ಇದು ರಾಜಕಾರಣವೇ? ಅಲ್ಲ. ಖಂಡಿತ ಅಲ್ಲ. ಕರ್ನಾಟಕದಲ್ಲಿ ಸದ್ಯಕ್ಕೆ ನಡೆಯುತ್ತಿರುವುದು ರಾಜಕಾರಣ ಅಲ್ಲವೇ ಅಲ್ಲ. ಬೇಕಿದ್ದರೆ ಇದನ್ನು ಕುತಂತ್ರ ಕಾರಣ ಅನ್ನೋಣ. ಕುರ್ಚಿಕಾರಣ ಅನ್ನೋಣ.. ಸ್ವಾರ್ಥಕಾರಣ ಅನ್ನೋಣ. ಅಪ್ಪಮಕ್ಕಳ ಮಮಕಾರಣ ಅನ್ನೋಣ. ಇನ್ನೂ ಬೇಕಿದ್ದರೇ ರಾಜಕೀಯ ವ್ಯಭಿಚಾರ ಎಂದು ಗುರ್ತಿಸೋಣ. ರಾಜಕಾರಣ ಅನ್ನುವ ಪದಕ್ಕೆ ಶಬ್ದಕೋಶದಲ್ಲಿ ಒಳಜಗಳ ಎಂದೂ ಸಹಾ ವ್ಯಾಖ್ಯಾನ ಮಾಡಲಾಗಿದೆ. ಆ ವಿಷಯ ಬಿಡಿ.
ರಾಜಕಾರಣದಲ್ಲಿ ಇಂದಿನ ಮಿತ್ರ, ನಾಳೆಯ ವೈರಿ. ನಿನ್ನೆಯ ವೈರಿ, ಇಂದಿನ ಮಿತ್ರ. ಇಲ್ಲಿ ಎಲ್ಲವೂ ಅಂದರೆ ಅಸಾಧ್ಯವೂ ಸಾಧ್ಯ. ಪತ್ರಿಕೆ ಅಥವಾ ಟೀವಿಯಲ್ಲಿ ರಾಜಕಾರಣಿಗಳ ಹೇಳಿಕೆ ನೋಡಿ ಕೆಲವರು ಮೋಸ ಹೋಗುತ್ತಾರೆ. ಬೆಳಗ್ಗೆ ಬಾಯಿಗೆ ಬಂದಂತೆ ಬೈದವರು, ರಾತ್ರಿ ಜೊತೆಯಲ್ಲಿ ಬಾರಲ್ಲಿ ಕೂತು ವಿಸ್ಕಿ ಹೀರುತ್ತಾರೆ. ಬಾಗಿಲಲ್ಲಿ ನಿಂತವರು ಕುರ್ಚಿ ಹತ್ತುತ್ತಾರೆ. ಕುರ್ಚಿ ಮೇಲಿದ್ದವರನ್ನು ಎತ್ತಿಕೊಂಡು ಹೋಗಿ ಬೀದಿಯಲ್ಲಿ ಹಾಕುತ್ತಾರೆ.
ಬಿಜೆಪಿ ಶನಿವಾರ(ಅ.5) ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿದೆ. ಹೀಗೆ ಹೇಳದೇ ಅದಕ್ಕೆ ಬೇರೆ ದಾರಿಗಳು ತಾನೇ ಏನಿದ್ದವು? ಜೆಡಿಎಸ್ ಜೊತೆ ಸಖ್ಯ ಮಾಡಿ, ತಕ್ಕ ಪಾಠ ಕಲಿತೆವು ಎಂದು ಸಿನ್ಹಾ ಹೇಳುತ್ತಾರೆ. ವಿಶ್ವಾಸ ದ್ರೋಹ, ನಂಬಿಕೆ ದ್ರೋಹ ಎಂಬ ಪದಗಳು ಬಳಕೆಯಾಗಿವೆ. ಇವೆಲ್ಲವೂ ನಿರೀಕ್ಷಿತ ಎಂದು ಕಡಲೆ ಕಾಯಿ ಮಾರುವ ಹುಡುಗ ಹೇಳ್ತಾನೆ. ಆದರೆ ಈ ಅಂಶ ಬಿಜೆಪಿ ನಾಯಕರಿಗೆ ಅರ್ಥವಾಗಲು 20ತಿಂಗಳು ಬೇಕಾಯಿತು. ದೇವೇಗೌಡರ ರಾಜಕೀಯ ಬದುಕನ್ನು ಒಂದು ಸಲ ನೋಡಿದರೆ, ಸಾಕು ಅವರು ಯಾರ್ಯಾರಿಗೆ ಏನೇನು ಮಾಡಿದ್ದಾರೆ ಎಂಬುದು ಸುಸ್ಪಷ್ಟ.
ಪಕ್ಷಕ್ಕಾಗಿ ವಚನ ದ್ರೋಹವಾದರೂ ಚಿಂತೆಯಿಲ್ಲ ಅಂದಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ. ಈವತ್ತು ಬಿಜೆಪಿಯವರು ಮಾತ್ರವಲ್ಲ, ಸಾಮಾನ್ಯ ಜನರೂ ಸಹಾ ಮುಖ್ಯಮಂತ್ರಿ ಮಾಡಿದ್ದು ತಪ್ಪು ಎಂದು ಕೂಗಿ ಹೇಳುತ್ತಿದ್ದಾರೆ. ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಸಂಸ್ಕೃತಿ ಈ ನೆಲದ್ದು. ಇಂಥ ನೆಲದಲ್ಲಿ ಒಬ್ಬ ವ್ಯಕ್ತಿ, ಅದೂ ರಾಜ್ಯದ ಮುಖ್ಯಮಂತ್ರಿ ಸುಳ್ಳುಗಳ ಪೋಣಿಸಿದರೆ ಏನರ್ಥ? ಅಂಥ ಸುಳ್ಳುಗಾರ ಮುಖ್ಯಮಂತ್ರಿಯಿಂದ ಆಳಿಸಿಕೊಂಡದ್ದಕ್ಕೆ ಜನ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದರೆ, ದೊಡ್ಡ ತಪ್ಪಾಗುವುದಿಲ್ಲ.
ಬೆಂಗಳೂರಿನಲ್ಲಿ ರಾಮಸೇತು ವಿವಾದಕ್ಕೆ ಸಂಬಂಧಿಸಿದಂತೆ ಕರುಣಾನಿಧಿ ಪುತ್ರಿ ಮನೆ ಮೇಲೆ ದಾಳಿ ನಡೆದದ್ದು, ಬಸ್ ಸುಟ್ಟದ್ದು ನಮಗೆ ಬೇಸರವಾಗಿದೆ. ಬಳ್ಳಾರಿ ಗಣಿ ವಿವಾದದಿಂದ ಅಸಮಾಧಾನವಾಗಿದೆ. ಬಿಜೆಪಿ ಕೋಮುವಾದಿ.. ಹೀಗಾಗಿ ಅಧಿಕಾರ ಹಸ್ತಾಂತರ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಕಾರಣಗಳ ಪಟ್ಟಿ ಮಾಡುತ್ತಿದ್ದಾರೆ. ಇವು ಕಾರಣಗಳಾಗದೇ, ಕೇವಲ ಪಿಳ್ಳೆ ನೆವಗಳು ಅಷ್ಟೇ ಎಂಬುದು ಯಾರಿಗೆ ಗೊತ್ತಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಬಿಜೆಪಿ ಗ್ರೀನ್ ಸಿಗ್ನಲ್ ತೋರಿಸಿದ್ದರೇ, ಈ ಮಾತುಗಳ ಹೊರಬರುತ್ತಿದ್ದವೇ? ಕಳೆದ 20ತಿಂಗಳಿಂದ ಬಿಜೆಪಿ ಮೈತ್ರಿ ರುಚಿಯಾಗಿತ್ತು. ಕುರ್ಚಿ ಬಿಡಬೇಕಾದ ಈ ಸಂದರ್ಭದಲ್ಲಿ ಮೈತ್ರಿ ಕಹಿಯಾಗಿದೆ.
ಅಧಿಕಾರ ಹಸ್ತಾಂತರದ ಬಗ್ಗೆ ಅಪನಂಬಿಕೆ ಬೇಡ ಎಂದು ಸಾವಿರ ಸಾವಿರ ಸಲ ಹೇಳುತ್ತಿದ್ದ ಕುಮಾರಸ್ವಾಮಿ, ಅ.2ರಂದು ಚಂದನವಾಹಿನಿಯಲ್ಲಿ ತಮ್ಮ ಮಾತನ್ನು ಪುನರುಚ್ಚರಿಸಿದ್ದರು. ಪ್ರಜೆಗಳೊಂದಿಗಿನ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಅಧಿಕಾರ ಕೊಡಲು ನಾನು ತಯಾರು ಎಂದಿದ್ದರು. ಗಾಂಧಿ ವಿಚಾರಗಳನ್ನು ಮಾತಿನ ಮಧ್ಯೆ ಪ್ರಸ್ತಾಪಿಸಿ, ಆದರ್ಶವಾದಿಯ ಸೋಗು ಹಾಕಿದ್ದರು. ಆದರೆ ಇಂದು? ನಡೆ ಮತ್ತು ನುಡಿ ನಡುವಿನ ಅಂತರ ಬಟಾ ಬಯಲು. ಬೆತ್ತಲಾಗುವ ಧೈರ್ಯ ಮತ್ತು ತಾಕತ್ತು ಸುಮ್ಮನೇ ದಕ್ಕುವುದಿಲ್ಲ.
ಈ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿ ವಿಚಾರಗಳಿಗಿಂತಲೂ ಅಧಿಕಾರ ಹಸ್ತಾಂತರವೇ ಪ್ರಮುಖವಾಗಿ ಚರ್ಚೆಯಾಯಿತು. ಬಿಜೆಪಿಯಂತೂ ಕೂಸು ಹುಟ್ಟುವ ಮುನ್ನವೇ ಕುಲಾವಿ ಸಿದ್ಧಪಡಿಸಿತ್ತು. ಬಿಜೆಪಿ ಮರಳಿನ ಮನೆಯನ್ನು ಜೆಡಿಎಸ್ ಅಲೆ ಕೆಡವಿ ಹಾಕಿದೆ. ಇದರಿಂದ ಯಾರಿಗೆ ಲಾಭ ಮತ್ತು ನಷ್ಟ ಎನ್ನುವ ಲೆಕ್ಕಾಚಾರ ಎಲ್ಲೆಡೆ. ಅನಿವಾರ್ಯ ಕಾರಣಗಳಿಂದ ಚುನಾವಣೆಗೆ ರೆಡಿ ಎಂದು ಎಲ್ಲಾ ಪಕ್ಷಗಳು ಹೇಳುತ್ತಿವೆ. ಆದರೆ ಯಾರಿಗೂ ಸದ್ಯಕ್ಕೆ ಚುನಾವಣೆ ಎದುರಿಸುವ ಧೈರ್ಯವಿಲ್ಲ.
ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಚುನಾವಣೆ ಎಂದರೆ ಬೆಚ್ಚುತ್ತಿದೆ. ಈಗಾಗಿ ಇನ್ನೊಂದು ಸಲ ಮರು ಮೈತ್ರಿಗೆ ಒಲವು ತೋರುತ್ತಿದೆ. ಆದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ವಿಶ್ವನಾಥ್, ಜನಾರ್ದನ ಪೂಜಾರಿ ಸೇರಿದಂತೆ ದೇವೇಗೌಡರರನ್ನು ದ್ವೇಷಿಸುವ ದೊಡ್ಡ ಗುಂಪೇ ಕಾಂಗ್ರೆಸ್ ನಲ್ಲಿದೆ. ಹೇಗೋ ಅಧಿಕಾರ ಹಿಡಿಯೋಣ, ಇಪ್ಪತ್ತು ತಿಂಗಳು ತಳ್ಳೋಣ ಎಂಬ ಮನಸ್ಥಿತಿ ಕೆಲವರದು. ಇವರ ಅಭಿಪ್ರಾಯಗಳು ಏನೇ ಇರಲಿ, ಸೋನಿಯಾ ಮೇಡಂ ಕೈತೋರಿದದ್ದ ಮಾತ್ರ ಕಾಂಗ್ರೆಸ್ ನಡೆಯುತ್ತದೆ. ಇದು ಬೆಳಕಿನಲ್ಲಿರುವ ರಹಸ್ಯ.
ಸಿನಿಮಾ ನಟರೂ ಸಹಾ ನಾಚಬೇಕು. ಈ ದೇವೇಗೌಡ, ಕುಮಾರಸ್ವಾಮಿ ಸಿನಿಮಾ ರಂಗದಲ್ಲಿದ್ದಿದ್ದರೆ ಇಷ್ಟು ಹೊತ್ತಿಗೆ ಕರ್ನಾಟಕಕ್ಕೆ ಆಸ್ಕರ್ ಎಂದೋ ಸಿಗುತ್ತಿತ್ತು ಎನ್ನುವ ಗೇಲಿ ಬಿಜೆಪಿ ಪಾಳಯದಲ್ಲಿದೆ. ಬಿಜೆಪಿ ನಾಯಕರು ಅಮ್ಮ ತಾಯಿ ಎನ್ನುತ್ತಾ ಅಧಿಕಾರಕ್ಕಾಗಿ ಜೆಡಿಎಸ್ ಬಾಗಿಲು ತಟ್ಟಿದ್ದನ್ನು ಕಂಡಿರುವ ಕಾಂಗ್ರೆಸ್ ಮುಸಿಮುಸಿ ನಗುತ್ತಿದೆ.ದಕ್ಷಿಣ ಭಾರತದಲ್ಲಿ ಖಾತೆ ತೆರೆಯುವ ಹಂಬಲದಿಂದ 20ತಿಂಗಳ ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ಅದರ ಕನಸು ನನಸಾಗಲಿಲ್ಲ. ಹತ್ತಾರು ದಶಕಗಳಿಂದ ವಿರೋಧ ಪಕ್ಷದಲ್ಲಿ ಕೂತು, ಎಂದಾದರೂ ಒಂದು ದಿನ ಮುಖ್ಯಮಂತ್ರಿ ಕುರ್ಚಿ ಏರುತ್ತೇನೆ ಎಂಬ ವಿಶ್ವಾಸ ಯಡಿಯೂರಪ್ಪ ಅವರಿಗಿತ್ತು. ಆ ಕನಸು ಭಗ್ನವಾಗಿದೆ.
2004ರಲ್ಲಿ ನಡೆದ ಚುನಾವಣೆಯಲ್ಲಿ 225 ಸ್ಥಾನಗಳಲ್ಲಿ 79 ಸ್ಥಾನ ಗಳಿಸಿ, ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೆಡಿಎಸ್ 68, ಕಾಂಗ್ರೆಸ್ 79 ಮತ್ತು ಇತರೆ ಪಕ್ಷಗಳು 23 ಸ್ಥಾನ ಪಡೆದಿದ್ದವು. ಅಧಿಕಾರದಿಂದ ಕಾಂಗ್ರೆಸನ್ನು ದೂರವಿಡಲು ಮತದಾರ ಪ್ರಭು ನೀಡಿದ ಜನಾದೇಶವನ್ನು ಕಸದ ಬುಟ್ಟಿಗೆ ಎಸೆಯಲಾಯಿತು. ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಈ ಹೊತ್ತಿನಲ್ಲಿ ರೆಸಾರ್ಟ್ ರಾಜಕಾರಣ ನಡೆಸಿದ್ದು ಕುಮಾರಸ್ವಾಮಿ. ಬಿಜೆಪಿ ಜೊತೆ ವ್ಯವಹಾರ ಕುದುರಿಸಿ, ಮುಖ್ಯಮಂತ್ರಿ ಕುರ್ಚಿ ಹತ್ತಿಯೇ ಬಿಟ್ಟರು.
ತಾವು ಮುಖ್ಯಮಂತ್ರಿ ಕುರ್ಚಿ ಹತ್ತಿದ ವಿಧಾನ ಸರಿಯಿಲ್ಲ ಎಂಬುದು ಜೆಡಿಎಸ್ ಗೆ ಗೊತ್ತಿತ್ತು. ಅಪರಾಧಿ ಪ್ರಜ್ಞೆ ಬಿಜೆಪಿಯಲ್ಲೂ ಇತ್ತು. ಜನರ ಅಸಹ್ಯವನ್ನು ಅಳಿಸಿಹಾಕಲು ಒಳ್ಳೆ ಸರ್ಕಾರವನ್ನು ನೀಡುವ ಅನಿವಾರ್ಯತೆ ದೋಸ್ತಿಗಳ ಮುಂದಿತ್ತು. ಈ ನಿಟ್ಟಿನಲ್ಲಿ ಹತ್ತಾರು ಜನಪರ ಕಾರ್ಯಕ್ರಮಗಳು ಜಾರಿಗೆ ಬಂದವು. ಕಳೆದ 50ವರ್ಷಗಳಲ್ಲಿ ಆಗದ ಕೆಲಸಗಳು ಬರೀ 20ತಿಂಗಳಲ್ಲಿ ಆದವು ಎಂಬುದನ್ನು ವಿರೋಧಿಗಳೂ ಸಹಾ ಒಪ್ಪುತ್ತಾರೆ. ಕುಮಾರಸ್ವಾಮಿ ಜನಸಾಮಾನ್ಯರ ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡರು. ಎಲ್ಲವೂ ಓಕೆ. ಆದರೆ ಅವರು ಸಂಪಾದಿಸಿದ ಪುಣ್ಯವೆಲ್ಲ, ಈಗ ನೀರು ಪಾಲು.
ಮುಖ್ಯಮಂತ್ರಿ ಸ್ಥಾನ ಪಡೆಯಲು ಈವರೆಗೆ, ಮೌನವೇ ಆಭರಣ ಎಂಬಂತೆ ವರ್ತಿಸಿದ ಯಡಿಯೂರಪ್ಪ ಈಗ ನಿಧಾನವಾಗಿ ಬಾಯಿ ಬಿಡುತ್ತಿದ್ದಾರೆ. ಕೈಗೆ ಬಂದದ್ದು, ಬಾಯಿಗೆ ಬರಲಿಲ್ಲವಲ್ಲ ಎಂಬ ನೋವು ಅವರ ಮನದಾಳದಲ್ಲಿ. ನಂಬಿದ ದೇವರು ನಡುನೀರಲ್ಲಿ ಕೈಬಿಟ್ಟನಲ್ಲ ಎಂಬುದು ಅವರ ಬಾಧೆ.
2004ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳಿ ನಿಂತಾಗ, ಯಡಿಯೂರಪ್ಪ ಮನೆಯ ಸೂಟ್ ಕೇಸ್ ನಲ್ಲಿದ್ದ ಇಸ್ತ್ರಿ ಮಾಡಿದ್ದ ಸಫಾರಿಯನ್ನು ಹೊರ ತೆಗೆದಿದ್ದರು. ಹೇಗಾದರೂ ಮಾಡಿ ಮುಖ್ಯಮಂತ್ರಿಯಾದರೆ ಸಾಕು ಎಂದು ಕಂಡಕಂಡವರ ಕಾಲು ಹಿಡಿದರು. ಆದರೆ ಎಲ್ಲರೂ ಕೈಕೊಟ್ಟರು. ದೇವೇಗೌಡ ಮುನಿಸಿಕೊಂಡರೂ, ಗೌಡಾಜೀ ಎಂದು ಬಾಗಿಲಲ್ಲಿ ನಿಲ್ಲುತ್ತಿದ್ದರು. ಆದರೆ ಯೂವುದು ಫಲ ನೀಡಲಿಲ್ಲ. ಯಡಿಯೂರಪ್ಪ ಅವರನ್ನು ನೋಡಿದರೆ ಒಂದು ಕಡೆ ಅನುಕಂಪ, ಇನ್ನೊಂದು ಕಡೆ ಅಸಹ್ಯ.
ನಾಟಕ ಅರ್ಧಕ್ಕೆ ಮುಗಿದಿದೆ. ಜಮ್ಮ ಮತ್ತು ಕಾಶ್ಮೀರ ಮಾದರಿಯಲ್ಲಿ ರಚನೆಯಾದ ಸರ್ಕಾರ, ಅರ್ಧದಲ್ಲೇ ಕುಸಿದಿದೆ. ಕಳ್ಳನನ್ನು ನಂಬಿದರೂ, ಸುಳ್ಳನನ್ನು ನಂಬಬಾರದು ಎಂಬ ಭಾವ ಬಿಜೆಪಿಯಲ್ಲಿದೆ. ಈ ಸಮಯದಲ್ಲಿ ಕಾಂಗ್ರೆಸ್, ತನ್ನ ಮನೆಯ ಬಾಗಿಲು ತೆರೆದುಕೊಂಡು ಕುಳಿತಿದೆ.. ಜೆಡಿಎಸ್ ಒಳಗೆ ಕಾಲಿಟ್ಟರೇ ಸಾಕು ಎಂಬುದು ಅದರ ಮನಸ್ಥಿತಿ. ರಾಜ್ಯ ರಾಜಕಾರಣವನ್ನು ರಾಜ್ಯಪಾಲರು ನೋಡುತ್ತಿದ್ದಾರೆ. ಅವರು ಏನ್ ಮಾಡ್ತಾರೋ ನೋಡೋಣ.ನೋಡೋದಷ್ಟೇ ಸದ್ಯಕ್ಕೆ ಮತದಾರ ಪ್ರಭುವಿನ ಅನಿವಾರ್ಯತೆ.
Wednesday, October 10, 2007
Subscribe to:
Post Comments (Atom)
No comments:
Post a Comment