ನನ್ನೂರಿನ ಸುಳ್ಳು ಸುಳ್ಳು ಶಾಸ್ತ್ರಿಗಳು ಭವಿಷ್ಯ ಹೇಳೋದಕ್ಕೆ ನಿಂತರೆ, ಅದು ನಿಜವಾಗುತ್ತೆ.. ಇಲ್ಲದಿದ್ದರೆ ಅದು ಸುಳ್ಳು ಆಗುತ್ತೆ. ಇವೆರಡು ಬಿಟ್ಟರೆ ಬೇರೇನೂ ಆಗೋದಿಲ್ಲ! ಅಷ್ಟೊಂದು ಕರಾರುವಕ್ಕಾಗಿ ಅವರು ಭವಿಷ್ಯ ನುಡಿಯುತ್ತಾರೆ.
'ನಮ್ಮಹಳ್ಳಿ ಕೆರೆಗೆ ಯಾವಾಗ ನೀರು ಬರುತ್ತೆ?' ಅಂದ್ರೆ, 'ಜೋರಾಗಿ ಮಳೆ ಬಂದ ಮಾರನೇ ದಿನ' ಎಂದು ಅವರು ಖಚಿತವಾಗಿ ಹೇಳುತ್ತಾರೆ. ಪೀಠಿಕೆ ಇಷ್ಟು ಸಾಕು. ಅವರು ರಾಶಿ ಭವಿಷ್ಯ ಬರೆದಿದ್ದಾರೆ. ನಿಮ್ಮ ಗ್ರಹಚಾರ ಏನಿದೆಯೋ ಓದಿ ತಿಳಿಯಿರಿ..
ಮೇಷ : ಧನಯೋಗವಿದೆ. ಹಾಗಂತ ನೀವು ಕೈಕಟ್ಟಿ ಕೂತರೇ ಆಗೋದಿಲ್ಲ. ಯಾರದಾದರೂ ತಲೆ ಹೊಡೆಯಲೇ ಬೇಕು ಅಥವಾ ಸೌಂಡ್ ಪಾರ್ಟಿಯಾಗಿರೋ ಹುಡುಗಿಗೆ ಡವ್ ಹೊಡೆದು ಮದುವೆಯಾಗಿ ಬಿಡಿ. ಅದೆಲ್ಲಾ ಕಷ್ಟ ಅನ್ನಿಸಿದರೇ ಯಾರನ್ನಾದರೂ ಕಿಡ್ನಾಫ್ ಮಾಡಿ. ರಾಜಯೋಗ ಬಂದಾಗ ನೀವು ಕಾರ್ಯಪ್ರವೃತ್ತರಾಗದಿದ್ರೆ ಬದುಕಿಡೀ ಪಶ್ಚತ್ತಾಪ ಅನುಭವಿಸಬೇಕಾಗುತ್ತೆ !
ಅದೃಷ್ಟ ಸಂಖ್ಯೆ -100, ಶುಭದಿನ -ವಾರದ ಎಲ್ಲಾ ದಿನ.
ವೃಷಭ : ವಿದ್ಯೆ ನೈವೇದ್ಯಆಗಿದೆ. ಆದರೂ ನಿಮಗೆ ಯಾಕೆ ಓದೋ ಹುಚ್ಚು? ನೇರವಾಗಿ ಸರಸ್ವತಿಬರೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಕಳ್ಳ ಬಾಗಿಲಲ್ಲಿ ಪ್ರಯತ್ನಿಸಿ. ಪರೀಕ್ಷೆ ಬರೆಯೋದನ್ನು ಯೋಚಿಸಲೇಬೇಡಿ. ಯಾರನ್ನಾದರೂ ಸರಿಯಾದ ಪಾರ್ಟಿಯನ್ನು ಹಿಡಿದು ರೇಟ್ ಫಿಕ್ಸ್ ಮಾಡಿ, ಮಾಕ್ಸ್‌ಕಾರ್ಡ್‌ನ ಖರೀದಿಗೆ ಪ್ರಯತ್ನಿಸಿ.
ಅದೃಷ್ಟ ಸಂಖ್ಯೆ -000, ಶುಭದಿನ- ಒಂದೂ ಇಲ್ಲ.
ಮಿಥುನ : ಸಿಡುಕುವುದರಿಂದ ನಿಮಗೆ ಸಾಕಷ್ಟು ಲಾಭಗಳಿವೆ. ಜನರು ನಿಮಗೆ ಗೌರವ ಕೊಡುತ್ತಾರೆ. ವಿಶೇಷವಾಗಿ ಮನೆಗೆ ಬರೋ ನೆಂಟರ ಸಂಖ್ಯೆ ಕಡಿಮೆಯಾಗಲಿದೆ. ಹೆಂಡತಿ ನಿಮ್ಮ ಕೆಂಡದಂತಹ ಮುಖ ನೋಡಿ, ಸೀರೆಗೀರೆ ಎಂದು ತಲೆ ತಿನ್ನೋದಿಲ್ಲ. ಮಕ್ಕಳು, ಚಾಕ್ಲೆಟ್-ಬಿಸ್ಕೆಟ್ ಅಂಥ ಪೀಡಿಸೋದಿಲ್ಲ.
ಅದೃಷ್ಟ ಸಂಖ್ಯೆ -ಹಾಗಂದ್ರೆ ಏನು?, ಶುಭದಿನ -ಮಂಗಳವಾರ
ಕರ್ಕಾಟಕ : ಫೋನ್ ಮೂಲಕ ಸುನಾಮಿ ಪ್ರವೇಶಿಸಲಿದೆ ಜಾಗೃತರಾಗಿರಿ! ನಿಮ್ಮ ಪ್ರೀತಿಯ ಹುಡುಗಿಗೆ ಈಗ ಮೂರು ತಿಂಗಳು. ನಿಮ್ಮನ್ನು ದೇವರೂ ಸಹಾ ಕಾಪಾಡೋ ಸ್ಥಿತಿಯಲ್ಲಿಲ್ಲ! ಮಹಿಳೆಯರಿಗೆ ಕೆಟ್ಟ ಸುದ್ದಿ. ನಿಮ್ಮ ಗುಟ್ಟುಗಳು ನಿಮ್ಮ ಗಂಡನಿಗೆ ಗೊತ್ತಾಗಲಿದೆ.
ಅದೃಷ್ಟ ಸಂಖ್ಯೆ -111, ಶುಭದಿನ -ಅದರ ಆಸೆ ಬಿಡಿ.
ಸಿಂಹ : ಪುರುಷರಿಗೆ ವಿವಾಹದ ಗಂಡಾಂತರವಿದೆ. ಹುಲಿ ಇಲಿಯಾಗುವ ದಿನಗಳನ್ನು ಎದುರಿಸಲು ಸಜ್ಜಾಗಿ. ಮದುವೆಯಾಗುವುದಕ್ಕಿಂತಲೂ ಬಾವಿಗೆ ಹಾರೋದೇ ಸುಲಭ ಅನ್ನಿಸೋದಾದ್ರೆ ನಿಮ್ಮ ನಿರ್ಣಯ ಸರಿಯಾಗಿದೆ. ಮಹಿಳೆಯರಿಗೆ ಅದೃಷ್ಟದ ದಿನಗಳು. ಅವು ಮುಗಿಯುವ ಮೊದಲೇ ಯಾರನ್ನಾದರೂ ಬಕ್ರನಾ ಕಟ್ಟಿಕೊಳ್ಳಿ.
ಅದೃಷ್ಟ ಸಂಖ್ಯೆ -1001, ಶುಭದಿನ -ಕಾದು ನೋಡಿ.
ಕನ್ಯಾ : ಬಹಳ ದಿನಗಳಿಂದಲೂ ನಾಯಿ ಸಾಕಬೇಕು ಅನ್ನೋ ಬಯಕೆ ಈಗ ಫಲಿಸಲಿದೆ. ಅಂದ್ರೆ ನಿಮಗೆ ಟೂ-ಇನ್-ಒನ್ ನಾಯಿ ಸಿಕ್ತಾಯಿದೆ! ಹೌದು ಹೆಣ್ಣುಮಕ್ಕಳಿಗೆ ಮದುವೆಯೋಗವಿದೆ. ಡೈವರ್ಸ್ ಯೋಗ ಸಹಾ...
ಅದೃಷ್ಟ ಸಂಖ್ಯೆ -501, ಶುಭದಿನ -ಶುಕ್ರವಾರ
ತುಲಾ : ನಿಮಗೆ ಟಿ.ವಿಯಲ್ಲಿ ಕಾಣಿಸೋ ಯೋಗವಿದೆ. ಬಹುಶಃ, ಕ್ರೆೃಂಡೈರಿ ಅಥವಾ ಕುರಿಗಳು ಸಾರ್ ಕಾರ್ಯಕ್ರಮದಲ್ಲೋ ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ.ಅದೃಷ್ಟ ಸಂಖ್ಯೆ-0000000000, ಶುಭದಿನ-ನಿಮಗೇ ಗೊತ್ತಲ್ಲ!
ವೃಶ್ಚಿಕ : ಬಾಸ್‌ಗೆ ನಿಮ್ಮ ಕರ್ತವ್ಯ ಪ್ರಜ್ಞೆ ತುಂಬಾ ಇಷ್ಟವಾಗಿದೆ. ಮತ್ತಷ್ಟು ಇಷ್ಟವಾಗಲಿದೆ. ಮಾಮೂಲಿನ ಹತ್ತುಗಂಟೆ ಜೊತೆಯಲ್ಲಿ, ಇನ್ನೂ ನಾಲ್ಕು ಗಂಟೆಯ ಕೆಲಸದ ಹೊರೆ ನಿಮ್ಮ ಮೇಲೆ ಬೀಳಲಿದೆ. ಭಾನುವಾರವೂ ಕೆಲಸಮಾಡಬೇಕಾದ ಪರಿಸ್ಥಿತಿ ಬರಬಹುದು. ಯಾವುದಕ್ಕೂ ರೆಡಿಯಾಗಿರಿ.
ಅದೃಷ್ಟ ಸಂಖ್ಯೆ -3333, ಶುಭದಿನ -ಎಲ್ಲವೂ ಮುಗಿದಿವೆ.
ಮಕರ : ಇನ್ನು ಮುಂದೆಯಾದ್ರೂ ನೀವು ನಗೋದನ್ನ ಕಲಿತರೆ, ಬಾಳು ಬಂಗಾರವಾಗುತ್ತೆ. ಇಲ್ಲದಿದ್ರೆ ಹೆಣಭಾರವಾಗುತ್ತೆ. ಬದುಕಿದ್ದಾಗಲೇ ನಗ್ರಿ, ಸತ್ತಮೇಲೆ ನಗೋದಕ್ಕೆ ಆಗೋದಿಲ್ಲ(ಬಾಯಲ್ಲಿ ಅಕ್ಕಿಕಾಳು ತುಂಬಿರ್ತಾರೆ!).
ಅದೃಷ್ಟ ಸಂಖ್ಯೆ -999, ಶುಭದಿನ -ಎಲ್ಲಾ ನಿಮ್ಮ ಕೈಯಲ್ಲೇ ಇದೆ.
ಧನು : ಈ ವಾರ ಅನಾರೋಗ್ಯ ಸಾಮಾನ್ಯ ಬಿಡಿ. ನಿಮ್ಮ ಕೆಮ್ಮನ್ನು ನೆವಮಾಡಿಕೊಂಡು, ನರ್ಸಿಂಗ್ ಹೋಮ್‌ನವರು ಸಾವಿರಗಟ್ಟಲೇ ಬಿಲ್ ಮಾಡ್ತಾರೆ. ನೀವು ಪಾರಾಗಲು ಸಾಧ್ಯವೇ ಇಲ್ಲ. ಆದರೂ ನಿಮ್ಮ ಕೆಮ್ಮು ನಿಲ್ಲೋದಿಲ್ಲ. ಮನೆಯಲ್ಲಿರೋ ಮೆಣಸು, ಅಥವಾ ಇಂಗ್ಲೀಷ್ ಟಾನಿಕನ್ನು ಪ್ರಯೋಗಿಸಿ ನೋಡಿ?
ಅದೃಷ್ಟ ಸಂಖ್ಯೆ -0, ಶುಭದಿನ -ವೈದ್ಯರಿಂದ ದೂರವಿದ್ದ ದಿನ
ಕುಂಭ : ನೀವು ಬಿಸ್ಕೆಟ್ ಹಾಕುತ್ತಿದ್ದ ಹುಡುಗಿ/ಹುಡುಗ ನಿಮಗೆ ಒಲಿಯುತ್ತಾರೆ. ಯಾವುದಕ್ಕೂ ಒಮ್ಮೆ ಅವರ ಗಂಡ/ಹೆಂಡತಿಯ ಅನುಮತಿ ಪಡೆದರೆ ಸೂಕ್ತ.
ಅದೃಷ್ಟ ಸಂಖ್ಯೆ -420, ಶುಭದಿನ -ವಾರದ ಎಲ್ಲಾ ದಿನ
ಮೀನ : ನಿದ್ರೆಯಲ್ಲಿ ಹೆಚ್ಚು ಕಾಲ ಕಳೆಯಲು ಪ್ರಯತ್ನಿಸಿ. ನಿದ್ರೆಯಲ್ಲಿಯೇ ಸುಖವಿದೆ. ನಿದ್ರೆಯಲ್ಲೂ ನಿಮ್ಮ ಹೆಂಡತಿ ಪ್ರಾಣ ಹಿಂಡಿದ್ರೆ ನಿಮ್ಮ ದುರಾದೃಷ್ಟ. ನಿಮ್ಮ ಗಂಡನ ಜೊತೆ ಹೆಣಗಿಹೆಣಗಿ ಸಾಕಾಗಿದೆಯೇ, ಪೋಲಿಸ್‌ಗೊಂದು ಕಂಪ್ಲೆಂಟ್ ಕೊಡಿ.
ಅದೃಷ್ಟ ಸಂಖ್ಯೆ -333, ಶುಭದಿನ -ವಾರದ ಎಂಟನೇ ದಿನ
1 comment:
modalu nimma grahachara hegidhe endhu tiliri....amele bere yavara grahachara dha bagge mathadi..
Post a Comment