Thursday, June 28, 2007

ಇದು ನಾವು ನೋಡಿದ್ದು, ನಂಬಿದರೆ ನಂಬಿ ಬಿಟ್ಟರೆ ಬಿಡಿ..!?


ಈ ಕಾಲದಲ್ಲೂ ಇದೆಲ್ಲ ಏನ್ರೀ? ಚಂಡಿಯಂತೆ? ಚೌಡೇಶ್ವರಿಯಂತೆ ಎಂದು ಬಾಯಿ ಸೊಟ್ಟಗೆ ಮಾಡಬೇಡಿ. ವಿಜ್ಞಾನ ಲೋಕಕ್ಕೆ ಸವಾಲು ಹಾಕುವಂತಹ ನಿದರ್ಶನವೊಂದು ನಮ್ಮ ನಡುವೆಯೇ ಇದೆ!!!


ನಂಬೋರು ನಂಬಬಹುದು. ನಂಬಲ್ಲ ಅನ್ನೋರು, ಕಾರಣ ಕೊಟ್ಟರೇ, ಒಳ್ಳೆಯದು. ಕಾರಣ ಸದ್ಯಕ್ಕೆ ತೋಚುತ್ತಿಲ್ಲ ಎಂದ ಮಾತ್ರಕ್ಕೆ ವಿಚಾರವಂತರೆಲ್ಲರೂ, ದೇವರಿಗೆ ಅಡ್ಡಡ್ಡ ಬೀಳಿ ಎಂದು ಹೇಳುವುದು ನನ್ನ ಉದ್ದೇಶವಲ್ಲ. ಹೀಗೂ ಉಂಟು? ಅದೇ, ಯಾಕೆ ಹೀಗೆ ಎಂಬುದು ಜಗತ್ತಿಗೆ ಗೊತ್ತಾದರೆ ಒಳ್ಳೆಯದು.


ಮಂತ್ರಕ್ಕಿಂತಲೂ ಉಗುಳೇ ಜಾಸ್ತಿಯಾಯಿತು ಎಂದು ಬೇಸರಿಸಿಕೊಳ್ಳಬೇಡಿ. ಇನ್ನು ನೇರವಾಗಿ ವಿಚಾರಕ್ಕೆ ಬರುತ್ತೇನೆ. ಹಾಸನಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೆಗ್ಗಡಿಗೆರೆ ಅನ್ನುವುದು ಒಂದು ಕುಗ್ರಾಮ. ಆದರೆ ಅದೀಗ ಜಯಮ್ಮ ಎಂಬಾಕೆಯಿಂದ, ಎಲ್ಲರ ಗಮನ ಸೆಳೆಯುತ್ತಿದೆ.


ಈ ಜಯಮ್ಮ ಎಂಬ ಮಹಿಳೆ ಕಳೆದ 8ವರ್ಷದಿಂದ ಅನ್ನ-ನೀರು ಮುಟ್ಟಿಲ್ಲ. ಹಾಸಿಗೆ ಬಿಟ್ಟು ಎದ್ದಿಲ್ಲ! ಆಕೆಯನ್ನು ಸಾಕ್ಷಾತ್ ಚೌಡೇಶ್ವರಿದೇವಿ ಎಂದು ನಂಬುವ ಮಂದಿ ಗ್ರಾಮದಲ್ಲಿ ಬಹುಸಂಖ್ಯಾತರು.


ಕತ್ತಲ ಕೋಣೆಯ ಹಾಸಿಗೆ ಮೇಲೆ ದಪ್ಪನೆಯ ಉಲ್ಲನ್ ರಗ್ಗಿನಡಿ ಮಲಗಿರುವ ಜಯಮ್ಮ, ಕಳೆದ 8ವರ್ಷಗಳಲ್ಲಿ 3 ಸಲ ಮಾತ್ರ ಹಾಸಿಗೆ ಬಿಟ್ಟು ಎದ್ದಿದ್ದಾಳೆ. ಬಯಲಿಗೆ ಬಂದಿದ್ದಾಳೆ. ಊರಲ್ಲಿ ಚೌಡೇಶ್ವರಿ ಉತ್ಸವವಿದ್ದರೇ ಮಾತ್ರ, ಅವಳು ಹಾಸಿಗೆ ಬಿಟ್ಟು ಮೇಲಕ್ಕೆ ಏಳುತ್ತಾಳೆ. ದೇವಸ್ಥಾನಕ್ಕೆ ಬರುತ್ತಾಳೆ. ಆಮೇಲೆ ತಾನುಂಟು, ತನ್ನ ಹಾಸಿಗೆಯುಂಟು.


ಹಾಸಿಗೆ ಮೇಲೆ ಮಲಗುವ ಅವಳು ಬದುಕಿದ್ದಾಳೆ ಅನ್ನುವುದಕ್ಕೆ ಒಂದೇ ನಿದರ್ಶನ, ಉಸಿರಾಟ! ಇಂಥದ್ದೊಂದು ವಿಲಕ್ಷಣ ಸಂಗತಿಯನ್ನು ಟೀವಿ 9ತಂಡ, ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದೆ. ಕಳೆದ ಭಾನುವಾರ 'ಹೀಗೂ ಉಂಟು?!' ಕಾರ್ಯಕ್ರಮದಲ್ಲಿ, ಜಯಮ್ಮನ ಬಗ್ಗೆ ಸಾಕಷ್ಟು ವಿಚಾರಗಳು ಪ್ರಸ್ತಾಪವಾದವು.


ಜಯಮ್ಮ ಮೊದಲು ಹೀಗಿರಲಿಲ್ಲ. ಎಲ್ಲ ಹೆಣ್ಣು ಮಕ್ಕಳಂತೆಯೇ ಇದ್ದಳು. ಮನೆ ಹಿತಕ್ಕಾಗಿ ಕೂಲಿ ಮಾಡುತ್ತಿದ್ದಳು. ಸಮಾಜದಲ್ಲಿ ನಮ್ಮದೂ ಒಂದು ಮನೆ ಅಂತ ಆಗಲಿ ಎಂದು ಕಾಸಿಗೆ ಕಾಸು ಸೇರಿಸುತ್ತಿದ್ದಳು. ಆಕೆ ದಿಟ್ಟೆ, ಜೊತೆಗೆ ಸ್ವಾಭಿಮಾನಿ.


ಇನ್ನೂ ವಿಚಿತ್ರವೆಂದರೆ ಜಯಮ್ಮ ಮದುವೆ ಸಹಾ ಆಗಿದ್ದಾಳೆ. ಹೊಳೆ ನರಸೀಪುರದ ಗಂಡನ ಮನೆಯಲ್ಲಿ ಆಕೆ ಒಂದು ದಿನ ಸಹಾ ಸರಿಯಾಗಿ ಸಂಸಾರ ಮಾಡಿಲ್ಲ. ಪ್ರಥಮ ರಾತ್ರಿಯ ದಿನವೇ, ಜಯಮ್ಮನನ್ನು 'ಅಕ್ಕ' ಎಂದು ಸ್ವತಃ ಆಕೆಯ ಗಂಡನೇ ಸಂಬೋಧಿಸಿದ್ದಾನೆ. ಹೆಂಡತಿಯನ್ನು ತವರಿಗೆ ಬಿಟ್ಟು, ಈ ಸಂಸಾರ ಬೇಡ ಎಂದು ವಾಪಸ್ಸು ಹೋಗಿದ್ದಾನೆ.


ಜಯಮ್ಮ ಊಟ ಮಾಡುತ್ತಿಲ್ಲ ಎಂದು ಆಕೆಯ ಅಣ್ಣ ರಮೇಶ್ ಮತ್ತು ಮನೆಯವರು ತಲೆ ಕೆಡಿಸಿಕೊಂಡಿದ್ದಾರೆ. ಸಾಲ-ಶೂಲ ಮಾಡಿ, ಮನೆಯಲ್ಲಿರುವ ಚಿನ್ನಾಭರಣ ಮಾರಿ, ತಮಗೆ ಸಾಧ್ಯವಿರುವ ವೈದ್ಯರನ್ನೆಲ್ಲ ಸಂಪರ್ಕಿಸಿದ್ದಾರೆ. ವೈದ್ಯರೆಲ್ಲರೂ, ದಿಕ್ಕು ತೋಚದೇ ಆಕಾಶ ನೋಡಿದಾಗ ರಮೇಶ್ ಕಕ್ಕಾಬಿಕ್ಕಿಯಾಗಿದ್ದಾನೆ. ಕೊನೆಗೆ ತಂಗಿಯನ್ನು ಮನೆಗೆ ಕರೆತಂದಿದ್ದಾನೆ.


ಮಗಳ ಹಾಸಿಗೆಯ ಪಕ್ಕವೇ ಕೂತಿರುವ ತಾಯಿಗೆ, ಮಗಳು ಸುಧಾರಿಸಿಕೊಂಡರೆ ಸಾಕು ಎನ್ನುವ ಆಸೆ. ಎದ್ದು ಊಟ ಮಾಡಿದರೆ ಸಾಕು ಎಂಬ ಬಯಕೆ. ಚೌಡೇಶ್ವರಿ ಉತ್ಸವ ಮೂರ್ತಿ ಮನೆ ಬಳಿಗೆ ಬಂದರೆ, ಜಯಮ್ಮ ಎದ್ದು ಕೂರುತ್ತಾಳೆ ಎಂಬ ಸಂಗತಿಯನ್ನು ಟೀವಿ 9 ತಂಡ ಪರೀಕ್ಷಿಸಿದೆ.


ಜನರು ಹೇಳುವಂತೆ, ಚೌಡೇಶ್ವರಿ ದೇವಿಯ ವಿಗ್ರಹ ಮನೆ ಬಾಗಿಲಿಗೆ ಬಂದ ತಕ್ಷಣ, ಹಾಸಿಗೆಯಿಂದ ತೆವಲಿಕೊಂಡು ಹೊರಬರುವ ಜಯಮ್ಮ ಭಕ್ತಿ ಭಾವದಿಂದ ನಡೆದುಕೊಳ್ಳುತ್ತಾರೆ. ನಂತರ ತಾವಾಗಿಯೇ ಎದ್ದು ನಿಲ್ಲುತ್ತಾರೆ. ಶುಭ್ರವಾಗಿ ಸ್ನಾನ ಮಾಡಿ, ಮಡಿ ಸೀರೆ ಉಟ್ಟು, ಚೌಡೇಶ್ವರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ದೇವಸ್ಥಾನದವರೆಗೆ ನಡೆದುಕೊಂಡು ಹೋಗುತ್ತಾರೆ. ಅವರ ಮುಖದಲ್ಲಿ ಆಯಾಸ ಕಾಣಿಸುವುದೇ ಇಲ್ಲ. ಈ ಪ್ರಕ್ರಿಯೆ ಸತತ 4ಗಂಟೆ ನಡೆಯಿತು. ನಂತರ ಯಥಾ ಪ್ರಕಾರ, ಜಯಮ್ಮ ಹಾಸಿಗೆ ಸೇರಿದರು.


ಟೀವಿ 9ತಂಡ ನೀರು ಕುಡಿಸುವ ಪ್ರಯತ್ನ ಮಾಡಿತು. ಬಲವಂತಕ್ಕೆ ನೀರು ಕುಡಿದ ಜಯಮ್ಮ, ಕೆಲವೇ ಸೆಕೆಂಡ್‌ಗಳಲ್ಲಿ ನೀರನ್ನೆಲ್ಲ ವಾಂತಿ ಮಾಡಿದಳು. ಜಯಮ್ಮನಿಗೆ ತಿನ್ನೋದಕ್ಕೆ ಆಸೆ. ಆದರೆ ತಿಂದದ್ದೆಲ್ಲ ವಾಂತಿಯಾಗುತ್ತೆ. ವಾಂತಿಯಲ್ಲಿ ರಕ್ತದ ಉಂಡೆಗಳು ಬೀಳುತ್ತವೆ ಎಂಬುದು ಅವರ ತಾಯಿಯ ವಿವರಣೆ.


ಇದೆಲ್ಲಾ ಯಾಕೆ ಅನ್ನೋ ಪ್ರಶ್ನೆಗೆ ಜಯಮ್ಮನ ಅಣ್ಣ ರಮೇಶ್ ಉತ್ತರ ನೀಡಿದ್ದಾರೆ. ನಮ್ಮದು ಚೌಡೇಶ್ವರಿ ದೇವಿಯನ್ನು ಪೂಜಿಸುವ ಕುಟುಂಬ. ದೇವಿಗೆ ಅಪಚಾರ ಮಾಡಿದ ನಮ್ಮ ತಂದೆ ಕುಷ್ಟರೋಗಕ್ಕೆ ಬಲಿಯಾದರು. ದೇವಿಯ ಅವಕೃಪೆಯಿಂದ ಹೀಗೆಲ್ಲ ಆಗುತ್ತಿದೆ ಅನ್ನುತ್ತಾರೆ ರಮೇಶ್.


ಜಯಮ್ಮನನ್ನು ಊರಿನ ಜನ ಚೌಡೇಶ್ವರಿಯೆಂದೇ ನಂಬಿದ್ದಾರೆ. ಆಕೆಯನ್ನು ಗೇಲಿ ಮಾಡಿದವರು ಅಷ್ಟಕಷ್ಟಗಳಿಗೆ ಸಿಲುಕಿದ ಉದಾಹರಣೆಗಳೂ ಇವೆಯಂತೆ. ಅವರವರ ನಂಬಿಕೆ ಅವರವರಿಗಿರಲಿ. 8ವರ್ಷ ಏನನ್ನೂ ತಿನ್ನದೇ, ಕುಡಿಯದೇ ಜೀವಂತ ಶವದಂತೆ ಹಾಸಿಗೆ ಮೇಲೆ ಬದುಕಲು ಸಾಧ್ಯವೇ? ಅದು ಹೇಗೆ? ಚೌಡೇಶ್ವರಿ ಬಂದಾಗ ಜಯಮ್ಮನ ಮೈಗೆ ಎಲ್ಲಿಂದ ಅಷ್ಟೊಂದು ಶಕ್ತಿ ಬರುತ್ತದೆ? ಮೂರನೇ ಜಗತ್ತಿನ ಇಂಥ ವಿಪರೀತಗಳನ್ನು ಸೀಳಿನೋಡುವುದಕ್ಕೆ ಯಾವ ಪ್ರಯೋಗಾಲಯ, ಯಾವ ಸಂಶೋಧಕನಿಗೆ ಆಸಕ್ತಿಯಿದೆ?

No comments: