Wednesday, July 18, 2007

ಹೆಂಗಸರಿಗಾಗಿ ಮಾತ್ರ!


ಈ ಲೇಖನವನ್ನು ಹೆಂಗಸರಷ್ಟೇ ಓದಬೇಕು. ಹೆಂಗ(ಹ)ಸು ಅಲ್ಲದ ಗಂಡ(ಹ)ಸು ಓದಬೇಕು ಅನ್ನಿಸಿದರೆ, ಹೆಂಗಸರ ಅನುಮತಿ ಪಡೆಯುವುದು ಕಡ್ಡಾಯ.


ಮಾತೃ ಸ್ವರೂಪಿ, ದೈವ ಸ್ವರೂಪಿ ಎಂದೆಲ್ಲಾ ಹೊಗಳಿ ಅಟ್ಟಕ್ಕೇರಿಸಿರುವ ಪುರುಷ ಸಮುದಾಯ, ಯುಗಯುಗಗಳಿಂದಲೂ ಸ್ತ್ರೀಶೋಷಣೆಯನ್ನು ನಾನಾ ರೂಪದಲ್ಲಿ ತೀವ್ರಗೊಳಿಸುತ್ತಲೇ ಬಂದಿದೆ. ಆ ಬಾಣವನ್ನು ತಿರುಗುಬಾಣವನ್ನಾಗಿಸುವ ತಂತ್ರಗಳು ನಿಮಗಾಗಿ ಅನಾವರಣಗೊಂಡಿವೆ!


‘ಅಪ್ಪನಿಗೆ ತಕ್ಕ ಮಗ’ ಎಂಬ ಬಿರುದು ಪಡೆಯುವ ಹುಚ್ಚಲ್ಲಿ ಕಾಡಿಗೆ ಹೋದ ರಾಮ, ಪಾಪ ಸೀತೆಯನ್ನೂ ಜೊತೆಗೆ ಕರೆದೊಯ್ದ! ಗಂಡನ ಜೊತೆ ಕಲ್ಲು-ಮುಳ್ಳು ತುಳಿಯುವುದು ನನ್ನ ಹಣೆಬರಹ ಅಂದುಕೊಂಡ ಸೀತೆ ವನವಾಸ ಮುಗಿಸಿದ್ದಳು. ನಂತರ ಸಿಂಹಾಸನವೇರಿದ ರಾಮ, ಆದೇ ಸ್ವಾಮಿ ನಿಮ್ಮ ಮಹಾಮಹಿಮ ಶ್ರೀರಾಮ, ಸೀತಾದೇವಿಯನ್ನು ಕಾಡಿಗೆ ಅಟ್ಟಿದ್ದು ಸರಿಯೇ? ಅದೂ ತುಂಬು ಗರ್ಭಿಣಿಯನ್ನು. ಭ್ರೂಣಹತ್ಯೆಯ ಸಿಸ್ಟಮ್‌ ಆಗ ಇದ್ದಿದ್ದರೆ, ಅನುಮಾನದ ಪಿಶಾಚಿ ಅದಕ್ಕೂ ಹಿಂದೆ ಮುಂದೆ ನೋಡ್ತಾಯಿರಲಿಲ್ಲ ಅನ್ನಿಸುತ್ತೆ!


ಪತಿದೇವ ಸತ್ತ ಕೂಡಲೇ ಸತಿ, ಅವನ ಚಿತೆಗೆ ಹಾರಬೇಕಂತೆ. ‘ಗಂಡ ಸತ್ತರೆ ಹೆಂಡತಿ ವಿಧವೆ, ಹೆಂಡ್ತಿ ಸತ್ತರೆ ಗಂಡನಿಗೆ ಮದುವೆ’ -ಯಾಕೆ ಈ ದಬ್ಬಾಳಿಕೆಯ ಕಾನೂನು? ಸರಿ ಬಿಡಿ, ಕಾಲ ಬದಲಾಗಿದೆ. ಹೆಣ್ಣು ಬದಲಾಗಿದ್ದಾಳೆ. ಪ್ಯಾಂಟ್‌ಉ-ಶರ್ಟ್‌ಉ ತೊಟ್ಟು ಅವನಿಗೆ ಸರಿಸಮನಾಗಿ ಬೆಳೆದಿದ್ದಾಳೆ. ಆದ್ರೆ ಇಷ್ಟನ್ನೇ ಕ್ರಾಂತಿಯಂದ್ರೆ, ದೇವೇಗೌಡ್ರು ಸಹಾ ನಗ್ತಾರೇ? ನಿಜವಾದ ಕ್ರಾಂತಿ ಅಂದ್ರೆ; ಹೆಣ್ಣು ಗಂಡಿನ ಡ್ರೆಸ್‌ ತೊಟ್ಟಂತೆ, ಗಂಡಿಗೆ ಹೆಣ್ಣಿನ ಡ್ರೆಸ್‌ ತೊಡಿಸಬೇಕು? ಅರ್ಥವಾಯ್ತಾ?


ಮಹಿಳಾ ಮಣಿಗಳೇ, ಸ್ತ್ರೀಸಿಂಹಗಳೇ ನಿಮ್ಮ ಉನ್ನತಿಗಾಗಿ, ಪುರುಷರ ಅವನತಿಗಾಗಿ ನಾನು ಸಾಕಷ್ಟು ಅಧ್ಯಯನ ಮಾಡಿ ಒಂದಷ್ಟು ಸಂಗತಿಗಳನ್ನು ಕಂಡುಹಿಡಿದಿದ್ದೇನೆ. ಪುಣ್ಯಕ್ಕೆ ಯಾವ ವಿಶ್ವವಿದ್ಯಾಲಯವೂ ಪಿಎಚ್‌ಡಿ-ಗಿಎಚ್‌ಡಿ ಕೊಟ್ಟಿಲ್ಲ! ಅದನ್ನು ನೀವೆಲ್ಲಾ ಪಾಲಿಸಬೇಕು ಅನ್ನೋದು ನನ್ನ ವಿನಂತಿ.


ಸಂಡೇ ಹೀಗೆ ಮಾಡಿ : ಗಂಡನಿಗೆ ಭಾನುವಾರ ರಜೆ ಇದ್ದೇ ಇರುತ್ತೆ. ನೀವು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪೇಪರ್‌ನಲ್ಲಿ ಮತ್ತು ಟೀವಿಯಲ್ಲಿ ಬರೋ ಮಾಹಿತಿಗಳನ್ನು ಬರೆದಿಟ್ಟುಕೊಂಡು, ಸಂಡೇಗೆ ಸ್ಕೆಚ್‌ ಹಾಕಬೇಕು. ಶನಿವಾರದಿಂದಲೇ ಪತಿದೇವರನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ. ಕನಿಷ್ಟ ಆ ತರಹ ನಟಿಸಿ!


ಶನಿವಾರ ರಾತ್ರಿ ಮನೆಯಲ್ಲಿ ಆಡುಗೆ ಮಾಡಲೇ ಬೇಡಿ(ಕೆಲಸ ಕೆಡುತ್ತೆ) ಹೋಟೆಲ್‌ನಿಂದ ಊಟ ತನ್ನಿ! ಆದರೆ, ಅದನ್ನು ನಾನೇ ನಿಮಗಾಗಿ ತಯಾರಿಸಿದ್ದೆ ಅಂತ ಒಂದಿಷ್ಟು ಪೂಸಿ ಬಿಡಿ. ಅಲ್ಲಿಗೆ ನಿಮ್ಮ ಹಾದಿಗೆ ಗಂಡ ಅನ್ನೋ ಪ್ರಾಣಿ ಬಂದಿರ್ತಾನೆ!ಬೆಳಿಗ್ಗೆ ನಿಮ್ಮ ಸವಾರಿ ‘ಜುಂ’ ಅಂಥ ಶುರುವಾಗಲಿ. ನಿಮ್ಮ ಪಿಳ್ಳೆಪಿಸುಗನ್ನು ಬೇಕಾದರೆ ಜೊತೆಗೆ ಕಟ್ಟಿಕೊಳ್ಳಿ. ಹೇಗೂ ಅವನ್ನು ಸಮಾಧಾನ ಮಾಡೋಕೆ, ನಿಮ್ಮ ಪತಿದೇವರು ಇದ್ದೇ ಇರ್ತಾರೆ!


ಸರಿ, ಎಲ್ಲಾ ಆದ ಮೇಲೆ ಒಂದು ಸ್ಯಾರಿ ಅಂಗಡಿಗೆ ಗೂಳಿಯ ತರಹ ನುಗ್ಗಿ ಬಿಡಿ. ಗಡಿಯಾರದ ಹಂಗನ್ನು ಮರೆತು, ಸ್ಯಾರಿ ಸೆಲೆಕ್ಷನ್‌ನಲ್ಲಿ ಮೈಮರೆಯಿರಿ. ನಾನಾ ಸ್ಯಾರಿ ತೋರಿಸಿ-ತೋರಿಸಿ ಅಂಗಡಿಯವನಿಗೆ ಬೇಸರವಾದರೂ, ನೋಡಿ-ನೋಡಿ ನಿಮಗಂತೂ ಬೇಸರವಾಗಬಾರದು! ನಿಮ್ಮ ಮನಸ್ಸಿಗೆ ಇಷ್ಟ ಆಗಲಿಲ್ಲ ಅಂದ್ರೆ ಇನ್ನೊಂದು ನಾಲ್ಕು ಅಂಗಡಿಗೆ ನುಗ್ಗಿ.


ಮಧ್ಯಾಹ್ನ ಆಯಿತು ಹೊಟ್ಟೆ ಕಚ್ಚುತ್ತಿದೆ ಅನ್ನಿಸಿದ್ರೆ ಅಲ್ಲೇ ಪಕ್ಕದಲ್ಲಿರೋ ಹೋಟೆಲ್‌ಗೆ ದಾಳಿ ಮಾಡಿ. ಪಾಪ ನಿಮ್ಮನ್ನು ಕಟ್ಟಿಕೊಂಡ ಪುಣ್ಯ(?)ಕ್ಕೆ ಗಂಡ ಸುಮ್ಮನೇ ಹಿಂದೆ ಬರ್ತಾನೆ, ಬಿಲ್‌ ಕೋಡೋಕೆ!.


ಕೊನೆಗೆ ಯಾವುದಾದರೂ ಅಂಗಡಿಯಲ್ಲಿ ಇದೊಂದು, ಇದು ನಿಮ್ಮಮ್ಮನಿಗೆ, ಅದು ನಿಮ್ಮ ತಂಗಿಗೆ ಅಂತೆಲ್ಲಾ ಹೇಳಿ ಒಂದು ನಾಲ್ಕು ಸೀರೆ ಪ್ಯಾಕ್‌ ಮಾಡಿಸಿ. ಮನೆಗೆ ಬಂದ ಮೇಲೆ ಸೀರೆಗಳನ್ನು ನಿಮ್ಮ ಬೀರುವಿನಲ್ಲಿ ಜೋಪಾನವಾಗಿ ಎತ್ತಿಡಿ!


ಚಾಲೂ ಆಗಿ : ಅಡಿಗೆ ಮನೆ ಎನ್ನುವ ಸೆರೆಮನೆಯಿಂದ ಸದಾ ದೂರವಿಡಿ. ಹೊಸರುಚಿ ಹೆಸರಲ್ಲಿ ಅಡಿಗೆ ಗಬ್ಬೆಬ್ಬಿಸಿದ್ರೆ(ಉಪು, ಹುಳಿ, ಖಾರ), ಪಾಪ ನಿಮ್ಮ ಗಂಡನೇ ಶರಣಾಗ್ತಾನೆ. ಬೇರೆ ದಾರಿಯೇ ಇಲ್ಲ! ನಿಮ್ಮ ಗಂಡನ ಮೇಲೆ ಅತಿಯಾದ ಪ್ರೀತಿಯಿರುವವರಂತೆ ಆಗಾಗ ಕೆಲವು ಟ್ರಿಕ್ಸ್‌ ಮಾಡ್ತಾನೇ ಇರಬೇಕು(ಎಷ್ಟೆಲ್ಲಾ ಸೀರಿಯಲ್‌ ನೋಡ್ತೀರಾ? ನಿಮಗೆ ಇದು ಗೊತ್ತಿಲ್ಲವೇ?).


ನಿಮ್ಮ ಗಂಡ ಅಥವಾ ಮಕ್ಕಳು ಅಥವಾ ನಿಮ್ಮ ಅತ್ತೆ ಯಾರಿಗಾದರೂ ಸರಿ, ಸಣ್ಣಪುಟ್ಟ ಕಷ್ಟಕ್ಕೆಲ್ಲಾ ತಲೆಕೆಡಿಸಿಕೊಳ್ಳಿ(ಕೂದಲನ್ನು ಮಾತ್ರ ಕೆಡಿಸಿಕೊಳ್ಳಿ). ದೇವರಿಗೆ ಅವರ ಹೆಸರಲ್ಲಿ ಎಲ್ಲಾ ಹರಕೆ ಕಟ್ಟಿ. ಬೇಕು ಅಂದ್ರೆ ನಿಮ್ಮ ಯಜಮಾನ್ರ ಮಂಡೆ ಕೊಡ್ತೀನಿ ಅಂತಾ ಧಾರಾಳವಾಗಿ ಹರಕೆ ಕಟ್ಟಬಹುದು! ಹೀಗೆ ಹರಕೆ ನೆಪದಲ್ಲಿ ಕನಿಷ್ಟ ವರ್ಷಕ್ಕೆರಡು ಸಲ ಆದ್ರೂ ಟೂರ್‌ ಮಾಡಿ.


ಮನೆಯಲ್ಲಿದ್ದಾಗಲೂ ಅಷ್ಟೇ. ಆ ದೇವಸ್ಥಾನ, ಈ ದೇವಸ್ಥಾನ ಅಂತಾ ಬೇಕಾದ ಸಿನಿಮಾಗಳನ್ನು ನೋಡೋದು ಮರೀಬೇಡಿ!ಅಡಿಗೆ ಕೆಲಸದಿಂದ ತಪ್ಪಿಸಿಕೊಂಡಂತೆಯೇ, ಬಟ್ಟೆ ಒಗೆಯುವ ಕೆಲಸದಿಂದ ಸಹಾ ಪಾರಾಗಬಹುದು! ಬಟ್ಟೆ ತೊಳೆಯೋ ನೆಪದಲ್ಲಿ ಅಥವಾ ಐರನ್‌ ಮಾಡೋ ನೆಪದಲ್ಲಿ ನಿಮ್ಮ ಗಂಡನ ಒಳ್ಳೊಳ್ಳೆ ಬಟ್ಟೆಗಳನ್ನು ಚಿಂದಿ ಮಾಡಿ! ಮತ್ತೆ ನಿಮಗೆ ಆ ಕೆಲಸ ಹೇಳಿದ್ರೆ ನನ್ನನ್ನು ಕೇಳಿ.


ನಿಮ್ಮ ಮಾತನ್ನು ನಿಮ್ಮ ಗಂಡ ಕೇಳದೇ ಇನ್ಯಾರು ಕೇಳ ಬೇಕು? ಡೈವರ್ಸ್‌ ಮಂತ್ರವನ್ನು ಆಗಾಗ ಪಠಿಸುತ್ತಿರಿ. ‘ನಿಮ್ಮ ಹೆಸರು ಬರೆದಿಟ್ಟು ಆತ್ಯಹತ್ಯೆ ಮಾಡಿಕೊಳ್ತೇನೆ... ವರದಕ್ಷಿಣೆ ಕೇಸ್‌ಗೆ ಬೇಲ್‌ ಇಲ್ಲ...’ ಅನ್ನೋದನ್ನು ಆಗಾಗ ನೆನಪು ಮಾಡ್ತಾಯಿರಿ. ಅಂತಹ ಕ್ರೆೃಂ ಕಾರ್ಯಕ್ರಮಗಳು ಟೀವಿಯಲ್ಲಿ ಬಂದಾಗ, ಗಂಡನಿಗೆ ತಪ್ಪದೇ ತೋರಿಸುವುದು ನಿಮ್ಮ ಕರ್ತವ್ಯ.


ಅಭಿನಯಶ್ರೀ : ಜೀವನದಲ್ಲಿ ಅದರಲ್ಲೂ ಗಂಡನ ಮುಂದೆ ನೀವು ಎಷ್ಟು ಚೆನ್ನಾಗಿ ಅಭಿನಯಿಸುವಿರೋ, ಅಷ್ಟು ಸುಖ ನಿಮ್ಮದಾಗುತ್ತದೆ. ನಿಮ್ಮ ಗಂಡನ ಜುಜುಬಿ ಸಂಪಾದನೆ, ನಿಮ್ಮ ಮೇಕಪ್ಪಿಗೆ ಸಹಾ ಸಾಕಾಗುತ್ತಿಲ್ಲ ಅನ್ನಿಸಿದ್ರೆ, ಗಂಡನನ್ನು ಓಟಿ ಮಾಡಲು ಪ್ರೇರೇಪಿಸಿ. ಬಿಡುವಿನ ವೇಳೆಯಲ್ಲಿ(ಭಾನುವಾರವೂ ಸೇರಿದಂತೆ)ಪಾರ್ಟ್‌ ಟೈಂ ಕೆಲಸ ಮಾಡುವಂತೆ ಮೆದುಳನ್ನು ಕೆಡಿಸಿ, ಗೊಬ್ಬರ ಮಾಡಿ.


ಮದುವೆಯಾಗಿ ಗಂಡನ ಮನೆಗೆ ಹೆಜ್ಜೆಯಿಟ್ಟ ತಕ್ಷಣ, ಅತ್ತೆಯನ್ನು ‘ಅಮ’್ಮ ಅಂತಾ, ಮಾವನನ್ನು ‘ಅಪ್ಪ’ ಅನ್ನುತ್ತಾ ಮಾತಲ್ಲಿಯೇ ಮಂದಿರ ಕಟ್ಟಿ. ಮಗನನ್ನು ಅವರ ಪಾಲಿಗೆ ವಿಲನ್‌ನಂತೆ ಸೃಷ್ಟಿ ಮಾಡಿ. ಅತ್ತೆ ಮನೆಯಲ್ಲಿದ್ದರೆತಲೆಕೆಡಿಸಿಕೊಳ್ಳಬೇಡಿ. ನಯವಾದ ಮಾತುಗಳಿಂದಲೇ ಮನೆಕೆಲಸವನ್ನು ಅವಳಿಗೆ ಒರಗಿಸಿಬಿಡಿ.


ಬೆಳಿಗ್ಗೆಯಿಂದ ರಾತ್ರಿ 12ರವರೆಗೆ ಟೀವಿ ನೋಡಿ. ಸೀರಿಯಲ್‌ಗಳಲ್ಲಿ ಚೆಲುವೆಯರು ಧರಿಸಿರೋ ಸೀರೆಗಳನ್ನು ಗಮನಿಸಿದ್ರೆ, ನಿಮ್ಮ ಸೀರೆ ಸೆಲೆಕ್ಷನ್‌ ಸುಲಭವಾಗುತ್ತೆ. ಒಡವೆಗಳನ್ನು ವಿಶೇಷವಾಗಿ ಗಮನಿಸಿ. ಗ್ಲಿಸರಿನ್‌ ಬಾಟಲ್‌ ಅನ್ನು ಸದಾ ಪಕ್ಕದಲ್ಲಿಟ್ಟುಕೊಳ್ಳಿ. ಸಣ್ಣಪುಟ್ಟದ್ದಕ್ಕೆಲ್ಲಾ ಲೀಟರ್‌ಗಟ್ಟಲೇ ಕಣ್ಣೀರು ಸುರಿಸಿ. ಕಣ್ಣೀರಿಗೆ ಸೋಲದ ಗಂಡ(ಹ)ಸು ಯಾವುದೂ ಇಲ್ಲ! ಅದು ನಿಮಗೆ ಗೊತ್ತಿರಲಿ.


‘ನಮ್ಮಪ್ಪನ ಮನೇಲಿ ಹೆಂಗೆಲ್ಲಾ ಇದ್ದೆ? ಎಂಥೆಂಥ ಗಂಡುಗಳು ನನ್ನ ಮೆಚ್ಚಿದ್ದರು. ನನ್ನ ಗ್ರಹಚಾರ ನೀವು ಗಂಟು ಬಿದ್ರಿ’ ಅಂತ ಮೊಟಕುತ್ತಿರಿ. ಗಂಡ(ಹ)ಸು ಮೆತ್ತಾಗಾಗದಿದ್ರೆ ಕೇಳಿ. ನಿಮ್ಮ ಅಕ್ಕಪಕ್ಕದ ಮಹಿಳಾ ಸಂಘ ಹಾಗೂ ವನಿತಾ ಜಾಗೃತಿ ಮಂಡಳಿಗಳ ಸದಸ್ಯತ್ವ ಪಡೆಯಿರಿ.


ಮಹಿಳಾ ಸಂಘಗಳು ಪುರುಷರಿಗೆ ಮಂಗಳಾರತಿ ಎತ್ತಿದ್ದನ್ನು ರೆಕ್ಕೆಪುಕ್ಕ ಕಟ್ಟಿ ನಿಮ್ಮ ಗಂಡನ ಮುಂದೆ ಬಣ್ಣಿಸಿ. ನಿಮ್ಮ ಗತ್ತು-ದೌಲತ್ತುಗಳ ಪ್ರದರ್ಶನಕ್ಕೆ ಆಗಾಗ ಸನ್ಮಾನಗಳನ್ನು ಮಾಡಿಸಿಕೊಳ್ಳಿ. ಸಂಘ ಸಂಸ್ಥೆಗಳಿಗೆ ಉದಾರವಾಗಿ ದೇಣಿಗೆ ನೀಡಿದ್ರೆ ಸನ್ಮಾನಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆಗ ನಿಮ್ಮ ಬಗ್ಗೆ ಗಂಡನಿಗೆ ಒಂದು ಮೂಲೆಯಲ್ಲಿ ಭಯ ಹುಟ್ಟುತ್ತೆ! ಭಯಯಿದ್ರೆ ನಿಮ್ಮ ತಾಳಕ್ಕೆ ಹೆಜ್ಜೆ ಹಾಕ್ತಾನೆ.


ಸದ್ಯಕ್ಕೆ ಇಷ್ಟು ಸಾಕು. ಮತ್ತಷ್ಟು ‘ಮನೆಹಾಳ್‌’ ಐಡಿಯಾಗಳೊಂದಿಗೆ ಇನ್ನೊಂದು ಸಲ ಬರ್ತೇನೆ.


(ಎಚ್ಚರಿಕೆ : ಈ ಲೇಖನ ಓದುವುದು ಗಂಡಸರ ಆರೋಗ್ಯಕ್ಕೆ ಒಳ್ಳೆಯದು!)

No comments: