Tuesday, May 6, 2008

ಹಾಗೇ ಸುಮ್ಮನೆ..

ಅಪ್ಪ
ಅವನು ಅತೀ ಅವಸರದಲ್ಲಿ ಹೊರಟಿದ್ದ. ನೆತ್ತಿಯನ್ನು ಕೆಂಡದಂಥ ಬಿಸಿಲು ಸುಡುತ್ತಿತ್ತು. ಕಾಲಲ್ಲಿ ಚಪ್ಪಲಿ ಬೇರೆಯಿಲ್ಲ. ಕೆಂಪಗೆ ಕಾದ ಕಬ್ಬಿಣದ ಸಲಾಕೆ ಮೇಲೆ ಪಾದವೂರಿದಂತೆ ಅವನಿಗೆ ಅನ್ನಿಸುತ್ತಿತ್ತು.
ಹೆಂಡತಿ ಔಷಧ ಮುಗಿದು ವಾರವಾಗಿತ್ತು. ಔಷಧ ಇಲ್ಲದೇ ಕೆಮ್ಮು ಉಬ್ಬಸದ್ದೇ ಸದಾ ಅಬ್ಬರದ ಸದ್ದು. ಹಾಸಿಗೆಯಲ್ಲಿ ಅವಳದು ಸದಾ ನರಳಾಟ. ಮೂರು ತಿಂಗಳಿಂದ ಮನೆ ಬಾಡಿಗೆ ಕಟ್ಟಿಲ್ಲ ಎಂದು ಮಾಲೀಕ, ಕಡೆಯ ಗಡುವು ಕೊಟ್ಟು ಹೋಗಿದ್ದ. ಇನ್ನೂ ಏನೇನೋ ತಾಪತ್ರಯ. ಎಲ್ಲವೂ ನೆನಪಾಯಿತು.
ಕೊನೆಗೂ ಪೋಸ್ಟ್ ಆಫೀಸ್‌ಗೆ ಬಂದು ಎಂ.ಓ. ಫಾರಂ ಪಡೆದ. ನಡುಗುವ ಕೈಯಲ್ಲಿಯೇ ಎಂ.ಓ.ಫಾರಂ ತುದಿಯಲ್ಲಿರುವ ಸಂದೇಶ ಎಂಬ ಜಾಗದಲ್ಲಿ, ‘ಮಗನೇ ನಾವಿಲ್ಲಿ ಕ್ಷೇಮ. ಚೆನ್ನಾಗಿ ಓದು. ಪ್ರವಾಸಕ್ಕೆ ಹೊರಟಿರುವ ವಿಷಯ ನಿನ್ನ ಪತ್ರ ಓದಿದ ಮೇಲೆ ತಿಳಿಯಿತು. ಹಣ ಎಂ.ಓ ಮಾಡಿದ್ದೇನೆ. ಬಳಸಿಕೋ.. ’ ಎಂದು ಎರಡು ಸಾಲು ಬರೆದು, ಐದು ನೂರು ರೂಪಾಯಿ ನೋಟುಗಳನ್ನು ಎಣಿಸಿದ.
ಮಗ
ಅವನ ಅಪ್ಪ ಬಲು ಗಟ್ಟಿ. ಎಂಥಾ ಹಲ್ಲು ನೋವಿದ್ದರೂ, ಅದರ ಆಯಸ್ಸು ಮುಗಿದಿದ್ದರೂ ಕೀಳಲು ವೈದ್ಯರಿಗೆ ಅವಕಾಶ ನೀಡಿರಲಿಲ್ಲ. ನೋಡನೋಡುತ್ತಲೇ ಹಲ್ಲುಗಳು ಅಪ್ಪನ ಬಾಯನ್ನು ಖಾಲಿ ಮಾಡಿದವು. ಕೆಳದವಡೆಯಲ್ಲಿ ಒಂದೆರಡುಮೂರು... ಮೇಲ್ ದವಡೆಯಲ್ಲಿ ಒಂದೆರಡು -ಹೀಗೆ ಮೊಮ್ಮಗ ಸುಲಭವಾಗಿ ಅಪ್ಪನ ಹಲ್ಲನ್ನು ಎಣಿಸುತ್ತಿದ್ದ. ನನಗೆ ಆಗ ಒಳ್ಳೆ ಸಂಬಳವೇನೋ ಬರ್ತಾಯಿತ್ತು. ಆದರೆ ಖರ್ಚುಗಳು ಸಂಬಳವನ್ನು ತಿಂದು ತೇಗುತ್ತಿದ್ದವು.
ಅಪ್ಪ ಅಳಿದುಳಿದ ಹಲ್ಲಿನಲ್ಲಿಯೇ ತಿನ್ನುವುದನ್ನು ಕಲಿತಿದ್ದ. ಬೆರಳಲ್ಲಿಯೇ ಮೂಳೆ ಬಿಡಿಸಿ, ಮಾಂಸವನ್ನು ಚಪ್ಪರಿಸುತ್ತಿದ್ದ. ಕಡಲೆ ಬೀಜವನ್ನು ನುಣ್ಣಗೆ ಕುಟ್ಟಿಸಿಕೊಂಡು ತಿನ್ನುತ್ತಿದ್ದ. ಅವನಿಗೆ ಹಾಗೆ ಮಾಡುವುದನ್ನು ಬಿಟ್ಟರೆ ಬೇರೆ ದಾರಿಯಾದರೂ ಏನಿತ್ತು? ಅಪ್ಪನಿಗೆ ಹಲ್ಲು ಕಟ್ಟಿಸಬೇಕು ಎಂದು ಅಂದುಕೊಳ್ಳುತ್ತಿದ್ದೆ. ಆವಾಗ, ಇವಾಗ ಎಂದು ಅಂದುಕೊಳ್ಳುತ್ತಲೇ ಇದ್ದೆ. ಅಪ್ಪ ಅವಸರವಿದ್ದವನಂತೆ, ನಮ್ಮ ಹಂಗು ಯಾಕೆ ಎಂಬಂತೆ ಬೊಚ್ಚು ಬಾಯಲ್ಲಿಯೇ ಅಗಲಿದ.
ಈಗ ಅಮ್ಮನ ಹಲ್ಲುಗಳೂ ಸಡಿಲವಾಗಿವೆ. ಹಳೆ ಕೆಲಸದ ಪಿಎಫ್ ಹಣ ಬಂದ ಮೇಲೆ ಹಲ್ಲು ಕಟ್ಟಿಸಬೇಕು. ಅವಳಿಗೀಗೀಗ ಚಪಾತಿ ತಿನ್ನಲು ಸಹಾ ಕಷ್ಟವಾಗುತ್ತಿದೆ.
ಅಮ್ಮ
ಅವಳ ಪ್ರಪಂಚದಲ್ಲಿ ಗಂಡ-ಮಕ್ಕಳು ಬಿಟ್ಟರೆ ಬೇರೆಯವರಿಗೆ ಜಾಗವೇ ಇಲ್ಲ. ತೊಟ್ಟಿಲಲ್ಲಿದ್ದ ಮಗ ಹಠ ಮಾಡಿದರೆ, ಇವಳು ಹರಕೆ ಕಟ್ಟುತ್ತಿದ್ದಳು. ತಾನು ನಂಬಿದ್ದ, ಪ್ರತಿ ಶನಿವಾರ ಶ್ರದ್ಧಾ ಭಕ್ತಿಯಿಂದ ಓದುತ್ತಿದ್ದ ಶ್ರೀರಾಮನ ಪೂಜಾ ಮಹಾತ್ಮೆ ಪುಸ್ತಕವನ್ನು ಮಗನ ತಲೆ ಕೆಳಗಿಟ್ಟು, ‘ಶ್ರೀರಾಮಚಂದ್ರ ಕಾಪಾಡಪ್ಪಾ ’ ಅನ್ನುತ್ತಿದ್ದಳು. ಮನೆ, ಮಕ್ಕಳಿಗಾಗಿ ವಾರಕ್ಕೆರಡು ದಿನ ಊಟ ಬಿಟ್ಟಳು. ಮಗನ ಬಗ್ಗೆ ಮೇಷ್ಟ್ರುಗಳು ಒಳ್ಳೆ ಮಾತಾಡಿದಾಗ, ಆಕೆ ಮುಖ ಅರಳಿದ ತಾವರೆ.
ಊರಿನ ಸಾಧುವೊಬ್ಬ ನಿನ್ನ ಮಗ ನವೆಂಬರ್‌ನಲ್ಲಿ ಹುಟ್ಟಿದ್ದಾನೆ. ನವೆಂಬರ್‌ನಲ್ಲಿಯೇ ಕನ್ನಡ ರಾಜ್ಯೋತ್ಸವ, ನಿನ್ನ ಮಗ ಮುಂದೆ ಮಹಾತ್ಮ ಆಗುತ್ತಾನೆ ಎಂದು ಹೇಳಿದ್ದ. ಅಂದು ಆ ಸಾಧುವಿಗೆ ಹೊಟ್ಟೆ ತುಂಬ ಊಟ ಹಾಕಿದ್ದಳು. ಮಗ ನಕ್ಕಾಗ, ಅವಳೂ ನಗುತ್ತಿದ್ದಳು. ಮಗನಿಗೇನಾದರೂ ಗಾಯವಾದರೆ, ಅದರ ನೋವೆಲ್ಲವನ್ನೂ ತಾನೇ ಅನುಭವಿಸುತ್ತಿದ್ದಳು. ಅಂಥ ಅಮ್ಮನ ಕಣ್ಣಲ್ಲಿ ಒಂದು ದಿನ ನೀರು ಬಂತು. ಕಾರಣ; ಅಂದು ಮಗನ ಮದುವೆ ದಿನ! ಮದುವೆ ಎಲ್ಲಿ? ಯಾವಾಗ? ಈ ಬಗ್ಗೆ ಆಕೆಗೆ ಏನೂ ಗೊತ್ತಿರಲಿಲ್ಲ!

No comments: