Sunday, May 11, 2008

ತೆರೆದಿದೆ ಮನೆ ಓ ಬಾ ಬೆಳಕೆ!

ದುಡ್ಡಿಲ್ಲ.. ನಯಾ ಪೈಸೆ ಖರ್ಚಿಲ್ಲ. ಹೀಗಾಗಿ ಸೂರ್ಯನ ಬೆಳಕನ್ನು ಬಳಸಿಕೊಳ್ಳಲು ಏನೂ ಕಷ್ಟವಿಲ್ಲ. ಆದರೆ ಕೆಲವು ಮನೆಗಳನ್ನು ನೋಡಿ, ರಾತ್ರಿ ಯಾವುದೋ, ಹಗಲು ಯಾವುದೋ ಒಂದೂ ಗೊತ್ತಾಗುವುದಿಲ್ಲ. ಯಾವಾಗಲೂ ಆಂಧಕಾರ. ದೀಪವಿಲ್ಲದ ಹೊರತು, ಮನೆಯಲ್ಲಿ ಕ್ಷಣಕಾಲವೂ ನಿಲ್ಲಲಾಗದು.
ಸೂರ್ಯನ ಬೆಳಕನ್ನು ಬಳಸಿಕೊಳ್ಳುವಲ್ಲಿ ನಮ್ಮ ಪೂರ್ವಿಕರು ಅತಿ ಜಾಣರು. ಸಂಪ್ರದಾಯದ ಹೆಸರಲ್ಲಿ, ಸೂರ್ಯನನ್ನು ಬಳಸಿಕೊಳ್ಳಲು ಅವರು ಪ್ರೇರಣೆ ನೀಡಿದ್ದಾರೆ. ಪೂರ್ವಕ್ಕೆ ಬಾಗಿಲು ಇಡಬೇಕು. ಸಾಧ್ಯವಾಗದ ಪಕ್ಷದಲ್ಲಿ ದಕ್ಷಿಣಕ್ಕಾದರೂ ಇಡಬೇಕು ಎನ್ನುವುದು ಹಿರಿ ತಲೆಗಳ ಮಾತಷ್ಟೇ ಅಲ್ಲ. ವಾಸ್ತು ಪಂಡಿತರು ಮತ್ತು ಎಂಜಿನಿಯರ್‌ಗಳು ಸಹಾ ಈ ಸಲಹೆಯನ್ನು ಸಮ್ಮತಿಸುತ್ತಾರೆ.
ಮನೆಗೆ ಮುಖ್ಯವಾದದ್ದು ಮಾರ್ಬಲ್ ಅಲ್ಲ. ಟೀಕ್‌ವುಡ್ಡಿನ ಕಿಟಕಿ ಬಾಗಿಲುಗಳೂ ಅಲ್ಲ. ಗಾಳಿ-ಬೆಳಕು ಮನೆಯ ಸಮೃದ್ಧಿ ಸೂಚಕ. ಈ ಬಗ್ಗೆ ನಾವು ಗಮನ ನೀಡದೇ ಹೋದರೆ, ಮನೆ ಎಂಬುದು ನಮ್ಮ ಪಾಲಿಗೆ ಪಂಚರವಾಗುತ್ತದೆ. ಅದು ನರಕದ ಅನುಭವ ನೀಡುತ್ತದೆ. ಕಿಟಕಿಯಿಂದ ತೂರಿ ಬರುವ ಸೂರ್ಯನ ಬೆಳಗಿನ ಎಳೆಯ ಕಿರಣಗಳು, ‘ಬೆಳಗಾಯಿತು ಮೇಲೆ ಏಳೋ ಸೋಮಾರಿ’ ಎಂದು ನಮ್ಮ ಮೂತಿ ತಿವಿದು ಎಬ್ಬಿಸುತ್ತವೆ. ಸಮಯದ ಪರಿಕಲ್ಪನೆಯನ್ನು ಬೆಳಕು ನಮ್ಮಲ್ಲಿ ತುಂಬುತ್ತದೆ.
ಬೆಳಕೆಂದರೆ ಬರೀ ಬೆಳಕಲ್ಲವೋ..
ಸೂರ್ಯನ ಬೆಳಕು ತನ್ನೊಳಗೆ ತಾಪವನ್ನೂ ಮೈಗೂಡಿಸಿಕೊಂಡಿದೆ. ಆ ಬೆಳಕಿನ ಬಿಸಿ ಒಮ್ಮೊಮ್ಮೆ ಕಚಗುಳಿಗೆ, ಪುಳಕಕ್ಕೆ, ಹಿಂಸೆಗೆ ಮತ್ತು ಅಹಿತಾನುಭವಕ್ಕೆ ಕಾರಣವಾಗುತ್ತದೆ.
ಉತ್ತರ ದಿಕ್ಕಿನಿಂದ ಮನೆಗೆ ನುಗ್ಗುವ ಸೂರ್ಯನ ಬೆಳಕು ತಂಪಾಗಿರುತ್ತದೆ. ಬೇಸಿಗೆಯ ಮಧ್ಯದಲ್ಲಷ್ಟೇ, ತುಸು ಕಾವೇರುತ್ತದೆ. ಆಗಷ್ಟೆ ಸೂರ್ಯ, ತನ್ನ ನೇರ ಕಿರಣಗಳನ್ನು ಚಾಚಿ ಮಲಗುತ್ತಾನೆ. ದಕ್ಷಿಣ ದಿಕ್ಕಿನ ಕಿರಣಗಳು ಬಿಸಿಯೋ ಬಿಸಿ. ಹೀಗಾಗಿ ದಕ್ಷಿಣದಲ್ಲಿರುವ ಕೊಠಡಿಗಳ ಗೋಡೆಗಳು ದಟ್ಟ ಕಡು ಬಣ್ಣಗಳನ್ನು(ನೀಲಿ, ಹಸಿರು ಇತ್ಯಾದಿ) ಹೊಂದಿದ್ದರೆ ಒಳ್ಳೆಯದು.
ಮನೆ ಬಾಗಿಲು ಪೂರ್ವದಲ್ಲಿದ್ದರೆ, ಮನೆಮಂದಿಗೆ ಸುಖಾನುಭವ. ಯಾವ ಬೇಸಿಗೆಯೂ ಇವರಿಗೆ ಕೇಡು ಮಾಡದು! ಪೂರ್ವದಲ್ಲಿ ಬೆಳಗ್ಗೆ ಚುಮುಚುಮು ಬಿಸಿಲು, ಮಧ್ಯಾಹ್ನ ತಂಪೋತಂಪು. ನೇರವಾಗಿ ಸೂರ್ಯ ಕಿರಣ ಬೀಳದ ಕಾರಣ, ಫ್ಯಾನಿನ ಬಳಕೆಯೂ ಕಡಿಮೆ, ಆ ಪರಿಣಾಮ ವಿದ್ಯುತ್ ಬಿಲ್ ಸಹಾಕಡಿಮೆ.
ಇನ್ನು ಪಶ್ಚಿಮ ದಿಕ್ಕಿನಲ್ಲಿರುವ ಮಂದಿಗೆ ಸೂರ್ಯನ ಕಾಟ ಅಷ್ಟಿಷ್ಟಲ್ಲ. ಬೆಳಗ್ಗೆ ಸ್ವಲ್ಪ ಕಾಲ ಬಿಟ್ಟರೆ ಮಧ್ಯಾಹ್ನದಿಂದ ಸಂಜೆವರೆಗೆ ಬಿಸಿಲೋ ಬಿಸಿಲು. ಸಂಜೆಯ ನಂತರ ಬಿಸಿಲಿನ ಕಾವು. ಒಂದು ರೀತಿಯಲ್ಲಿ ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬಂತೆ ಬಿಸಿಲಿನ ದರ್ಬಾರು.
ಬೆಳಕಿನ ರಂಗವಲ್ಲಿ..
ಎಲ್ಲಕ್ಕೂ ಮಿತಿಯಿದೆ. ಬೆಳಕು ಹಿತಕರವಾಗಿರಬೇಕು... ಅದು ಅತಿಯಾದರೆ ಮತ್ತೆ ಅಪಾಯ. ಹೀಗಾಗಿ ನಿಮ್ಮ ಮನೆಯಲ್ಲಿ ಬೆಳಕನ್ನು ಸಮತೋಲನಗೊಳಿಸಲು, ತಜ್ಞರು ಸಲಹೆ ನೀಡುತ್ತಾರೆ. ಯಾವ ಕೊಠಡಿಗೆ ಯಾವ ಬಣ್ಣ ಸೂಕ್ತ ಎಂಬುದನ್ನು ಕೇಳಿ ತಿಳಿದುಕೊಳ್ಳಿ.
ಕಿಟಕಿ, ಬಾಗಿಲು, ಗವಾಕ್ಷಿ ಹೀಗೆ ಸಾಧ್ಯವಿರುವ ಎಲ್ಲಾ ಕಡೆಯಿಂದ ಬೆಳಕು ತೂರಿ ಬರಲಿ. ಕಿಟಕಿ ಮತ್ತು ಬಾಗಿಲುಗಳಲ್ಲಿ ಬೆಳಕು ತೂರಲು ಸಾಧ್ಯವಾಗುವಂತೆ ವಿನ್ಯಾಸಗಳಿರಲಿ. ಕಿಟಕಿಗೆ ದೊಡ್ಡ ಬಾಗಿಲಿಗಿಂತಲೂ, ಅಲಂಕಾರಿಕಾ ಪುಟ್ಟ ಬಾಗಿಲುಗಳು ಒಳ್ಳೆಯದು. ಮನೆಯಲ್ಲಿ ಬೆಳಕು ಹಿಂಸೆ ನೀಡುವ ಕಡೆ ತಂಪು ಕಾಗದ ಅಂಟಿಸಬಹುದು, ಕಡಿಮೆ ಇರುವಕಡೆ ಬೆಳಕನ್ನು ದ್ವಿಗುಣಗೊಳಿಸುವ ಪಾರದರ್ಶಕ ಗಾಜನ್ನು ಬಳಸಬಹುದು. ಬೇಕಿದ್ದರೆ ಕನ್ನಡಿಗಳನ್ನು ಉಪಯೋಗಿಸಬಹುದು. ನಿಮ್ಮ ಕೊಠಡಿಗೆ ಬೆಳಕಿನ ಮೂಲಕ ಹೇಗೆ ಜೀವ ತುಂಬಲು ಸಾಧ್ಯ ಆಲೋಚಿಸಿ. ಅಂದ ಹಾಗೆ, ಮೈಕುಕ್ಕುವ ಬೆಳಕು ಮಲಗುವ ಮನೆಗೆ ಬೇಡವೇ ಬೇಡ. ಬೆಳಕು ನಿರೋಧಕ ದೀಪಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ, ಬಳಸಿ ನೋಡಿ.
ಕಾಲ ಬದಲಾದಂತೆ ಸೂರ್ಯನ ಬೆಳಕು ವ್ಯತ್ಯಾಸವಾಗುತ್ತದೆ. ಹೀಗಾಗಿ ಪರ್ಯಾಯ ದೀಪಗಳು ಇದ್ದೇ ಇರಲಿ. ಸಹಜ ಬೆಳಕಿನ ಕೊರತೆ ನೀಗಿಸಲು, ಒಂದೆರಡು ಗಿಡಗಳು ಮನೆಯಲ್ಲಿರಲಿ. ಹಗಲು ವೇಳೆ ಕೊಠಡಿಗಳಿಗೆ ಸೂರ್ಯನ ಕಿರಣ ಪ್ರವೇಶವಿದ್ದರೆ ತುಂಬಾ ಒಳ್ಳೆಯದು. ಓದುವ ಕೊಠಡಿ ಮತ್ತು ಕಚೇರಿಯಲ್ಲಿ ಸೂರ್ಯನ ಬೆಳಕು ಹರಿದಾಡುತ್ತಿರಬೇಕು.
ಬೆಳಕೆ, ನಿನಗೆ ಕೋಟಿ ನಮನ
ನಿಸರ್ಗದತ್ತ ಬೆಳಕು ಮನೆ ತುಂಬಿದಾಗ, ಮನೆಯಲ್ಲಿರುವವರಲ್ಲಿ ಲವಲವಿಕೆ ಪುಟಿಯುತ್ತದೆ. ಯಾವುದೇ ಖರ್ಚಿಲ್ಲದೇ ಮನೋಲ್ಲಾಸ ಬೆಳಿಕಿನಿಂದ ಲಭ್ಯ. ಸೂರ್ಯನ ಕಿರಣ ಮನೆಯಲ್ಲಿ ಹಾದು ಹೋದರೆ, ಕೊಠಡಿ ಮಿಂಚುತ್ತದೆ, ತಾಜಾತನ ಆವರಿಸುತ್ತದೆ. ಜತೆಗೆ ಆರೋಗ್ಯಕ್ಕೂ ಹಿತ. ಕಸ ಮತ್ತು ಬ್ಯಾಕ್ಟೀರಿಯಾಗಳಿಂದಲೂ ಬೆಳಕು ನಮ್ಮನ್ನು ಪಾರು ಮಾಡಬಲ್ಲದು.
----------------------------------------------------------------------------------
ಬೆಳಕು ತಂದ ಕಾಯಿಲೆ!
ಸೂರ್ಯನಿಂದ ವಿಟಮಿನ್-ಡಿ ಲಭ್ಯ ಎನ್ನುವುದು ಖುಷಿ ವಿಚಾರ. ಆದರೆ ಹೆಚ್ಚಿನ ಪ್ರಖರ ಬಿಸಿಲು ಚರ್ಮದ ಕ್ಯಾನ್ಸರ್‌ಗೂ ದಾರಿಯಾಗಬಹುದು ಎಂಬ ಅಂಶವನ್ನು ಮರೆಯುವಂತಿಲ್ಲ. ಅಪಾಯಕಾರಿ ಅತಿ ನೇರಳೆ ಕಿರಣಗಳಿಂದ ನಮ್ಮ ಚರ್ಮಕ್ಕೆ ರಕ್ಷಣೆ ನೀಡಬೇಕಾಗಿದೆ. ಈ ಉದ್ದೇಶಕ್ಕಾಗಿ ಅನೇಕ ಕ್ರೀಮ್‌ಗಳು ಮಾರುಕಟ್ಟೆಯಲ್ಲಿವೆ.

No comments: