ಒಂದು ದೊಡ್ಡಮುಳ್ಳು, ಇನ್ನೊಂದು ಚಿಕ್ಕ ಮುಳ್ಳು.. ಜತೆಗೊಂದು ಸೆಕೆಂಡ್ ಮುಳ್ಳು.. ಈ ಮುಳ್ಳುಗಳ ಗೊಂದಲದಲ್ಲಿ ಗಡಿಯಾರದಲ್ಲಿ ಟೈಮ್ ಹೇಳೋದು ನನ್ಗೆ ಗೊತ್ತಾಗುತ್ತಿರಲಿಲ್ಲ. ಆ ಕೆಲಸ ಅಂಬರದ ಚುಕ್ಕೆಗಳನ್ನು ಎಣಿಸಿದಷ್ಟೆ ತ್ರಾಸದಾಯಕ ಅನ್ನಿಸಿತ್ತು. ಗಡಿಯಾರ ನೋಡಿ ಟೈಮ್ ಹೇಳೋರನ್ನು ಜಾಣರೆಂದು, ವಿದ್ಯಾವಂತರೆಂದು ಆಗ ಪರಿಗಣಿಸಲಾಗಿತ್ತು. ನಾನಂತೂ ೫ನೇ ಕ್ಲಾಸ್ ದಾಟಿದರೂ ಮುಳ್ಳಿನ ಗೊಂದಲದಿಂದ ಹೊರಬಂದಿರಲಿಲ್ಲ. ಆಗಷ್ಟೆ ಬಂದಿದ್ದ ನಂಬರ್ ವಾಚುಗಳು ನನಗೆ ಇಷ್ಟವಾಗಿದ್ದವು. ಮುಳ್ಳುಗಳಿಲ್ಲ ಎಂಬುದು, ನನ್ನ ಇಷ್ಟಕ್ಕೆ ಇನ್ನೊಂದು ಕಾರಣ.
ಅಂಕೆಗಳಿಲ್ಲದಿದ್ದರೂ ಗೆರೆಗಳನ್ನು ನೋಡಿ ಕಾಲ ಹೇಳುವ ಪರಿ ನನ್ನಲ್ಲಾಗ ಕುತೂಹಲದ ವಿಷಯ. ಮೊದಮೊದಲು ‘ನೀನು ದೊಡ್ಡವನಾಗು ಗೊತ್ತಾಗುತ್ತೆ ’ ಎಂದು ಮನೆಯಲ್ಲಿ ಹೇಳುತ್ತಿದ್ದರು. ಕೆಲವು ಸಲ ಅಣ್ಣ, ಅಮ್ಮ, ಅಪ್ಪ -ಹೀಗೆ ಎಲ್ಲರೂ ಟೈಮ್ ನೋಡೋದನ್ನು ಕಲಿಸಲು ತಿಣುಕಿ ವಿಫಲರಾಗಿ, ಕೈಚೆಲ್ಲಿದ್ದರು. ಹಾಗೆಂದು ನಾನು ಲೆಕ್ಕದಲ್ಲಿ ವೀಕೇನು ಇರಲಿಲ್ಲ.
ಅಣ್ಣ ಆಗಷ್ಟೆ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದ. ಅವನಿಗೆ ಬಂದಿದ್ದ ಸ್ಕಾಲರ್‌ಶಿಪ್‌ನಲ್ಲಿ ಒಂದು ಎಚ್‌ಎಂಟಿ ವಾಚನ್ನು ಬೆಂಗಳೂರಿಂದ ಅಪ್ಪ ತಂದುಕೊಟ್ಟಿದ್ದರು. ಜಗಳ ಮಾಡ್ತೀನಿ ಅಂಥ ಒಂದು ಶೆಲ್ ವಾಚನ್ನು ನನಗೆ ತಂದಿದ್ದರು. ‘ನೀನು ಎಸ್ಸೆಸ್ಸೆಲ್ಸಿಯಲ್ಲಿ ಒಳ್ಳೆ ನಂಬರ್ ತಗೊಂಡ್ರೆ ನಿನಗೂ ವಾಚ್ ಕೊಡಿಸ್ತೀವಿ’ ಎಂದಿದ್ದರು. ಎಚ್‌ಎಂಟಿ ವಾಚ್‌ಗಿಂತಲೂ ಅದರ ಬಾಕ್ಸೇ ನನಗಾಗ ಬಲು ಇಷ್ಟ. ಅಣ್ಣನಂತೂ ವಾಚ್ ಧರಿಸಿ ಠೀವಿಯಿಂದ ಹೆಜ್ಜೆಹಾಕುತ್ತಿದ್ದ. ಮನೆಗೆ ಬಂದ ತಕ್ಷಣ ಬಾಕ್ಸ್‌ನಲ್ಲಿ ಶಿಸ್ತಿನಿಂದ ಬಿಚ್ಚಿಡುತ್ತಿದ್ದ. ನಾನು ಅವನಿಲ್ಲದ ಹೊತ್ತಲ್ಲಿ ಮನೆಯಲ್ಲಿಯೇ ಗಡಿಯಾರ ಧರಿಸಿ ಖುಷಿಪಡುತ್ತಿದ್ದೆ.
ನನಗೆ ಅಪ್ಪ ತಂದು ಕೊಟ್ಟಿದ್ದ ಶೆಲ್ ವಾಚ್‌ನ ಚೈನ್ ಎರಡು ದಿನಕ್ಕೆ ತುಂಡಾಗಿತ್ತು. ಅಪ್ಪ ಮನೆಯಲ್ಲಿನ ಚಾಕು, ಕಟಿಂಗ್ ಪ್ಲೇಯರ್ ತಕೊಂಡು ಸರಿಮಾಡಿದ್ದರು. ಆದರೂ ಆ ಚೈನ್ ಆಗಾಗ ಕಳಚಿ ಬೀಳುತ್ತಿತ್ತು. ಆಮೇಲಾಮೇಲೆ ನಾನೇ ರಿಪೇರಿ ಮಾಡೋದನ್ನು ಕಲಿತೆ. ರಿಪೇರಿ ಮಾಡೋದರಲ್ಲಿ ನಾನು ಮೊದಲಿಂದಲೂ ಎತ್ತಿದ ಕೈ. ಯಾರಾದರೂ ಟೈಮ್ ಕೇಳಿದರೆ, ೧೦.೧೬ ಅನ್ನುತ್ತಿದ್ದೆ. ೧೧.೨೯ಅನ್ನುತ್ತಿದ್ದೆ. ನಿಮಿಷಗಳು ಬದಲಾಗುವ ಪರಿ, ಈಗಲೂ ನನ್ನ ಪಾಲಿಗೆ ದೊಡ್ಡ ಬೆರಗು.
ಈ ಕೈಗಡಿಯಾರದ ವಿಷಯಕ್ಕೆ ಆಮೇಲೆ ಬರೋಣ. ಟೈಮನ್ನು ಪಕ್ಕದ ಮಸೀದಿಯವರು ಅಲ್ಲಾ ಕೂಗೋದನ್ನು ಅನುಸರಿಸಿ ಅಮ್ಮ ಹೇಳುತ್ತಿದ್ದಳು. ‘ಓ ಈಗ ೮ ಗಂಟೆ, ಆಗಲೇ ೧೨ ಗಂಟೆಯಾಯ್ತಾ..’ ಎಂದು ಅಮ್ಮ ಗೊಣಗುತ್ತಿದ್ದದ್ದು ಈಗಲೂ ಒಂದು ಸವಿನೆನಪು. ಮನೆಯಲ್ಲಿ ಆಗ ಗಡಿಯಾರ ಅಂಥ ಇದ್ದಿದ್ದು, ಅಪ್ಪನದೊಂದೆ. ಅಪ್ಪ ಸ್ಕೂಲ್ ಮೇಷ್ಟ್ರು. ಅಪ್ಪನ ಎಚ್‌ಎಂಟಿ ವಾಚಿನ ಮೇಲೆ ನಮಗೆಲ್ಲ ಏನೋ ಮೋಹ. ಅದರ ಟಿಕ್‌ಟಿಕ್ ನಾದ, ಮುಳ್ಳುಗಳು ಸುತ್ತೋ ಶಿಸ್ತು ನಿಜಕ್ಕೂ ಇಷ್ಟವಾಗಿತ್ತು.
ಬೆಳಬೆಳಗ್ಗೆ ಪೇಪರ್ ಓದಲು ಅಪ್ಪ ಬಸ್ ಸ್ಟಾಂಡ್‌ನತ್ತ ಹೆಜ್ಜೆ ಹಾಕುತ್ತಿದ್ದರು. ಪೇಪರ್ ಎಲ್ಲಾ ಮುಗಿಸಿ ದೇಶ ಮತ್ತು ಊರಿನ ಸಮಾಚಾರವನ್ನು ಚೆನ್ನಪ್ಪನ ಹೋಟೆಲ್‌ನಲ್ಲಿ ಚರ್ಚಿಸಿ, ಗೆಳೆಯರ ಕಾಲೆಳೆದು ಅಲ್ಲಿ ಮಾತಿನ ಮಂಟಪ ಕಟ್ಟುವಲ್ಲಿ ಅಪ್ಪ ಎತ್ತಿದ ಕೈ. ಆ ಸುಖದಲ್ಲಿ ಸಮಯ ಹೋಗಿದ್ದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಹೋಟೆಲ್ ಹಿಂದೆಯೇ ಇದ್ದ ಶಾಲೆಯ ಗಂಟೆ ಹೊಡೆದ ತಕ್ಷಣ , ಅಪ್ಪ ಮನೆಯತ್ತ ಬಿರಬಿರನೆ ಬರ್ತಾಯಿದ್ದರು. ೫-೧೦ ನಿಮಿಷದಲ್ಲಿಯೇ ಅವರ ಸ್ನಾನ-ತಿಂಡಿ ಎಲ್ಲಾ ಮುಗಿದು, ಶಾಲೆಯ ಪ್ರಾರ್ಥನೆ ಮುಗಿವ ಹೊತ್ತಿಗೆ ಶಾಲೆಯಲ್ಲವರು ಹಾಜರು.
ಇಲ್ಲಿ ಅಪ್ಪ ಇಲ್ಲದ ಹೊತ್ತಿನಲ್ಲಿ ನಮಗೆ ಸಮಯ ತಿಳಿಯುತ್ತಿರಲಿಲ್ಲ. ನಾನು ಮತ್ತು ಅಣ್ಣ ರಸ್ತೆಯಲ್ಲಿ ನಿಂತು, ಹೋಗಿ ಬರೋರ ಬಳಿ ಸಮಯ ಕೇಳ್ತಾಯಿದ್ವಿ. ‘ಅಣ್ಣಾ ಟೈಮೆಷ್ಟಣ್ಣ ’, ‘ಸಾರ್ ಟೈಮೆಷ್ಟಾಯಿತು ಸಾರ್’ ಎಂಬ ನಮ್ಮ ದಿನನಿತ್ಯದ ಪ್ರಶ್ನೆ, ಆ ರಸ್ತೆಯಲ್ಲಿ ಸುತ್ತಾಡುವ ಅನೇಕರಿಗೆ ಚಿರಪರಿಚಿತ. ಅವರು ೯.೩೦ ಅಂದರೆ, ಕೂಡಲೇ ಮನೆಗೆ ಬಂದು ‘ಅಮ್ಮಾ ಆಗಲೇ ೧೦ ಗಂಟೆ ಆಯಿತು, ಬೇಗ ತಿಂಡಿ ರೆಡಿ ಮಾಡು.. ಸ್ಕೂಲ್‌ಗೆ ಟೈಮಾಯ್ತು’ ಎಂದು ಪೀಡಿಸುತ್ತಿದ್ದೆವು.
ರಸ್ತೆಯಲ್ಲಿ ಬರೋ ೧೦ ಜನರಲ್ಲಿ ಒಬ್ಬರೋ ಇಬ್ಬರೋ ಗಡಿಯಾರ ಹೊಂದಿರುತ್ತಿದ್ದರು. ನಾವು ಟೈಂ ಕೇಳಿದಾಗ, ಠೀವಿಯಿಂದ ಕೈಯೆತ್ತಿ ಸಮಯ ಹೇಳುತ್ತಿದ್ದರು. ಕೆಲವರಿಗೆ ಸಮಯ ಹೇಳೋದು ಗೊತ್ತಿರಲಿಲ್ಲ. ಅವರು ಫ್ಯಾಷನ್‌ಗಾಗಿ ಕಟ್ಟುತ್ತಿದ್ದರು. ಅಂಥವರು ‘ಗಡಿಯಾರ ಯಾಕೋ ಬೆಳಗ್ಗೆಯಿಂದ ನಿಂತೋಗಯ್ತೆ..’ ಎನ್ನುತ್ತಾ ನಮ್ಮಿಂದ ತಪ್ಪಿಸಿಕೊಳ್ಳುತ್ತಿದ್ದರು.
‘ಮಕ್ಕಳು ರಸ್ತೆಯಲ್ಲಿ ನಿಂತು ಕಂಡೋರ ಬಳಿ ಟೈಮ್ ಕೇಳೋದನ್ನು ನೋಡೋಕೆ ಆಗೋದಿಲ್ಲ. ಮೊದಲು ಗೋಡೆ ಗಡಿಯಾರ ತನ್ನಿ’ ಎಂದು ಅಮ್ಮ ಕೇಳುತ್ತಿದ್ದಳು. ಅಪ್ಪ , ‘ತರೋಣ. ಈ ಸಲ ಪೇಪರ್ ವ್ಯಾಲ್ಯುಯೇಷನ್‌ಗೆ ಬೆಂಗಳೂರ್‌ಗೆ ಹೋದಾಗ ತರ್ತಿನಿ’ ಎನ್ನುತ್ತಿದ್ದರು. ಈ ಮಧ್ಯೆ ವೀರಗಾನಹಳ್ಳಿಯಲ್ಲಿದ್ದ ಚಿಕ್ಕಪ್ಪನ ಮನೆಯ ಗೋಡೆಯನ್ನು ‘ಮಾಸ್ಟರ್ ಬಿಂ-ಬಾಂ’ ಗಡಿಯಾರ ಅಲಂಕರಿಸಿತ್ತು. ಮಧುಗಿರಿಯಲ್ಲಿ ಸಿಕ್ಕಿದ್ದ ಚಿಕ್ಕಪ್ಪನ ಮಗ ರವಿ, ಈ ವಿಷಯವನ್ನು ನನ್ನ ಕಿವಿಗೆ ಹಾಕಿದ್ದ. ಅವನು ಅದ್ಯಾಕೆ ಹೇಳಿದನೋ ಗೊತ್ತಿಲ್ಲ.
ಈ ಮಧ್ಯೆ ಅಪ್ಪ-ಅಮ್ಮ ಮತ್ತು ನಾನು ವೀರಗಾನಹಳ್ಳಿಗೆ ಹೋಗಿದ್ದೆವು. ಮಾರಮ್ಮನ ಹಬ್ಬವೋ ಅಥವಾ ಇನ್ನೇನೋ ಇತ್ತು. ಹಬ್ಬಕ್ಕಿಂತಲೂ ನಮಗೆ ಗೋಡೆ ಗಡಿಯಾರದ ಮೇಲೆಯೇ ಗಮನ. ಅದು ಗಂಟೆಗೊಮ್ಮೆ ಬಿಂ-ಬಾಂ ಎಂದು ಸದ್ದು ಮಾಡಿದಾಗಲೆಲ್ಲ, ಎದೆಯಲ್ಲಿ ಪುಳಕ. ಕೆಲವೇ ದಿನಗಳಲ್ಲಿ ಅಂಥದ್ದೇ ಗಡಿಯಾರ ತರಲು ಮನೆಯಲ್ಲಿ ಸಿದ್ಧತೆಗಳು ನಡೆದವು. ತುಮಕೂರಿಂದ ನಾವಿದ್ದ ಪಟ್ಟನಾಯ್ಕನಳ್ಳಿಗೆ ಬರ್‍ತಾಯಿದ್ದ ಸದಾಶಿವಯ್ಯ ಮೇಷ್ಟ್ರು ಗಡಿಯಾರ ತರುವ ಹೊಣೆ ಹೊತ್ತುಕೊಂಡರು. ಮಾಸ್ಟರ್ ಬಿಂ-ಬಾಂ ತರಲು, ಗಡಿಯಾರದಂಗಡಿಗೆ ಹೋಗಿದ್ದ ಅವರಿಗೆ, ಅದು ಓಲ್ಡ್ ಫ್ಯಾಷನ್‌ನಂತೆ ಕಂಡಿರಬೇಕು. ಅವರು ಕೀ ರಗಳೆ ಇಲ್ಲದ ಅಜಂತ ಕ್ವಾರ್ಟ್ಜ್ ಗಡಿಯಾರ ತಂದಿದ್ದರು. ಆ ಗಡಿಯಾರಕ್ಕಾಗಿ ಅವರು ಇನ್ನೂ ೫೦ ರೂಪಾಯಿ ಸೇರಿಸಿದ್ದರು.
ಆ ಗಡಿಯಾರ ನೋಡಿದ ಅಪ್ಪನಿಗೆ ಇಷ್ಟವಾಯಿತು. ಆದರೆ ನಮಗ್ಯಾರಿಗೂ ಸುತಾರಾಂ ಇಷ್ಟವಾಗಲಿಲ್ಲ. ರಾತ್ರಿ ೧೨ಗಂಟೆಗೆ ೧೨ ಸಲ ಗಂಟೆ ಹೊಡೆದರೆ, ನಿದ್ದೆ ಹೋಗುತ್ತೆ, ಇದು ಚೆನ್ನಾಗಿದೆ. ಕೀ ಕೊಡಬೇಕಿಲ್ಲ. ವರ್ಷಕ್ಕೊಂದು ಸೆಲ್ ಹಾಕಿದರೆ ಸಾಕು’ ಎಂದು ಸದಾಶಿವಯ್ಯ ಮೇಷ್ಟ್ರು ಏನೇನೋ ವಿವರಣೆ ನೀಡಿ, ನಮ್ಮನ್ನು ಒಪ್ಪಿಸಲು ನೋಡಿದರು. ಒಲ್ಲದ ಮನಸ್ಸಿನಲ್ಲಿಯೇ ಗೋಡೆಗೆ ಮೊಳೆ ಹೊಡೆದು ನೇತು ಹಾಕಿದೆವು. ಯಾಕೋ ಅದರ ಅಸ್ತಿತ್ವ ಯಾರಿಗೂ ಕಾಣಿಸುತ್ತಿಲ್ಲ ಎಂದು ನಮಗೆಲ್ಲ ಅನ್ನಿಸಿತ್ತು. ಗಂಟೆ ಬದಲಿಗೆ ಅದು ಮಂಜುಳ ನಿನಾದವನ್ನು ಹೊರಚೆಲ್ಲುತ್ತಿತ್ತು.
ರಾತ್ರಿ ವೇಳೆ ಆ ಸುಮಧುರ ಸಂಗೀತ ಬಂದ್! ರಾತ್ರಿ ೧೦ ಗಂಟೆ ತನಕ ಮ್ಯೂಸಿಕ್ ನುಡಿಸೋ ಗಡಿಯಾರ, ಆಮೇಲೇಕೆ ಸುಮ್ಮನಾಗುತ್ತೆ ಅನ್ನೋದು ನಮಗೆಲ್ಲ ಚಿದಂಬರ ರಹಸ್ಯ. ಗಡಿಯಾರದ ಮೇಲೆ ಬೆಳಕು ಬಿದ್ದರಷ್ಟೆ ಮ್ಯೂಸಿಕ್ ಬರುತ್ತೆ ಅನ್ನೋದನ್ನು ನಾನು ಕಂಡು ಹಿಡಿದು ಜಾಣನಂತೆ ಬೀಗಿದೆ. ಅಪ್ಪ ನನ್ನ ವಾದವನ್ನು ಒಪ್ಪಿಕೊಂಡರು.
ಗಡಿಯಾರದ ಬಗ್ಗೆ ನಮ್ಮ ಪ್ರೀತಿ ಚಿಗುರಲೇ ಇಲ್ಲ. ಯಾಕೋ ಅದನ್ನು ಕಂಡಾಗಲೆಲ್ಲಾ ಎಲ್ಲೋ ಮೋಸ ಹೋದೆವು ಅನ್ನಿಸುತ್ತಿತ್ತು. ನಮ್ಮ ಮನಸ್ಥಿತಿ ಸದಾಶಿವಯ್ಯ ಮೇಷ್ಟ್ರುಗೆ ಅರ್ಥವಾಯಿತು ಅನ್ನಿಸುತ್ತೆ. ಅವರು ಹೊಸದೊಂದು ಮಾಸ್ಟರ್ ಬಿಂ-ಬಾಂ ಗಡಿಯಾರ ತಂದು ಕೊಟ್ಟರು. ಅಜಂತ ಕ್ವಾರ್ಟ್ಜ್ ಗಡಿಯಾರವನ್ನು ತಮ್ಮ ಮನೆಯಲ್ಲಿ ಹಾಕಿಕೊಂಡರು. ಹೊಸ ಗಡಿಯಾರ ಬಂದ ದಿನ ನಮಗೆಲ್ಲ ಏನೋ ಸಡಗರ. ಅಮ್ಮ ಅರಿಷಿಣ-ಕುಂಕುಮ ಇಟ್ಟು ಪೂಜೆ ಮಾಡಿದರು. ಪೆಂಡಿಲಮ್‌ಗೂ ಅರಿಷಿಣ-ಕುಂಕುಮದ ಜತೆ ವಿಭೂತಿ ಸವರಿದೆವು. ಅದು ಗಂಟೆಗೆ ಮತ್ತು ಅರ್ಧ ಗಂಟೆಗೆ ಸದ್ದು ಮಾಡುತ್ತಿತ್ತು. ಹನ್ನೆರಡು ಗಂಟೆ ಬರೋದನ್ನು ಕಾಯುತ್ತಿದ್ದೆವು. ಗಡಿಯಾರ ಒಂದೊಂದು ಗಂಟೆ ಹೊಡೆದಾಗಲೂ ನಾವು ಒಂದು, ಎರಡು, ಮೂರು.. ಹನ್ನೊಂದು, ಹನ್ನೆರಡು ಎಂದು ಎಚ್ಚರಿಕೆಯಿಂದ ಎಣಿಸುತ್ತಿದ್ದೆವು.
ವಾರಕ್ಕೊಮ್ಮೆ ಕೀ ಕೊಡಲು ಅಪ್ಪ ಕುರ್ಚಿ ಮೇಲೆ ಹತ್ತುತ್ತಿದ್ದರು. ಅವರಿಗೆ ಕುರ್ಚಿ ತಂದು ಕೊಡುವುದು ಮತ್ತು ಕೀ ನೀಡುವ ಪ್ರಕ್ರಿಯೆ ವೀಕ್ಷಿಸುತ್ತಿದ್ದೆ. ಆರಂಭದಲ್ಲಿ ಹಿತವಾಗಿದ್ದ ಘಂಟಾನಾದ, ನಂತರ ಕರ್ಣ ಕಠೋರ ಅನ್ನಿಸತೊಡಗಿತು. ಆಮೇಲಾಮೇಲೆ ಕೀ ಕೊಡುವ ಉತ್ಸಾಹ ಅಪ್ಪ ಮತ್ತು ನನ್ನಲ್ಲಿ ಇಲ್ಲವಾಯಿತು. ‘ಮನೆಯಲ್ಲಿನ ಗಡಿಯಾರ ನಿಲ್ಲ ಬಾರದು, ಕೀ ಕೊಡಿ’ ಎಂದು ಅಮ್ಮ ಹೇಳುತ್ತಿದ್ದಳು. ಅವಳ ಬಲವಂತಕ್ಕೆ ಕೀ ಕೊಡುತ್ತಿದ್ದೆವು. ನಮ್ಮ ನಿರುತ್ಸಾಹ ಕಂಡು ಗಡಿಯಾರಕ್ಕೆ ಬೇಸರವಾಗಿರಬೇಕು. ಒಂದು ಒಳ್ಳೆ ದಿನ ಅದು ಕೆಟ್ಟು ನಿಂತಿತು. ಅದನ್ನೇ ಕಾಯುತ್ತಿದ್ದ ನಾನು ಅದನ್ನೆತ್ತಿ ಅಟ್ಟದ ಮೇಲಿಟ್ಟೆ. ಆ ಜಾಗಕ್ಕೆ ಮತ್ತೆ ಕ್ವಾರ್ಟ್ಜ್ ಗಡಿಯಾರವನ್ನು ಅಣ್ಣ ತಂದು ಹಾಕಿದ.
ಈಗ ಮತ್ತೆ ಕೈಗಡಿಯಾರದ ವಿಷಯಕ್ಕೆ ಬರೋಣ. ಆಗ ಯಾರದಾದ್ರೂ ಕೈಯಲ್ಲಿ ಚಿನ್ನದ ಬಣ್ಣದ ವಾಚು ಹೊಳೆಯುತ್ತಿದೆ ಎಂದರೆ, ಹೊಸದಾಗಿ ಮದುವೆಯಾಗಿದ್ದಾನೆ ಎಂದು ಸುಲಭವಾಗಿ ಊಹಿಸಬಹುದಿತ್ತು. ‘ವರದಕ್ಷಿಣೆ, ಉಂಗುರ ಮತ್ತು ಚೈನ್ ಜತೆಗೆ ಗೋಲ್ಡ್ ಕೇಸ್ ವಾಚ್ ಕೊಡಬೇಕು’ ಎಂಬ ಬೇಡಿಕೆಯನ್ನು ವರಮಹಾಶಯರು ಮುಂದಿಡುತ್ತಿದ್ದರು. ಅಂಥಾ ವಾಚ್ ಕಟ್ಟುವ ಬಯಕೆ ನಾವು ಹುಡುಗರಾಗಿದ್ದಾಗಲೇ ಎದೆಯಲ್ಲಿ ಗರಿಗೆದರಿತ್ತು. ನಾನು ಎಸ್ಸೆಸ್ಸೆಲ್ಸಿ ಯನ್ನು ಸೆಕಂಡ್ ಕ್ಲಾಸಲ್ಲಿ ಪಾಸ್ ಮಾಡಿದ್ದು ನಮ್ಮ ಮನೆಮಂದಿಗೆಲ್ಲಾ ಆಶ್ಚರ್ಯದ ಸಂಗತಿ! ಒಂದೋ ಎರಡೋ ಸಬ್ಜೆಕ್ಟ್‌ನಲ್ಲಿ ಡುಮ್ಕಿ ಹೊಡಿತಾನೆ ಎಂದು ಅವರು ಭಾವಿಸಿದ್ದರು. ಬೆಂಗಳೂರಿನಲ್ಲಿದ್ದ ಅಣ್ಣನಿಗಂತೂ ಖುಷಿಯೋ ಖುಷಿ. ಅವನು ಪ್ರತಿ ಸಲ ಊರಿಗೆ ಬಂದಾಗ ೧೦೦ ಗ್ರಾಂ ಚೌಚೌನ್ನು ನನಗಾಗಿ ತರ್ತಾಯಿದ್ದ. ಆ ಸಲ ಸ್ವೀಟನ್ನು ತಂದಿದ್ದ. ಅದೇ ಟೈಮಲ್ಲಿ ಅಪ್ಪನೊಂದಿಗೆ ಬೆಂಗಳೂರಿಗೆ ಹೋಗಿದ್ದೆ. ಜತೆಯಲ್ಲಿದ್ದ ಅಣ್ಣ, ‘ಅಪ್ಪಾ ಬಾಬುಗೊಂದು ಗಡಿಯಾರ ಕೊಳ್ಳೋಣವೇ’ ಎಂದ. ಎಚ್‌ಎಂಟಿ ಶೋರೂಂಗೆ ಹೊರಟಿತು ನಮ್ಮ ಸವಾರಿ.
ಅಲ್ಲಿ ಕೀ ಕೊಡುವ ಗಡಿಯಾರಗಳನ್ನು ಅಪ್ಪಾ ನೋಡ್ತಾಯಿದ್ದರು. ಆದರೆ ಅಣ್ಣ, ಕ್ವಾರ್ಟ್ಜ್ ಗಡಿಯಾರಗಳನ್ನು ಕೈಯಲ್ಲಿಡಿದಿದ್ದ. ‘ಅವೆಲ್ಲಾ ಜಾಸ್ತಿ ರೇಟು, ಇದ್ಯಾವುದಾದರೂ ನೋಡು’ ಎಂದರು. ಆದರೆ ಅಣ್ಣ ಅತ್ತ ಸುಳಿಯಲೇ ಇಲ್ಲ. ೬೬೮ ರೂಪಾಯಿ ನೀಡಿ ಕ್ವಾರ್ಟ್ಜ್ ಗಡಿಯಾರ ಕೊಡಿಸಿದ. ಆಗಿನ ಕಾಲಕ್ಕೆ ಅದು ಒಳ್ಳೆ ಗಡಿಯಾರ(ಈಗಲೂ ಸಹಾ). ಹೀರೊ ಹೊಂಡಾ ಸರ್ವೀಸ್ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಆಗ ಬರ್ತಾಯಿದ್ದ ಸಂಬಳ ಬರೀ ೪೦೦ ರೂಪಾಯಿ. ಗಡಿಯಾರ ಖರೀದಿಸಿದ ಮೇಲೆ ಹೋಟೆಲ್‌ಗೆ ಹೋಗಿ ಮಸಾಲೆ ದೋಸೆ ತಿಂದೆವು. ಬೆಂಗಳೂರಿನ ಅಂದಿನ ಟ್ರಾಫಿಕ್, ಬಿಎಂಟಿಸಿ ಬಸ್‌ಗಳು, ಜನ ಜಾತ್ರೆ -ಇವೆಲ್ಲವೂ ನನ್ನ ಕಣ್ಣಿಂದ ಕದಲದ ಚಿತ್ರಗಳು.
ಅಣ್ಣ, ಗಡಿಯಾರ ಕೊಡಿಸಿ ಇಂದಿಗೆ ದಶಕಗಳು ಸವೆದಿವೆ. ಆಗಾಗ ಸೆಲ್ ಹಾಕಿಸಿದ್ದು ಬಿಟ್ಟರೇ ರಿಪೇರಿ ತಂಟೆಗೆ ಹೋಗಿಲ್ಲ. ಯಾಕೋ ಗಡಿಯಾರ ಕಂಡಾಗಲೆಲ್ಲ, ಅಣ್ಣ ನೆನಪಾಗುತ್ತಾನೆ. ಅಣ್ಣನೊಂದಿಗೆ ನಮ್ಮ ಮನೆಮಂದಿ ನೆನಪಾಗುತ್ತಾರೆ. ಬೆಂಗಳೂರಿಗೆ ಬಂದಾಗ ಅದು ನನ್ನ ಕೈಯಲ್ಲಿತ್ತು. ಅದರ ಗಾಜು ಒಡೆದದ್ದು, ಅದನ್ನು ಹಾಕಿಸಿದ್ದು ಬಿಟ್ಟರೆ ಬೇರೇನು ಕಿರಿಕಿರಿಗಳಿರಲಿಲ್ಲ. ಈ ಮಧ್ಯೆ ವಾಚನ್ನು ಎಲ್ಲಾದರೂ ನಾನು ಕಳೆದುಕೊಳ್ಳುತ್ತೇನೆ ಎಂದು ಮನಸಿಗೆ ಅನ್ನಿಸತೊಡಗಿತು. ಮತ್ತೊಬ್ಬ ಅಣ್ಣ ಮೊಬೈಲ್ ಕೊಡಿಸಿದ ಮೇಲೆ ಗಡಿಯಾರದ ಅವಶ್ಯಕತೆ ಇಲ್ಲ ಎಂದು ನನಗೆ ನಾನೇ ಅಂದುಕೊಂಡೆ. ಆ ನೆಪದಲ್ಲಿ ಅಣ್ಣನ ಎಚ್‌ಎಂಟಿ ವಾಚನ್ನು ಜೋಪಾನ ಮಾಡುವುದು ಒಳ ಹುನ್ನಾರ! ಅಂದಿನಿಂದ ಗಡಿಯಾರ ಮನೆಯ ಶೋಕೇಸ್‌ನಲ್ಲಿ ಭದ್ರವಾಗಿ ಕೂತು ಬಿಟ್ಟಿದೆ.
ಗಡಿಯಾರ ಧರಿಸುವುದು ಹಿಂದೆ ದೌಲತ್ತಿನ ಸಂಕೇತ. ಜತೆಗೆ ಶ್ರೀಮಂತಿಕೆ ಮತ್ತು ಗಣ್ಯತೆ ಪ್ರದರ್ಶಿಸುವ ನೆಪವಾಗಿತ್ತು. ಆದರೆ ದಿನಗಳು ಬದಲಾಗಿವೆ. ಕಂಪನಿ ಸಿಇಒ ಸೇರಿದಂತೆ ಬಹುತೇಕರ ಕೈಯಲ್ಲೀಗ ಗಡಿಯಾರ ಉಳಿದಿಲ್ಲ. ಮಾತಿಗೂ, ಸಮಯಕ್ಕೂ ಎಲ್ಲಕ್ಕೂ ಎಲ್ಲರ ಕೈಯಲ್ಲೂ ಕಿಣಿಕಿಣಿ ಮೊಬೈಲ್.
ಎಲ್‌ಕೆಜಿ ಓದುವ ಮಗಳಿಗೆ ಅಣ್ಣ ನಂಬರ್ ತೋರಿಸುವ ಗಡಿಯಾರ ತಂದುಕೊಟ್ಟಿದ್ದಾನೆ. ಬಯಸುವ ಮೊದಲೇ ಗಡಿಯಾರ ಅವಳ ಕಾಲಬುಡಕ್ಕೆ ಬಿದ್ದಿದೆ. ಹೀಗಾಗಿ ಅವಳಲ್ಲಿ ಗಡಿಯಾರದ ಕನಸಿಲ್ಲ. ಮುಳ್ಳುಗಳ ಗೊಂದಲಗಳೂ ಇಲ್ಲ.
Monday, August 18, 2008
Subscribe to:
Post Comments (Atom)
No comments:
Post a Comment