Saturday, May 10, 2008

ಮನೆಯ ಅನ್ನಪೂರ್ಣೆಗೊಂದು ಥ್ಯಾಂಕ್ಸ್ !

‘ದಿನಾ ಉಪ್ಪಿಟ್ಟಾ ?’ ಎಂದು ಆಗಾಗ ಗೊಣಗುತ್ತೇವೆ. ಉಪ್ಪಿಟ್ಟು ಪ್ರಿಯರು ಸಹಾ ಉಪ್ಪಿಟ್ಟಿನ ಜತೆಗೆ, ಕೇಸರಿಬಾತ್ ಬಯಸುವುದುಂಟು. ‘ಬೇಳೆ ಸಾರು ಬೇಜಾರು, ಅದರೊಟ್ಟಿಗೆ ಹಪ್ಪಳ ಮಾಡು’ ಎಂಬುದು ಮನೆಯಲ್ಲಿ ಪುರುಷ ಸಿಂಹಗಳ ಹಕ್ಕೊತ್ತಾಯ. ‘ಎಷ್ಟು ಸಲ ಹೇಳೋದು, ಸಾರಿಗೆ ಬದನೇ ಕಾಯಿ ಹಾಕಬೇಡ ಅನ್ತಾ.. ನಿನ್ ಊಟ ನೀನೇ ತಿಂದ್ಕೋ, ನಾನ್ ಹೊರಗಡೆ ಏನಾದ್ರೂ ನೋಡುಕೋತೀನಿ’ ಎಂದು ಒಂದಲ್ಲ ಒಂದ್ಸಲ ಗೊಣಗಿ, ಮುಖವನ್ನು ಸುಟ್ಟ ಬದನೇಕಾಯಿ ಥರಹಾ ಕಿವುಚುವುದರಲ್ಲಿ ಅದೇನಿದೆಯೋ ಆನಂದ!
ಹೋಟೆಲ್‌ಗೆ ಹೋದರೆ ಇಡ್ಲಿ-ವಡೆ, ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ಮಸಾಲೆ ದೋಸೆ, ಖಾಲಿ ದೋಸೆ, ಈರುಳ್ಳಿ ದೋಸೆ, ನೀರ್ ದೋಸೆ, ಪೂರಿ, ಪಲಾವ್, ಪುಳಿಯೋಗರೆ, ಚೌಚೌ ಬಾತ್.. ಹೀಗೆ ಹನುಮಂತನ ಬಾಲದಂತೆ ಪಟ್ಟಿಯನ್ನು ಸಪ್ಲೈಯರ್ ಒಪ್ಪಿಸುತ್ತಾನೆ. ಎಲ್ಲೆಡೆ ಆಯ್ಕೆ ಸ್ವಾತಂತ್ರ್ಯದ್ದೇ ಗದ್ದಲ. ಕಸದ ತೊಟ್ಟಿ ಯಲ್ಲಿ ಬೀದಿನಾಯಿಗಳ ಜತೆ ಎಂಜಲು ಎಲೆಗೆ ಕಿತ್ತಾಡುವ ನಿರ್ಭಾಗ್ಯ ಹುಡುಗರಿಗೆಲ್ಲಿದೆ ಆಯ್ಕೆ ಸ್ವಾತಂತ್ರ್ಯ?
‘ಸಾರು ಉಪ್ಪು ರೋಸು.. ಇದೇನ್ ತಿನ್ನಲಿ ಅಂಥಾ ಮಾಡಿದ್ದಾ ಅಥ್ವಾ ಕಾಟಾಚಾರಕ್ಕೆ ಬೇಯಿಸಿದ್ದಾ ?’ ಎಂದು ಅಪ್ಪ ಗೊಣಗುವುದನ್ನು ಮಗ ಪಿಳಿಪಿಳಿ ಕಣ್ ಬಿಡುತ್ತಲೇ ಗಮನಿಸಿರುತ್ತಾನೆ. ದೊಡ್ಡವನಾದ ಮೇಲೆ ಇದೇ ಮಾತನ್ನು ಹೆಂಡ್ತಿ ಮುಂದೆ ಚೂರು ತಪ್ಪದಂತೆ ಒಪ್ಪಿಸಿರುತ್ತಾನೆ ! ಬಕಾಸುರನ ಅಣ್ಣ ತಮ್ಮಂದಿರಂತೆ ಊಟ-ತಿಂಡಿ ವಿಷಯದಲ್ಲಿ ಒದ್ದಾಡೋದರಲ್ಲಿ , ಕಿರುಚಾಡುವುದರಲ್ಲಿ ನಾವು ಸದಾ ಮುಂದೆ. ಬೆಳಗ್ಗೆ ಪೇಪರ್ ಬಿಡಿಸಿ ಕೂತರೇ, ಕಾಫಿ ಕೈಗೆ ಬರಬೇಕು. ಓದಿದ್ದು ಮುಗಿದ ತಕ್ಷಣ ತಿಂಡಿ ವಾಸನೆ ಮೂಗಿಗೆ ಬಡಿಯಬೇಕು. ರಾತ್ರಿ ಮನೆಗೋದ ತಕ್ಷಣ, ಹೆಂಡತಿ ಊಟಕ್ಕೆ ಕರೀಬೇಕು. ಊಟ ಮಾಡೋವಾಗ ಅವಳು ತರ್ಲೆ ತಾಪತ್ರಯ ಒಪ್ಪಿಸದೇ, ನಾಲ್ಕು ಕರ್ಣಾನಂದಕರ ನುಡಿಮುತ್ತುಗಳನ್ನು ಉಲಿಯಬೇಕು -ಹೀಗೆ ಬೇಕುಗಳಿಗೆ ಬರೀ ಅರ್ಧ ವಿರಾಮಗಳೇ.
ಏಕತಾನತೆಯಿಂದ ಬೇಸರಿಸದೇ, ಮನೆ ಮಂದಿಯ ಮನಸ್ಥಿತಿಯಿಂದ ಕುಗ್ಗಿದರೂ ತೋರಿಸಿಕೊಳ್ಳದೇ, ಕಾಲಕಾಲಕ್ಕೆ ಬೇಸುವುದರಲ್ಲಿಯೇ ಮನೆಯ ಅನ್ನಪೂರ್ಣೆಗೆ ಸಾರ್ಥಕ್ಯದ ಭಾವ. ಅಡಿಗೆ ರುಚಿಯಾಗಿರಲಿ, ಮನೆ ಮಂದಿ ಹೊಟ್ಟೆ ತುಂಬಾ ತಿನ್ನಲೆಂದೇ ಆಕೆಯ ಹೃದಯ ಹಂಬಲಿಸುತ್ತದೆ. ಏನೋ ಆಗಿ ಸಾರಿಗೆ ಉಪ್ಪೋ, ಖಾರವೋ ಹೆಚ್ಚು ಕಡಿಮೆಯಾದರೆ ಅದಕ್ಕೆ ಅವಳು ಹೊಣೆಯೇ?
ಉಪ್ಪು ಕಡಿಮೆಯಾಗಿದ್ದರೆ, ಸ್ವಲ್ಪ ಉಪ್ಪು ಸೇರಿಸಿಕೊಂಡರೆ ಕೈ ಬಿದ್ದೋಗುತ್ತಾ? ಈ ಬದುಕಿಗೆ ಇದೇ ಕಡೆಯ ಊಟವೇನೋ ಎಂಬಂತೆ ವರ್ತಿಸೋದು ನಿಜಕ್ಕೂ ವಿಚಿತ್ರ. ಏನೋ ಮಹಾಪರಾಧ ಮಾಡಿದಂತೆ, ಪ್ರಳಯವಾದಂತೆ ಗುಡುಗಿ, ಆಕೆ ಕಣ್ಣಲ್ಲಿ ತುಂತುರು ಮಳೆ ತರಿಸೋದರಲ್ಲಿ ಅದೇನಿದೆಯೋ ಪುರುಷಾರ್ಥ?
ಮನೆಯಾಚೆ ಸುಮ್‌ಸುಮ್ನೆ ಥ್ಯಾಂಕ್ಸ್ ಎನ್ನುವ ಥ್ಯಾಂಕ್ಸಪ್ಪಗಳಿಗೆ ಮನೆಯಲ್ಲಿ ಗಂಠಲು ಮಟ್ಟ ತಿಂದರೂ, ಅನ್ನಪೂರ್ಣೆಗೊಂದು ಥ್ಯಾಂಕ್ಸ್ ಹೇಳಬೇಕು ಎಂದು ಅನ್ನಿಸೋದಿಲ್ಲ. ಥ್ಯಾಂಕ್ಸ್ ಬಿಡಿ, ಅದು ದೂರದ ಮಾತು. ಕಾಫಿ ಚೆನ್ನಾಗಿದೆ.. ಬಜ್ಜಿ ರುಚಿಯಾಗಿವೆ ಎಂದು ಹೇಳೋದರಲ್ಲಿ ಅದೇನು ಕಳ್ಕೊಳ್ಳುವರೋ ನಮ್ಮ ಪುರುಷ ಸಿಂಹಗಳು? ಜಿಪುಣಾಟಕ್ಕೊಂದು ಮಿತಿ ಬೇಡವೇ? ಛೇ! ಛೇ!!

No comments: