ಈ ಮಾತು ಕೇಳಿ ನೀವು ಎಂದಿನ ಸ್ಟೈಲಲ್ಲಿ ನಗ್ತೀರಾ ಅನ್ನೋದು ನನಗೆ ಗೊತ್ತಿದೆ.


ಕನ್ನಡ ಚಿತ್ರರಂಗದಲ್ಲಿ ನಂ.1ಸ್ಥಾನದಲ್ಲಿ ಮೆರೆದವರು ಮಾಲಾಶ್ರೀ. ಅವರ ನಂತರ ಆ ಸ್ಥಾನ ತುಂಬಲು ಯಾರು ಬರಲೇ ಇಲ್ಲ. ನೀವು ಆ ಸ್ಧಾನ ತುಂಬುವಿರಿ ಎಂಬ ವಿಶ್ವಾಸ ನಮಗಿತ್ತು. ಆಗತ್ಯಕ್ಕಿಂತ ಜಾಸ್ತಿಯೇ ನಾವು ನಿಮ್ಮನ್ನು ಒಪ್ಪಿಕೊಂಡೆವು. ನಿಮ್ಮ ತರ್ಲೆ ಕಿರಿಕಿರಿ ಏನೇ ಇರಲಿ.. ಎಲ್ಲರಲ್ಲೂ ಇವಳು ನಮ್ಮುಡುಗಿ ಅನ್ನೋ ಭಾವ.


ಸುಂಟರಗಾಳಿ ಚಿತ್ರದಲ್ಲಿ ರಕ್ಷಿತಾ ಕುಣಿದ ಪರಿ ನೋಡಿ,'ನಾನಂತೂ ಆ ಥರಾ ಪಾತ್ರಗಳಲ್ಲಿ ಅಭಿನಯಿಸೋದಿಲ್ಲ. ಅವ್ಳು ಒಳ್ಳೆ ಕ್ಲಬ್ ಡ್ಯಾನ್ಸರ್ ಥರಾ ಕುಣಿದಿದ್ದಾಳೆ'ಎಂದು ನೀವು ಹೇಳಿದ್ದು ನಮಗಿನ್ನೂ ನೆನಪಿದೆ. ನನಗೆ ಅಂಥಾ ದೃಶ್ಯದಲ್ಲಿ ಕಾಣಿಸಿಕೊಳ್ಳೋದು ಇಷ್ಟವಿಲ್ಲ. ನನಗೆ ನಿಜಕ್ಕೂ ಹಿಂಸೆಯಾಗುತ್ತೆ ಎಂದು ನೀವು ಹೇಳಿದ ಕೆಲವೇ ದಿನಗಳಲ್ಲಿ ತೆರೆ ಮೇಲೆ ಜೂಲಿ ಚಿತ್ರ ಬಂತು. ಜೂಲಿ ಚಿತ್ರ ಹೇಗಿತ್ತು ಅನ್ನೋದು ನಿಮಗೂ ಗೊತ್ತು. ಜೂಲಿ ಚಿತ್ರದಲ್ಲಿ ನಿಮ್ಮ ಅವತಾರಾ ಕಂಡು ರಕ್ಷಿತಾ ಸಹಾ ನಾಚಿಕೊಂಡರು! ಯಾಕೆ ಹೀಗೆ?


ಸುದೀಪ್ ಗೆ ಅಪ್ಪಿಕೊಳ್ಳೋದಕ್ಕೆ ಬರೋದಿಲ್ಲ... ಆದಿತ್ಯನಿಗೆ ಕಿಸ್ ಮಾಡೋದಿಕ್ಕೆ ಬರೋದಿಲ್ಲ ಎಂದೆಲ್ಲ ನೀವು ಹೇಳಿದಿರಿ ಎಂದು ಪತ್ರಿಕೆಗಳು ಬರೆದಿದ್ದವು. ಒಂದು ಹಂತದಲ್ಲಿ ನಿಮ್ಮ ಮತ್ತು ರಕ್ಷಿತಾ ನಡುವಿನ ಕೋಳಿ ಜಗಳ, ಪ್ರೇಕ್ಷಕರಿಗೆ ಕಾಸಿಲ್ಲದ ಮನರಂಜನೆಯಾಗಿತ್ತು. ಆಮೇಲೆ ಬಂದ ತನನಂ ತನನಂ ಚಿತ್ರದಲ್ಲಿ ನೀವು ಚೆನ್ನಾಗಿಯೇ ಅಭಿನಯಿಸಿದಿರಿ, ಆದರೆ ಚಿತ್ರ ಗೆಲ್ಲಲಿಲ್ಲ. ಆ ವಿಷ್ಯಾ ಬಿಡಿ.ಒಂದು ವಿಷ್ಯಾ ಹೇಳಲಾ, ರಕ್ಷಿತಾಗಿಂತಲೂ ನೀವೇ ಅದೃಷ್ಟವಂತರು. ಟಿ.ಎನ್.ಸೀತಾರಾಂ, ನಾಗತಿಹಳ್ಳಿ ಚಂದ್ರಶೇಖರ್, ಕವಿತಾ ಲಂಕೇಶ್ ಸೇರಿದಂತೆ ಅನೇಕ ಉತ್ತಮ ನಿರ್ದೇಶಕರ ಜೊತೆ ಕೆಲಸ ಕಲಿಯೋ ಅವಕಾಶ ನಿಮ್ಮದಾಗಿದೆ. ಆದರೂ ನೀವು ಮನಸ್ಸಿನಲ್ಲಿ ಉಳಿಯೋ ಅಂಥಾ ಒಂದು ಚಿತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ಚಿತ್ರರಂಗ ನಿಮ್ಮನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೋ, ನೀವು ಚಿತ್ರರಂಗವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೋ ಗೊತ್ತಾಗುತ್ತಿಲ್ಲ.


ನಿಮ್ಮಲ್ಲಿ ರೂಪವಿತ್ತು, ಪ್ರತಿಭೆಯಿತ್ತು, ಎಲ್ಲರ ಸೆಳೆಯುವ ಮಾದಕತೆ ಇತ್ತು, ಕನ್ನಡತಿ ಎಂಬ ವಿಶೇಷ ಹೆಗ್ಗಳಿಕೆಯೂ ಇತ್ತು. ಹೀಗಾಗಿ ನೀವು ಕನ್ನಡ ಚಿತ್ರರಂಗದ ರಾಣಿಯಾಗಿ ಮೆರೆಯಬಹುದಿತ್ತು. ರಾಧಿಕಾ ಬೇರೆ ಕಾರಣಕ್ಕೆ ಸ್ಯಾಂಡಲ್ ವುಡ್ ನಲ್ಲಿ ಅಪ್ರಸ್ತುತರಾದರು. ರಕ್ಷಿತಾ ಮದುವೆಯಾದರು. ಮನೆ ಆಗ ಖಾಲಿ ಇತ್ತು. ಅದರಲ್ಲೂ ರಕ್ಷಿತಾ ಮನೆಗೆ ಹೋದ ತಕ್ಷಣ, ನೀವು ರಾಣಿಯಾಗ್ತೀರಾ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಆ ರೀತಿ ಆಗಲಿಲ್ಲ. ಹೊಸಬರ ಅಲೆಯಲ್ಲಿ ನೀವು ಕೊಚ್ಚಿ ಹೋದಿರಿ.ಈಗಂತೂ ನೀವು ಪತ್ತೇನೇ ಇಲ್ಲ. ಆಯಮ್ಮನ ಕೊಬ್ಬು ಜಾಸ್ತಿಯಾಗಿದೆ.. ಹೀಗಾಗಿ ಆ ಸಿನಿಮಾದಿಂದ ಕೈಬಿಡಲಾಯಿತು..ಈ ಸಿನಿಮಾದಿಂದ ಕೈಬಿಡಲಾಯಿತು ಎಂದು ಆಗಾಗ ಮಾತ್ರ ನಾವು ನಿಮ್ಮ ಬಗ್ಗೆ ಓದುತ್ತಿರುತ್ತೇವೆ.


ತಮಿಳಲ್ಲಿ ಅವಕಾಶಕ್ಕಾಗಿ ನೀವು ಅಂಗಲಾಚುತ್ತಿರುವಿರಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅಂಗಲಾಚುವ ಸ್ಥಿತಿ ನಿಮಗೆ ಬರಬಾರದಿತ್ತು. ಇಷ್ಟಕ್ಕೂ ಕನ್ನಡಿಗರು ಏನ್ ಕಮ್ಮಿ ಮಾಡಿದ್ದಾರೆ.. ಯಾಕೆ ನೀವು ತಮಿಳಿಗೆ ಹೋದಿರಿ? ಹೋದದ್ದು ಯಾಕೆ? ಆ ಚಿತ್ರಗಳ ಸ್ಟಿಲ್ ಗಳನ್ನು ಕಂಡರೆ, ನಮ್ಮ ಮೈ ಎಲ್ಲಾ ಉರಿದು ಹೋಗುತ್ತಿದೆ. ಆ ಪರಿಯಲ್ಲಿ ನೀವು ಕಾಣಿಸಿಕೊಳ್ಳುವುದನ್ನು ನಾವಂತೂ ಖಂಡಿಸುತ್ತೇವೆ.ನೀವು ಈಗಲೂ ಸ್ಯಾಂಡಲ್ ವುಡ್ ಗೆ ಬನ್ನಿ.. ಸ್ವಲ್ಪ ದಿನ ಕಾದರೆ ಪ್ರಪಂಚ ಮುಳುಗೋದಿಲ್ಲ. ಕೆಲಸಕ್ಕೆ ಬಾರದ ನೂರು ಚಿತ್ರಗಳಲ್ಲಿ ಕಾಣಿಸಿಕೊಳ್ಳೋದಕ್ಕಿಂತ, ಒಂದೈದು ಒಳ್ಳೆ ಚಿತ್ರದಲ್ಲಿ ಅಭಿನಯಿಸಿದರೆ, ಅದೇ ಸಾರ್ಥಕತೆ. ತಾರಾ ಮತ್ತು ಜಯಮಾಲಾ ರೀತಿ ರಾಷ್ಟ್ರಪ್ರಶಸ್ತಿ ಪಡೆಯೋ ಹಂಬಲ ನಿಮಗಿಲ್ವಾ?


ಚರ್ಮ ಸುಕ್ಕಾಗುವ ಮುನ್ನ ಕಾಸು ಬಾಚೋದು ನಿಮ್ಮ ಉದ್ದೇಶ ಆಗಿರಲಿಕ್ಕಿಲ್ಲ ಎಂದು ನಾವಂದು ಕೊಂಡಿದ್ದೇವೆ. ಇಷ್ಟರ ಮೇಲೆ ನಿಮ್ಮಿಷ್ಟ.ಮತ್ತೆ ಶುರುವಾಗಲಿ ರಮ್ಯ ಚೈತ್ರ ಕಾಲ..

Wednesday, October 10, 2007

20ತಿಂಗಳ ಸಂಸಾರಕ್ಕೆ ಬೆಂಕಿಬಿದ್ದಿದೆ! ಈಗ ಮರು ಮದುವೆ?

ಇದು ರಾಜಕಾರಣವೇ? ಅಲ್ಲ. ಖಂಡಿತ ಅಲ್ಲ. ಕರ್ನಾಟಕದಲ್ಲಿ ಸದ್ಯಕ್ಕೆ ನಡೆಯುತ್ತಿರುವುದು ರಾಜಕಾರಣ ಅಲ್ಲವೇ ಅಲ್ಲ. ಬೇಕಿದ್ದರೆ ಇದನ್ನು ಕುತಂತ್ರ ಕಾರಣ ಅನ್ನೋಣ. ಕುರ್ಚಿಕಾರಣ ಅನ್ನೋಣ.. ಸ್ವಾರ್ಥಕಾರಣ ಅನ್ನೋಣ. ಅಪ್ಪಮಕ್ಕಳ ಮಮಕಾರಣ ಅನ್ನೋಣ. ಇನ್ನೂ ಬೇಕಿದ್ದರೇ ರಾಜಕೀಯ ವ್ಯಭಿಚಾರ ಎಂದು ಗುರ್ತಿಸೋಣ. ರಾಜಕಾರಣ ಅನ್ನುವ ಪದಕ್ಕೆ ಶಬ್ದಕೋಶದಲ್ಲಿ ಒಳಜಗಳ ಎಂದೂ ಸಹಾ ವ್ಯಾಖ್ಯಾನ ಮಾಡಲಾಗಿದೆ. ಆ ವಿಷಯ ಬಿಡಿ.

ರಾಜಕಾರಣದಲ್ಲಿ ಇಂದಿನ ಮಿತ್ರ, ನಾಳೆಯ ವೈರಿ. ನಿನ್ನೆಯ ವೈರಿ, ಇಂದಿನ ಮಿತ್ರ. ಇಲ್ಲಿ ಎಲ್ಲವೂ ಅಂದರೆ ಅಸಾಧ್ಯವೂ ಸಾಧ್ಯ. ಪತ್ರಿಕೆ ಅಥವಾ ಟೀವಿಯಲ್ಲಿ ರಾಜಕಾರಣಿಗಳ ಹೇಳಿಕೆ ನೋಡಿ ಕೆಲವರು ಮೋಸ ಹೋಗುತ್ತಾರೆ. ಬೆಳಗ್ಗೆ ಬಾಯಿಗೆ ಬಂದಂತೆ ಬೈದವರು, ರಾತ್ರಿ ಜೊತೆಯಲ್ಲಿ ಬಾರಲ್ಲಿ ಕೂತು ವಿಸ್ಕಿ ಹೀರುತ್ತಾರೆ. ಬಾಗಿಲಲ್ಲಿ ನಿಂತವರು ಕುರ್ಚಿ ಹತ್ತುತ್ತಾರೆ. ಕುರ್ಚಿ ಮೇಲಿದ್ದವರನ್ನು ಎತ್ತಿಕೊಂಡು ಹೋಗಿ ಬೀದಿಯಲ್ಲಿ ಹಾಕುತ್ತಾರೆ.

ಬಿಜೆಪಿ ಶನಿವಾರ(ಅ.5) ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿದೆ. ಹೀಗೆ ಹೇಳದೇ ಅದಕ್ಕೆ ಬೇರೆ ದಾರಿಗಳು ತಾನೇ ಏನಿದ್ದವು? ಜೆಡಿಎಸ್ ಜೊತೆ ಸಖ್ಯ ಮಾಡಿ, ತಕ್ಕ ಪಾಠ ಕಲಿತೆವು ಎಂದು ಸಿನ್ಹಾ ಹೇಳುತ್ತಾರೆ. ವಿಶ್ವಾಸ ದ್ರೋಹ, ನಂಬಿಕೆ ದ್ರೋಹ ಎಂಬ ಪದಗಳು ಬಳಕೆಯಾಗಿವೆ. ಇವೆಲ್ಲವೂ ನಿರೀಕ್ಷಿತ ಎಂದು ಕಡಲೆ ಕಾಯಿ ಮಾರುವ ಹುಡುಗ ಹೇಳ್ತಾನೆ. ಆದರೆ ಈ ಅಂಶ ಬಿಜೆಪಿ ನಾಯಕರಿಗೆ ಅರ್ಥವಾಗಲು 20ತಿಂಗಳು ಬೇಕಾಯಿತು. ದೇವೇಗೌಡರ ರಾಜಕೀಯ ಬದುಕನ್ನು ಒಂದು ಸಲ ನೋಡಿದರೆ, ಸಾಕು ಅವರು ಯಾರ್ಯಾರಿಗೆ ಏನೇನು ಮಾಡಿದ್ದಾರೆ ಎಂಬುದು ಸುಸ್ಪಷ್ಟ.

ಪಕ್ಷಕ್ಕಾಗಿ ವಚನ ದ್ರೋಹವಾದರೂ ಚಿಂತೆಯಿಲ್ಲ ಅಂದಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ. ಈವತ್ತು ಬಿಜೆಪಿಯವರು ಮಾತ್ರವಲ್ಲ, ಸಾಮಾನ್ಯ ಜನರೂ ಸಹಾ ಮುಖ್ಯಮಂತ್ರಿ ಮಾಡಿದ್ದು ತಪ್ಪು ಎಂದು ಕೂಗಿ ಹೇಳುತ್ತಿದ್ದಾರೆ. ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಸಂಸ್ಕೃತಿ ಈ ನೆಲದ್ದು. ಇಂಥ ನೆಲದಲ್ಲಿ ಒಬ್ಬ ವ್ಯಕ್ತಿ, ಅದೂ ರಾಜ್ಯದ ಮುಖ್ಯಮಂತ್ರಿ ಸುಳ್ಳುಗಳ ಪೋಣಿಸಿದರೆ ಏನರ್ಥ? ಅಂಥ ಸುಳ್ಳುಗಾರ ಮುಖ್ಯಮಂತ್ರಿಯಿಂದ ಆಳಿಸಿಕೊಂಡದ್ದಕ್ಕೆ ಜನ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದರೆ, ದೊಡ್ಡ ತಪ್ಪಾಗುವುದಿಲ್ಲ.

ಬೆಂಗಳೂರಿನಲ್ಲಿ ರಾಮಸೇತು ವಿವಾದಕ್ಕೆ ಸಂಬಂಧಿಸಿದಂತೆ ಕರುಣಾನಿಧಿ ಪುತ್ರಿ ಮನೆ ಮೇಲೆ ದಾಳಿ ನಡೆದದ್ದು, ಬಸ್ ಸುಟ್ಟದ್ದು ನಮಗೆ ಬೇಸರವಾಗಿದೆ. ಬಳ್ಳಾರಿ ಗಣಿ ವಿವಾದದಿಂದ ಅಸಮಾಧಾನವಾಗಿದೆ. ಬಿಜೆಪಿ ಕೋಮುವಾದಿ.. ಹೀಗಾಗಿ ಅಧಿಕಾರ ಹಸ್ತಾಂತರ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಕಾರಣಗಳ ಪಟ್ಟಿ ಮಾಡುತ್ತಿದ್ದಾರೆ. ಇವು ಕಾರಣಗಳಾಗದೇ, ಕೇವಲ ಪಿಳ್ಳೆ ನೆವಗಳು ಅಷ್ಟೇ ಎಂಬುದು ಯಾರಿಗೆ ಗೊತ್ತಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಬಿಜೆಪಿ ಗ್ರೀನ್ ಸಿಗ್ನಲ್ ತೋರಿಸಿದ್ದರೇ, ಈ ಮಾತುಗಳ ಹೊರಬರುತ್ತಿದ್ದವೇ? ಕಳೆದ 20ತಿಂಗಳಿಂದ ಬಿಜೆಪಿ ಮೈತ್ರಿ ರುಚಿಯಾಗಿತ್ತು. ಕುರ್ಚಿ ಬಿಡಬೇಕಾದ ಈ ಸಂದರ್ಭದಲ್ಲಿ ಮೈತ್ರಿ ಕಹಿಯಾಗಿದೆ.

ಅಧಿಕಾರ ಹಸ್ತಾಂತರದ ಬಗ್ಗೆ ಅಪನಂಬಿಕೆ ಬೇಡ ಎಂದು ಸಾವಿರ ಸಾವಿರ ಸಲ ಹೇಳುತ್ತಿದ್ದ ಕುಮಾರಸ್ವಾಮಿ, ಅ.2ರಂದು ಚಂದನವಾಹಿನಿಯಲ್ಲಿ ತಮ್ಮ ಮಾತನ್ನು ಪುನರುಚ್ಚರಿಸಿದ್ದರು. ಪ್ರಜೆಗಳೊಂದಿಗಿನ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಅಧಿಕಾರ ಕೊಡಲು ನಾನು ತಯಾರು ಎಂದಿದ್ದರು. ಗಾಂಧಿ ವಿಚಾರಗಳನ್ನು ಮಾತಿನ ಮಧ್ಯೆ ಪ್ರಸ್ತಾಪಿಸಿ, ಆದರ್ಶವಾದಿಯ ಸೋಗು ಹಾಕಿದ್ದರು. ಆದರೆ ಇಂದು? ನಡೆ ಮತ್ತು ನುಡಿ ನಡುವಿನ ಅಂತರ ಬಟಾ ಬಯಲು. ಬೆತ್ತಲಾಗುವ ಧೈರ್ಯ ಮತ್ತು ತಾಕತ್ತು ಸುಮ್ಮನೇ ದಕ್ಕುವುದಿಲ್ಲ.

ಈ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿ ವಿಚಾರಗಳಿಗಿಂತಲೂ ಅಧಿಕಾರ ಹಸ್ತಾಂತರವೇ ಪ್ರಮುಖವಾಗಿ ಚರ್ಚೆಯಾಯಿತು. ಬಿಜೆಪಿಯಂತೂ ಕೂಸು ಹುಟ್ಟುವ ಮುನ್ನವೇ ಕುಲಾವಿ ಸಿದ್ಧಪಡಿಸಿತ್ತು. ಬಿಜೆಪಿ ಮರಳಿನ ಮನೆಯನ್ನು ಜೆಡಿಎಸ್ ಅಲೆ ಕೆಡವಿ ಹಾಕಿದೆ. ಇದರಿಂದ ಯಾರಿಗೆ ಲಾಭ ಮತ್ತು ನಷ್ಟ ಎನ್ನುವ ಲೆಕ್ಕಾಚಾರ ಎಲ್ಲೆಡೆ. ಅನಿವಾರ್ಯ ಕಾರಣಗಳಿಂದ ಚುನಾವಣೆಗೆ ರೆಡಿ ಎಂದು ಎಲ್ಲಾ ಪಕ್ಷಗಳು ಹೇಳುತ್ತಿವೆ. ಆದರೆ ಯಾರಿಗೂ ಸದ್ಯಕ್ಕೆ ಚುನಾವಣೆ ಎದುರಿಸುವ ಧೈರ್ಯವಿಲ್ಲ.

ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಚುನಾವಣೆ ಎಂದರೆ ಬೆಚ್ಚುತ್ತಿದೆ. ಈಗಾಗಿ ಇನ್ನೊಂದು ಸಲ ಮರು ಮೈತ್ರಿಗೆ ಒಲವು ತೋರುತ್ತಿದೆ. ಆದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ವಿಶ್ವನಾಥ್, ಜನಾರ್ದನ ಪೂಜಾರಿ ಸೇರಿದಂತೆ ದೇವೇಗೌಡರರನ್ನು ದ್ವೇಷಿಸುವ ದೊಡ್ಡ ಗುಂಪೇ ಕಾಂಗ್ರೆಸ್ ನಲ್ಲಿದೆ. ಹೇಗೋ ಅಧಿಕಾರ ಹಿಡಿಯೋಣ, ಇಪ್ಪತ್ತು ತಿಂಗಳು ತಳ್ಳೋಣ ಎಂಬ ಮನಸ್ಥಿತಿ ಕೆಲವರದು. ಇವರ ಅಭಿಪ್ರಾಯಗಳು ಏನೇ ಇರಲಿ, ಸೋನಿಯಾ ಮೇಡಂ ಕೈತೋರಿದದ್ದ ಮಾತ್ರ ಕಾಂಗ್ರೆಸ್ ನಡೆಯುತ್ತದೆ. ಇದು ಬೆಳಕಿನಲ್ಲಿರುವ ರಹಸ್ಯ.

ಸಿನಿಮಾ ನಟರೂ ಸಹಾ ನಾಚಬೇಕು. ಈ ದೇವೇಗೌಡ, ಕುಮಾರಸ್ವಾಮಿ ಸಿನಿಮಾ ರಂಗದಲ್ಲಿದ್ದಿದ್ದರೆ ಇಷ್ಟು ಹೊತ್ತಿಗೆ ಕರ್ನಾಟಕಕ್ಕೆ ಆಸ್ಕರ್ ಎಂದೋ ಸಿಗುತ್ತಿತ್ತು ಎನ್ನುವ ಗೇಲಿ ಬಿಜೆಪಿ ಪಾಳಯದಲ್ಲಿದೆ. ಬಿಜೆಪಿ ನಾಯಕರು ಅಮ್ಮ ತಾಯಿ ಎನ್ನುತ್ತಾ ಅಧಿಕಾರಕ್ಕಾಗಿ ಜೆಡಿಎಸ್ ಬಾಗಿಲು ತಟ್ಟಿದ್ದನ್ನು ಕಂಡಿರುವ ಕಾಂಗ್ರೆಸ್ ಮುಸಿಮುಸಿ ನಗುತ್ತಿದೆ.ದಕ್ಷಿಣ ಭಾರತದಲ್ಲಿ ಖಾತೆ ತೆರೆಯುವ ಹಂಬಲದಿಂದ 20ತಿಂಗಳ ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ಅದರ ಕನಸು ನನಸಾಗಲಿಲ್ಲ. ಹತ್ತಾರು ದಶಕಗಳಿಂದ ವಿರೋಧ ಪಕ್ಷದಲ್ಲಿ ಕೂತು, ಎಂದಾದರೂ ಒಂದು ದಿನ ಮುಖ್ಯಮಂತ್ರಿ ಕುರ್ಚಿ ಏರುತ್ತೇನೆ ಎಂಬ ವಿಶ್ವಾಸ ಯಡಿಯೂರಪ್ಪ ಅವರಿಗಿತ್ತು. ಆ ಕನಸು ಭಗ್ನವಾಗಿದೆ.

2004ರಲ್ಲಿ ನಡೆದ ಚುನಾವಣೆಯಲ್ಲಿ 225 ಸ್ಥಾನಗಳಲ್ಲಿ 79 ಸ್ಥಾನ ಗಳಿಸಿ, ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೆಡಿಎಸ್ 68, ಕಾಂಗ್ರೆಸ್ 79 ಮತ್ತು ಇತರೆ ಪಕ್ಷಗಳು 23 ಸ್ಥಾನ ಪಡೆದಿದ್ದವು. ಅಧಿಕಾರದಿಂದ ಕಾಂಗ್ರೆಸನ್ನು ದೂರವಿಡಲು ಮತದಾರ ಪ್ರಭು ನೀಡಿದ ಜನಾದೇಶವನ್ನು ಕಸದ ಬುಟ್ಟಿಗೆ ಎಸೆಯಲಾಯಿತು. ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಈ ಹೊತ್ತಿನಲ್ಲಿ ರೆಸಾರ್ಟ್ ರಾಜಕಾರಣ ನಡೆಸಿದ್ದು ಕುಮಾರಸ್ವಾಮಿ. ಬಿಜೆಪಿ ಜೊತೆ ವ್ಯವಹಾರ ಕುದುರಿಸಿ, ಮುಖ್ಯಮಂತ್ರಿ ಕುರ್ಚಿ ಹತ್ತಿಯೇ ಬಿಟ್ಟರು.

ತಾವು ಮುಖ್ಯಮಂತ್ರಿ ಕುರ್ಚಿ ಹತ್ತಿದ ವಿಧಾನ ಸರಿಯಿಲ್ಲ ಎಂಬುದು ಜೆಡಿಎಸ್ ಗೆ ಗೊತ್ತಿತ್ತು. ಅಪರಾಧಿ ಪ್ರಜ್ಞೆ ಬಿಜೆಪಿಯಲ್ಲೂ ಇತ್ತು. ಜನರ ಅಸಹ್ಯವನ್ನು ಅಳಿಸಿಹಾಕಲು ಒಳ್ಳೆ ಸರ್ಕಾರವನ್ನು ನೀಡುವ ಅನಿವಾರ್ಯತೆ ದೋಸ್ತಿಗಳ ಮುಂದಿತ್ತು. ಈ ನಿಟ್ಟಿನಲ್ಲಿ ಹತ್ತಾರು ಜನಪರ ಕಾರ್ಯಕ್ರಮಗಳು ಜಾರಿಗೆ ಬಂದವು. ಕಳೆದ 50ವರ್ಷಗಳಲ್ಲಿ ಆಗದ ಕೆಲಸಗಳು ಬರೀ 20ತಿಂಗಳಲ್ಲಿ ಆದವು ಎಂಬುದನ್ನು ವಿರೋಧಿಗಳೂ ಸಹಾ ಒಪ್ಪುತ್ತಾರೆ. ಕುಮಾರಸ್ವಾಮಿ ಜನಸಾಮಾನ್ಯರ ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡರು. ಎಲ್ಲವೂ ಓಕೆ. ಆದರೆ ಅವರು ಸಂಪಾದಿಸಿದ ಪುಣ್ಯವೆಲ್ಲ, ಈಗ ನೀರು ಪಾಲು.

ಮುಖ್ಯಮಂತ್ರಿ ಸ್ಥಾನ ಪಡೆಯಲು ಈವರೆಗೆ, ಮೌನವೇ ಆಭರಣ ಎಂಬಂತೆ ವರ್ತಿಸಿದ ಯಡಿಯೂರಪ್ಪ ಈಗ ನಿಧಾನವಾಗಿ ಬಾಯಿ ಬಿಡುತ್ತಿದ್ದಾರೆ. ಕೈಗೆ ಬಂದದ್ದು, ಬಾಯಿಗೆ ಬರಲಿಲ್ಲವಲ್ಲ ಎಂಬ ನೋವು ಅವರ ಮನದಾಳದಲ್ಲಿ. ನಂಬಿದ ದೇವರು ನಡುನೀರಲ್ಲಿ ಕೈಬಿಟ್ಟನಲ್ಲ ಎಂಬುದು ಅವರ ಬಾಧೆ.

2004ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳಿ ನಿಂತಾಗ, ಯಡಿಯೂರಪ್ಪ ಮನೆಯ ಸೂಟ್ ಕೇಸ್ ನಲ್ಲಿದ್ದ ಇಸ್ತ್ರಿ ಮಾಡಿದ್ದ ಸಫಾರಿಯನ್ನು ಹೊರ ತೆಗೆದಿದ್ದರು. ಹೇಗಾದರೂ ಮಾಡಿ ಮುಖ್ಯಮಂತ್ರಿಯಾದರೆ ಸಾಕು ಎಂದು ಕಂಡಕಂಡವರ ಕಾಲು ಹಿಡಿದರು. ಆದರೆ ಎಲ್ಲರೂ ಕೈಕೊಟ್ಟರು. ದೇವೇಗೌಡ ಮುನಿಸಿಕೊಂಡರೂ, ಗೌಡಾಜೀ ಎಂದು ಬಾಗಿಲಲ್ಲಿ ನಿಲ್ಲುತ್ತಿದ್ದರು. ಆದರೆ ಯೂವುದು ಫಲ ನೀಡಲಿಲ್ಲ. ಯಡಿಯೂರಪ್ಪ ಅವರನ್ನು ನೋಡಿದರೆ ಒಂದು ಕಡೆ ಅನುಕಂಪ, ಇನ್ನೊಂದು ಕಡೆ ಅಸಹ್ಯ.

ನಾಟಕ ಅರ್ಧಕ್ಕೆ ಮುಗಿದಿದೆ. ಜಮ್ಮ ಮತ್ತು ಕಾಶ್ಮೀರ ಮಾದರಿಯಲ್ಲಿ ರಚನೆಯಾದ ಸರ್ಕಾರ, ಅರ್ಧದಲ್ಲೇ ಕುಸಿದಿದೆ. ಕಳ್ಳನನ್ನು ನಂಬಿದರೂ, ಸುಳ್ಳನನ್ನು ನಂಬಬಾರದು ಎಂಬ ಭಾವ ಬಿಜೆಪಿಯಲ್ಲಿದೆ. ಈ ಸಮಯದಲ್ಲಿ ಕಾಂಗ್ರೆಸ್, ತನ್ನ ಮನೆಯ ಬಾಗಿಲು ತೆರೆದುಕೊಂಡು ಕುಳಿತಿದೆ.. ಜೆಡಿಎಸ್ ಒಳಗೆ ಕಾಲಿಟ್ಟರೇ ಸಾಕು ಎಂಬುದು ಅದರ ಮನಸ್ಥಿತಿ. ರಾಜ್ಯ ರಾಜಕಾರಣವನ್ನು ರಾಜ್ಯಪಾಲರು ನೋಡುತ್ತಿದ್ದಾರೆ. ಅವರು ಏನ್ ಮಾಡ್ತಾರೋ ನೋಡೋಣ.ನೋಡೋದಷ್ಟೇ ಸದ್ಯಕ್ಕೆ ಮತದಾರ ಪ್ರಭುವಿನ ಅನಿವಾರ್ಯತೆ.

Saturday, September 8, 2007

ಅವಳ ಮೇಲೆ ಹಸಿದ ಹೆಬ್ಬುಲಿಯಂತೆ ಅವನೇಕೆ ಹಾರುತ್ತಾನೆ?


'ನನಗೆ ಒಬ್ಬ ಮಗ. ಅವನನ್ನು ಮತ್ತು ನನ್ನನ್ನು ನೋಡಿಕೊಳ್ಳುವುದಕ್ಕೆ, ಜೊತೆಗೆ ಅಡುಗೆ ಮಾಡುವುದಕ್ಕೆ ಒಬ್ಬ ಹೆಂಗಸು ಬೇಕು. ಅಡುಗೆಯವಳನ್ನು ಇಟ್ಟುಕೊಂಡರೆ ಅವಳು ಮನೆಯವಳಾಗುವುದಿಲ್ಲ. ಅವಳಿಗೆ ಸಂಬಳಗಿಂಬಳ ಕೊಡಬೇಕಾಗುತ್ತದೆ. ಅದಕ್ಕೆ ನಾನು ಮದುವೆಯಾಗಲು ನಿರ್ಧರಿಸಿದೆ. ನಿಮ್ಮ ಮಗಳನ್ನು ಕೊಟ್ಟರೇ, ನಾನು ಮದುವೆಯಾಗುತ್ತೇನೆ' ಇದು ಈಟೀವಿಯಲ್ಲಿ ರಾತ್ರಿ 10ಕ್ಕೆ'ಮಂಥನ'ಸೀರಿಯಲ್ ನಲ್ಲಿ ಬರುವ ಒಂದು ಸಂಭಾಷಣೆ ತುಣುಕು.

ಅಡುಗೆ ಕೆಲಸಕ್ಕಾಗಿ ಮತ್ತು ಅಗತ್ಯಗಳ ಪೂರೈಕೆಗಾಗಿ ಮದುವೆಯಾಗುತ್ತಿರುವುದಾಗಿ ಆ ಪಾತ್ರಧಾರಿ ಸ್ಪಷ್ಟವಾಗಿ ಹೇಳುತ್ತಾನೆ. ಇತರರು ಹೇಳುವುದಿಲ್ಲ. ಅಷ್ಟೇ ವ್ಯತ್ಯಾಸ. ಆದರೆ ಪುರುಷ ಪ್ರಧಾನ ಸಮಾಜ ಬಾಯಲ್ಲಿ ಹೇಳುವುದೇ ಬೇರೆ, ಕೃತಿಯಲ್ಲಿ ಮಾಡುವುದೇ ಬೇರೆ!

ಹೆಣ್ಣೆಂದರೆ ಹೂವು, ಹೆಣ್ಣೆಂದರೆ ಚೆಲುವು, ಹೆಣ್ಣೆಂದರೆ ಅಮೃತ, ಹೆಣ್ಣೆಂದರೆ ಸ್ವರ್ಗ.. ಹೀಗೆ ಹೆಣ್ಣನ್ನು ನಾನಾ ರೀತಿ ಹೊಗಳಿ ಅಟ್ಟಕ್ಕೇರಿಸುವುದನ್ನು ಪುರುಷರು ನಿಲ್ಲಿಸಿಲ್ಲ. ಮತ್ತೊಂದು ಕಡೆ ಹೆಣ್ಣನ್ನು ಬಹು ಮಂದಿ ಆಸೆ ಮತ್ತು ಅಗತ್ಯಗಳ ಪೂರೈಸುವ ಭೋಗ ವಸ್ತುವಿನಂತೆಯೇ ನೋಡುತ್ತಾ ಬಂದಿದ್ದಾರೆ.

ಹೆಣ್ಣಿನ ಸ್ವಾತಂತ್ರ್ಯದ ಪ್ರಶ್ನೆ ಒಂದು ಕಡೆ ಇರಲಿ, ಅವಳು ಬಾಳುವುದಕ್ಕೆ ಅವಕಾಶ ನೀಡುತ್ತಿಲ್ಲ. ಅನ್ನಪೂರ್ಣೆಯೆಂದು ಹಾಡಿಹೊಗಳುವ ಭಾರತದಲ್ಲೂ ಹೆಣ್ಣಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ವಿಶ್ವದೆಲ್ಲೆಡೆ ಹೆಣ್ಣಿನ ಮೇಲೆ ನಿತ್ಯ ಅತ್ಯಾಚಾರ! ಅಮೆರಿಕಾದಲ್ಲಂತೂ ಲೈಂಗಿಕ ಶೋಷಣೆ ಪ್ರಕರಣಗಳಿಗೆ ಲೆಕ್ಕವೇ ಇಲ್ಲ.

ಅಮೆರಿಕಾದಲ್ಲಿ ಪ್ರತಿ ಆರು ನಿಮಿಷಕ್ಕೆ ಒಂದರಂತೆ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ನೊಂದು ಬಳಲಿದ ಮಹಿಳೆಯ ಆಕ್ರಂಧನ, ನಾಲ್ಕು ಗೋಡೆಗಳ ದಾಟುತ್ತಿಲ್ಲ. ಲಭ್ಯವಿರುವ ಅಂಕಿ ಅಂಶಗಳು ಹೇಳುವಂತೆ ಶೇ.85ರಷ್ಟು ದಾಳಿಗಳು ಮತ್ತು ಶೇ.84ರಷ್ಟು ಅತ್ಯಾಚಾರಗಳು ವರದಿಯಾಗುವುದಿಲ್ಲ. ಊಹಿಸಿ ಕಾಮುಕ ಪುರುಷರ ದೌರ್ಜನ್ಯದ ಪರಮಾವಧಿ ಎಷ್ಟಿದೆ ಎಂಬುದನ್ನು?

ಪುರಾಣಗಳಲ್ಲಿ ಒಬ್ಬೊಬ್ಬ ದುಶ್ಯಾಸನ ಮತ್ತು ಕೀಚಕರಿದ್ದರು. ಆದರೆ ಇಂದು? ಈ ಆಧುನಿಕ ದುಶ್ಯಾಸನರಿಂದ ರಕ್ಷಿಸಲು, ಮಾನ ಕಾಯಲು ಕೃಷ್ಣ ಪರಮಾತ್ಮ ಎಷ್ಟು ಉದ್ದದ ಸೀರೆ ನೀಡಿದರೂ ಫಲಕಾರಿಯಾಗುವುದಿಲ್ಲ.

ನಾವು ಇಂಟರ್ ನೆಟ್ ಬಿಚ್ಚಿಕೊಂಡು ಕೂತರೇ, ಅತ್ಯಾಚಾರಕ್ಕೆ ಒಳಗಾದ ಸಾವಿರಾರು ನತದೃಷ್ಟರ ಕತೆಗಳು ಕಣ್ಮುಂದೆ ಬರುತ್ತವೆ. ಅದಿರಲಿ ಪುರುಷ ಯಾಕೆ ಅತ್ಯಾಚಾರ ಮಾಡುತ್ತಾನೆ ಎಂಬ ಬಗ್ಗೆ ಎಲ್ಲೂ ಸ್ಪಷ್ಟವಾದ ಉತ್ತರ ಸಿಗುವುದಿಲ್ಲ.

ಒಂದೇ ಸಮನೇ ಹುಡುಗಿಯ ಹಿಂದೆ ಸುತ್ತಿದ ಪ್ರೇಮಿ(ಇವನೆಂಥಾ ಪ್ರೇಮಿ?), ಹುಡುಗಿ ಅಡ್ಡಡ್ಡ ತಲೆಯಾಡಿಸಿ ಒಲ್ಲೆ ಎಂದರೆ, ರಾಕ್ಷಸನಾಗುತ್ತಾನೆ. ಕೊನೆಗೆ ಯಾವುದೋ ಆಸಿಡ್ ತಂದು ತಲೆ ಮೇಲೆ ಸುರಿಯುತ್ತಾನೆ. ಯಾಕೆ ಹೀಗೆ? ತನ್ನ ವಿಫಲ ಪ್ರೇಮದ ನೋವು ನುಂಗಲು ಹೀಗೆ ಮಾಡುತ್ತಾನೆಯೇ? ಸೇಡಿನಿಂದ ಹೀಗೆ ಮಾಡುತ್ತಾನೆಯೇ? ಅಥವಾ ತನ್ನ ಶಕ್ತಿ ಪ್ರದರ್ಶನಕ್ಕಾಗಿ ಈ ಕೆಲಸ ಮಾಡುತ್ತಾನೆಯೇ?

ಮನಶಾಸ್ತ್ರಜ್ಞರ ಪ್ರಕಾರ; ಅತ್ಯಾಚಾರ ಎನ್ನುವುದು ಒಬ್ಬ ದುರ್ಬಲ ವ್ಯಕ್ತಿ, ತನ್ನ ಶಕ್ತಿ ಸಾಮಾರ್ಥ್ಯ ಪ್ರದರ್ಶಿಸಲು ಬಳಸಿಕೊಳ್ಳುವ ಸಂದರ್ಭ. ಲೈಂಗಿಕ ತೃಷೆ ತೀರಿಸಿಕೊಳ್ಳುವ ಒಂದು ಯತ್ನ.

ಬದುಕಿನಲ್ಲಿ ಯಶಸ್ಸು ಕಾಣದ ವ್ಯಕ್ತಿಯೊಬ್ಬ ತನ್ನ ಕೊರತೆಗಳನ್ನು ಅತ್ಯಾಚಾರದ ಮುಖಾಂತರ ತುಂಬಿಕೊಳ್ಳಲು ಯತ್ನಿಸುತ್ತಾನೆ. ಈ ಯತ್ನದಲ್ಲಿ ಸೋಲದಿರಲು ಅಸಹಾಯಕರು, ಮುಗ್ದರು, ಮಕ್ಕಳು ಮತ್ತು ಅಮಾಯಕ ಹೆಣ್ಣುಮಕ್ಕಳನ್ನೇ ಹುಡುಕುತ್ತಾನೆ.
ಇಷ್ಟು ಮಾತ್ರವಲ್ಲ ತೀವ್ರ ಒತ್ತಡಕ್ಕೆ ಒಳಗಾದ ವ್ಯಕ್ತಿ, ಹೆಣ್ಣಿಗೆ ಪಾಠ ಕಲಿಸಲು ಅತ್ಯಾಚಾರವನ್ನು ಮಾಡುತ್ತಾನೆ. ಶಕ್ತಿ ಪ್ರದರ್ಶನದ ಮುಖಾಂತರ, ಹಿಂಸೆ ಮುಖಾಂತರ, ಬೆದರಿಕೆ ಮುಖಾಂತರ ಅತ್ಯಾಚಾರ ಮಾಡಿ, ಹುಸಿ ಗೆಲುವನ್ನು ತನ್ನದಾಗಿಸಿಕೊಳ್ಳುತ್ತಾನೆ. ಮಾದಕ ವಸ್ತುಗಳ ಸೇವನೆ, ಹಾರ್ಮೋನ್ ಗಳ ಏರಿಳಿತಗಳೂ ಸಹಾ ಅತ್ಯಾಚಾರಕ್ಕೆ ದಾರಿ ಮಾಡಬಹುದು ಎನ್ನುತ್ತಾಓರೆ ವಿಜ್ಞಾನಿಗಳು.

ಯಾರು ಏನೇ ಹೇಳಲಿ.. ಅತ್ಯಾಚಾರ ಮಾಡುವುದು ಎಷ್ಟು ತಪ್ಪೋ, ಅತ್ಯಾಚಾರಕ್ಕೆ ಒಳಗಾಗುವುದೂ ಅಷ್ಟೇ ತಪ್ಪು! ನನ್ನ ವಾದ ವಿಚಿತ್ರವಾಗಿ ತೋರಬಹುದು. ಆದರೆ ಒಂದು ಕ್ಷಣ ಯೋಚಿಸಿ. ಇಂತಹ ಸಂದರ್ಭಗಳು ಬಾರದಂತೆ ಅನೇಕ ಸಲ ನಾವು ಎಚ್ಚರವಹಿಸಬಹುದು.ಇಂತಹ ಸಂದರ್ಭಗಳು ಎದುರಾದರೆ, ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಪೂರ್ವಸಿದ್ಧತೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಬಲ್ಲವರು ಹೇಳಿದರೆ ಒಳ್ಳೆಯದು.

Tuesday, August 21, 2007

ಗಂಡಂದಿರ ಗೋಳಿನ ಕತೆಗಳಿಗೆ ಇಲ್ಲವೇ ಕೊನೆ?


ಪತ್ನಿಯಿಂದಾದ ಶೋಷಣೆಯ ವಿರುದ್ಧ ದೂರು ನೀಡುವ ಗಂಡಂದಿರಿಗೆ ನ್ಯಾಯಾ ಸಿಗುತ್ತಿಲ್ಲ. ಕೆಲವೆಡೆ ವಿಚಾರಣೆ ನಾಟಕವೂ ಇಲ್ಲ! ದೆಹಲಿ, ಮುಂಬೈ, ಕೋಲ್ಕತಾ ಮತ್ತಿತರ ಪಟ್ಟಣದಲ್ಲಿ ಶೋಷಿತ ಪತಿಯಂದಿರ ಸಂಖ್ಯೆ ಹೆಚ್ಚುತ್ತಿದೆ.


ಮೋಹನ್ ಮತ್ತು ಮಂಗಳಾ ಹೊಸ ದಂಪತಿಗಳು. ಮದುವೆಯಾಗಿ ಮೊನ್ನೆಗಷ್ಟೇ 9ತಿಂಗಳು ಪೂರ್ಣಗೊಂಡಿವೆ. ಪ್ರತಿರಾತ್ರಿಯೂ ಬೇರೆ ಮನೆ ಮಾಡಿ, ಇಲ್ಲಿ ನನಗೆ ಉಸಿರುಗಟ್ಟುತ್ತಿದೆ ಎಂದು ಮಂಗಳಾ ಹೇಳುತ್ತಲೇ ಇದ್ದಾಳೆ. ಮೋಹನ್ ಮನೆಗೆ ಹಿರಿಯ ಮಗ. ತಂಗಿ ಮದುವೆ, ತಮ್ಮನ ವಿದ್ಯಾಭ್ಯಾಸ, ಅಪ್ಪ ಅಮ್ಮನ ಆರೈಕೆ ಮತ್ತಿತರ ಜವಾಬ್ದಾರಿಗಳು ಅವನ ಮೇಲಿದೆ. ಈಗ ಮನೆಯಿಂದ ಕಾಲ್ ಕಿತ್ತರೆ ಚೆನ್ನಾಗಿರುವುದಿಲ್ಲ ಎಂಬ ತಿಳಿವಳಿಕೆ ಅವನಿಗಿದೆ. ಹೆಂಡತಿಗಾಗಿ ಹೆತ್ತವರ ಬಿಡಲು ಆತನಿಗೆ ಮನಸ್ಸಿಲ್ಲ.


ಮಂಗಳಾ ಹಟ ಮಾತ್ರ ದಿನೇದಿನೇ ಹೆಚ್ಚುತ್ತಿದೆ. ಹಬ್ಬಕ್ಕೆಂದು ತವರಿಗೆ ಹೋದವಳು, ಮತ್ತೆ ಗಂಡನ ಮನೆಗೆ ಬರಲೇ ಇಲ್ಲ. ಬಾ ಎಂದು ಗಂಡ ಕರೆದರೆ, ಬೇರೆ ಮನೆ ಮಾಡು ಎನ್ನುವ ಶರತ್ತು ಅವಳಿಂದ. ಕೊನೆಗೆ ಬೇಸತ್ತ ಮೋಹನ, ಬೇರೆ ಮನೆ ಮಾಡುವುದು ಅಸಾಧ್ಯ ಎಂದು ಘೋಷಿಸುತ್ತಾನೆ. ಆಗ ಮಂಗಳಾ ತನ್ನ ನಿಜ ಬಣ್ಣ ಪ್ರದರ್ಶಿಸುತ್ತಾಳೆ.ನಿಮ್ಮ ಜೊತೆಗೆ ನಿಮ್ಮ ಅಪ್ಪಅಮ್ಮನ ವಿರುದ್ಧವೂ ನಾನು ಪೊಲೀಸರಿಗೆ ದೂರು ನೀಡುತ್ತೇನೆ. ವರದಕ್ಷಿಣೆಗಾಗಿ ನನ್ನನ್ನು ಹಿಂಸಿಸುತ್ತಿರುವುದಾಗಿ ಹೇಳುತ್ತೇನೆ ಎಂದು ಮಂಗಳಾ ಬ್ಲಾಕ್ ಮೇಲ್ ಶುರುಮಾಡುತ್ತಾಳೆ. ಮೋಹನ್ ಜಾಗದಲ್ಲಿ ನೀವಿದ್ದರೆ ಏನು ಮಾಡುವಿರಿ?


***


ಸೆಪ್ಟೆಂಬರ್ 11ರ ಘಟನೆಯಿಂದ ಪ್ರವೀಣ್ ಕಂಗೆಟ್ಟಿದ್ದಾನೆ. ಅಮೆರಿಕವೂ ಸಾಕು, ಅಲ್ಲಿನ ಕೆಲಸವೂ ಸಾಕು ಎಂದು ಅಡ್ಡಡ್ಡ ಕೈಮುಗಿದು, ತವರಿಗೆ ಮರಳಿದ್ದಾನೆ. ಭಾರತದಲ್ಲಿಯೇ ಏನಾದರೂ ಮಾಡುವ ಹಂಬಲ ಅವನದು. ಆದರೆ ಆತನ ಪತ್ನಿ ನಾಗಮಣಿಗೆ ಇದೆಲ್ಲವೂ ಇಷ್ಟವಿಲ್ಲ.


ಗಂಡ ಮತ್ತೆ ಅಮೆರಿಕಾಗೆ ಹೋಗಬೇಕು. ಡಾಲರ್ ಗಟ್ಟಲೇ ದುಡಿಯಬೇಕು. ಅವನು ಒಲ್ಲೆ ಎಂದ ತಕ್ಷಣ,ನಾಗಮಣಿ ಬುಸ್ ಬುಸ್ ಎನ್ನುತ್ತಾಳೆ. ವರದಕ್ಷಿಣೆ ಕೇಸಿನ ಪ್ರಸ್ತಾಪವಾಗುತ್ತದೆ.ಪ್ರವೀಣ್ ತನ್ನ ಹೆಂಡತಿಯ ಬೆದರಿಕೆಗೆ ಸೊಪ್ಪು ಹಾಕುವುದಿಲ್ಲ. ನಿಜಕ್ಕೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ನಾಗಮಣಿ ಪ್ರವೀಣ್ ವಿರುದ್ಧ ಸುಳ್ಳು ದೂರು ಸಲ್ಲಿಸುತ್ತಾಳೆ. ಕೋರ್ಟಲ್ಲಿ ಕೇಸು ನಡೆಯುತ್ತದೆ. ತನ್ನ ಚಾರಿತ್ರ್ಯವನ್ನು ಸಾಬೀತು ಪಡಿಸಿಕೊಳ್ಳಲು ಪ್ರವೀಣ ಪಡುವ ಕಷ್ಟ, ಆದ ಅವಮಾನಕ್ಕೆ ಯಾರು ಪರಿಹಾರ ನೀಡುತ್ತಾರೆ?


***


ಮೇಲಿನ ಎರಡು ಪ್ರಕರಣಗಳ ಓದಿದಾಗಲೇ, ನಿಮಗೆ ವಿಚಾರ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ. ಹೌದು ವರದಕ್ಷಿಣೆ ಕಿರುಕುಳ ತಡೆ ಕಾಯ್ದೆಯ ದುರುಪಯೋಗ ಇಂದು ಹೆಚ್ಚುತ್ತಿದೆ. ಈ ಕಾಯ್ದೆ ಎಷ್ಟು ನ್ಯಾಯಪರವಾಗಿದೆ ? ಎಂಬ ಪ್ರಶ್ನೆ ಈದಿನಗಳಲ್ಲಿ ಪ್ರಸ್ತುತ.


ಈ ಕಾಯ್ದೆಯ ಅಡ್ಡಪರಿಣಾಮಗಳ ಬಗ್ಗೆ ಕಾನೂನು ಪಂಡಿತರು ಯೋಚಿಸಿಲ್ಲ. ನೊಂದು ಬೆಂದ ಹೆಂಗಳೆಯರ ರಕ್ಷಣೆಗಾಗಿ ರೂಪುಗೊಂಡ ವರದಕ್ಷಿಣೆ ಕಾಯ್ದೆ, ಇಂದು ಅನೇಕ ಅಮಾಯಕ ಪುರುಷರ ಪಾಲಿಗೆ ಸಿಂಹಸ್ವಪ್ನವಾಗಿದೆ. ಈ ಕಾಯ್ದೆಯನ್ನಿಟ್ಟುಕೊಂಡು ಕೆಲ ದುಷ್ಟ ಮಹಿಳೆಯರು ಶೋಷಿಸುತ್ತಿದ್ದಾರೆ. ದುರಂತವೆಂದರೆ ಪೋಷಕರು ಮತ್ತು ಕೆಲ ಮಹಿಳಾ ಪರ ಸಂಘಟನೆಗಳು ಈ ಕೃತ್ಯದಲ್ಲಿ ಭಾಗಿಯಾಗುತ್ತಿವೆ. ಸುಳ್ಳು ದೂರುಗಳಿಂದಾಗಿ ಅನೇಕ ಅಮಾಯಕರು ಮತ್ತು ಮುಕ್ತರು ಜೈಲು ಪಾಲಾಗಿದ್ದಾರೆ.


ನ್ಯಾಯಾಂಗದಲ್ಲಿನ ಯಾವ ಕಾನೂನು ಸಹಾ ಪುರುಷರ ರಕ್ಷಣೆಗೆ ಇಲ್ಲ. ಎಲ್ಲವೂ ಮಹಿಳೆಯರ ಪರವಾಗಿಯೇ ಇವೆ. ಮದುವೆಯಾದ ಪುರುಷರ ಗೌರವ ಮತ್ತು ಹಕ್ಕುಗಳ ಸಂರಕ್ಷಣೆಗಾಗಿ ಒಂದು ಕಾಯ್ಯೆದೆಯನ್ನು ರೂಪಿಸುವಂತೆ ಆಗಾಗ ಕೆಲ ಸಂಘಟನೆಗಳು ಒತ್ತಾಯಿಸುತ್ತಾ ಬಂದಿವೆ. ಮಾನವ ಹಕ್ಕುಗಳ ದಿನದಂದು ಇಂತಹ ಧ್ವನಿಗಳು ಹೆಚ್ಚು ಕೇಳಿ ಬರುತ್ತವೆ.


ಪತ್ನಿಯಿಂದಾದ ಶೋಷಣೆಯ ವಿರುದ್ಧ ದೂರು ನೀಡುವ ಗಂಡಂದಿರಿಗೆ ನ್ಯಾಯಾ ಸಿಗುತ್ತಿಲ್ಲ. ಕೆಲವೆಡೆ ವಿಚಾರಣೆ ನಾಟಕವೂ ಇಲ್ಲ. ದೆಹಲಿ, ಮುಂಬೈ, ಕೋಲ್ಕತಾ ಮತ್ತಿತರ ಪಟ್ಟಣದಲ್ಲಿ ಶೋಷಿತ ಪತಿಯಂದಿರ ಸಂಖ್ಯೆ ಹೆಚ್ಚುತ್ತಿದೆ.


'ನಿಮ್ಮ ಹೆಂಡತಿ ನಿಮ್ಮನ್ನು ಶೋಷಿಸುತ್ತಾಳಾ? ಕೂಡಲೇ ಈ ಸಂಖ್ಯೆಗೆ ಕಾಲ್ ಮಾಡಿ' ಎನ್ನುವ ಫಲಕಗಳು ನವದೆಹಲಿಯ ಜನದಟ್ಟನೆ ಪ್ರದೇಶಗಳಲ್ಲಿ ಇಂದು ಕಾಣಿಸುತ್ತವೆ. ಈ ಫಲಕಗಳಲ್ಲಿ ಒಂದು ಮೊಬೈಲ್ ಸಂಖ್ಯೆ ಇರುತ್ತದೆ. ಆ ಮೊಬೈಲ್ ಸಂಖ್ಯೆಯ ವಕೀಲ, ಶೋಷಿತ ಗಂಡಂದಿರ ರಕ್ಷಣೆಗೆ ನಿಲ್ಲುವ ಭರವಸೆ ನೀಡುತ್ತಿದ್ದಾನೆ.


ಪುರುಷರ ಪರವಾಗಿ ದೆಹಲಿಯಲ್ಲಿ ಈಗ ಅನೇಕ ಸಂಘಟನೆಗಳು ತಲೆ ಎತ್ತಿವೆ. ಕೋಲ್ಕತಾದಲ್ಲಿ ಬ್ರದರ್ ಆರ್ಗನೈಸೇಸನ್ , ಈ ನಿಟ್ಟಿನಲ್ಲಿ ಗುರ್ತಿಸಿಕೊಂಡಿದೆ.


ಇದೆಲ್ಲ ಯಾಕೆ ?


ಈಗಿನ ಯುವತಿಯರು 'ನಾನು, ನನ್ನ ಗಂಡ, ನನ್ನ ಮಕ್ಕಳು' ಎಂದಷ್ಟೇ ಯೋಚಿಸುತ್ತಾರೆ. ಯೋಚನೆ ಅನುಷ್ಠಾನಕ್ಕೆ ಮುಂದಾದಾಗ, ವರದಕ್ಷಿಣೆ ಕಾನೂನು ಅವರಿಗೆ ಅಸ್ತ್ರವಾಗುತ್ತದೆ. ಮಗಳಿಗೆ ಬುದ್ಧಿ ಹೇಳಬೇಕಾದ ಅಪ್ಪ ಅಮ್ಮ, ತಮ್ಮ ಜವಾಬ್ದಾರಿ ಮರೆತು, ಮಗಳ ಬೆಂಬಲಕ್ಕೆ ನಿಲ್ಲುವ ಉದಾಹರಣೆಗಳೂ ಸಮಾಜದಲ್ಲಿವೆ.


ಹುಚ್ಚು ವರ್ತನೆ ಅಥವಾ ಯಾವುದೋ ಕಾರಣದಿಂದ ಮದುವೆಯಾದ ಹುಡುಗಿ ಆತ್ಮಹತ್ಯೆಗೆ ಶರಣಾದರೆ, ಅಳಿಯನ ಮೇಲೆ ಗೂಬೆ ಕೂರಿಸುವ ಅತ್ತೆ-ಮಾವಂದಿರ ಸಂಖ್ಯೆ ಕಡಿಮೆಯೇನಿಲ್ಲ.

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ..


ಸ್ನೇಹವೆಂದರೆ ವ್ಯಾಪಾರವೇ, ಸ್ನೇಹವೆಂದರೆ ಹರಟೆಯೇ, ಸ್ನೇಹವೆಂದರೆ ಬಂಧವೇ, ಸ್ನೇಹವೆಂದರೆ ಹುಚ್ಚಾಟವೇ? ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಎಲ್ಲೆಡೆ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಕೇಳಿ ಸ್ನೇಹದ ಮಹಾತ್ಮೆ.


*ನಾವು ಪರೀಕ್ಷೆಗೆ ಹೊರಟಾಗ ಬೆಸ್ಟ್ ಆಫ್ ಲಕ್ ಎಂದು ಹೇಳುವವ ಮಿತ್ರ. ಅದೇ ಪರೀಕ್ಷೆ ಹಾಲ್ ಗೆ ಬಂದು, ಕಾಫಿ ಚೀಟಿ ಎಸೆಯುವವ ಆಪ್ತಮಿತ್ರ!

*ಏನಾದರೂ ಮಾಡಿ ನಾವು ಜೈಲು ಸೇರಿದಾಗ, ಜಾಮೀನು, ಕೋರ್ಟ್ ಎಂದು ನಮ್ಮ ಪರವಾಗಿ ಸುತ್ತಾಡುವವ ಮಿತ್ರ. ಪಕ್ಕದಲ್ಲೇ ಕೂತು, ಕಂಬಿ ಎಣಿಸುವವ ಆಪ್ತಮಿತ್ರ!

ಮೇಲೆ ಪ್ರಸ್ತಾಪಿಸಿದಂತೆ ಮಿತ್ರ ಮತ್ತು ಆಪ್ತಮಿತ್ರನಿಗಿರುವ ವ್ಯತ್ಯಾಸವನ್ನು ನನ್ನ ಗೆಳೆಯ ಪ್ರಹ್ಲಾದ ಮೊನ್ನೆ ವ್ಯಾಖ್ಯಾನಿಸಿದ. ಪ್ರಹ್ಲಾದ ನಿಮಗೆ ಮಿತ್ರನೋ, ಆಪ್ತಮಿತ್ರನೋ ಎಂದು ಕೇಳಿ, ನನ್ನನ್ನು ಇಕ್ಕಟ್ಟಿಗೆ ತಳ್ಳಬೇಡಿ. ಪ್ರಹ್ಲಾದ ಹೇಳಿದ್ದು ಕುತರ್ಕ ಎಂದು ತಳ್ಳಿಹಾಕಿದರೂ, ಕೆಲವು ಸಲ ಹೌದಲ್ಲ ಅವ ಹೇಳಿದ್ದರಲ್ಲೂ ನಿಜಗಳಿವೆಯಲ್ಲ ಅನ್ನಿಸುತ್ತದೆ.

ಅವನ್ಯಾರೋ, ಇವನ್ಯಾರೋ? ಗೆಳೆಯರಾಗುವ ಮುನ್ನ ಅಪರಿಚಿತರು. ನಂತರ ಫೆವಿಕಾಲ್ ಹಾಕಿದಂತೆ ಅಂಟಿಕೊಳ್ಳುತ್ತಾರೆ. ಪರಿಚಯಕ್ಕೆ ಕಾರಣಗಳಿರುತ್ತವೆಯೇ ಹೊರತು, ಗೆಳೆತನಕ್ಕೆ ಕಾರಣಗಳಿರುವುದಿಲ್ಲ. ಕಾರಣಗಳಿದ್ದರೇ, ಅದು ಗೆಳೆತನವಾಗಲು ಹೇಗೆ ಸಾಧ್ಯ?

ನಮ್ಮ ತಂದೆ ಹೇಳುತ್ತಿದ್ದರು. ನಾವು ಪರಿಚಿತರನ್ನೆಲ್ಲ ಗೆಳೆಯರೆಂದೇ ಕರೆಯುತ್ತೇವೆ. ಪರಿಚಿತರೇ ಬೇರೆ. ಗೆಳೆಯರೇ ಬೇರೆ. ನನ್ನ ಈ ಸುದೀರ್ಘ ಬದುಕಿನಲ್ಲಿ ನನಗೆ ಸಿಕ್ಕಿದ್ದು ಒಬ್ಬನೇ ಗೆಳೆಯ. ಅಂತ ಒಬ್ಬ ಗೆಳೆಯ ಸಿಕ್ಕರೂ ಸಾಕು,ನೂರಾನೇ ಶಕ್ತಿ ಬರುತ್ತದೆ ಎಂಬುದು ಅವರ ವಾದ.

ಒಂದೇ ತರಗತಿಯಲ್ಲಿ ಓದಿದ ಮಾತ್ರಕ್ಕೆ, ಅಕ್ಕಪಕ್ಕ ಕೂತ ಮಾತ್ರಕ್ಕೆ, ಒಂದೇ ಕಚೇರಿಯಲ್ಲಿ ಕೆಲಸ ಮಾಡಿದ ಮಾತ್ರಕ್ಕೆ ಗೆಳೆಯರಾಗಲು ಸಾಧ್ಯವೇ? ಎರಡು ಹೃದಯಗಳಲ್ಲಿ ಸ್ನೇಹದ ಹೊಳೆ ಹರಿಯದಿದ್ದರೇ, ಬಂಧವೂ ಇಲ್ಲ, ಸಂಬಂಧವೂ ಇಲ್ಲ.
ಸ್ನೇಹದ ಬಗ್ಗೆ ದಿನಕ್ಕೆ ಹತ್ತು ಎಸ್ಎಂಎಸ್ ಕಳಿಸುವ ವ್ಯಕ್ತಿಯ ಬಳಿ, ಒಂದೇ ಒಂದು ಸಹಾಯ ಕೇಳಿ ನೋಡಿ. ಆತ ನಿಮಗಾಗಿ ಯಾರೋ ಕಳಿಸಿದ ಎಸ್ಎಂಎಸ್ ಗಳನ್ನಷ್ಟೇ Forward ಮಾಡುತ್ತಾರೆ. ಎಸ್ಎಂಎಸ್ ಸೇವೆ ಅವರ ಮೊಬೈಲ್ ನಲ್ಲಿ ಉಚಿತವಿದ್ದರೇ ಮಾತ್ರ. ಇಂಥವರನ್ನು ಎಸ್ಎಂಎಸ್ ಗೆಳೆಯರು ಎನ್ನಬಹುದು.

ನಾನು ಪದವಿ ಓದುವಾಗ ಒಬ್ಬ ಪರಿಚಿತನಾಗಿದ್ದ. ಏನಾದರೂ ಸಹಾಯ ಬೇಕಿದ್ದರೆ ಮಾತ್ರ ಜೊತೆಯಲ್ಲಿರುತ್ತಿದ್ದ. ಈಗಲೂ ಅವನು ಕರೆ ಮಾಡಿದನೆಂದರೆ, ಮೊದಲ ಮಾತು :'ನಟೇಶ ನಿನ್ನಿಂದ ನನಗೊಂದು help ಆಗಬೇಕಿತ್ತಲ್ಲ..'ನಾನು ಇಲ್ಲ ಎಂದರೆ, ಫ್ರೆಂಡ್ ಗಾಗಿ ಇಷ್ಟೂ ಮಾಡುವುದಿಲ್ಲವೇ ಎಂಬ ಒಗ್ಗರಣೆ ಬೇರೆ ಇರುತ್ತದೆ.

ಇನ್ನೂ ಕೆಲವರಿರುತ್ತಾರೆ. ಅವರಿಗೆ ಅವರ ಕಷ್ಟಗಳಷ್ಟೇ ದೊಡ್ಡವು. ಸಮಯ ಸಿಕ್ಕರೇ ಸಾಕು, ಕಷ್ಟಗಳ ಪಟ್ಟಿಯನ್ನು ಒಪ್ಪಿಸುತ್ತಿರುತ್ತಾರೆ. ಸದಾ ಅನುಕಂಪವನ್ನು ಕೋರುತ್ತಿರುತ್ತಾರೆ. ಅವರದು ಮುಗಿಯದ ಗೋಳು. ಕಷ್ಟಗಳಿಲ್ಲದ ಮನುಷ್ಯ ಜಗತ್ತಿನಲ್ಲಿ ಯಾರಿದ್ದಾನೆ ಹೇಳಿ. ಕಷ್ಟಗಳ ಮಧ್ಯೆಯೂ ಬದುಕುತ್ತಿರುವ ನಾವು ದೊಡ್ಡ ಮಹಾತ್ಮರು ಎಂದು ಬಿಂಬಿಸಿಕೊಳ್ಳುವ ಕೆಲವರ ಕಾಯಿಲೆಗೆ, ಔಷಧಿಯಿಲ್ಲ.

ಜಾಗತೀಕರಣದ ಈ ದಿನಗಳಲ್ಲಿ ಗೆಳೆತನವನ್ನು ವ್ಯವಹಾರವಾಗಿ ಬದಲಿಸಿಕೊಳ್ಳಿ ಎನ್ನುವ ಸಲಹೆಗಳೂ ಇವೆ. ಎಲ್ಐಸಿ ಪಾಲಿಸಿಗಾಗಿ ಗಂಟು ಬೀಳುವ ಗೆಳೆಯರಿದ್ದಾರೆ. ನಮ್ಮ ಪಾಲಿಸಿ ಜೊತೆಗೆ, ನಮ್ಮ ಆಪ್ತರ ಪಾಲಿಸಿಗಳನ್ನೂ ಕೊಡಿಸಬೇಕಂತೆ. ಇವರನ್ನು ಪಾಲಿಸಿ ಮಿತ್ರ ಅನ್ನೋಣವೇ?

ಸ್ನೇಹ ಮಾಡುವುದು ಕಷ್ಟ, ಅದನ್ನು ಉಳಿಸಿಕೊಳ್ಳುವುದು ಕಷ್ಟ ಅನ್ನುತ್ತಾರೆ ಕೆಲವರು. ಉಳಿಸಿಕೊಳ್ಳಲು ಅದೇನು ಕದ್ದ ದುಡ್ಡಾ? ಉಳಿಯಲಿಲ್ಲ ಎಂದರೆ ಅಲ್ಲಿ ಸ್ನೇಹವಿರಲಿಲ್ಲ ಎಂದರ್ಥ. ಪರಸ್ಪರ ಅವಶ್ಯಕತೆಗಳಿದ್ದವು ಅಷ್ಟೆ.

ನನಗೊಬ್ಬ ಒಳ್ಳೆಯ ಗೆಳೆಯ ಸಿಕ್ಕಲಿಲ್ಲ ಎಂದು ನಾವು ಆಗಾಗ ಗೊಣಗುತ್ತಿರುತ್ತೇವೆ. ಅಥವಾ ಯಾರಿಗಾದರೂ ಹೇಳುತ್ತಿರುತ್ತೇವೆ. ಆದರೆ, 'ನಾನು ಒಳ್ಳೆ ಗೆಳೆಯನೇ?' ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಯಾವುದು ನಮ್ಮತ್ರ ಇರೋದಿಲ್ವೋ ಅದನ್ನು ಇನ್ನೊಬ್ಬರಲ್ಲಿ ಹುಡುಕುವ ಸ್ವಭಾವ ನಮ್ಮದು. ಅದು ತಪ್ಪೇನಲ್ಲ ಬಿಡಿ..

ಸ್ನೇಹಕ್ಕೆ ಜೈ..

ಕೊನೆಯದಾಗಿ ಗೆಳೆತನಕ್ಕೆ ಸಂಬಂಧಿಸಿದ ಒಂದು ಎಸ್ಎಂಎಸ್ ಓದಿಕೊಳ್ಳಿ :

ಪ್ರೀತಿ ಎನ್ನುವುದು ಫ್ಯಾಷನ್
ಗೆಳೆತನ ಎಂಬುದು ಓಷನ್
ಫ್ಯಾಷನ್ ಬದಲಾಗುತ್ತದೆ
ಓಷನ್ ಎಂದೂ ಬದಲಾಗದು

Monday, August 20, 2007

ಈ ತರ್ಕವನ್ನು ಒಪ್ಪಿ, ನಿಮ್ಮ ಬಾಳಸಂಗಾತಿಗೂ ತಿಳಿಸಿ!


ಇದು ತಮಾಷೆಯಂತೆ ಕಂಡರೂ, ಬದುಕಿನ ಸತ್ಯವನ್ನು ಹೊಂದಿದೆ! ಮದುವೆ ಕನಸು ಕಂಡವರು, ಮದುವೆಗೆ ಸಿದ್ಧರಾದವರು, ಮದುವೆಯಾಗಿ ಸಂಸಾರ ನಡೆಸುತ್ತಿರುವ ಮಂದಿ, ಈ ಬಗ್ಗೆ ತಿಳಿದರೆ ಒಳ್ಳೆಯದು. ದಾಂಪತ್ಯ ಎನ್ನುವುದು ಹಾಲು ಜೇನು.

ಮದುವೆ ಸಂದರ್ಭದಲ್ಲಿ ಉಂಗುರವನ್ನು ನಾಲ್ಕನೇ ಬೆರಳಿಗೆ ಯಾಕೆ ಹಾಕುತ್ತಾರೆ? ಈ ಪ್ರಶ್ನೆಗೆ ವಿಚಿತ್ರಾನ್ನದ ಭಟ್ಟರು ಏನೇನೋ ತರ್ಕಗಳನ್ನು ಈ ಹಿಂದೆ ಮಂಡಿಸಿದ್ದರು. ಆ ವಿಚಾರಗಳನ್ನು ಬಿಟ್ಟು, ಎಲ್ಲರೂ ಒಪ್ಪುವಂತಹ ಮತ್ತು ಸಮಾಧಾನ ಹೊಂದುವಂತಹ ಕಾರಣವೊಂದನ್ನು ಎಲ್ಲೋ ಓದಿದ ನೆನಪು. ಅದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ಸತ್ಯವನ್ನು ಜಗತ್ತಿಗೆ ಸಾರಿದವರು ಚೈನಾದವರು.

ಮೊದಲಿಗೆ ಹೆಬ್ಬೆರಳು ನಮ್ಮ ಹೆತ್ತವರನ್ನು ಪ್ರತಿನಿಧಿಸುತ್ತದೆ ಎಂದು ಭಾವಿಸೋಣ. ಎರಡನೇ ಬೆರಳು(ತೋರು ಬೆರಳು) ನಮ್ಮ ಜೊತೆ ಒಡಹುಟ್ಟಿದವರನ್ನು, ಮಧ್ಯದ ಬೆರಳು ನಮ್ಮನ್ನು, ನಾಲ್ಕನೇ ಬೆರಳು(ಉಂಗುರದ ಬೆರಳು) ಬಾಳ ಸಂಗಾತಿಯನ್ನು, ಕೊನೆಯದು ಅಂದರೆ ಕಿರುಬೆರಳು ನಮ್ಮ ಮಕ್ಕಳನ್ನು ಪ್ರತಿನಿಧಿಸುತ್ತದೆ ಎಂದು ಕಲ್ಪಿಸಿಕೊಳ್ಳೋಣ.

ಮೊದಲು ಎರಡೂ ಕೈಗಳನ್ನು ಎದುರುಬದುರು ಇಟ್ಟುಕೊಳ್ಳಿ. ಮಧ್ಯದ ಬೆರಳನ್ನು ಬಗ್ಗಿಸಿ. ಚಿತ್ರದಲ್ಲಿರುವಂತೆ ಉಳಿದ ಬೆರಳುಗಳನ್ನು ಜೋಡಿಸಿ.

ಈಗ ನೋಡಿ ತಮಾಷೆ ನೆಪದಲ್ಲಿನ ಆಸಲಿ ಸತ್ಯ ಹೊರಬೀಳುತ್ತದೆ. ಯಾವ ಬೆರಳನ್ನು ಕದಲಿಸದೇ, ನಿಮ್ಮ ಹೆಬ್ಬೆರಳುಗಳನ್ನು ಬೇರೆ ಮಾಡಿ. ಅದು ಸುಲಭ ಸಾಧ್ಯವಾಗುತ್ತದೆ. ಹೆಬ್ಬೆರಳನ್ನು ಹೆತ್ತವರು ಎಂದು ಭಾವಿಸಲಾಗಿದ್ದು, ಅಪ್ಪ ಅಥವಾ ಅಮ್ಮ ಕೊನೆ ತನಕ ನಮ್ಮ ಜೊತೆ ಇರುವುದಿಲ್ಲ ಎಂಬುದನ್ನು ಅರಿಯಬಹುದಾಗಿದೆ.

ಅದೇ ರೀತಿ ಎರಡನೇ ಬೆರಳನ್ನು ಅಗಲಿಸಿ. ಅದೂ ಸಾಧ್ಯ. ಸಹೋದರ ಅಥವಾ ಸಹೋದರಿ ಶಾಶ್ವತವಲ್ಲ. ಬೇರೆ ಬೇರೆ ಕಡೆ ವಾಸ ಮಾಡಬೇಕಾಗುತ್ತದೆ. ಅಗಲಿಕೆ ಸಹಜವಾದದ್ದೇ ಎಂಬ ಪಾಠ ನಮಗೆ ತಿಳಿಯುತ್ತದೆ.

ಅದೇ ರೀತಿ ಕಿರುಬೆರಳು(ಮಕ್ಕಳು)ಗಳ ಅಗಲಿಸಿ. ಯಾವುದೇ ಕಷ್ಟವಿಲ್ಲದೇ ಈ ಕೆಲಸ ಮಾಡಬಹುದು. ಮದುವೆ ಮತ್ತಿರ ಕಾರಣದಿಂದ ಮಕ್ಕಳು ನಮ್ಮಿಂದ ದೂರವಾಗುತ್ತಾರೆ ಅಲ್ಲವೇ ?

ಈಗ ಉಗುರದ ಬೆರಳುಗಳನ್ನು ಅಂದರೆ ನಿಮ್ಮ ಬಾಳಸಂಗಾತಿ ಎಂದು ಕಲ್ಪಿಸಲಾಗಿರುವ ಬೆರಳನ್ನು ದೂರ ಮಾಡಲು ಯತ್ನಿಸಿ. ಅದು ಅಸಾಧ್ಯ! ಅಂದರೆ ಅದು ಗಂಡ ಹೆಂಡತಿಯ ನಂಟನ್ನು ವಿವರಿಸುತ್ತದೆ. ಇಬ್ಬರೂ ಸುದೀರ್ಘ ಕಾಲ ಒಬ್ಬರ ಜೊತೆ ಇನ್ನೊಬ್ಬರು ಇರಲೇ ಬೇಕು. ಅಂಟಿಕೊಂಡು ಬದುಕಿದರೆ ಸ್ವರ್ಗ ಸುಖ ಎಂಬ ಸತ್ಯವನ್ನು ಬಿಂಬಿಸುತ್ತದೆ.


Friday, August 10, 2007

ಬರ್ತ್ ಡೇ ಖುಷಿಯಲ್ಲಿರೋ ಮಾಲಾಶ್ರೀ ಗಮನಕ್ಕೆ..


ಹುಟ್ಟೋ ಹೆಣ್ಣುಮಕ್ಕಳ ಹೆಸರಿಗೆ ಶ್ರೀಗಳು ಸೇರಿಕೊಳ್ಳುವಷ್ಟು ನಟಿ ಮಾಲಾಶ್ರೀ ಜನಪ್ರಿಯರಾಗಿದ್ದರು. ಇಂದು(ಆಗಸ್ಟ್ 10) ಅವರ ಹುಟ್ಟಿದ ದಿನ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಿದ 'ದುರ್ಗಿ' ಈ ಮಾಲಾಶ್ರೀ. ರಾಣಿ ಮಹಾರಾಣಿಯಂತೆ ಮಿಂಚಿ, ಪ್ರೇಕ್ಷಕರ ಕನಸಿನ ರಾಣಿಯಾಗಿ ನಿದ್ದೆಗೆಡಿಸಿದ್ದು ಇದೇ ಮಾಲಾಶ್ರೀ. ಅದೆಲ್ಲಾ ಈಗ ಮಾಲಾಶ್ರೀ ಪಾಲಿಗೆ ಗತ ವೈಭವ! ಆದರೆ ಈಗಲೂ ಅವರ ಬಣ್ಣದ ಮೋಹ ಇಂಗಿಲ್ಲ. ಕಿರಣ್ ಬೇಡಿಯಾಗಿ ನಿಮ್ಮ ಮುಂದೆ ನಿಲ್ಲಲ್ಲಿದ್ದೇನೆ ಎಂದು ಪತ್ರಕರ್ತರ ಬಳಿ ಅವರು ಆಗಾಗ ಹೇಳುತ್ತಿರುತ್ತಾರೆ.

ನಂಜುಂಡಿ ಕಲ್ಯಾಣ ಚಿತ್ರದಿಂದ ಆರಂಭಗೊಂಡ ಮಾಲಾಶ್ರೀ ಅವರ ಚಿತ್ರಯಾತ್ರೆ, ಅನೇಕ ದಿಗ್ವಿಜಯಗಳ ಸಾಧಿಸಿದೆ. ಒಬ್ಬ ನಟನಿಗಿಂತಲೂ ಹೆಚ್ಚಿನ ಜನಪ್ರಿಯತೆ ಮತ್ತು ಶಕ್ತಿ ಅವರಿಗಿತ್ತು. ಹೀಗಾಗಿಯೇ ಒಂದು ಸಲ; 'ನನ್ನ ಜೊತೆ ನಾಯಿಮರಿ ಪಾತ್ರ ಮಾಡಿದರೂ ಚಿತ್ರ ನೂರು ದಿನ ಓಡುತ್ತೆ'ಎಂದು ಗರ್ವದಿಂದ ಮಾತನಾಡಿದ್ದರು.ಆ ಮಾತನ್ನು ಅವರು ದಕ್ಕಿಸಿಕೊಂಡಿದ್ದರು. ಆ ಮಾತು ಬಿಡಿ. ನಟನೆಯ ವಿಷಯಕ್ಕೆ ಬಂದರೆ, ಒಬ್ಬ ನಟಿಯಾಗಿ ಮಾಲಾಶ್ರೀ ಮಾಡಿದ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನ.

ಗ್ಲಾಮರ್ ಪಾತ್ರಗಳಿಂದ ಹಿಡಿದು ಬಜಾರಿ ಪಾತ್ರದವರೆಗೆ, ಗಂಡುಬೀರಿಯಂತೆ ಬಡಿದಾಡುವ ಪಾತ್ರದವರೆಗೆ ಮಾಲಾಶ್ರೀ ಮಿಂಚಿದ್ದೇ ಮಿಂಚಿದ್ದು. ಆ ಮುಖಾಂತರ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿ, ಅವರು ಇತಿಹಾಸ ನಿರ್ಮಾಣ ಮಾಡಿದವರು. ರಾಮಾಚಾರಿ, ಪೊಲೀಸನ ಹೆಂಡತಿ, ಸಿಬಿಐ ದುರ್ಗಾ, ಮಾಲಾಶ್ರೀ ಮಾಮಾಶ್ರೀ, ಎಸ್.ಪಿ.ಭಾರ್ಗವಿ, ಕಿತ್ತೂರಿನ ಹುಲಿ, ಬೆಳ್ಳಿ ಕಾಲುಂಗುರ ಚಿತ್ರಗಳು ಮಾಲಾಶ್ರೀ ಅಭಿನಯದ ಪ್ರಮುಖ ಚಿತ್ರಗಳು.

ಮಗಳು ಮತ್ತು ಗಂಡನ ಜೊತೆ ಸಂತೃಪ್ತ ಗೃಹಿಣಿಯಾಗಿ ಮಾಲಾಶ್ರೀ ಇಂದು ಆರಾಮವಾಗಿದ್ದಾರೆ. ಚಿತ್ರ ನಿರ್ಮಾಣದಲ್ಲಿ ಪತಿ ದೇವರು ರಾಮುಗೆ ಸಹಕಾರ ನೀಡುತ್ತಿದ್ದಾರೆ. ಸೋಲಿನ ಮೇಲೆ ಸೋಲು ಕಂಡರೂ, ರಾಮು ಧೈರ್ಯ ಕುಂದಿಲ್ಲ. ಕಾರಣ ಅವರಿಂದೆ ಮಾಲಾಶ್ರೀ ಇದ್ದಾರೆ.

ತವರು ರಾಜ್ಯ ಆಂಧ್ರಪ್ರದೇಶವನ್ನು ಮರೆಯುವಷ್ಟು ಪ್ರೀತಿಯ ಹೊಳೆ ಹರಿಸಿದ ಕನ್ನಡ ಪ್ರೇಕ್ಷಕರಿಗೆ, ಮಾಲಾಶ್ರೀ ಏನಾದರೂ ಕೊಡಬೇಕು. ಅದು ಅವರ ಕರ್ತವ್ಯ. ಜೊತೆಗೆ ಋಣದ ಪ್ರಶ್ನೆ. ಮಚ್ಚು, ಕೊಚ್ಚು ಚಿತ್ರಗಳ ಜೊತೆಗೆ ಒಂದಷ್ಟು ಸದಭಿರುಚಿಯ ಚಿತ್ರಗಳನ್ನು ನೀಡುವತ್ತ ಮಾಲಾಶ್ರೀ ಯೋಚಿಸಲಿ.

ಹುಟ್ಟು ಹಬ್ಬದ ಶುಭಾಶಯ ದುರ್ಗಮ್ಮ.. ನೀನು ನೂರು ಕಾಲ ತಣ್ಣಗೆ ಬಾಳಮ್ಮ..

Wednesday, August 1, 2007

ಜಗತ್ತಿನಲ್ಲಿ ಯಾರನ್ನೂ ನಾ ಪ್ರೀತಿಸುವುದಿಲ್ಲ..


ನಾ ಯಾರನ್ನೂ ಪ್ರೀತಿಸುವುದಿಲ್ಲ..
ನನ್ನ ಪ್ರೀತಿ ಪಾತ್ರರೆಲ್ಲ ದೂರ ಬಹುದೂರ!
ಮತ್ತಷ್ಟು ಜನರ ಪ್ರೀತಿಸಿ
ನಾ ಬಾಣಲೆಯಿಂದ ಬೆಂಕಿಗೆ ಹಾರಲೇ?
ಕೊಟ್ಟಂತೆ ಕೊಟ್ಟು, ಮತ್ತೆ ಕಿತ್ತು ಕೊಳ್ಳುವ
ಅವನ ಆಟಕ್ಕೆ ನಾ ಜೋಕರ್ ಆಗಬೇಕೇ?

ಅದೊಂದು ದಿನ ನಾ ಊಹಿಸಿರಲಿಲ್ಲ..
ಶೂನ್ಯ ತುಂಬಿದ ಮನೆಗೆ ಬೆಳಕು ತಂದ
ನನ್ನ ಕಣ್ಣು ಹೊರೆಸಿದ.. ಹೆದರಬೇಡ
ನಾನಿದ್ದೇನೆ ಅಂದ. ಅಮ್ಮನಂತೆ ಮಡಿಲಿಗೆ
ಹಾಕಿಕೊಂಡು, ಜಗತ್ತು ಇಷ್ಟೇ ಅಲ್ಲ ಎಂದ
ಆಗ ನಮಗಿಂತ ಸುಖಿಗಳು ಇಲ್ಲ ಅನ್ನಿಸಿತು!

ಜಗತ್ತಿನ ಕಣ್ ಕುಕ್ಕುವಂತೆ ಊರು ಸುತ್ತಿದೆವು
ಮನಸ್ಸನ್ನು ಹಗುರ ಮಾಡಿಕೊಂಡೆವು
ರಸ್ತೆ ಬದಿ ನಿಂತು, ಕನಸ ಹಂಚಿಕೊಂಡೆವು
ನೆನಪುಗಳ ಹೆಕ್ಕಿ ತೆಗೆದು, ಸಂಭ್ರಮಿಸಿದೆವು
ಸಿಕ್ಕಿದ್ದನ್ನೆಲ್ಲ ತಿಂದು, ತೃಪ್ತಿಯಿಂದ ತೇಗಿದೆವು!
ಮಳೆಯಲ್ಲಿ ನೆಂದೆವು. ಬಿಸಿಲಲ್ಲಿ ಬೆಂದೆವು

ಯಾವುದೋ ಮುನಿಸು, ಯಾಕೋ ಕೋಪ
ಮಾತು ಇಲ್ಲವಾದಾಗ ಮೌನದಲ್ಲೂ ಮಾತು
ನಮ್ಮಿಬ್ಬರ ನಡುವಿನ ಸೇತುವೆ
ಯಾವ ಗಾಳಿ ಮಳೆಗೂ ಜಗ್ಗಲಿಲ್ಲ
ನಾ ಬೈದಾಗ ಆತ ಹೇಗೇಗೋ ನಗುತ್ತಿದ್ದ
ಆಗಾಗ ನೋವಾಗದಂತೆ ಕಾಲೆಳೆಯುತ್ತಿದ್ದ

ಅವನಂತಾಗಲು ನನಗೆ ಆಗಾಗ ಆಸೆ
ಹೇಳಲಾಗದ ಅಸೂಯೆ ಬೆರೆತ ಹೆಮ್ಮೆ
ಈ ಅಮಾಯಕನಿಗೆ ಜಗತ್ತೆಲ್ಲಿ
ಮೋಸಮಾಡುವುದೋ ಎಂಬ ದಿಗಿಲು
ಬೆತ್ತಲಾಗಲು ಇಬ್ಬರಲ್ಲೂ ಪೈಪೋಟಿ
ಆದರೂ ಏನೂ ಹೇಳಲಾಗದ ಅಸಹಾಯಕತೆ!

ನಾಲೆಯಿಂದ ನಾನು ಒಂಟಿ
ಯಾರ ಜೊತೆ ನಗಲಿ? ಯಾರೊಂದಿಗೆ
ಜಗಳ ಕಾಯಲಿ? ಅವನಿಗೆ ನನ್ನಂಥವರು
ಸಿಗಬಹುದು! ನನಗ್ಯಾರು ಸಿಗುತ್ತಾರೆ?
ಜಗದ ಸಂತೆಯಲ್ಲಿ ನಾ ಮತ್ತೆ ಒಂಟಿ.
ಧೈರ್ಯ ಸಾಲದು ಮತ್ತೆ ಜಂಟಿಯಾಗಲು

ಜಗತ್ತಿನ ನಿಯಮವೇ ವಿಚಿತ್ರ
ಬೇಕು ಎಂದದ್ದು ಸಿಕ್ಕಿದರೆ ಅವನಿಗೆಲ್ಲಿಯ
ಗೌರವ? ಭೂಮಿ ಗುಂಡಗಿದೆ
ಮತ್ತೆ ಸಿಗೋಣ.. ಸಿಕ್ಕಾಗ ಕೂತು
ಜಗತ್ತಿಗೆ ಗೋಲಿ ಹೊಡೆಯೋಣ..
ಹೋಗಿ ಬಾ ಗೆಳೆಯ... ಬದುಕು ಬಂಗಾರವಾಗಲಿ..


Thursday, July 26, 2007

ಯಾರ್ಯಾರ ಗ್ರಹಚಾರ ಹೇಗೇಗಿದೆ?


ನನ್ನೂರಿನ ಸುಳ್ಳು ಸುಳ್ಳು ಶಾಸ್ತ್ರಿಗಳು ಭವಿಷ್ಯ ಹೇಳೋದಕ್ಕೆ ನಿಂತರೆ, ಅದು ನಿಜವಾಗುತ್ತೆ.. ಇಲ್ಲದಿದ್ದರೆ ಅದು ಸುಳ್ಳು ಆಗುತ್ತೆ. ಇವೆರಡು ಬಿಟ್ಟರೆ ಬೇರೇನೂ ಆಗೋದಿಲ್ಲ! ಅಷ್ಟೊಂದು ಕರಾರುವಕ್ಕಾಗಿ ಅವರು ಭವಿಷ್ಯ ನುಡಿಯುತ್ತಾರೆ.
'ನಮ್ಮಹಳ್ಳಿ ಕೆರೆಗೆ ಯಾವಾಗ ನೀರು ಬರುತ್ತೆ?' ಅಂದ್ರೆ, 'ಜೋರಾಗಿ ಮಳೆ ಬಂದ ಮಾರನೇ ದಿನ' ಎಂದು ಅವರು ಖಚಿತವಾಗಿ ಹೇಳುತ್ತಾರೆ. ಪೀಠಿಕೆ ಇಷ್ಟು ಸಾಕು. ಅವರು ರಾಶಿ ಭವಿಷ್ಯ ಬರೆದಿದ್ದಾರೆ. ನಿಮ್ಮ ಗ್ರಹಚಾರ ಏನಿದೆಯೋ ಓದಿ ತಿಳಿಯಿರಿ..
ಮೇಷ : ಧನಯೋಗವಿದೆ. ಹಾಗಂತ ನೀವು ಕೈಕಟ್ಟಿ ಕೂತರೇ ಆಗೋದಿಲ್ಲ. ಯಾರದಾದರೂ ತಲೆ ಹೊಡೆಯಲೇ ಬೇಕು ಅಥವಾ ಸೌಂಡ್‌ ಪಾರ್ಟಿಯಾಗಿರೋ ಹುಡುಗಿಗೆ ಡವ್‌ ಹೊಡೆದು ಮದುವೆಯಾಗಿ ಬಿಡಿ. ಅದೆಲ್ಲಾ ಕಷ್ಟ ಅನ್ನಿಸಿದರೇ ಯಾರನ್ನಾದರೂ ಕಿಡ್ನಾಫ್‌ ಮಾಡಿ. ರಾಜಯೋಗ ಬಂದಾಗ ನೀವು ಕಾರ್ಯಪ್ರವೃತ್ತರಾಗದಿದ್ರೆ ಬದುಕಿಡೀ ಪಶ್ಚತ್ತಾಪ ಅನುಭವಿಸಬೇಕಾಗುತ್ತೆ !
ಅದೃಷ್ಟ ಸಂಖ್ಯೆ -100, ಶುಭದಿನ -ವಾರದ ಎಲ್ಲಾ ದಿನ.
ವೃಷಭ : ವಿದ್ಯೆ ನೈವೇದ್ಯಆಗಿದೆ. ಆದರೂ ನಿಮಗೆ ಯಾಕೆ ಓದೋ ಹುಚ್ಚು? ನೇರವಾಗಿ ಸರಸ್ವತಿಬರೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಕಳ್ಳ ಬಾಗಿಲಲ್ಲಿ ಪ್ರಯತ್ನಿಸಿ. ಪರೀಕ್ಷೆ ಬರೆಯೋದನ್ನು ಯೋಚಿಸಲೇಬೇಡಿ. ಯಾರನ್ನಾದರೂ ಸರಿಯಾದ ಪಾರ್ಟಿಯನ್ನು ಹಿಡಿದು ರೇಟ್‌ ಫಿಕ್ಸ್‌ ಮಾಡಿ, ಮಾಕ್ಸ್‌ಕಾರ್ಡ್‌ನ ಖರೀದಿಗೆ ಪ್ರಯತ್ನಿಸಿ.
ಅದೃಷ್ಟ ಸಂಖ್ಯೆ -000, ಶುಭದಿನ- ಒಂದೂ ಇಲ್ಲ.
ಮಿಥುನ : ಸಿಡುಕುವುದರಿಂದ ನಿಮಗೆ ಸಾಕಷ್ಟು ಲಾಭಗಳಿವೆ. ಜನರು ನಿಮಗೆ ಗೌರವ ಕೊಡುತ್ತಾರೆ. ವಿಶೇಷವಾಗಿ ಮನೆಗೆ ಬರೋ ನೆಂಟರ ಸಂಖ್ಯೆ ಕಡಿಮೆಯಾಗಲಿದೆ. ಹೆಂಡತಿ ನಿಮ್ಮ ಕೆಂಡದಂತಹ ಮುಖ ನೋಡಿ, ಸೀರೆಗೀರೆ ಎಂದು ತಲೆ ತಿನ್ನೋದಿಲ್ಲ. ಮಕ್ಕಳು, ಚಾಕ್ಲೆಟ್‌-ಬಿಸ್ಕೆಟ್‌ ಅಂಥ ಪೀಡಿಸೋದಿಲ್ಲ.
ಅದೃಷ್ಟ ಸಂಖ್ಯೆ -ಹಾಗಂದ್ರೆ ಏನು?, ಶುಭದಿನ -ಮಂಗಳವಾರ
ಕರ್ಕಾಟಕ : ಫೋನ್‌ ಮೂಲಕ ಸುನಾಮಿ ಪ್ರವೇಶಿಸಲಿದೆ ಜಾಗೃತರಾಗಿರಿ! ನಿಮ್ಮ ಪ್ರೀತಿಯ ಹುಡುಗಿಗೆ ಈಗ ಮೂರು ತಿಂಗಳು. ನಿಮ್ಮನ್ನು ದೇವರೂ ಸಹಾ ಕಾಪಾಡೋ ಸ್ಥಿತಿಯಲ್ಲಿಲ್ಲ! ಮಹಿಳೆಯರಿಗೆ ಕೆಟ್ಟ ಸುದ್ದಿ. ನಿಮ್ಮ ಗುಟ್ಟುಗಳು ನಿಮ್ಮ ಗಂಡನಿಗೆ ಗೊತ್ತಾಗಲಿದೆ.
ಅದೃಷ್ಟ ಸಂಖ್ಯೆ -111, ಶುಭದಿನ -ಅದರ ಆಸೆ ಬಿಡಿ.
ಸಿಂಹ : ಪುರುಷರಿಗೆ ವಿವಾಹದ ಗಂಡಾಂತರವಿದೆ. ಹುಲಿ ಇಲಿಯಾಗುವ ದಿನಗಳನ್ನು ಎದುರಿಸಲು ಸಜ್ಜಾಗಿ. ಮದುವೆಯಾಗುವುದಕ್ಕಿಂತಲೂ ಬಾವಿಗೆ ಹಾರೋದೇ ಸುಲಭ ಅನ್ನಿಸೋದಾದ್ರೆ ನಿಮ್ಮ ನಿರ್ಣಯ ಸರಿಯಾಗಿದೆ. ಮಹಿಳೆಯರಿಗೆ ಅದೃಷ್ಟದ ದಿನಗಳು. ಅವು ಮುಗಿಯುವ ಮೊದಲೇ ಯಾರನ್ನಾದರೂ ಬಕ್ರನಾ ಕಟ್ಟಿಕೊಳ್ಳಿ.
ಅದೃಷ್ಟ ಸಂಖ್ಯೆ -1001, ಶುಭದಿನ -ಕಾದು ನೋಡಿ.
ಕನ್ಯಾ : ಬಹಳ ದಿನಗಳಿಂದಲೂ ನಾಯಿ ಸಾಕಬೇಕು ಅನ್ನೋ ಬಯಕೆ ಈಗ ಫಲಿಸಲಿದೆ. ಅಂದ್ರೆ ನಿಮಗೆ ಟೂ-ಇನ್‌-ಒನ್‌ ನಾಯಿ ಸಿಕ್ತಾಯಿದೆ! ಹೌದು ಹೆಣ್ಣುಮಕ್ಕಳಿಗೆ ಮದುವೆಯೋಗವಿದೆ. ಡೈವರ್ಸ್‌ ಯೋಗ ಸಹಾ...
ಅದೃಷ್ಟ ಸಂಖ್ಯೆ -501, ಶುಭದಿನ -ಶುಕ್ರವಾರ
ತುಲಾ : ನಿಮಗೆ ಟಿ.ವಿಯಲ್ಲಿ ಕಾಣಿಸೋ ಯೋಗವಿದೆ. ಬಹುಶಃ, ಕ್ರೆೃಂಡೈರಿ ಅಥವಾ ಕುರಿಗಳು ಸಾರ್‌ ಕಾರ್ಯಕ್ರಮದಲ್ಲೋ ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ.ಅದೃಷ್ಟ ಸಂಖ್ಯೆ-0000000000, ಶುಭದಿನ-ನಿಮಗೇ ಗೊತ್ತಲ್ಲ!
ವೃಶ್ಚಿಕ : ಬಾಸ್‌ಗೆ ನಿಮ್ಮ ಕರ್ತವ್ಯ ಪ್ರಜ್ಞೆ ತುಂಬಾ ಇಷ್ಟವಾಗಿದೆ. ಮತ್ತಷ್ಟು ಇಷ್ಟವಾಗಲಿದೆ. ಮಾಮೂಲಿನ ಹತ್ತುಗಂಟೆ ಜೊತೆಯಲ್ಲಿ, ಇನ್ನೂ ನಾಲ್ಕು ಗಂಟೆಯ ಕೆಲಸದ ಹೊರೆ ನಿಮ್ಮ ಮೇಲೆ ಬೀಳಲಿದೆ. ಭಾನುವಾರವೂ ಕೆಲಸಮಾಡಬೇಕಾದ ಪರಿಸ್ಥಿತಿ ಬರಬಹುದು. ಯಾವುದಕ್ಕೂ ರೆಡಿಯಾಗಿರಿ.
ಅದೃಷ್ಟ ಸಂಖ್ಯೆ -3333, ಶುಭದಿನ -ಎಲ್ಲವೂ ಮುಗಿದಿವೆ.
ಮಕರ : ಇನ್ನು ಮುಂದೆಯಾದ್ರೂ ನೀವು ನಗೋದನ್ನ ಕಲಿತರೆ, ಬಾಳು ಬಂಗಾರವಾಗುತ್ತೆ. ಇಲ್ಲದಿದ್ರೆ ಹೆಣಭಾರವಾಗುತ್ತೆ. ಬದುಕಿದ್ದಾಗಲೇ ನಗ್ರಿ, ಸತ್ತಮೇಲೆ ನಗೋದಕ್ಕೆ ಆಗೋದಿಲ್ಲ(ಬಾಯಲ್ಲಿ ಅಕ್ಕಿಕಾಳು ತುಂಬಿರ್ತಾರೆ!).
ಅದೃಷ್ಟ ಸಂಖ್ಯೆ -999, ಶುಭದಿನ -ಎಲ್ಲಾ ನಿಮ್ಮ ಕೈಯಲ್ಲೇ ಇದೆ.
ಧನು : ಈ ವಾರ ಅನಾರೋಗ್ಯ ಸಾಮಾನ್ಯ ಬಿಡಿ. ನಿಮ್ಮ ಕೆಮ್ಮನ್ನು ನೆವಮಾಡಿಕೊಂಡು, ನರ್ಸಿಂಗ್‌ ಹೋಮ್‌ನವರು ಸಾವಿರಗಟ್ಟಲೇ ಬಿಲ್‌ ಮಾಡ್ತಾರೆ. ನೀವು ಪಾರಾಗಲು ಸಾಧ್ಯವೇ ಇಲ್ಲ. ಆದರೂ ನಿಮ್ಮ ಕೆಮ್ಮು ನಿಲ್ಲೋದಿಲ್ಲ. ಮನೆಯಲ್ಲಿರೋ ಮೆಣಸು, ಅಥವಾ ಇಂಗ್ಲೀಷ್‌ ಟಾನಿಕನ್ನು ಪ್ರಯೋಗಿಸಿ ನೋಡಿ?
ಅದೃಷ್ಟ ಸಂಖ್ಯೆ -0, ಶುಭದಿನ -ವೈದ್ಯರಿಂದ ದೂರವಿದ್ದ ದಿನ
ಕುಂಭ : ನೀವು ಬಿಸ್ಕೆಟ್‌ ಹಾಕುತ್ತಿದ್ದ ಹುಡುಗಿ/ಹುಡುಗ ನಿಮಗೆ ಒಲಿಯುತ್ತಾರೆ. ಯಾವುದಕ್ಕೂ ಒಮ್ಮೆ ಅವರ ಗಂಡ/ಹೆಂಡತಿಯ ಅನುಮತಿ ಪಡೆದರೆ ಸೂಕ್ತ.
ಅದೃಷ್ಟ ಸಂಖ್ಯೆ -420, ಶುಭದಿನ -ವಾರದ ಎಲ್ಲಾ ದಿನ
ಮೀನ : ನಿದ್ರೆಯಲ್ಲಿ ಹೆಚ್ಚು ಕಾಲ ಕಳೆಯಲು ಪ್ರಯತ್ನಿಸಿ. ನಿದ್ರೆಯಲ್ಲಿಯೇ ಸುಖವಿದೆ. ನಿದ್ರೆಯಲ್ಲೂ ನಿಮ್ಮ ಹೆಂಡತಿ ಪ್ರಾಣ ಹಿಂಡಿದ್ರೆ ನಿಮ್ಮ ದುರಾದೃಷ್ಟ. ನಿಮ್ಮ ಗಂಡನ ಜೊತೆ ಹೆಣಗಿಹೆಣಗಿ ಸಾಕಾಗಿದೆಯೇ, ಪೋಲಿಸ್‌ಗೊಂದು ಕಂಪ್ಲೆಂಟ್‌ ಕೊಡಿ.
ಅದೃಷ್ಟ ಸಂಖ್ಯೆ -333, ಶುಭದಿನ -ವಾರದ ಎಂಟನೇ ದಿನ


Friday, July 20, 2007

ಸುರಿಯುತ್ತಲೇ ಇದೆ ಮಳೆ


ನನಗೆ ಈಚೀಚೆಗೆ ಮಳೆ
ಎಂದರೆ ಭಯ! ಅಸಹ್ಯ, ಜಿಗುಪ್ಸೆ..
ಒಂದೊಂದು ಹನಿ
ಮೈ ಮೇಲೆ ಬಿದ್ದರೂ ಯಾತನೆ
ಅಲ್ಲೆಲ್ಲ ಬೊಬ್ಬೆಗಳು!

ಸುರಿಯುತ್ತಲೇ ಇದೆ ಮಳೆ
ಮುಗಿಯದ ಕಣ್ಣೀರಿನಂತೆ!
ಯಾಕೆ ಮಗು ಮಲಗಲಿಲ್ವೇ
ನಿದ್ದೆ ಬರುತ್ತಿಲ್ವೇ ಎಂದು ಕೇಳೋರಿಲ್ಲ..
ನಾನು ಎಚ್ಚರವಾಗಿದ್ದೇನೆ ದೆವ್ವದಂತೆ!

ಹೊರಗಡೆ ಜಿಟಿಜಿಟಿ ಮಳೆ
ಒಳಗೆ ನಾ ಒಂಟಿ
ಮಳೆಯನ್ನು ನೋಡುವ ಬೆರಗು
ನನ್ನಲ್ಲಿ ಉಳಿದಿಲ್ಲ..
ನಾನು ನಿಜಕ್ಕೂ ಬದುಕಿದ್ದೇನೆಯೇ?

ಗಡಿಯಾರ ಓಡುತ್ತಿದೆ.. 10,11,12..
ನಿಂತ ಮಳೆ.. ಶುರುವಾದ ಮಳೆ
ಎಲ್ಲವೂ ಗೊತ್ತಾಗುತ್ತಿದೆ...
ದೀಪ ಆರಿಸಲು ಮನಸ್ಸಾಗುತ್ತಿಲ್ಲ..
ನನ್ನ ಪಾಲಿಗೆ ಉಳಿದ ಬೆಳಕು ಅದೊಂದೇ

ಸದ್ಯಕ್ಕೆಎಲ್ಲವೂ ಖಾಲಿ... ಹೆದರಿಸುವ
ನಾಳೆಗಳು ನಿದ್ದೆ ಕೆಡಿಸುವ ದೆವ್ವಗಳು..
ಮಳೆ ಬಂದು ಭೂಮಿ ತಂಪಾಗುತ್ತದೆ..
ನನ್ನ ಎದೆ ನೆನೆಯುವಂತಹ ಮಳೆ
ಮುಂದೆಯಾದರೂ ಇದೆಯೋ ಇಲ್ಲವೋ?

ಎಲ್ಲೋ ಗುಡುಗಿದ ಶಬ್ದ.. ಮತ್ತೆ ಮಳೆ..
ಹಾಸಿದ ಹಾಸಿಗೆ ಮೇಲೆ ನಾನು..
ನನ್ನ ಜೊತೆಗೆ ದಿಂಬು, ಅದರ ಮೇಲೆ
ಕಪ್ಪು ಹಸಿರು ಚೌಕಿನ ಉಲ್ಲನ್ ರಗ್ಗು..
ಅವಕ್ಕೂ ನನ್ನ ಸಂಗ ಬೇಡವೆನ್ನಿಸಿರಬೇಕು!

ಉಲ್ಲಾಸದ ಹೂಮಳೆ ಎಂದು
ಹೊಟ್ಟೆತುಂಬಿದವರು ಕುಣಿದು ಕುಪ್ಪಳಿಸಲಿ..
ದೇವರಿಗಿಂತಲೂ ಹೆಚ್ಚು ಮಳೆಯನ್ನು
ನಾ ದ್ವೇಷಿಸುತ್ತೇನೆ.. ಸಾಧ್ಯವಿದ್ದಿದ್ದರೆ,
ಕುತ್ತಿಗೆ ಹಿಡಿದು ಉಸಿರು ನಿಲ್ಲಿಸುತ್ತಿದ್ದೆ!

ಓ ಸುತ್ತಲೂ ಅಂಧಕಾರ..
ಇದ್ದಒಂದೇ ಒಂದು ಬೆಳಕು ಸಹಾ ಕಣ್ಮರೆ..
ಪಾಪಿ ಮಳೆ ದೀಪ ಆರಿಸಿತು..
ನೀನುಏನು ಬೇಕಾದರೂ ಆರಿಸಬಹುದು
ನನ್ನೆದೆಯ ಅಗ್ನಿಕುಂಡ ಆರಿಸಲಾರೇ..

ತಾಕತ್ತಿದ್ದರೆ ಪ್ರಯತ್ನಿಸು..
ನಿನಗೆ ಒಳ್ಳೆಯದಾಗಲಿ..

Wednesday, July 18, 2007

ಹೆಂಗಸರಿಗಾಗಿ ಮಾತ್ರ!


ಈ ಲೇಖನವನ್ನು ಹೆಂಗಸರಷ್ಟೇ ಓದಬೇಕು. ಹೆಂಗ(ಹ)ಸು ಅಲ್ಲದ ಗಂಡ(ಹ)ಸು ಓದಬೇಕು ಅನ್ನಿಸಿದರೆ, ಹೆಂಗಸರ ಅನುಮತಿ ಪಡೆಯುವುದು ಕಡ್ಡಾಯ.


ಮಾತೃ ಸ್ವರೂಪಿ, ದೈವ ಸ್ವರೂಪಿ ಎಂದೆಲ್ಲಾ ಹೊಗಳಿ ಅಟ್ಟಕ್ಕೇರಿಸಿರುವ ಪುರುಷ ಸಮುದಾಯ, ಯುಗಯುಗಗಳಿಂದಲೂ ಸ್ತ್ರೀಶೋಷಣೆಯನ್ನು ನಾನಾ ರೂಪದಲ್ಲಿ ತೀವ್ರಗೊಳಿಸುತ್ತಲೇ ಬಂದಿದೆ. ಆ ಬಾಣವನ್ನು ತಿರುಗುಬಾಣವನ್ನಾಗಿಸುವ ತಂತ್ರಗಳು ನಿಮಗಾಗಿ ಅನಾವರಣಗೊಂಡಿವೆ!


‘ಅಪ್ಪನಿಗೆ ತಕ್ಕ ಮಗ’ ಎಂಬ ಬಿರುದು ಪಡೆಯುವ ಹುಚ್ಚಲ್ಲಿ ಕಾಡಿಗೆ ಹೋದ ರಾಮ, ಪಾಪ ಸೀತೆಯನ್ನೂ ಜೊತೆಗೆ ಕರೆದೊಯ್ದ! ಗಂಡನ ಜೊತೆ ಕಲ್ಲು-ಮುಳ್ಳು ತುಳಿಯುವುದು ನನ್ನ ಹಣೆಬರಹ ಅಂದುಕೊಂಡ ಸೀತೆ ವನವಾಸ ಮುಗಿಸಿದ್ದಳು. ನಂತರ ಸಿಂಹಾಸನವೇರಿದ ರಾಮ, ಆದೇ ಸ್ವಾಮಿ ನಿಮ್ಮ ಮಹಾಮಹಿಮ ಶ್ರೀರಾಮ, ಸೀತಾದೇವಿಯನ್ನು ಕಾಡಿಗೆ ಅಟ್ಟಿದ್ದು ಸರಿಯೇ? ಅದೂ ತುಂಬು ಗರ್ಭಿಣಿಯನ್ನು. ಭ್ರೂಣಹತ್ಯೆಯ ಸಿಸ್ಟಮ್‌ ಆಗ ಇದ್ದಿದ್ದರೆ, ಅನುಮಾನದ ಪಿಶಾಚಿ ಅದಕ್ಕೂ ಹಿಂದೆ ಮುಂದೆ ನೋಡ್ತಾಯಿರಲಿಲ್ಲ ಅನ್ನಿಸುತ್ತೆ!


ಪತಿದೇವ ಸತ್ತ ಕೂಡಲೇ ಸತಿ, ಅವನ ಚಿತೆಗೆ ಹಾರಬೇಕಂತೆ. ‘ಗಂಡ ಸತ್ತರೆ ಹೆಂಡತಿ ವಿಧವೆ, ಹೆಂಡ್ತಿ ಸತ್ತರೆ ಗಂಡನಿಗೆ ಮದುವೆ’ -ಯಾಕೆ ಈ ದಬ್ಬಾಳಿಕೆಯ ಕಾನೂನು? ಸರಿ ಬಿಡಿ, ಕಾಲ ಬದಲಾಗಿದೆ. ಹೆಣ್ಣು ಬದಲಾಗಿದ್ದಾಳೆ. ಪ್ಯಾಂಟ್‌ಉ-ಶರ್ಟ್‌ಉ ತೊಟ್ಟು ಅವನಿಗೆ ಸರಿಸಮನಾಗಿ ಬೆಳೆದಿದ್ದಾಳೆ. ಆದ್ರೆ ಇಷ್ಟನ್ನೇ ಕ್ರಾಂತಿಯಂದ್ರೆ, ದೇವೇಗೌಡ್ರು ಸಹಾ ನಗ್ತಾರೇ? ನಿಜವಾದ ಕ್ರಾಂತಿ ಅಂದ್ರೆ; ಹೆಣ್ಣು ಗಂಡಿನ ಡ್ರೆಸ್‌ ತೊಟ್ಟಂತೆ, ಗಂಡಿಗೆ ಹೆಣ್ಣಿನ ಡ್ರೆಸ್‌ ತೊಡಿಸಬೇಕು? ಅರ್ಥವಾಯ್ತಾ?


ಮಹಿಳಾ ಮಣಿಗಳೇ, ಸ್ತ್ರೀಸಿಂಹಗಳೇ ನಿಮ್ಮ ಉನ್ನತಿಗಾಗಿ, ಪುರುಷರ ಅವನತಿಗಾಗಿ ನಾನು ಸಾಕಷ್ಟು ಅಧ್ಯಯನ ಮಾಡಿ ಒಂದಷ್ಟು ಸಂಗತಿಗಳನ್ನು ಕಂಡುಹಿಡಿದಿದ್ದೇನೆ. ಪುಣ್ಯಕ್ಕೆ ಯಾವ ವಿಶ್ವವಿದ್ಯಾಲಯವೂ ಪಿಎಚ್‌ಡಿ-ಗಿಎಚ್‌ಡಿ ಕೊಟ್ಟಿಲ್ಲ! ಅದನ್ನು ನೀವೆಲ್ಲಾ ಪಾಲಿಸಬೇಕು ಅನ್ನೋದು ನನ್ನ ವಿನಂತಿ.


ಸಂಡೇ ಹೀಗೆ ಮಾಡಿ : ಗಂಡನಿಗೆ ಭಾನುವಾರ ರಜೆ ಇದ್ದೇ ಇರುತ್ತೆ. ನೀವು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪೇಪರ್‌ನಲ್ಲಿ ಮತ್ತು ಟೀವಿಯಲ್ಲಿ ಬರೋ ಮಾಹಿತಿಗಳನ್ನು ಬರೆದಿಟ್ಟುಕೊಂಡು, ಸಂಡೇಗೆ ಸ್ಕೆಚ್‌ ಹಾಕಬೇಕು. ಶನಿವಾರದಿಂದಲೇ ಪತಿದೇವರನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ. ಕನಿಷ್ಟ ಆ ತರಹ ನಟಿಸಿ!


ಶನಿವಾರ ರಾತ್ರಿ ಮನೆಯಲ್ಲಿ ಆಡುಗೆ ಮಾಡಲೇ ಬೇಡಿ(ಕೆಲಸ ಕೆಡುತ್ತೆ) ಹೋಟೆಲ್‌ನಿಂದ ಊಟ ತನ್ನಿ! ಆದರೆ, ಅದನ್ನು ನಾನೇ ನಿಮಗಾಗಿ ತಯಾರಿಸಿದ್ದೆ ಅಂತ ಒಂದಿಷ್ಟು ಪೂಸಿ ಬಿಡಿ. ಅಲ್ಲಿಗೆ ನಿಮ್ಮ ಹಾದಿಗೆ ಗಂಡ ಅನ್ನೋ ಪ್ರಾಣಿ ಬಂದಿರ್ತಾನೆ!ಬೆಳಿಗ್ಗೆ ನಿಮ್ಮ ಸವಾರಿ ‘ಜುಂ’ ಅಂಥ ಶುರುವಾಗಲಿ. ನಿಮ್ಮ ಪಿಳ್ಳೆಪಿಸುಗನ್ನು ಬೇಕಾದರೆ ಜೊತೆಗೆ ಕಟ್ಟಿಕೊಳ್ಳಿ. ಹೇಗೂ ಅವನ್ನು ಸಮಾಧಾನ ಮಾಡೋಕೆ, ನಿಮ್ಮ ಪತಿದೇವರು ಇದ್ದೇ ಇರ್ತಾರೆ!


ಸರಿ, ಎಲ್ಲಾ ಆದ ಮೇಲೆ ಒಂದು ಸ್ಯಾರಿ ಅಂಗಡಿಗೆ ಗೂಳಿಯ ತರಹ ನುಗ್ಗಿ ಬಿಡಿ. ಗಡಿಯಾರದ ಹಂಗನ್ನು ಮರೆತು, ಸ್ಯಾರಿ ಸೆಲೆಕ್ಷನ್‌ನಲ್ಲಿ ಮೈಮರೆಯಿರಿ. ನಾನಾ ಸ್ಯಾರಿ ತೋರಿಸಿ-ತೋರಿಸಿ ಅಂಗಡಿಯವನಿಗೆ ಬೇಸರವಾದರೂ, ನೋಡಿ-ನೋಡಿ ನಿಮಗಂತೂ ಬೇಸರವಾಗಬಾರದು! ನಿಮ್ಮ ಮನಸ್ಸಿಗೆ ಇಷ್ಟ ಆಗಲಿಲ್ಲ ಅಂದ್ರೆ ಇನ್ನೊಂದು ನಾಲ್ಕು ಅಂಗಡಿಗೆ ನುಗ್ಗಿ.


ಮಧ್ಯಾಹ್ನ ಆಯಿತು ಹೊಟ್ಟೆ ಕಚ್ಚುತ್ತಿದೆ ಅನ್ನಿಸಿದ್ರೆ ಅಲ್ಲೇ ಪಕ್ಕದಲ್ಲಿರೋ ಹೋಟೆಲ್‌ಗೆ ದಾಳಿ ಮಾಡಿ. ಪಾಪ ನಿಮ್ಮನ್ನು ಕಟ್ಟಿಕೊಂಡ ಪುಣ್ಯ(?)ಕ್ಕೆ ಗಂಡ ಸುಮ್ಮನೇ ಹಿಂದೆ ಬರ್ತಾನೆ, ಬಿಲ್‌ ಕೋಡೋಕೆ!.


ಕೊನೆಗೆ ಯಾವುದಾದರೂ ಅಂಗಡಿಯಲ್ಲಿ ಇದೊಂದು, ಇದು ನಿಮ್ಮಮ್ಮನಿಗೆ, ಅದು ನಿಮ್ಮ ತಂಗಿಗೆ ಅಂತೆಲ್ಲಾ ಹೇಳಿ ಒಂದು ನಾಲ್ಕು ಸೀರೆ ಪ್ಯಾಕ್‌ ಮಾಡಿಸಿ. ಮನೆಗೆ ಬಂದ ಮೇಲೆ ಸೀರೆಗಳನ್ನು ನಿಮ್ಮ ಬೀರುವಿನಲ್ಲಿ ಜೋಪಾನವಾಗಿ ಎತ್ತಿಡಿ!


ಚಾಲೂ ಆಗಿ : ಅಡಿಗೆ ಮನೆ ಎನ್ನುವ ಸೆರೆಮನೆಯಿಂದ ಸದಾ ದೂರವಿಡಿ. ಹೊಸರುಚಿ ಹೆಸರಲ್ಲಿ ಅಡಿಗೆ ಗಬ್ಬೆಬ್ಬಿಸಿದ್ರೆ(ಉಪು, ಹುಳಿ, ಖಾರ), ಪಾಪ ನಿಮ್ಮ ಗಂಡನೇ ಶರಣಾಗ್ತಾನೆ. ಬೇರೆ ದಾರಿಯೇ ಇಲ್ಲ! ನಿಮ್ಮ ಗಂಡನ ಮೇಲೆ ಅತಿಯಾದ ಪ್ರೀತಿಯಿರುವವರಂತೆ ಆಗಾಗ ಕೆಲವು ಟ್ರಿಕ್ಸ್‌ ಮಾಡ್ತಾನೇ ಇರಬೇಕು(ಎಷ್ಟೆಲ್ಲಾ ಸೀರಿಯಲ್‌ ನೋಡ್ತೀರಾ? ನಿಮಗೆ ಇದು ಗೊತ್ತಿಲ್ಲವೇ?).


ನಿಮ್ಮ ಗಂಡ ಅಥವಾ ಮಕ್ಕಳು ಅಥವಾ ನಿಮ್ಮ ಅತ್ತೆ ಯಾರಿಗಾದರೂ ಸರಿ, ಸಣ್ಣಪುಟ್ಟ ಕಷ್ಟಕ್ಕೆಲ್ಲಾ ತಲೆಕೆಡಿಸಿಕೊಳ್ಳಿ(ಕೂದಲನ್ನು ಮಾತ್ರ ಕೆಡಿಸಿಕೊಳ್ಳಿ). ದೇವರಿಗೆ ಅವರ ಹೆಸರಲ್ಲಿ ಎಲ್ಲಾ ಹರಕೆ ಕಟ್ಟಿ. ಬೇಕು ಅಂದ್ರೆ ನಿಮ್ಮ ಯಜಮಾನ್ರ ಮಂಡೆ ಕೊಡ್ತೀನಿ ಅಂತಾ ಧಾರಾಳವಾಗಿ ಹರಕೆ ಕಟ್ಟಬಹುದು! ಹೀಗೆ ಹರಕೆ ನೆಪದಲ್ಲಿ ಕನಿಷ್ಟ ವರ್ಷಕ್ಕೆರಡು ಸಲ ಆದ್ರೂ ಟೂರ್‌ ಮಾಡಿ.


ಮನೆಯಲ್ಲಿದ್ದಾಗಲೂ ಅಷ್ಟೇ. ಆ ದೇವಸ್ಥಾನ, ಈ ದೇವಸ್ಥಾನ ಅಂತಾ ಬೇಕಾದ ಸಿನಿಮಾಗಳನ್ನು ನೋಡೋದು ಮರೀಬೇಡಿ!ಅಡಿಗೆ ಕೆಲಸದಿಂದ ತಪ್ಪಿಸಿಕೊಂಡಂತೆಯೇ, ಬಟ್ಟೆ ಒಗೆಯುವ ಕೆಲಸದಿಂದ ಸಹಾ ಪಾರಾಗಬಹುದು! ಬಟ್ಟೆ ತೊಳೆಯೋ ನೆಪದಲ್ಲಿ ಅಥವಾ ಐರನ್‌ ಮಾಡೋ ನೆಪದಲ್ಲಿ ನಿಮ್ಮ ಗಂಡನ ಒಳ್ಳೊಳ್ಳೆ ಬಟ್ಟೆಗಳನ್ನು ಚಿಂದಿ ಮಾಡಿ! ಮತ್ತೆ ನಿಮಗೆ ಆ ಕೆಲಸ ಹೇಳಿದ್ರೆ ನನ್ನನ್ನು ಕೇಳಿ.


ನಿಮ್ಮ ಮಾತನ್ನು ನಿಮ್ಮ ಗಂಡ ಕೇಳದೇ ಇನ್ಯಾರು ಕೇಳ ಬೇಕು? ಡೈವರ್ಸ್‌ ಮಂತ್ರವನ್ನು ಆಗಾಗ ಪಠಿಸುತ್ತಿರಿ. ‘ನಿಮ್ಮ ಹೆಸರು ಬರೆದಿಟ್ಟು ಆತ್ಯಹತ್ಯೆ ಮಾಡಿಕೊಳ್ತೇನೆ... ವರದಕ್ಷಿಣೆ ಕೇಸ್‌ಗೆ ಬೇಲ್‌ ಇಲ್ಲ...’ ಅನ್ನೋದನ್ನು ಆಗಾಗ ನೆನಪು ಮಾಡ್ತಾಯಿರಿ. ಅಂತಹ ಕ್ರೆೃಂ ಕಾರ್ಯಕ್ರಮಗಳು ಟೀವಿಯಲ್ಲಿ ಬಂದಾಗ, ಗಂಡನಿಗೆ ತಪ್ಪದೇ ತೋರಿಸುವುದು ನಿಮ್ಮ ಕರ್ತವ್ಯ.


ಅಭಿನಯಶ್ರೀ : ಜೀವನದಲ್ಲಿ ಅದರಲ್ಲೂ ಗಂಡನ ಮುಂದೆ ನೀವು ಎಷ್ಟು ಚೆನ್ನಾಗಿ ಅಭಿನಯಿಸುವಿರೋ, ಅಷ್ಟು ಸುಖ ನಿಮ್ಮದಾಗುತ್ತದೆ. ನಿಮ್ಮ ಗಂಡನ ಜುಜುಬಿ ಸಂಪಾದನೆ, ನಿಮ್ಮ ಮೇಕಪ್ಪಿಗೆ ಸಹಾ ಸಾಕಾಗುತ್ತಿಲ್ಲ ಅನ್ನಿಸಿದ್ರೆ, ಗಂಡನನ್ನು ಓಟಿ ಮಾಡಲು ಪ್ರೇರೇಪಿಸಿ. ಬಿಡುವಿನ ವೇಳೆಯಲ್ಲಿ(ಭಾನುವಾರವೂ ಸೇರಿದಂತೆ)ಪಾರ್ಟ್‌ ಟೈಂ ಕೆಲಸ ಮಾಡುವಂತೆ ಮೆದುಳನ್ನು ಕೆಡಿಸಿ, ಗೊಬ್ಬರ ಮಾಡಿ.


ಮದುವೆಯಾಗಿ ಗಂಡನ ಮನೆಗೆ ಹೆಜ್ಜೆಯಿಟ್ಟ ತಕ್ಷಣ, ಅತ್ತೆಯನ್ನು ‘ಅಮ’್ಮ ಅಂತಾ, ಮಾವನನ್ನು ‘ಅಪ್ಪ’ ಅನ್ನುತ್ತಾ ಮಾತಲ್ಲಿಯೇ ಮಂದಿರ ಕಟ್ಟಿ. ಮಗನನ್ನು ಅವರ ಪಾಲಿಗೆ ವಿಲನ್‌ನಂತೆ ಸೃಷ್ಟಿ ಮಾಡಿ. ಅತ್ತೆ ಮನೆಯಲ್ಲಿದ್ದರೆತಲೆಕೆಡಿಸಿಕೊಳ್ಳಬೇಡಿ. ನಯವಾದ ಮಾತುಗಳಿಂದಲೇ ಮನೆಕೆಲಸವನ್ನು ಅವಳಿಗೆ ಒರಗಿಸಿಬಿಡಿ.


ಬೆಳಿಗ್ಗೆಯಿಂದ ರಾತ್ರಿ 12ರವರೆಗೆ ಟೀವಿ ನೋಡಿ. ಸೀರಿಯಲ್‌ಗಳಲ್ಲಿ ಚೆಲುವೆಯರು ಧರಿಸಿರೋ ಸೀರೆಗಳನ್ನು ಗಮನಿಸಿದ್ರೆ, ನಿಮ್ಮ ಸೀರೆ ಸೆಲೆಕ್ಷನ್‌ ಸುಲಭವಾಗುತ್ತೆ. ಒಡವೆಗಳನ್ನು ವಿಶೇಷವಾಗಿ ಗಮನಿಸಿ. ಗ್ಲಿಸರಿನ್‌ ಬಾಟಲ್‌ ಅನ್ನು ಸದಾ ಪಕ್ಕದಲ್ಲಿಟ್ಟುಕೊಳ್ಳಿ. ಸಣ್ಣಪುಟ್ಟದ್ದಕ್ಕೆಲ್ಲಾ ಲೀಟರ್‌ಗಟ್ಟಲೇ ಕಣ್ಣೀರು ಸುರಿಸಿ. ಕಣ್ಣೀರಿಗೆ ಸೋಲದ ಗಂಡ(ಹ)ಸು ಯಾವುದೂ ಇಲ್ಲ! ಅದು ನಿಮಗೆ ಗೊತ್ತಿರಲಿ.


‘ನಮ್ಮಪ್ಪನ ಮನೇಲಿ ಹೆಂಗೆಲ್ಲಾ ಇದ್ದೆ? ಎಂಥೆಂಥ ಗಂಡುಗಳು ನನ್ನ ಮೆಚ್ಚಿದ್ದರು. ನನ್ನ ಗ್ರಹಚಾರ ನೀವು ಗಂಟು ಬಿದ್ರಿ’ ಅಂತ ಮೊಟಕುತ್ತಿರಿ. ಗಂಡ(ಹ)ಸು ಮೆತ್ತಾಗಾಗದಿದ್ರೆ ಕೇಳಿ. ನಿಮ್ಮ ಅಕ್ಕಪಕ್ಕದ ಮಹಿಳಾ ಸಂಘ ಹಾಗೂ ವನಿತಾ ಜಾಗೃತಿ ಮಂಡಳಿಗಳ ಸದಸ್ಯತ್ವ ಪಡೆಯಿರಿ.


ಮಹಿಳಾ ಸಂಘಗಳು ಪುರುಷರಿಗೆ ಮಂಗಳಾರತಿ ಎತ್ತಿದ್ದನ್ನು ರೆಕ್ಕೆಪುಕ್ಕ ಕಟ್ಟಿ ನಿಮ್ಮ ಗಂಡನ ಮುಂದೆ ಬಣ್ಣಿಸಿ. ನಿಮ್ಮ ಗತ್ತು-ದೌಲತ್ತುಗಳ ಪ್ರದರ್ಶನಕ್ಕೆ ಆಗಾಗ ಸನ್ಮಾನಗಳನ್ನು ಮಾಡಿಸಿಕೊಳ್ಳಿ. ಸಂಘ ಸಂಸ್ಥೆಗಳಿಗೆ ಉದಾರವಾಗಿ ದೇಣಿಗೆ ನೀಡಿದ್ರೆ ಸನ್ಮಾನಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆಗ ನಿಮ್ಮ ಬಗ್ಗೆ ಗಂಡನಿಗೆ ಒಂದು ಮೂಲೆಯಲ್ಲಿ ಭಯ ಹುಟ್ಟುತ್ತೆ! ಭಯಯಿದ್ರೆ ನಿಮ್ಮ ತಾಳಕ್ಕೆ ಹೆಜ್ಜೆ ಹಾಕ್ತಾನೆ.


ಸದ್ಯಕ್ಕೆ ಇಷ್ಟು ಸಾಕು. ಮತ್ತಷ್ಟು ‘ಮನೆಹಾಳ್‌’ ಐಡಿಯಾಗಳೊಂದಿಗೆ ಇನ್ನೊಂದು ಸಲ ಬರ್ತೇನೆ.


(ಎಚ್ಚರಿಕೆ : ಈ ಲೇಖನ ಓದುವುದು ಗಂಡಸರ ಆರೋಗ್ಯಕ್ಕೆ ಒಳ್ಳೆಯದು!)

ಹುಟ್ಟಿದ ಹಬ್ಬದದಿನ 'ದುರಂತ ನಾಯಕಿ' ಕಲ್ಪನಾ ನೆನಪು!


ಏನೇ ಆಗಲಿ, ಮಿನುಗುತಾರೆ ಕಲ್ಪನಾ ಇನ್ನು ಸ್ವಲ್ಪ ದಿನ ನಮ್ಮ ಜೊತೆ ಇರಬೇಕಿತ್ತು.


ಕನ್ನಡ ಚಿತ್ರರಂಗದ ದುರಂತ ನಾಯಕಿಯರಲ್ಲಿ ಕಲ್ಪನಾ ಸಹಾ ಒಬ್ಬರು! ಇಂದು ಅವರನ್ನು ನೆನೆಯಲೊಂದು ನೆಪ ಸಿಕ್ಕಿದೆ. ಬದುಕಿದ್ದಷ್ಟು ವರ್ಷ, ಚಿತ್ರರಸಿಕರ ರಂಜಿಸಿದವರು ಕಲ್ಪನಾ. ಇಂದು(ಜು.18) ಅವರು ನಮ್ಮೊಂದಿಗೆ ಇದ್ದಿದ್ದರೆ, ಸಂಭ್ರಮದ ಹ್ಯಾಪಿ ಬರ್ತ್‌ ಡೇ ಹೇಳಬಹುದಿತ್ತು.. ಆ ಅವಕಾಶ ನಮಗೆನಿಮಗೆ ಇಲ್ಲ ಬಿಡಿ.


ಬೆಳ್ಳಿಮೋಡ, ಶರಪಂಜರ, ಎರಡು ಕನಸು ಮತ್ತಿತರ ಚಿತ್ರಗಳಲ್ಲಿನ ಪಾತ್ರಗಳು ಕಲ್ಪನಾಗೆ 'ದುರಂತ ನಾಯಕಿ' ಎಂಬ ಬಿರುದನ್ನೇ ಕೊಟ್ಟಿದ್ದವು. ಬಾಳಸಂಗಾತಿಯಾಗಲು ಆತ ಬಂದೇ ಬರುತ್ತಾನೆ.. ನನ್ನನ್ನು ಆತ ಮದುವೆಯಾಗುತ್ತಾನೆ ಎಂಬ ಕಲ್ಪನಾರ ಕನಸು, ಕಲ್ಪನೆಯೇ ಆಯಿತು. ಮುರಿದ ಮನಸ್ಸು, ಆತ್ಮಹತ್ಯೆಗೆ ಪ್ರೇರಣೆ ನೀಡಿತು. ಕೈ ಬೆರಳಿನಲ್ಲಿದ್ದ ವಜ್ರದ ಉಂಗುರ , ಸಾವಿಗೆ ನೆರವು ನೀಡುವುದಾಗಿ ಹೇಳಿತು! ನೆರವನ್ನು ಕಲ್ಪನಾ ನಿರಾಕರಿಸಲಿಲ್ಲ. ಆ ಮೂಲಕ ಬದುಕಿಗೆ ಮಧ್ಯದಲ್ಲಿ ಫುಲ್‌ಸ್ಟಾಪ್ ಇಟ್ಟು, ನಿಜ ಬದುಕಿನಲ್ಲೂ ಕಲ್ಪನಾ 'ದುರಂತ ನಾಯಕಿ'ಯೇ ಆದರು ಎನ್ನುತ್ತಾರೆ ಕೆಲವರು. ಕಲ್ಪನಾಗೆ ಕೈಕೊಟ್ಟವರು ಯಾರು? ಉತ್ತರಿಸಲು ಅವರಿಲ್ಲ..


ಸ್ತ್ರೀ ನಾಟಕ ಮಂಡಳಿ ಮುಖಾಂತರ ಚಿತ್ರರಂಗಕ್ಕೆ ಕಾಲಿಟ್ಟ ಕಲ್ಪನಾ, ಮಿನುಗುತಾರೆ. ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ಕೃಷ್ಣಮೂರ್ತಿ ಮತ್ತು ಜಾನಕಮ್ಮ ದಂಪತಿಗಳ ಮಗಳಾದ ಕಲ್ಪನಾಗೆ, ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳತ್ತ ಆಸಕ್ತಿ. ಮುಖಕ್ಕೆ ಬಣ್ಣ ಬಳಿಸಿಕೊಳ್ಳುವ ಹಂಬಲ. ಅವರ ಅಭಿನಯಕ್ಕೆ ವೇದಿಕೆ ಕಲ್ಪಿಸಿದ್ದು ; ರಂಗಭೂಮಿಯ ಗುಡಿಗೇರಿ ಬಸವರಾಜು.


'ಸಾಕುಮಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕಲ್ಪನಾ, ಕೃಷ್ಣಗಾರುಡಿ, ಸಂಸಾರ ನೌಕೆ, ಬೆಳ್ಳಿ ಮೋಡ, ನಾಂದಿ, ಬಂಗಾರದ ಹೂ, ಗೆಜ್ಜೆಪೂಜೆ, ಶರಪಂಜರ, ಉಯ್ಯಾಲೆ, ಸರ್ವಮಂಗಳ ಹೀಗೆ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 3ಸಲ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದ ಕಲ್ಪನಾಗೆ ಪುಸ್ತಕ ಓದುವ ಹವ್ಯಾಸವೂ ಇತ್ತು.


ತಮ್ಮ ಹೃದಯಸ್ಪರ್ಶಿ ಅಭಿನಯದಿಂದಾಗಿಯೇ, ಕಲ್ಪನಾ ಇಂದಿಗೂ ಮಿನುಗುತಾರೆ ಆಗಿಯೇ ಉಳಿದಿದ್ದಾರೆ. 'ಮುದ್ದಿನ ಗಿಣಿಯೇ ಬಾರೋ....', 'ಅರೆರೆರೇ ಗಿಣಿರಾಮ..' ಮತ್ತಿತರ ಹಾಡುಗಳು ಟೀವಿಯಲ್ಲಿ ಬಂದಾಗಲೆಲ್ಲಾ ಕಲ್ಪನಾ ಕಣ್ಮುಂದೆ ನಿಲ್ಲುತ್ತಾರೆ. ಏನೇ ಆಗಲಿ, ಕಲ್ಪನಾ ಇನ್ನು ಸ್ವಲ್ಪ ದಿನ ನಮ್ಮ ಜೊತೆ ಇರಬೇಕಿತ್ತು.

Tuesday, July 17, 2007

ಇಂದು ಪ್ರೀತಿ! ನಾಳೆಯೇ ಮದುವೆ! ನಾಡಿದ್ದು ವಿಚ್ಛೇದನ!


ಹಿಂದೆ ಹೆಂಡತಿ ಬಿಟ್ಟವನು, ಗಂಡನ ಬಿಟ್ಟವಳು ಎಂದು ಸಂಬಂಧ ಒಲ್ಲೆ ಎಂದವರನ್ನು ಸಮಾಜ ದೂಷಿಸುತ್ತಿತ್ತು! ಆದರೆ ಇಂದು? ಯಾರು ಮನೆ ದೋಸೆ ನೆಟ್ಟಗಿದೆ?
ಉದ್ಯಾನ ನಗರಿ, ಐಟಿ ನಗರಿ ಎಂಬ ಖ್ಯಾತಿಯ ಬೆಂಗಳೂರು, ವಿಚ್ಛೇದಿತರ ನಗರಿ ಎಂದು ಸದ್ಯದಲ್ಲೇ ಕುಖ್ಯಾತವಾದರೆ ಅಚ್ಚರಿಯೇನಿಲ್ಲ!


ನವದೆಹಲಿಯನ್ನು ಹೊರತುಪಡಿಸಿದರೆ, ಬೆಂಗಳೂರಿನಲ್ಲಿಯೇ ವಿಚ್ಛೇದನಗಳು ಹೆಚ್ಚು. ಪ್ರತಿ ವರ್ಷ 4ಸಾವಿರಕ್ಕೂ ಅಧಿಕ ಮಂದಿ, ವೈವಾಹಿಕ ಸಂಬಂಧವನ್ನು ಮುರಿದುಕೊಳ್ಳುತ್ತಿದ್ದಾರೆ ಎನ್ನುತ್ತವೆ ಅಂಕಿಅಂಶಗಳು. ಈ ವಿಚಾರ ಕೇಳಿ ವಕೀಲರು, ಸಿಹಿ ಹಂಚಿದರಂತೆ ಎಂಬುದು ಕೇವಲ ಕುಹಕ!


ಹಿಂದಿನ ಮದುವೆಗೂ, ಇಂದಿನ ಮದುವೆಗೂ ವ್ಯತ್ಯಾಸಗಳಿವೆ. ಮದುವೆ ಎನ್ನುವುದು ಮೊದಲು, ಮನೆಮಂದಿ ಸಂಭ್ರಮಿಸುವ ಹಬ್ಬವಾಗಿತ್ತು. ಮನೆಗೆ ಬರುವ ಸೊಸೆ, ಗಂಡನ ಜೊತೆಗೆ ಮನೆಮಂದಿ ಜೊತೆಗೂ ಹೊಂದಿಕೊಳ್ಳಬೇಕಿತ್ತು. ಸಂಸಾರದಲ್ಲಿ ಸರಿಗಮವಿತ್ತು. ಎಲ್ಲೂ ಅಪಸ್ವರವಿರಲಿಲ್ಲ. ಗಂಡಹೆಂಡಿರ ಜಗಳ ಉಂಡು ಮಲಗಿದರೆ ಮುಗಿಯುತ್ತಿತ್ತು. ಮುಗಿಯದಿದ್ದರೆ, ಮನೆ ಹಿರಿಯರು ಬುದ್ಧಿ ಹೇಳಿ ಮುಗಿಸುತ್ತಿದ್ದರು. ಆದರೆ ಈಗ? ಇಂದು ಪ್ರೀತಿ, ನಾಳೆ ಮದುವೆ, ನಾಡಿದ್ದು ವಿಚ್ಛೇದನ!


ಈಗಿನ ಗಂಡಹೆಂಡಿರ ಜಗತ್ತಿನಲ್ಲಿ ಯಾರೂ ಇಲ್ಲ! ಯಾರೂ ಅವರಿಗೆ ಬೇಕಾಗಿಲ್ಲ! ಮುನಿದರೆ ಸಮಾಧಾನ ಹೇಳಲು ಮನೆಯಲ್ಲಿ ಹಿರಿಯರಿಲ್ಲ! ಇದ್ದರೂ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ. ಅವಸರದ ಆಧುನಿಕ ಜಗತ್ತು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆಯೋ?

Wednesday, July 4, 2007

ಟಾಪ್‌-5 : ಇದು ಒಂದು ಮುತ್ತಿನ ಕಥೆ!


ರಾಜ್‌ಕುಮಾರ್‌ ಎಲ್ಲಿಂದಲೋ ಬಂದವರಲ್ಲ.. ನಮ್ಮಂತೆಯೇ ನಮ್ಮ ಮಧ್ಯೆಯೇ ಇದ್ದವರು. ಎತ್ತರೆತ್ತರ ಬೆಳೆದವರು. ಅವರು ಬೆಳೆಯುವುದರ ಹಿಂದೆ ಶ್ರಮದ ಬೆವರಿತ್ತು. ರಾಜ್‌ರ 79ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪದೇ ಪದೇ ಕೇಳಲ್ಪಡುವ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು...


ರಾಜ್‌ ಇಷ್ಟವಾಗಲು 5 ಕಾರಣಗಳು :
1. ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋಗಲಿಲ್ಲ.
2. ಜಾತಿಯಿಂದ ಗುರ್ತಿಸಿಕೊಳ್ಳಲಿಲ್ಲ.
3. ರಾಜಕೀಯಕ್ಕೆ ಹೋಗಲಿಲ್ಲ.
4. ಕೀರ್ತಿ ಕಿರೀಟ ತಲೆ ಮೇಲೆ ಕುಂತರೂ, ವಿನಯವಂತಿಕೆ ಬಿಡಲಿಲ್ಲ.
5. ಹತ್ತಿದ ಏಣಿ ಒದೆಯದೇ, ಅಭಿಮಾನಿಗಳ ದೇವರೆಂದು ಗುರ್ತಿಸುವ ಬುದ್ದಿ.
ರಾಜ್‌ ಹೆಗ್ಗಳಿಕೆ ಕಾರಣವಾದ 5 ಅಂಶಗಳು :

1. ಗಾಯಕ ಮತ್ತು ನಾಯಕನಾಗಿ ಯಶಸ್ಸು.
2. ಸುಸ್ಪಷ್ಟ ಕನ್ನಡ.
3. ಎಲ್ಲಾ ಪಾತ್ರಕ್ಕೂ ಸೈ..
4. ಸ್ಯಾಂಡಲ್‌ವುಡ್‌ ಇತಿಹಾಸ ಶ್ರೀಮಂತಗೊಳಿಸಿದ್ದು.
5. ನಟನಾಗಿ ಉಳಿಯದೇ ನಾಡು-ನುಡಿಗಾಗಿ ಕೈ ಎತ್ತಿದ್ದು.
ರಾಜ್‌ ಬಗೆಗಿನ 5 ಟೀಕೆಗಳು :

1. ಅಗತ್ಯಕ್ಕಿಂತ ಹೆಚ್ಚಿನ ಮುಗ್ಧತೆ.
2. ನರಹಂತಕ ವೀರಪ್ಪನ್‌ ಅಂಗಳದಿ ನಿಂತು, ‘ನನ್ನನ್ನು ಇಲ್ಲಿಂದ ನಾಡಿಗೆ ಕರೆಸಿಕೊಳ್ಳಿ’ ಎಂದು ಸರ್ಕಾರಕ್ಕೆ ಧೈನ್ಯತೆಯಿಂದ ಕೈಜೋಡಿಸಿದ್ದು.
3. ರಾಜ್‌ ಅಭಿಮಾನಿ ಸಂಘ, ರಜನಿ ಮತ್ತು ಚಿರಂಜೀವಿ ಅಭಿಮಾನಿ ಸಂಘದಂತೆ ಹೆಚ್ಚು ಸಮಾಜಮುಖಿಯಾಗಲಿಲ್ಲ. ಕೆಲವು ಸಲ ಅಭಿಮಾನಿ ಸಂಘದ ಪುಂಡಾಟಕ್ಕೆ ರಾಜ್‌ ಕಡಿವಾಣ ಹಾಕಲಿಲ್ಲ.
4. ತಮ್ಮೊಳಗಿನ ಶಕ್ತಿಯನ್ನು ಬಳಸಿಕೊಂಡು, ಕರ್ನಾಟಕವನ್ನು ಸಮರ್ಥವಾಗಿ ಬಲಪಡಿಸಲಿಲ್ಲ.
5. ಟೀಕೆ ಮಾಡುವುದಕ್ಕಾಗಿಯೇ ಕೆಲವು ಟೀಕೆಗಳು..
ರಾಜ್‌ ನಾಡಿಗೇನು ಕೊಟ್ಟರು? 5 ವಿಚಾರಗಳು...

1. ತಮ್ಮೆರಡು ಕಣ್ಣುಗಳ ಕೊಟ್ಟು, ಕೋಟ್ಯಂತರ ಅಭಿಮಾನಿಗಳಿಗೆ ಪ್ರೇರಣೆ ನೀಡಿದರು. ಸಾವಿರಾರು ದೃಷ್ಟಿಹೀನರಿಗೆ ಈ ಪರಿಣಾಮ, ಭರವಸೆಯ ಬೆಳಕು.
2. ತಮ್ಮ ಚಿತ್ರಗಳ ಮೂಲಕ ಕೌಟುಂಬಿಕ ಸಾಮರಸ್ಯಕ್ಕೆ ಕೊಡುಗೆ.
3. ಕೊನೆ ಉಸಿರಿಡುವ ತನಕ, ಅಭಿಮಾನಿಗಳಿಗೆ ಪ್ರೀತಿಯ ಸಿಂಚನ.
4. ಇತಿಹಾಸ, ಪುರಾಣ, ಸಂತರ ಚಿತ್ರವನ್ನು ಮತ್ತು ನಾಡ ಸಂಸ್ಕೃತಿಯನ್ನು ತಮ್ಮ ಪಾತ್ರಗಳ ಮೂಲಕ, ರಾಜ್‌ ಎಲ್ಲರ ಎದೆಯಲ್ಲಿ ಬಿತ್ತಿದ್ದು..
5. ತಮ್ಮ ಚಿತ್ರಗಳ ಮೂಲಕ ಶಿಕ್ಷಕನಂತೆ ನಿಂತು, ಸಭ್ಯ ಪ್ರಜೆಗಳ ಸೃಷ್ಟಿಸಿದ್ದು..
ರಾಜ್‌ ಯಶಸ್ಸಿನಿಂದಿನ 5 ಕಾರಣಗಳು :
1. ಪಾರ್ವತಮ್ಮ ರಾಜ್‌ ಕುಮಾರ್‌.
2. ಕನ್ನಡತನಕ್ಕೆ ಅಂಟಿಕೊಂಡದ್ದು.
3. ಅಭಿಮಾನಿಗಳ ಪ್ರೀತಿ.
4. ಪ್ರತಿಭೆ ಮತ್ತು ಶ್ರಮದ ಸಮ್ಮಿಲನ.
5. ಅದೃಷ್ಟ
ಮೇಲಿನ ವಿಚಾರಗಳಿಗೆ ನಿಮ್ಮ ಸಮ್ಮತಿ ಇದೆಯಾ? ಅಥವಾ ಏನಾದರೂ ತಕರಾರಿದ್ದರೇ ನಾಲ್ಕು ಸಾಲು ಬರೆಯಿರಿ..

Thursday, June 28, 2007

ಇದು ನಾವು ನೋಡಿದ್ದು, ನಂಬಿದರೆ ನಂಬಿ ಬಿಟ್ಟರೆ ಬಿಡಿ..!?


ಈ ಕಾಲದಲ್ಲೂ ಇದೆಲ್ಲ ಏನ್ರೀ? ಚಂಡಿಯಂತೆ? ಚೌಡೇಶ್ವರಿಯಂತೆ ಎಂದು ಬಾಯಿ ಸೊಟ್ಟಗೆ ಮಾಡಬೇಡಿ. ವಿಜ್ಞಾನ ಲೋಕಕ್ಕೆ ಸವಾಲು ಹಾಕುವಂತಹ ನಿದರ್ಶನವೊಂದು ನಮ್ಮ ನಡುವೆಯೇ ಇದೆ!!!


ನಂಬೋರು ನಂಬಬಹುದು. ನಂಬಲ್ಲ ಅನ್ನೋರು, ಕಾರಣ ಕೊಟ್ಟರೇ, ಒಳ್ಳೆಯದು. ಕಾರಣ ಸದ್ಯಕ್ಕೆ ತೋಚುತ್ತಿಲ್ಲ ಎಂದ ಮಾತ್ರಕ್ಕೆ ವಿಚಾರವಂತರೆಲ್ಲರೂ, ದೇವರಿಗೆ ಅಡ್ಡಡ್ಡ ಬೀಳಿ ಎಂದು ಹೇಳುವುದು ನನ್ನ ಉದ್ದೇಶವಲ್ಲ. ಹೀಗೂ ಉಂಟು? ಅದೇ, ಯಾಕೆ ಹೀಗೆ ಎಂಬುದು ಜಗತ್ತಿಗೆ ಗೊತ್ತಾದರೆ ಒಳ್ಳೆಯದು.


ಮಂತ್ರಕ್ಕಿಂತಲೂ ಉಗುಳೇ ಜಾಸ್ತಿಯಾಯಿತು ಎಂದು ಬೇಸರಿಸಿಕೊಳ್ಳಬೇಡಿ. ಇನ್ನು ನೇರವಾಗಿ ವಿಚಾರಕ್ಕೆ ಬರುತ್ತೇನೆ. ಹಾಸನಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೆಗ್ಗಡಿಗೆರೆ ಅನ್ನುವುದು ಒಂದು ಕುಗ್ರಾಮ. ಆದರೆ ಅದೀಗ ಜಯಮ್ಮ ಎಂಬಾಕೆಯಿಂದ, ಎಲ್ಲರ ಗಮನ ಸೆಳೆಯುತ್ತಿದೆ.


ಈ ಜಯಮ್ಮ ಎಂಬ ಮಹಿಳೆ ಕಳೆದ 8ವರ್ಷದಿಂದ ಅನ್ನ-ನೀರು ಮುಟ್ಟಿಲ್ಲ. ಹಾಸಿಗೆ ಬಿಟ್ಟು ಎದ್ದಿಲ್ಲ! ಆಕೆಯನ್ನು ಸಾಕ್ಷಾತ್ ಚೌಡೇಶ್ವರಿದೇವಿ ಎಂದು ನಂಬುವ ಮಂದಿ ಗ್ರಾಮದಲ್ಲಿ ಬಹುಸಂಖ್ಯಾತರು.


ಕತ್ತಲ ಕೋಣೆಯ ಹಾಸಿಗೆ ಮೇಲೆ ದಪ್ಪನೆಯ ಉಲ್ಲನ್ ರಗ್ಗಿನಡಿ ಮಲಗಿರುವ ಜಯಮ್ಮ, ಕಳೆದ 8ವರ್ಷಗಳಲ್ಲಿ 3 ಸಲ ಮಾತ್ರ ಹಾಸಿಗೆ ಬಿಟ್ಟು ಎದ್ದಿದ್ದಾಳೆ. ಬಯಲಿಗೆ ಬಂದಿದ್ದಾಳೆ. ಊರಲ್ಲಿ ಚೌಡೇಶ್ವರಿ ಉತ್ಸವವಿದ್ದರೇ ಮಾತ್ರ, ಅವಳು ಹಾಸಿಗೆ ಬಿಟ್ಟು ಮೇಲಕ್ಕೆ ಏಳುತ್ತಾಳೆ. ದೇವಸ್ಥಾನಕ್ಕೆ ಬರುತ್ತಾಳೆ. ಆಮೇಲೆ ತಾನುಂಟು, ತನ್ನ ಹಾಸಿಗೆಯುಂಟು.


ಹಾಸಿಗೆ ಮೇಲೆ ಮಲಗುವ ಅವಳು ಬದುಕಿದ್ದಾಳೆ ಅನ್ನುವುದಕ್ಕೆ ಒಂದೇ ನಿದರ್ಶನ, ಉಸಿರಾಟ! ಇಂಥದ್ದೊಂದು ವಿಲಕ್ಷಣ ಸಂಗತಿಯನ್ನು ಟೀವಿ 9ತಂಡ, ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದೆ. ಕಳೆದ ಭಾನುವಾರ 'ಹೀಗೂ ಉಂಟು?!' ಕಾರ್ಯಕ್ರಮದಲ್ಲಿ, ಜಯಮ್ಮನ ಬಗ್ಗೆ ಸಾಕಷ್ಟು ವಿಚಾರಗಳು ಪ್ರಸ್ತಾಪವಾದವು.


ಜಯಮ್ಮ ಮೊದಲು ಹೀಗಿರಲಿಲ್ಲ. ಎಲ್ಲ ಹೆಣ್ಣು ಮಕ್ಕಳಂತೆಯೇ ಇದ್ದಳು. ಮನೆ ಹಿತಕ್ಕಾಗಿ ಕೂಲಿ ಮಾಡುತ್ತಿದ್ದಳು. ಸಮಾಜದಲ್ಲಿ ನಮ್ಮದೂ ಒಂದು ಮನೆ ಅಂತ ಆಗಲಿ ಎಂದು ಕಾಸಿಗೆ ಕಾಸು ಸೇರಿಸುತ್ತಿದ್ದಳು. ಆಕೆ ದಿಟ್ಟೆ, ಜೊತೆಗೆ ಸ್ವಾಭಿಮಾನಿ.


ಇನ್ನೂ ವಿಚಿತ್ರವೆಂದರೆ ಜಯಮ್ಮ ಮದುವೆ ಸಹಾ ಆಗಿದ್ದಾಳೆ. ಹೊಳೆ ನರಸೀಪುರದ ಗಂಡನ ಮನೆಯಲ್ಲಿ ಆಕೆ ಒಂದು ದಿನ ಸಹಾ ಸರಿಯಾಗಿ ಸಂಸಾರ ಮಾಡಿಲ್ಲ. ಪ್ರಥಮ ರಾತ್ರಿಯ ದಿನವೇ, ಜಯಮ್ಮನನ್ನು 'ಅಕ್ಕ' ಎಂದು ಸ್ವತಃ ಆಕೆಯ ಗಂಡನೇ ಸಂಬೋಧಿಸಿದ್ದಾನೆ. ಹೆಂಡತಿಯನ್ನು ತವರಿಗೆ ಬಿಟ್ಟು, ಈ ಸಂಸಾರ ಬೇಡ ಎಂದು ವಾಪಸ್ಸು ಹೋಗಿದ್ದಾನೆ.


ಜಯಮ್ಮ ಊಟ ಮಾಡುತ್ತಿಲ್ಲ ಎಂದು ಆಕೆಯ ಅಣ್ಣ ರಮೇಶ್ ಮತ್ತು ಮನೆಯವರು ತಲೆ ಕೆಡಿಸಿಕೊಂಡಿದ್ದಾರೆ. ಸಾಲ-ಶೂಲ ಮಾಡಿ, ಮನೆಯಲ್ಲಿರುವ ಚಿನ್ನಾಭರಣ ಮಾರಿ, ತಮಗೆ ಸಾಧ್ಯವಿರುವ ವೈದ್ಯರನ್ನೆಲ್ಲ ಸಂಪರ್ಕಿಸಿದ್ದಾರೆ. ವೈದ್ಯರೆಲ್ಲರೂ, ದಿಕ್ಕು ತೋಚದೇ ಆಕಾಶ ನೋಡಿದಾಗ ರಮೇಶ್ ಕಕ್ಕಾಬಿಕ್ಕಿಯಾಗಿದ್ದಾನೆ. ಕೊನೆಗೆ ತಂಗಿಯನ್ನು ಮನೆಗೆ ಕರೆತಂದಿದ್ದಾನೆ.


ಮಗಳ ಹಾಸಿಗೆಯ ಪಕ್ಕವೇ ಕೂತಿರುವ ತಾಯಿಗೆ, ಮಗಳು ಸುಧಾರಿಸಿಕೊಂಡರೆ ಸಾಕು ಎನ್ನುವ ಆಸೆ. ಎದ್ದು ಊಟ ಮಾಡಿದರೆ ಸಾಕು ಎಂಬ ಬಯಕೆ. ಚೌಡೇಶ್ವರಿ ಉತ್ಸವ ಮೂರ್ತಿ ಮನೆ ಬಳಿಗೆ ಬಂದರೆ, ಜಯಮ್ಮ ಎದ್ದು ಕೂರುತ್ತಾಳೆ ಎಂಬ ಸಂಗತಿಯನ್ನು ಟೀವಿ 9 ತಂಡ ಪರೀಕ್ಷಿಸಿದೆ.


ಜನರು ಹೇಳುವಂತೆ, ಚೌಡೇಶ್ವರಿ ದೇವಿಯ ವಿಗ್ರಹ ಮನೆ ಬಾಗಿಲಿಗೆ ಬಂದ ತಕ್ಷಣ, ಹಾಸಿಗೆಯಿಂದ ತೆವಲಿಕೊಂಡು ಹೊರಬರುವ ಜಯಮ್ಮ ಭಕ್ತಿ ಭಾವದಿಂದ ನಡೆದುಕೊಳ್ಳುತ್ತಾರೆ. ನಂತರ ತಾವಾಗಿಯೇ ಎದ್ದು ನಿಲ್ಲುತ್ತಾರೆ. ಶುಭ್ರವಾಗಿ ಸ್ನಾನ ಮಾಡಿ, ಮಡಿ ಸೀರೆ ಉಟ್ಟು, ಚೌಡೇಶ್ವರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ದೇವಸ್ಥಾನದವರೆಗೆ ನಡೆದುಕೊಂಡು ಹೋಗುತ್ತಾರೆ. ಅವರ ಮುಖದಲ್ಲಿ ಆಯಾಸ ಕಾಣಿಸುವುದೇ ಇಲ್ಲ. ಈ ಪ್ರಕ್ರಿಯೆ ಸತತ 4ಗಂಟೆ ನಡೆಯಿತು. ನಂತರ ಯಥಾ ಪ್ರಕಾರ, ಜಯಮ್ಮ ಹಾಸಿಗೆ ಸೇರಿದರು.


ಟೀವಿ 9ತಂಡ ನೀರು ಕುಡಿಸುವ ಪ್ರಯತ್ನ ಮಾಡಿತು. ಬಲವಂತಕ್ಕೆ ನೀರು ಕುಡಿದ ಜಯಮ್ಮ, ಕೆಲವೇ ಸೆಕೆಂಡ್‌ಗಳಲ್ಲಿ ನೀರನ್ನೆಲ್ಲ ವಾಂತಿ ಮಾಡಿದಳು. ಜಯಮ್ಮನಿಗೆ ತಿನ್ನೋದಕ್ಕೆ ಆಸೆ. ಆದರೆ ತಿಂದದ್ದೆಲ್ಲ ವಾಂತಿಯಾಗುತ್ತೆ. ವಾಂತಿಯಲ್ಲಿ ರಕ್ತದ ಉಂಡೆಗಳು ಬೀಳುತ್ತವೆ ಎಂಬುದು ಅವರ ತಾಯಿಯ ವಿವರಣೆ.


ಇದೆಲ್ಲಾ ಯಾಕೆ ಅನ್ನೋ ಪ್ರಶ್ನೆಗೆ ಜಯಮ್ಮನ ಅಣ್ಣ ರಮೇಶ್ ಉತ್ತರ ನೀಡಿದ್ದಾರೆ. ನಮ್ಮದು ಚೌಡೇಶ್ವರಿ ದೇವಿಯನ್ನು ಪೂಜಿಸುವ ಕುಟುಂಬ. ದೇವಿಗೆ ಅಪಚಾರ ಮಾಡಿದ ನಮ್ಮ ತಂದೆ ಕುಷ್ಟರೋಗಕ್ಕೆ ಬಲಿಯಾದರು. ದೇವಿಯ ಅವಕೃಪೆಯಿಂದ ಹೀಗೆಲ್ಲ ಆಗುತ್ತಿದೆ ಅನ್ನುತ್ತಾರೆ ರಮೇಶ್.


ಜಯಮ್ಮನನ್ನು ಊರಿನ ಜನ ಚೌಡೇಶ್ವರಿಯೆಂದೇ ನಂಬಿದ್ದಾರೆ. ಆಕೆಯನ್ನು ಗೇಲಿ ಮಾಡಿದವರು ಅಷ್ಟಕಷ್ಟಗಳಿಗೆ ಸಿಲುಕಿದ ಉದಾಹರಣೆಗಳೂ ಇವೆಯಂತೆ. ಅವರವರ ನಂಬಿಕೆ ಅವರವರಿಗಿರಲಿ. 8ವರ್ಷ ಏನನ್ನೂ ತಿನ್ನದೇ, ಕುಡಿಯದೇ ಜೀವಂತ ಶವದಂತೆ ಹಾಸಿಗೆ ಮೇಲೆ ಬದುಕಲು ಸಾಧ್ಯವೇ? ಅದು ಹೇಗೆ? ಚೌಡೇಶ್ವರಿ ಬಂದಾಗ ಜಯಮ್ಮನ ಮೈಗೆ ಎಲ್ಲಿಂದ ಅಷ್ಟೊಂದು ಶಕ್ತಿ ಬರುತ್ತದೆ? ಮೂರನೇ ಜಗತ್ತಿನ ಇಂಥ ವಿಪರೀತಗಳನ್ನು ಸೀಳಿನೋಡುವುದಕ್ಕೆ ಯಾವ ಪ್ರಯೋಗಾಲಯ, ಯಾವ ಸಂಶೋಧಕನಿಗೆ ಆಸಕ್ತಿಯಿದೆ?

Monday, June 25, 2007

ನಟನೆ ಬಿಟ್ಟುಬೇರೆ ಗೊತ್ತಿಲ್ಲ..ನೀವು ಕೈಬಿಡಲಿಲ್ಲ-ಗಣೇಶ್‌


ಟ್ವಿಂಕಲ್‌ ಟ್ವಿಂಕಲ್‌ ಲಿಟ್ಟಲ್‌ ಸ್ಟಾರ್‌... ಗಣೇಶ್‌ ಈಗ ಸೂಪರ್‌ ಸ್ಟಾರ್‌’ ಅಂದರೆ ತಪ್ಪಾಗುತ್ತದೆ! ಹೌದು. ‘ಮುಂಗಾರು ಮಳೆ’ಯಿಂದ ಗಣೇಶ್‌ ‘ಸ್ಟಾರ್‌’ಆದರು ಅನ್ನುವಂತಿಲ್ಲ! ಕಾರಣ; ಗಣೇಶ್‌ ಮೊದಲೂ ಸ್ಟಾರ್‌ ಆಗಿದ್ದವರೇ...ಉದಯ ಟೀವಿಯ ‘ಕಾಮಿಡಿ ಟೈಂ’ ಮೂಲಕ ಗಣೇಶ್‌, ನಾಡಿನ ಮನೆಮನೆಯಲ್ಲೂ ಅಭಿಮಾನಿಗಳ ಸೃಷ್ಟಿಸಿಗೊಂಡವರು.

ಸೂರ್ಯಕಾಂತಿ ಹೂವಿನಂತೆ ಮುಖವರಳಿಸಿ, ಚಿನಕುರುಳಿಯಂತೆ ಮಾತು ಪೋಣಿಸುವ ಈ ಗಣೇಶ್‌ ಇಷ್ಟವಾಗಲು ಕಾರಣಗಳು ಅನೇಕ. ಪಕ್ಕದ ಮನೆ ಹುಡುಗನಂತೆ, ಈ ಹುಡುಗ ನಗ್ತಾನೆ. ಮಾತಾಡ್ತಾನೆ. ಹೀರೋಯಿಸಂನಿಂದ ಹೊರಬಂದು ಎಲ್ಲರೊಂದಿಗೆ ಬೆರೆಯುತ್ತಾನೆ. ಇದು ಅವರನ್ನು ಹತ್ತಿರದಿಂದ ಕಂಡವರು ಹೇಳುವ ಮಾತು.

ಆದರೆ ಒಂದಂತೂ ನಿಜ. ಶ್ರದ್ಧೆ-ಛಲ ಇದ್ದರೆ ಯಾರು ಬೇಕಾದರೂ ನಾಯಕನಾಗಬಹುದು ಅನ್ನುವುದಕ್ಕೆ ಗಣೇಶ್‌ ನಮ್ಮ ಮುಂದಿನ ಉದಾಹರಣೆ. ಗಾಂಧಿನಗರದಲ್ಲಿ ಅವರು ತುಳಿದ ಸೈಕಲ್‌ ವೆಸ್ಟ್‌ಆಗಿಲ್ಲ. ಅವರಿಗೀಗ ಕಾದದ್ದಕ್ಕೆ ಬಡ್ಡಿ ರೂಪದಲ್ಲಿ... ಚಕ್ರಬಡ್ಡಿ ರೂಪದಲ್ಲಿ ಪ್ರತಿಫಲ ಸಿಕ್ಕಿದೆ. ಅದೃಷ್ಟ ಬಾಗಿಲಿಗೆ ಬಂದು ತಗೋತಗೋ ಎಂದಿದೆ. ಗಣೇಶ್‌ರ ಇನ್ನೊಂದು ಆಸ್ತಿ ನಗೆ. ಈ ಹುಡುಗನ ನಗೆಗೆ ಸೋಲದವರ್ಯಾರು... (ಯೋಗರಾಜ್‌ ಭಟ್‌ಗೆ ಗಣೇಶ್‌ರ ನಗೆಮೊಗ ತುಂಬಾ ಇಷ್ಟವಾಯಿತಂತೆ! ).

ಈಗಂತೂ ಗಣೇಶ್‌ ಬಿಜಿ. ಈ ಮಧ್ಯೆಯೂ ಬಿಡುವು ಮಾಡಿಕೊಂಡು ಅವರು ಸಂದರ್ಶನ ನೀಡಿದ್ದಾರೆ. ಮಾತುಕತೆಯ ವಿವರ ನಿಮ್ಮ ಮುಂದೆ.

ನೀವು ಹೀರೋ ಆಗಲಿಲ್ಲ ಅಂದ್ರೆ ಏನ್‌ ಆಗ್ತಾಯಿದ್ರಿ?

ಏನೂ ಇಲ್ಲ. ಗಣೇಶ್‌ ಆಗಿಯೇ ಇರ್ತಾಯಿದ್ದೆ! ಸಿನಿಮಾಗೆ ಯಾಕೆ ಬಂದೆ ಅಂದ್ರೆ, ನನಗೆ ಅಭಿನಯ ಬಿಟ್ರೆ ಬೇರೇನೂ ಗೊತ್ತಿಲ್ಲ..

‘ಮುಂಗಾರು ಮಳೆ’ ಬಗ್ಗೆ ಹೇಳಿ? ನಿಮಗೆ ಇಷ್ಟವಾದ ಹಾಡು-ಸನ್ನಿವೇಶ- ಯಾವುದು?

ಹೇಳೋದು ಅಂದ್ರೆ, ಸಕತ್ತು ಖುಷಿಯಾಗುತ್ತಿದೆ. ನಾನು ಹೇಳೋದನ್ನು ಪ್ರೇಕ್ಷಕರು ಹೇಳುತ್ತಿದ್ದಾರೆ. ಸಾಕಲ್ವಾ? ನನಗೆ ಎಲ್ಲಾ ಹಾಡು ಇಷ್ಟ. ಅದರಲ್ಲೂ ‘ಅನಿಸುತಿದೆ ಯಾಕೋ ಇಂದು.. ’ ಸಕತ್ತು ಇಷ್ಟ. ಇಷ್ಟದ ಸನ್ನಿವೇಶ -ಹೆಂಡ ಕುಡೀತಾ, ಮಳೆಯಲ್ಲಿ ನೆನೆಯುತ್ತಾ, ಮನದ ಮಾತುಗಳ ಹೇಳುವುದು...

ನಿಮ್ಮ ಊರು? ನಿಮ್ಮ ಹಿನ್ನೆಲೆ.. ವಿದ್ಯಾಭ್ಯಾಸ ಇತ್ಯಾದಿ.. ಬಗ್ಗೆ ಒಂದೆರಡು ಮಾತು...

ನನ್ನೂರು, ನೆಲಮಂಗಲ ಬಳಿಯ ಅಡಕೆಮಾರನಹಳ್ಳಿ. ತಂದೆ -ಕಿಷನ್‌, ತಾಯಿ-ಸುಲೋಚನಾ. ನಾನು ಮೂರನೆಯವನು. ನನ್ನ ತಮ್ಮಂದಿರ ಹೆಸರು ಮಹೇಶ್‌ ಮತ್ತು ಉಮೇಶ್‌. ನಮ್ಮಜ್ಜಿ ಸೀತಮ್ಮ. ಈಗ ಬೆಂಗಳೂರಿನ ವಿಜಯನಗರದಲ್ಲಿ ವಾಸ.

ಸಿನಿಮಾಗೆ ಯಾಕೆ ಬಂದ್ರಿ?

ವಿದ್ಯೆ ಅರ್ಧಕ್ಕೆ ನೈವೇದ್ಯೆ ಆಯಿತು. ಬಲವಂತಕ್ಕೆ ನೆಲಮಂಗಲದಲ್ಲಿ ಡಿಪ್ಲೋಮೋ ಇನ್‌ ಎಲೆಕ್ಟ್ರಾನಿಕ್ಸ್‌ ಮಾಡ್ತೆ. ಅಲ್ಲಿಗೆ ಸುಸ್ತಾದೆ. ಬಣ್ಣದ ಬದುಕಲ್ಲಿ ಅನ್ನ ಹುಡುಕಿಕೊಳ್ಳೋದು ಅನಿವಾರ್ಯ ವಾಯಿತು. ಸೈಕಲ್‌ ತುಳಿಯೋದು ಮುಂದುವರೆಯಿತು.

ನಿಮ್ಮ ಮೊದಲ ಸಿನಿಮಾ?

‘ಠಪೋರಿ’ . ಈ ಚಿತ್ರದಲ್ಲಿ ಖಳನಟನ ಪಾತ್ರ ನನ್ನದು. ಖಳನಟ ಹಾಸ್ಯನಟನಾಗಿ, ನಾಯಕನಟನಾದ. ಎಲ್ಲವೂ ಅಭಿಮಾನಿ ದೇವರ ಆಶೀರ್ವಾದ. ಈ ಗಣೇಶ್‌ನ ಅಭಿಮಾನಿಗಳು ಮುಂದೇನು ಮಾಡ್ತಾರೋ ನೋಡೋಣ...

ಹೊಸ ಟ್ರೆಂಡ್‌ ಬರ್ತಾಯಿದೆ... ಇದರ ಬಗ್ಗೆ ಹೇಳಿ?

ಬರಲಿ. ಇದು ಒಂದು ಥರಹಾ ಒಳ್ಳೆಯದು ಅಲ್ವಾ ಸಾರ್‌... ‘ಹಳೇ ಬೇರು, ಹೊಸ ಚಿಗುರು ಸೇರಿರಲು ...’ಅನ್ನೋ ಕವಿವಾಣಿಯೇ ಇದೆ.

‘.. ಮಳೆ ’ ಯಶಸ್ಸಿನಲ್ಲಿ ನಿಮ್ಮ ಪಾತ್ರವೆಷ್ಟು? ಮಳೆ ಪಾತ್ರವೆಷ್ಟು? ಯೋಗರಾಜ ಭಟ್‌ ಪಾತ್ರವೆಷ್ಟು? ಹಾಡುಗಳ ಪಾತ್ರವೆಷ್ಟು?

(ನಗು) ಹೀಗೆ ಪರ್ಸೆಂಟೇಚ್‌ ಲೆಕ್ಕದಲ್ಲಿ ಹಂಚೋದು ಕಷ್ಟ. ಒಟ್ಟಾರೆ ಇದು ಟೀಮ್‌ ವರ್ಕ್‌.

‘ಮುಂಗಾರು ಮಳೆ’ ಯಶಸ್ಸಿಗೆ ಕಾರಣ?

ಕಾರಣ ಗೊತ್ತಿಲ್ಲ. ಇದೊಂದು ಮ್ಯಾಜಿಕ್‌ ಇರಬಹುದಾ? ಸಾಧಿಸಲೇ ಬೇಕು ಎಂದು ಹೊರಟವರ ಯಶಸ್ಸಿದು. ಯಶಸ್ಸಿನ ಕಾರಣ ಗೊತ್ತಾಗಿ ಬಿಟ್ಟರೆ, ಇಂಥ ಚಿತ್ರಗಳು ಇನ್ನಷ್ಟು ಬರುತ್ತೆ! ಸೋಲಿಗೆ ಕಾರಣ ಇರುತ್ತೆ. ಗೆಲುವಿಗೆ ಕಾರಣ ಇರೋದಿಲ್ಲ. ಸಿನಿಮಾ ಗೆದ್ದಿದೆ. ಪ್ರೇಕ್ಷಕರಿಗೆ ಇಷ್ಟವಾಗಿದೆ. 76ಸೆಂಟರ್‌ನಲ್ಲಿ ಮುನ್ನುಗ್ಗುತ್ತಿದೆ. ನನಗಂತೂ ಸಕತ್ತು ಖುಷಿ.

ಸಿನಿಮಾ ಆರಂಭಿಸಿದಾಗ ಏನನ್ನಿಸಿತು?

ಸಿನಿಮಾ ಸ್ಕಿೃೕಪ್ಟ್‌ ಕಂಡಾಗಲೇ, ಗೆಲುವಿನ ವಾಸನೆ ಬಡಿದಿತ್ತು... ಪ್ರೇಕ್ಷಕರು ನಮ್ಮ ಕೈಬಿಡಲಿಲ್ಲ. ನಿರೀಕ್ಷೆ ನಿಜವಾಯಿತು.

ಸಿನಿಮಾದಲ್ಲಿ ದೇವದಾಸ(ಮೊಲ) ಸತ್ತ... ಆಮೇಲೆ ಏನಾಯ್ತು?

ಈಗ ನಮ್ಮ ಫಾರಂ ಹೌಸ್‌ನಲ್ಲಿದ್ದಾನೆ. ಎಂಟು ಮಕ್ಕಳಿಗೆ ಜನ್ಮ ನೀಡಿ ಆರಾಮವಾಗಿದ್ದಾನೆ. ಸಂಸಾರ ನಡೆದಿದೆ.

ಮದುವೆ ಯೋಚನೆ ಇದೆಯಾ? ಪ್ರೀತಿ-ಪ್ರೇಮ-ಪ್ರಣಯ ಏನಾದರೂ ಉಂಟಾ...?

ಮದುವೆ ಸದ್ಯಕ್ಕಿಲ್ಲ. ಅಯ್ಯಾಯ್ಯೋ, ಪ್ರೀತಿ-ಪ್ರೇಮ-ಪ್ರಣಯ ಅವೆಲ್ಲ ಏನಿಲ್ಲ ಬಿಡಿ.. (ಮಾತಲ್ಲಿ ನಾಚಿಕೆ).
ಮುಂದಿನ ಚಿತ್ರಗಳು?ರೇಖಾ ಜೊತೆ ‘ಹುಡುಗಾಟ’ ಚಿತ್ರೀಕರಣ ನಡೆದಿದೆ. ಎಸ್‌. ನಾರಾಯಣ್‌ರ ‘ಚೆಲುವಿನ ಚಿತ್ತಾರ’ ಮತ್ತು ರಮೇಶ್‌ ಯಾದವ್‌ರ ‘ಕೃಷ್ಣ’ ಚಿತ್ರಗಳನ್ನು ಸದ್ಯಕ್ಕೆ ಒಪ್ಪಿಕೊಂಡಿದ್ದೇನೆ. ಮುಂದೆ ನೋಡೋಣ.

ತೆಲುಗು-ತಮಿಳಿನಿಂದ ಆಫರ್‌ ಬಂದ್ರೆ, ಗಣೇಶ್‌ ಹೋಗ್ತಾರಾ?

ಯಾಕೆ ಹೋಗಬೇಕು ಸಾರ್‌.. ಕನ್ನಡದವರು ನನ್ನನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರಲ್ಲ.. ಊಟಕ್ಕಂತೂ ಕೊರತೆಯಿಲ್ಲ. ಅಲ್ವಾ?

ನಿಮ್ಮ ಯಶಸ್ಸಿನ ಬಗ್ಗೆ ತವರೂರು ಅಡಕೆಮಾರನಹಳ್ಳಿ ಜನ ಏನ್‌ ಅಂತಾರೆ?

ಅವರಿಗೆ ಸಕತ್ತು ಖುಷಿಯಾಗಿದೆ. ಆ ಜನ ತೋರಿಸಿದ ಅಕ್ಕರೆಗೆ ನಾನು ಋಣಿ.

ನಿಮ್ಮ ಅಭಿಮಾನಿಗಳಿಗೆ ಏನ್‌ ಹೇಳ್ತೀರಾ?

ನಗಿಸುತ್ತಾ ಇರಿ.. ಯಾರನ್ನೂ ನೋಯಿಸಬೇಡಿ.. ಬದುಕಿನಲ್ಲಿ ಏನಾದರೂ ಸಾಧನೆ ಮಾಡಿ... ಗಣೇಶ್‌ ನಿಮ್ಮವನು... ನಿಮ್ಮ ಹುಡುಗ...

Saturday, June 23, 2007

ಕತ್ತಲೊಳಗಿನ ಮಾಸಿದ ಬಣ್ಣಗಳು!
ನಾನೂ ಬದುಕಬೇಕೆಂದು ಇಲ್ಲಿಗೆ ಬಂದವಳು
ಬಂದು ಏನೇನನ್ನೋ ಪಡೆದವಳು!
ಪಡೆದೆನೆಂದು ಖುಷಿಯಿಂದ ನಲಿದವಳು!
*
ಹೀಗೆ ಬದುಕಬೇಕೆಂದು ಕನಸುಕಂಡವಳಲ್ಲ..
ಇಲ್ಲಿಂದ ಹೊರಹೋಗಲು ಬಾಗಿಲುಗಳಿಲ್ಲ
ಈಗ ಹೋದರೂ ಪ್ರಯೋಜನವೇನಿಲ್ಲ..
ನನ್ನಲ್ಲೀಗ ಕಳೆದುಕೊಳ್ಳುವುದಕ್ಕೆ ಏನೂ ಉಳಿದಿಲ್ಲ..
*
ನನ್ನ ನಂಬಿದವರನ್ನು ಬದುಕಿಸುತ್ತಿರುವೆ
ಸುಳ್ಳುಸುಳ್ಳೇ ನಾನೂ ಬದುಕುತ್ತಿರುವೆ
ನನ್ನದೂ ಒಂದು ಬದುಕೇ ಎನ್ನುವೆ!
*
ನನ್ನ ಬದುಕಿನ ಪುಟಗಳಲ್ಲಿನ ವ್ಯತ್ಯಾಸ
ನಾನು ಮಾಡುತ್ತಿರುವ ಈ ವ್ಯವಸಾಯ
ಹೆತ್ತವಳಿಗೆ, ಹೆತ್ತವನಿಗೆ ಚೆನ್ನಾಗಿ ಗೊತ್ತು..
ಹಣದ ವಾಸನೆ, ಹೆಣದ ವಾಸನೆಯ ಇಲ್ಲವಾಗಿಸಿದೆ.
*
ಮುಡಿದ ಮಲ್ಲಿಗೆ ಹೂವು ಮತ್ತೇರಿಸುತ್ತಿಲ್ಲ
ಅವನು ಕೊಟ್ಟ ಮುತ್ತು ಕಾವೇರಿಸುತ್ತಿಲ್ಲ
ಆ ಆಲಿಂಗನದಲ್ಲಿ ನಿಜಕ್ಕೂ ನಾನಿಲ್ಲ!
*
ಎಷ್ಟು ದಿನವೋ ಈ ದೇಹದ ವ್ಯಾಪಾರ..
ನಾನಂತೂ ಬಲುಬಲು ದಣಿದಿದ್ದೇನೆ?
ನೀವುಗಳೂ ಸಕತ್ತು ಹಸಿದಿದ್ದೀರಿ!
ನನ್ನ ಸುತ್ತಲ ಕತ್ತಲ ಜಗತ್ತಿಗೆ ಜಯವಾಗಲಿ..

Friday, June 22, 2007

ನ್ಯಾನೋ ಕವಿತೆಗಳು: ನಿಮ್ಮ ಬೊಗಸೆಗೆ ಒಂದೈದು ಮಳೆ ಹನಿಗಳು!


ಮತ್ತೆ ಮಳೆ ಸುರಿಯುತಿದೆ... ಎಲ್ಲ ನೆನಪಾಗುತಿದೆ...

ಹನಿ 1

ಮೊದಲು ತಲೆ ಸವರಿದ
ನಾನು ಅಮ್ಮನೆಂದುಕೊಂಡೆ!
ಆಮೇಲೆ ಹಣೆಗೆ ಮುತ್ತಿಟ್ಟ...
ಕೆನ್ನೆ ಸವರಿದ.. ಅರೇರೇರೇ...
ತುಟಿಗೆ ತುಟಿ ಸೇರಿಸಿದ...
ಮೈತುಂಬ ಅವನ ಮುತ್ತಿನ ಮುದ್ರೆಗಳು!
ಸಹಿಸಲಾರೇ ಈ ಅತ್ಯಾಚಾರ..
ನಾನು ನನ್ನ ಹುಡುಗನಿಗಷ್ಟೇ ಸ್ವಂತ!
ಸಂಜೆಯೇ ಅಂಗಡಿಗೆ ಹೋಗಿ
ಛತ್ರಿ ತಂದೆ!ಇನ್ನು ನಾನು ನನ್ನಿಷ್ಟ!

ಹನಿ 2

ಬಾ ಎಂದಾಗ ಬರಲಿಲ್ಲ
ಎರಡು ಹನಿಗಳನ್ನು ಚೆಲ್ಲಲಿಲ್ಲ
ಬೇಡ ಎಂದಾಗ ಬಂದೆ...
ಹೋಗು ಎಂದರೂ ಹೋಗಲಿಲ್ಲ...
ಈಗ ನಿನಗೇನು ತಲೆಕೆಟ್ಟಿದೆಯಾ?
ನಿನ್ನ ಹುಡುಗಿ ಕೈ ಕೊಟ್ಟಳೆಂದು
ಅಳುತ್ತಿರುವೆಯಾ?

ಹನಿ 3

ಅವಳು ಮಳೆ!
ಅವಳು ಬಂದಾಗಲೆಲ್ಲಾನಾ ಕುಣಿಯುತ್ತೇನೆ!
ನಾ ಕುಣಿಯಲೆಂದೇ ಅವಳು ಬರುತ್ತಾಳೆ!
ಅವಳು ಬರಲೆಂದೇ ನಾನು ಕುಣಿಯುತ್ತೇನೆ!

ಹನಿ 4

ಮೋಡ ಮೋಡ ಡಿಕ್ಕಿ ಹೊಡೆದಾಗ
ಭಯಾನಕ ಗುಡುಗು...
ನನ್ನೆದೆಯಲ್ಲಿ ನಡುಕ!
ಗುಡುಗಿನ ಭಯಕ್ಕೆ
ಅವನ ತೆಕ್ಕೆಯಲ್ಲಿ ನಾನು
ನನ್ನ ತೆಕ್ಕೆಯಲ್ಲಿಅವನು!

ಹನಿ 5

ಮಳೆಯ ಒಂದೊಂದೇ ಹನಿಗಳನ್ನು
ಜೋಪಾನವಾಗಿ ಸಂಗ್ರಹಿಸುತ್ತಿರುವೆ.
ಆ ಹನಿಗಳ ಮಣಿಗಳಂತೆ ಪೋಣಿಸಿ
ಹಾರ ಮಾಡುವ, ಆ ಹಾರದಿಂದಲೇ
ನನ್ನ ಹುಡುಗಿಯ ಸಿಂಗರಿಸುವ
ಹಂಬಲ,ಆಕಾಂಕ್ಷೆ, ಅತಿಯಾಸೆ ನನ್ನದು!

Tuesday, June 19, 2007

ಸೌಂದರ್ಯ ಮರೆಯಾಗಿ ಆಯಿತು 3 ವರ್ಷ!ಇತ್ತಿಚೆಗಷ್ಟೇ ರಾಜ್‌ಕುಮಾರ್‌ರ ಪ್ರಥಮ ಪುಣ್ಯತಿಥಿ ಆಯಿತು. ಆ ಬೆನ್ನಲ್ಲಿಯೇ ಕನ್ನಡದ ಮನೆಮಗಳು ಸೌಂದರ್ಯಳ ಪುಣ್ಯತಿಥಿ. ಇಬ್ಬರಲ್ಲೂ ಇದ್ದ ಕಾಮನ್ ಗುಣವೆಂದರೇ; ನಿರ್ಮಲ ಕನ್ನಡ ಪ್ರೀತಿ!


ರಾಜ್ ಜೊತೆ ಅಭಿನಯಿಸಬೇಕು ಎಂದು ಪದೇಪದೇ ಹೇಳುತ್ತಿದ್ದ ಸೌಂದರ್ಯಗೆ ಅವಕಾಶ ಕೂಡಿ ಬರಲಿಲ್ಲ. ಆ ಮಾತು ಬಿಡಿ. ನಮ್ಮ ಜನರಿಗೆ ಮರೆವು ಜಾಸ್ತಿ. ಹೀಗಾಗಿಯೇ ಪಂಚಭಾಷಾ ತಾರೆಯಾಗಿ ಮಿಂಚಿದ ಸೌಂದರ್ಯ , ಇಂದು ಯಾರಿಗೂ ನೆನಪಾಗುತ್ತಿಲ್ಲ!


ಒಂದರ್ಥದಲ್ಲಿ ಸೌಂದರ್ಯ ಮತ್ತು ಕನ್ನಡ ಚಿತ್ರಪ್ರೇಮಿಗಳ ಮಧ್ಯೆ ಅಂತಹ ಬಾಂಧವ್ಯ ಕುದುರಲೇ ಇಲ್ಲ. ಹೀಗಾಗಿ ನೆರೆರಾಜ್ಯದಲ್ಲಿ ಸೌಂದರ್ಯ, ಕೆಲಸ ಹುಡುಕುತ್ತಾ ಹೊರಟರು. ಆದರೂ ಕನ್ನಡ ಚಿತ್ರರಂಗದ ಬಗ್ಗೆ ಆಕೆಗೆ ಅಪಾರ ಅಕ್ಕರೆ.

ದುಡಿದ ದುಡ್ಡನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಬಚ್ಚಿಡುವ ನಾಯಕ ಅಥವಾ ನಾಯಕಿಯರ ಪರಂಪರೆ ಮುರಿದ ಸೌಂದರ್ಯ, `ದ್ವೀಪ'ದಂತಹ ಚಿತ್ರಕ್ಕೆ ನಾಯಕಿ ಮತ್ತು ನಿರ್ಮಾಪಕಿಯಾದರು. ಅವರ ಒಳತುಡಿತ ಬೇರೆಯೇ ಇತ್ತು. ಒಳ್ಳೆ ಚಿತ್ರಗಳ ನೀಡುವ ಕನಸು ಅವರ ಕಣ್ಣುಗಳಲ್ಲಿತ್ತು. ಆ ಮಧ್ಯೆಯೇ ಅವರು ಕಣ್ ಮುಚ್ಚಿದರು.


ಗ್ಲಾಮರ್‌ಗಿಂತಲೂ, ಸೌಂದರ್ಯರಲ್ಲಿ ಸಿನಿಮಾದ ಗ್ರಾಮರ್ ತುಂಬಿತುಳುಕುತ್ತಿತ್ತು. ಹೀಗಾಗಿ ಸೌಂದರ್ಯ ಅಂದರೆ ಅಭಿಮಾನಿಗಳಿಗೆ ವಿಶೇಷ ಅಕ್ಕರೆ. ವಿಶೇಷ ಗೌರವ. ವಿಶೇಷ ಭಾವ. ಸೌಂದರ್ಯ, ಪ್ರೇಕ್ಷಕರ ನಿದ್ದೆ ಕೆಡಿಸುವ ಕಾಮಿನಿಯಾಗಲಿಲ್ಲ.. ಗೆಳತಿಯಾದಳು.. ಅಮ್ಮನಾದಳು.. ತಂಗಿಯಾದಳು.. ಅಕ್ಕನಾದಳು.. ಇನ್ನು ಏನೇನೋ.. ದಟ್ ಈಸ್ ಸೌಂದರ್ಯ!

ಸೌಂದರ್ಯ ನಮ್ಮಿಂದ ದೂರಾವಾಗಿ ಮಂಗಳವಾರ(ಏ.೧೭)ಕ್ಕೆ ಮೂರು ವರ್ಷ. ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡದಲ್ಲಿ ಮಿಂಚಿದ್ದ ಈ ಪಂಚಭಾಷಾ ತಾರೆಗಿದ್ದ ರಾಜಕೀಯದ ಹುಚ್ಚು, ಸಾವಿನ ಮನೆವರೆಗೆ ಕರೆದೊಯ್ದದ್ದು ನಿಜಕ್ಕೂ ನೋವಿನ ವಿಚಾರ.


ಬಿಜೆಪಿ ಕಾರ್ಯಕರ್ತೆಯಾಗಿದ್ದ ಸೌಂದರ್ಯ, ಹೈದರಾಬಾದ್‌ನ ವಿಧಾನಸಭಾ ಕ್ಷೇತ್ರವೊಂದಕ್ಕೆ ಚುನಾವಣಾ ಪ್ರಚಾರಕ್ಕೆ ಹೊರಟರು. ಅದು ೨೦೦೪ರ ಏ.೧೭. ಜಕ್ಕೂರು ವಿಮಾನ ನಿಲ್ದಾಣದಿಂದ ಹೊರಟ ಖಾಸಗಿ ವಿಮಾನ, ಕೆಲವೇ ಕ್ಷಣಗಳಲ್ಲಿ ಕೆಳಗಿಳಿಯಿತು. ಬೆಂಕಿ ಚೆಂಡಿನಂತೆ ಸೋಟಿಸಿತು. ನೋಡನೋಡುತ್ತಿದ್ದಂತೆಯೇ ಚೆಲುವಿನ ರಾಶಿ ಸೌಂದರ್ಯ, ಆಕೆಯ ಹೊಟ್ಟೆಯೊಳಗಿದ್ದ ಮಗು ಇಬ್ಬರೂ ಭಸ್ಮ. ಆಗವಳಿಗೆ ೩೨ವರ್ಷ.


`ಆಪ್ತಮಿತ್ರ' ನೋಡಿದಾಗಲೆಲ್ಲ, ಸೌಂದರ್ಯ ಕಾಡುತ್ತಾರೆ. ರಾರಾ ಎಂದಂತೆ ನನಗಂತೂ ಭಾಸವಾಗುತ್ತದೆ. ನಿಮಗೆ?Thursday, June 14, 2007

ತನುತನುವಿನಲೂ ಮಜವೊಂದೇ ನಿಜ!


ತನುತನುವಿನಲೂ ಮಜವೊಂದೇ ನಿಜ!ಕನ್ನಡದ ಮಟ್ಟಿಗೆ ಇದೊಂದು ಹೊಸ ಪೀಳಿಗೆಯ ಚಿತ್ರ! ಯಾವುದೇ ಅಬ್ಬರಗಳಿಲ್ಲದೇ, ನಯವಾದ ಶೃಂಗಾರ ಕ್ರೀಡೆಯಂತೆ `ಗಂಡ ಹೆಂಡತಿ' ಚಿತ್ರ ಸುದೀರ್ಘವಾಗಿ ಮುಂದುವರೆಯುತ್ತದೆ. ಚಿತ್ರ ಬೋರ್ ಆಗುತ್ತದೆ ಅನ್ನಿಸಿದಾಗಲೆಲ್ಲ, ಸಚಿನ್(ತಿಲಕ್) ಮತ್ತು ಸಂಜನಾರ ಚುಂಬನೋತ್ಸವ ಹಾಜರಾಗುತ್ತದೆ. ತುಟಿತುಟಿಗಳು ಸೇರಿದಾಗ..

`ನನ್ನ ಎದೆಯ ಮೇಲೆ ನಿನ್ನ ಹಚ್ಚೆಯಿದೆ. ನನ್ನ ಉಸಿರನ್ನು ಹಿಡಿದು ನಿನ್ನ ಹೆಸರ ಬರೆಯಬಲ್ಲೆ.. ಮೈ ಬಿಸಿ ಏರಿದಾಗ ಇಳಿಸೋಕೆ ನಾನು ಬೇಕು. ಬಿಸಿ ಕಮ್ಮಿಯಾದ ಮೇಲೆ ಗಂಡ ಬೇಕಾ' ಎನ್ನುತ್ತಾನೆ ಬಾಯ್ ಫ್ರೆಂಡ್.

`ನಾವಿಬ್ಬರೂ ಗಂಡ ಹೆಂಡತಿ ಆದ್ವಿ ಮುಂದೇನು? ಫ್ಯಾಮಿಲಿ ಫೋಟೊ ಬಂದದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ನಿಮಗೆ ಭಾವನೆಗಳೇ ಇಲ್ಲ ' ಅನ್ನೋದು ಹೆಂಡತಿ ದೂರು.

`ನಿನ್ನ ಮದುವೆಯಾಗೋದಕ್ಕೆ ನಾನು ನಿಮ್ಮಪ್ಪನ ಕಾಲು ಹಿಡಿಯಲಿಲ್ಲ. ನೀನೇ ಬಯಸಿ ಮದುವೆಯಾದೆ. ಸ್ವಾರ್ಥ ಬಿಟ್ಟು ನಿನಗೆ ಬೇರೇನೂ ಗೊತ್ತಿಲ್ಲ. ನೀನು ನಿನ್ನ ಬಗ್ಗೆಯಷ್ಟೇ ಯೋಚಿಸ್ತೀಯ. ನಾವು ಬ್ಯಾಂಕಾಕ್‌ಗೆ ಬಂದದ್ದೇಕೆ? -ದುಡಿಯೋದಕ್ಕೆ. ಭಾವನೆಗಳಿಗಿಂತ ನನಗೆ ಬ್ಯುಸಿನೆಸ್ ದೊಡ್ಡದು' ಅನ್ನೋದು ಗಂಡನ ಸಮಜಾಯಿಷಿ.

ಮೇಲಿನ ಈ ಮೂರು ಹೇಳಿಕೆಗಳೇ, ಚಿತ್ರದ ನಾಯಕಿ ಸಂಜನಾ ಬಟ್ಟೆ ಕಳಚಿದಂತೆ, ಕತೆಯನ್ನು ಕಳಚುತ್ತವೆ. ಈ ಮಧ್ಯೆ ಸಂಜನಾ ಮತ್ತು ತಿಲಕ್‌ರ ಚುಂಬನೋತ್ಸವಗಳು ಒಂದಾದ ಮೇಲೆ ಮತ್ತೊಂದರಂತೆ ಹಾಜರಾಗುತ್ತವೆ. ಈ ಸಂದರ್ಭ ಕನ್ನಡ ಪ್ರೇಕ್ಷಕರಿಗೆ ತುಸು ಹೊಸತು ಅನ್ನಿಸಬಹುದು. ಆಗ ಟಾಕೀಸ್‌ನಲ್ಲಿ ಪರಿಚಿತರ್‍ಯಾರಾದರೂ ಇದ್ದಾರಾ ಅಂತ ಕಣ್ಣಾಡಿಸಬಹುದು! ತೆರೆ ಮೇಲೆ ಬಿಸಿಯೇರುತ್ತಿದ್ದಂತೆಯೇ, ಪ್ರೇಕ್ಷಕರೂ ಬೆಚ್ಚಗಾಗಿರುತ್ತಾರೆ!

ಅಂದ ಹಾಗೇ ಈ ಚಿತ್ರದಲ್ಲಿ ಮರ್ಡರ್ ಇದ್ದರೂ ಮಿಸ್ಟರಿ ಇಲ್ಲ. ರವಿಬೆಳಗೆರೆ ಇದ್ದರೂ ಕಡಕ್ ಮಾತಿಲ್ಲ(ಪಾತ್ರಕ್ಕೆ ಬೇರೊಬ್ಬರಿಂದ ಡಬ್ಬಿಂಗ್ ಮಾಡಿಸಲಾಗಿದೆ). ಚಿತ್ರ ಪೂರ್ತಿ ನಡೆಯೋದು ಬ್ಯಾಂಕಾಕ್‌ನಲ್ಲಿ. ಬಾಯ್ ಫ್ರೆಂಡ್‌ನ ಯಾಕೆ ಕೊಂದೆ ಅನ್ನೋದನ್ನು ಒಂದು ಕಡೆ ಸಂಜನಾ(ಆಕೆ ನಿಜ ನಾಮವೂ ಸಂಜನಾ! ಪೂರ್ವ ನಾಮ -ಅರ್ಚನಾ), ಇನ್ನೊಂದು ಕಡೆ ಸುಶೀಲ್(ವಿಶಾಲ್ ಹೆಗಡೆ) ಪೊಲೀಸ್ ಅಕಾರಿ(ರವಿ ಬೆಳಗೆರೆ)ಗೆ ಹೇಳ್ತಾ ಹೋಗ್ತಾರೆ. ಆ ಮೂಲಕ ಕತೆ ಬಿಚ್ಚಿಕೊಳ್ಳುತ್ತದೆ.

ಕ್ರೈಂ ಇದ್ದರೂ, ಅನಗತ್ಯ ಕಿರುಚಾಟಗಳಿಲ್ಲ. ಯಾವುದೇ ಅಬ್ಬರಗಳಿಲ್ಲದೇ, ನಯವಾದ ಶೃಂಗಾರ ಕ್ರೀಡೆಯಂತೆ ಚಿತ್ರ ಸುದೀರ್ಘವಾಗಿ ಮುಂದುವರೆಯುತ್ತದೆ. ಚಿತ್ರ ಬೋರ್ ಆಗುತ್ತದೆ ಅನ್ನಿಸಿದಾಗಲೆಲ್ಲ, ಸಚಿನ್(ತಿಲಕ್) ಮತ್ತು ಸಂಜನಾರ ಚುಂಬನೋತ್ಸವ ಹಾಜರಾಗುತ್ತದೆ. ತುಟಿತುಟಿಗಳು ಸೇರಿದಾಗ ದೃಶ್ಯದ ಹಿನ್ನೆಲೆಯಲ್ಲಿ -
ನಿದಿರಿಗೆ ರಜಾ
ನೋವೆಲ್ಲ ವಜಾ
ಇನ್ನೆಲ್ಲ ಮಜಾ
ತನುತನುವಿನಲೂ
ಮಜವೊಂದೇ ನಿಜ
ತುಟಿ ಸಿಹಿಕಣಜ
ಈ ಪ್ರತಿ ಇರುಳು
ಕೊಡುಸುಖದ ಸಜ


ಎನ್ನುವ ಹಾಡು ಕೇಳುಗರ ಆವರಿಸುತ್ತದೆ. ಬೆಳ್ಳೆತೆರೆಯನ್ನು ಮೊದಲ ಸಲ ಪ್ರವೇಶಿಸಿದ್ದರೂ ಬಾಯ್ ಫ್ರೆಂಡ್ ಪಾತ್ರದಲ್ಲಿ ತಿಲಕ್ ನೈಜವಾಗಿ ಅಭಿನಯಿಸಿದ್ದಾರೆ. ಜೊತೆಗೆ ಅನುಭವಿಸಿದ್ದಾರೆ. `ಓ ಮಲ್ಲಿಗೆಯೇ ವಿಲಾಸಿ, ಕಾಮದರಸಿ ಆಸೆ ತಂದವಳೇ..' ಅನ್ನುತ್ತಾ ಸಂಜನಾ ಕಂಡಾಗಲೆಲ್ಲ, ತೋಳ್ಬಲಗಳ ಪ್ರದರ್ಶಿಸುತ್ತಾರೆ. ಇವರಿಬ್ಬರ ಚೆಲ್ಲಾಟ.. ಮುದ್ದಾಟ.. ತುಂಟಾಟ ಕಂಡು ಸುಶೀಲ್ `ಮಾತು ಮುರಿದೇ ಮಾತಾಡದೇ . ಮೋಹಕ ಮೋಸವ ಮಾಡಿದೆ.. ' ಎಂದು ಗೋಳಾಡುತ್ತಾರೆ. ಹೆಂಡತಿಯನ್ನು ಉಳಿಸಿಕೊಳ್ಳಬೇಕು ಅಂತ ಮತ್ತೊಂದು ಕಡೆಯಿಂದ ಪ್ರಯತ್ನಿಸುತ್ತಾರೆ.

`ಕಣ್ ಮುಚ್ಚಿಕೊಂಡು ಬೆಕ್ಕಿನಂತೆ ಹಾಲು ಕುಡಿಯಬೇಡ.. ನಿನ್ನ ಕತೆ ಎಲ್ಲ ನನಗೆ ಗೊತ್ತು' ಎಂದು ಗೆಳತಿ(ಮಂಜುಭಾಷಿಣಿ)ಒಂದು ಸಲ ಸಂಜನಾಗೆ ಕ್ಲಾಸ್ ತಗೋಳ್ತಾಳೆ. ಮನೆಯಲ್ಲಿನ ಮುದ್ದಾದ ಮಗಳು(ಅದವರ ಅಕ್ಕನ ಮಗಳಂತೆ, ಅವಳಿಗಾಗಿಯೇ ಸುಶೀಲ್‌ನ ಮದ್ವೆಯಾದದ್ದಂತೆ) ಸಂಚಲಿ, ಅಮ್ಮ ನನಗೆ ನೀನು ಬೇಕು ಎಂದು ಒಂದೇ ಕಣ್ಣಲ್ಲಿ ಅಳುತ್ತಿರುತ್ತಾಳೆ. ಆದರೂ ಈಯಮ್ಮನಿಗೆ ಸುಖದ ಮಜದ ಚಿಂತೆ.

ಚಿತ್ರದ ಮೂಲಕ ನಿರ್ದೇಶಕ ರವಿ ಶ್ರೀವತ್ಸ, ಆಧುನಿಕ ಪ್ರೇಮಾಯಣವನ್ನು ಪರಿಚಯಿಸಿದ್ದಾರೆ. `ನಾವು ನೂರು ಸರಿ ಹೆಜ್ಜೆ ಹಾಕಿದರೂ ಪ್ರಯೋಜನವಿಲ್ಲ. ಒಂದೇ‌ಒಂದು ತಪ್ಪಿನ ಹೆಜ್ಜೆಯಿಂದ ಸಂಸಾರ ನರಕವಾಗುತ್ತದೆ' ಎಂಬುದನ್ನು ಪದೇಪದೇ ಪಾತ್ರಗಳ ಮೂಲಕ ಹೇಳಿಸುವ ಮೂಲಕ, ಒಂದು ಸಂದೇಶ ನೀಡಲು, ಚುಂಬನ ಚಳವಳಿ ಸಮರ್ಥಿಸಿಕೊಳ್ಳಲು ತಿಣುಕಾಡಿದ್ದಾರೆ. ಜೊತೆಗೆ ಗೆದ್ದಿದ್ದಾರೆ. ಜೊತೆಗೆ ಅಂಥದ್ದೊಂದು ಹಾಡು ಸಹಾ ಇದೆ -

ಸಂಸಾರಕ್ಕೆ ಹೆಣ್ಣೆ ಕಣ್ಣು
ಸಂಸಾರದಾದಿ ಹೆಣ್ಣು
ಶೋಕೀಯಾ ಮೂಲ ಹೆಣ್ಣು
ಶೋಕದ ಮೂಲ ಹೆಣ್ಣು
ಸಂಗ್ರಾಮದಾದಿ ಹೆಣ್ಣು
ಸಂತಾಪಕೆ ಕಾರಣ ಹೆಣ್ಣು


`ಎಲ್ಲಾ ಕುಟುಂಬಗಳಲ್ಲೂ ಸಮಸ್ಯೆಗಳಿರುತ್ತವೆ. ಅದಕ್ಕೆ ನಾನು ಆರಿಸಿಕೊಂಡ ಮಾರ್ಗ ತಪ್ಪು. ಅದು ಪರಿಹಾರವಲ್ಲ' ಎಂದು ಹೆಂಡತಿ ಬಾಯಲ್ಲಿ ಹೇಳಿಸಿದ್ದಾರೆ. ಚಿತ್ರದ ಕಡೆಯ ಹದಿನೈದು ನಿಮಿಷ, ಈ ಬಗ್ಗೆಯೇ ರವಿ ಬೆಳಗೆರೆಯವರಿಂದ ಭಾಷಣ ಹೊಡೆಸಿದ್ದಾರೆ.

ಅದೆಲ್ಲಾ ಸರಿ ಶ್ರೀವತ್ಸಾ, ಇಂಥ ಸಬ್ಜೆಕ್ಟ್‌ಗಳನ್ನು ಸಭ್ಯವಾಗಿ ಹೇಳೋದಕ್ಕೆ ಸಾಧ್ಯವಿಲ್ಲವೇ ಅನ್ನೋ ಪ್ರಶ್ನೆ ಕೇಳಬೇಕಾಗುತ್ತದೆ. `ಎಡಕಲ್ಲು ಗುಡ್ಡದ ಮೇಲೆ' ಚಿತ್ರದಲ್ಲಿ ಇಂಥದ್ದೇ ಕತೆಯಿದೆ. ಆದರೆ ಅಲ್ಲಿ ಒಂದಿಷ್ಟೂ ಅಸಭ್ಯತೆ ಇಲ್ಲ. ಮುತ್ತು-ಮತ್ತು-ರೋಮಾಂಚಕತೆಗಳನ್ನು ನಮ್ಮ ಹಳೆಯ ಚಿತ್ರಗಳಲ್ಲಿ ಸಂಕೇತಗಳ ಮೂಲಕ ಇನ್ನೂ ಪವರ್‌ಫುಲ್ ಆಗಿಯೇ ಹೇಳಿದ್ದಾರೆ ಅನ್ನೋ ಕೊಂಕು ತೆಗೆಯಬಹುದು.

ನಮ್ಮ ಕನ್ನಡ ಮಾರ್ಕೆಟ್ ಇಂಥ ಚಿತ್ರಗಳನ್ನು ಹೇಗೆ ಸ್ವೀಕರಿಸುತ್ತೆ ಅನ್ನೋದು ಈ ಸಂದರ್ಭದಲ್ಲಿಯೇ ಪ್ರಕಟವಾಗಲಿದೆ. ಚಿತ್ರದ ಹಾಟ್ ದೃಶ್ಯಗಳನ್ನು ಇನ್ನಷ್ಟು ಹಾಟ್ ಆಗಿ ಮೂಡಿಸಲು ಸಂಜನಾ ಮೇಡಂ ಸಹಕರಿಸಿದ್ದಾರೆ. ನಿರ್ದೇಶಕರು ನಿರ್ದೇಶಿಸಿದ್ದಾರೆ. ನಿರ್ಮಾಪಕ ಶೈಲೇಂದ್ರ ಬಾಬು(ಗೌರಮ್ಮ, ಕುಟುಂಬ ನಿರ್ಮಾಪಕ) ನಿರ್ಮಾಣ ಮಾಡಿದ್ದಾರೆ. ಕಾಫಿ ರಾಘವೇಂದ್ರರ ಸಂಭಾಷಣೆ ಕೆಲವೆಡೆ ಕೈತಟ್ಟುವಂತಿದೆ. ಗುರುಕಿರಣ್ ಹಾಡುಗಳ ಕೆಲವು ಟ್ಯೂನ್‌ಗಳ ಅನುಕರಿಸಿದ್ದರೂ ಕೇಳಲು ಅಡ್ಡಿಯಿಲ್ಲ. ಛಾಯಾಗ್ರಹಣದ ಬಗ್ಗೆ ಹೆಸರಿಡುವಂತಿಲ್ಲ.

ಚಿತ್ರ : ಗಂಡ ಹೆಂಡತಿ
ನಿರ್ಮಾಣ : ಶೈಲೇಂದ್ರ ಬಾಬು
ನಿರ್ದೇಶನ : ರವಿ ಶ್ರೀವತ್ಸ
ಸಂಗೀತ : ಗುರು ಕಿರಣ್
ತಾರಾಗಣ : ಸಂಜನಾ, ತಿಲಕ್, ವಿಶಾಲ್ ಹೆಗಡೆ, ರವಿ ಬೆಳಗೆರೆ, ಮಂಜು ಭಾಷಿಣಿ ಮತ್ತಿತರರು.

ಎಲ್ಲವೂ ಸರಿ; ಮಡದಿ-ಮಕ್ಕಳೊಂದಿಗೆ ಇಂಥ ಚಿತ್ರ ನೋಡೋದು ಹೇಗ್ರೀ?

Saturday, June 9, 2007

ನ್ಯಾನೋ ಕತೆಗಳು: ಅಮ್ಮಯ್ಯ ಅಮ್ಮಯ್ಯ ಬಾರೇ.. ಅಕ್ಕರೆ ಸಕ್ಕರೆ ತಾರೇ..

ಇವು ನನಗೆ ಎಲ್ಲೋ ಸಿಕ್ಕ ಕತೆಗಳು? ನಂಬೋದಿಲ್ವಾ? -`ವಿಶ್ವ ಅಮ್ಮಂದಿರ ದಿನ'(ಮೇ.೧೩)ದ ಸಂದರ್ಭದಲ್ಲಿ ಮೂವರು ಅಮ್ಮಂದಿರ ಚಿತ್ರ ಇಲ್ಲಿದೆ.

ಅವಳ ಹೆಸರೇ ಅಮ್ಮ ಅಲ್ವಾ?
ನನ್ನಮ್ಮನ ಮೇಲೆ ನನಗೆ ಆವತ್ತು ಸಕತ್ತು ಸಿಟ್ಟು ಬಂದಿತ್ತು. ಎಲ್ಲಾ ಅನರ್ಥಕ್ಕೂ ಅವಳೇ ಕಾರಣ ಎನ್ನುವಷ್ಟು ದ್ವೇಷವೂ, ಜಿಗುಪ್ಸೆಯೂ ಉಂಟಾಗಿತ್ತು. ಅವಳನ್ನು ಕೊಂದು ಜೈಲಿಗೆ ಹೋಗಲೇ ಅನ್ನಿಸುವಷ್ಟು ಮನಸ್ಸಿನಲ್ಲಿದ್ದ ರಾಕ್ಷಸ ಅಬ್ಬರಿಸುತ್ತಿದ್ದ. ತಪ್ಪು ನನ್ನದೂ ಇರಬಹುದು!

ನನಗೆ ಅಪ್ಪ ಯಾರು ಎಂಬುದೇ ಗೊತ್ತಿಲ್ಲ. ನಾನು ಹುಡುಗನಾಗಿದ್ದಾಗ, ಮನೆಗೆ ಯಾರ್‍ಯಾರೋ ಬರ್ತಾ ಇದ್ದರು. ಬಂದವರು ನನಗೆ ಚಾಕಲೇಟ್ ಕೊಡ್ತಾಯಿದ್ದರು. ಅಮ್ಮ ಅವರ ಜೊತೆ ನಗ್ತಾನಗ್ತಾ ಮಾತಾಡ್ತಾಯಿದ್ದರು. ಅಕ್ಕಪಕ್ಕದ ಜನ ನನ್ನನ್ನು ಕಂಡು, ಒಂದು ಥರಾ ನಗ್ತಾಯಿದ್ದರು. ಯಾಕೋ ನನಗೆ ಅದೆಲ್ಲ ಆವಾಗ ಅರ್ಥವಾಗ್ತಾ ಇರಲಿಲ್ಲ.

ಏನೇನೋ ಮಾಡಿ, ಅಮ್ಮ ನನ್ನ ಓದಿಸಿದಳು. ನಾನು ಜ್ಞಾನವಂತನಾಗೋ ಹೊತ್ತಿಗೆ, ಅಮ್ಮ ದಣಿದಿದ್ದಳು. ಅಮ್ಮ ದಣಿಯಲು ಕಾರಣ ಸಹಾ ನನಗೆ ಗೊತ್ತಾಗಿತ್ತು! ಆದರೆ ಕೇಳುವಂತಿರಲಿಲ್ಲ. ಆ ಬಗ್ಗೆ ಚರ್ಚೆ ಮಾಡುವಂತಿರಲಿಲ್ಲ. ಆದರೆ ಮೊನ್ನೆ ಮನೆಗೆ ಬಂದಾಗ, ಅಂದು ಚಾಕಲೇಟ್ ಕೊಟ್ಟಿದ್ದ ಗಂಡಸು ಮನೆಯಲ್ಲಿದ್ದ! ನನ್ನ ಹೃದಯದ ಮೇಲೆ ಕೆಂಡದ ಮಳೆ.

ಬೆಳಗ್ಗೆ ಓದಿದ್ದ ಸುಭಾಷಿತ ನನ್ನನ್ನು ತಣ್ಣಗಾಗಿಸಿತು. `ಆಕೆ ಏನೇ ತಪ್ಪು ಮಾಡಿರಬಹುದು. ನೀವು ಕ್ಷಮಿಸಿ ಬಿಡಿ. ಯಾಕೆಂದರೆ, ಆಕೆ ನಿಮ್ಮ ತಾಯಿ'. ಹೌದು, ಅವಳು ನನ್ನಮ್ಮ. ಅವಳ ರಕ್ತ-ಮಾಂಸ ಹಂಚಿಕೊಂಡು, ಭೂಮಿಗೆ ಬಂದವನು ನಾನು! ಅವಳು ಅಮ್ಮ..
***
ಅಮ್ಮನ ನೆನಪೇ ಸಾಕು..

ಎಲ್ಲವೂ ಮುಗಿದು ಹೋಯಿತು ಎಂದು ಅನ್ನಿಸುತ್ತಿತ್ತು. ಪ್ರಾಣ ಕಳೆದುಕೊಳ್ಳುವ ಬಯಕೆ ಮನದಲ್ಲಿ ಮೊಳೆಯುತ್ತಿತ್ತು. ಕಷ್ಟಪಟ್ಟು ಸಂಪಾದಿಸಿದ್ದ ಕೆಲಸವನ್ನು ಕಳೆದುಕೊಂಡು ಅಂದಿಗೆ, ನಾಲ್ಕು ದಿನ. ಕೆಲಸ ಹೋದದ್ದಕ್ಕಿಂತ ಅವಮಾನವೇ ಮನವನ್ನು ಕೊರೆಯುತ್ತಿತ್ತು. ಮೋಸಗಾರ ಎಂದು ಜಗತ್ತು ಕೇಕೆ ಹಾಕುತ್ತಿತ್ತು.

ಯಾವುದೋ ಒಂದು ಕ್ಷಣದ ದುರಾಸೆ, ನನ್ನನ್ನು ಬೆತ್ತಲು ಮಾಡಿ ಜಗದ ಮುಂದೆ ನಿಲ್ಲಿಸಿತ್ತು. ಇಷ್ಟು ವರ್ಷದ ನಿಯತ್ತು ಎಲ್ಲರಿಗೂ ಮರೆತು ಹೋಗಿತ್ತು. ಕೆಲಸ ಕಳೆದುಕೊಂಡ ವಿಚಾರ ಗೊತ್ತಾದ ಮರುಕ್ಷಣವೇ, ನನ್ನ ನಿಶ್ಚಿತಾರ್ಥ ಮುರಿದು ಬಿತ್ತು. ಜೀವಕ್ಕೆ ಜೀವ ಕೊಡ್ತೀನಿ ಎನ್ನುತ್ತಿದ್ದ ಮಾವನ ಮಗಳು, `ನಮ್ಮಪ್ಪ ಅಮ್ಮನ ಮನಸ್ಸು ನೋಯಿಸೋದು ಹೇಗೆ?' ಅಂದಳು.
ಎಲ್ಲರೂ ನನ್ನನ್ನು ಕೈಬಿಟ್ಟಿದ್ದಾರೆ ಅನ್ನಿಸಿದಾಗ, ಅಮ್ಮ ನೆನಪಾದಳು. ಅಮ್ಮ ನೆನಪಾದ ತಕ್ಷಣ ಬೆಳಕು ಕಾಣಿಸಿತು.
***

ಅಮ್ಮನ ಹಂಬಲ

ಬದುಕಿದ್ದಾಗ ಎರಡು ಹನಿ ನೀರು ಬಿಡಲು ಬರಲು ಅವನಿಗೆ ಪುರುಸೊತ್ತಿಲ್ಲ. ಫೋನ್ ಮಾಡಿ, `ಜೀವ ಆಗಲೋ ಈಗಲೋ ಎನ್ನುವಂತಿದೆ. ಬೇಗ ಬನ್ನಿ' ಅಂದ್ರೆ, `ಇಗೋ ಬಂದೆ' ಅಂದವನು ಬಂದದ್ದು ಎಲ್ಲಾ ಮುಗಿದ ಮೇಲೆ! ಸಾಯೋ ಮುನ್ನ ಮಗನ ಮುಖ ನೋಡಬೇಕು ಎಂದು ಆ ತಾಯಿ ಎಷ್ಟು ಹಂಬಲಿಸಿದ್ದಳು. ಒಂದು ಸಣ್ಣ ಹಂಬಲವನ್ನು ಈಡೇರಿಸಲು ಅವನಿಂದ ಆಗಲಿಲ್ಲ. ಛೇ ಛೇ.

ಜನರಿಗೆ ಅಂಜಿ, ಹೆಣದ ಮುಂದೆ ಬಲವಂತದ ಕಣ್ಣೀರು ಸುರಿಸುತ್ತಿದ್ದಾನೆ. ಬದುಕಿದ್ದಾಗ ತಿರುಗಿ ನೋಡದೇ, ಈಗ ಸಮಾ, ಸಮಾ ತುಂಬಾ ಹೂವು.. ಕಾಯಿ ಮೇಲೆ ಕಾಯಿ ಒಡೆಯುತ್ತಿದ್ದಾನೆ.. ಬಡ್ಡೀ ಮಗ.. ಛೇ ಛೇ.

ಅವನು ಆ ತಾಯಿಗೆ ಒಂದು ರೀತಿ ಮೋಸ ಮಾಡಿದ. ನಾನು ಮಾಡಿದ್ದೇನು? ಹಾಸಿಗೆ ಕೆಳಗಿದ್ದ ಅಡಿಕೆ‌ಎಲೆ ಚೀಲದಿಂದ ಕವರ್‌ನಲ್ಲಿ ಸುತ್ತಿದ್ದ ನೋಟುಗಳನ್ನು ನನ್ನ ಮುಂದೆ ಹಾಕಿದ್ದಳು ಪುಣ್ಯಾತ್ಗಿತ್ತಿ. `ಇದರಲ್ಲಿ ೩೦೦೦ ಇದೆ. ನನ್ನ ಬೆಂಗಳೂರು ಆಸ್ಪತ್ರೆಗೆ ಸೇರಿಸೋ' ಎಂದು ಅಂಗಲಾಚಿದ್ದಳು.

`ಮಗ ಇರೋವಾಗ, ನಾನು ಆ ಕೆಲಸ ಮಾಡಿದ್ರೆ ಏನ್ ಚೆನ್ನಾಗಿರುತ್ತೆ. ಒಂದು ಸಲ ಅವನಿಗೆ ವಿಷಯ ತಿಳಿಸ್ತೀನಿ. ಅವನು ಆಸಕ್ತಿ ತೋರಿಸದಿದ್ದರೇ, ನಾನಿದ್ದೀನಿ' ಎಂದು ಭರವಸೆ ನೀಡಿದ್ದೆ. ಮಲಗಿದ ಜಾಗದಲ್ಲೇ ನಕ್ಕಿದ್ದಳು. ಅವಳು ಅಂದು ನಕ್ಕದ್ದರ ಅರ್ಥ ಇಂದು ಗೊತ್ತಾಗುತ್ತಿದೆ. ಆದರೆ ಸಮಯ ಮೀರೋಯ್ತಲ್ಲಾ..

(ಇಂಥ ಒಂದೆರಡು ಪ್ಯಾರದ ಕತೆಗಳನ್ನು 'ನ್ಯಾನೋ ಕತೆ'ಗಳು ಎಂದು ಕರೆದಿದ್ದೇನೆ.. ಇದು ಕಥೆಯಾ? ಕನವರಿಕೆಯಾ?)

ಕನಸಿನ ಮನೆಗೆ ಸ್ವಾಗತ

ಗೆಳೆಯರೇ,
ಬದುಕಿಗೆ ಕನಸುಗಳು ಬೇಕು..
ನಾನಂತೂ ಕನಸುಗಾರ..
ನೀವು ಕನಸುಗಾರರಾದರೇ ಮಾತ್ರ ನನ್ನ ಮನೆಗೆ ಬನ್ನಿ..