Saturday, May 10, 2008

ನಮಗೂ ಕ್ಷೇಮ! ದೇವರಿಗೂ ಕ್ಷೇಮ!!

ಅದು ಬಿಎಂಟಿಸಿ ಬಸ್ಸು. ಸೀಟ್ ಸಿಕ್ಕಿರಲಿಲ್ಲ. ಬೇಸರದಿಂದಲೇ ಕಂಬಿ ಹಿಡಿದು ನೇತಾಡುತ್ತಿದ್ದೆ. ಎಂದಿನಂತೆ ಮೇಖ್ರಿ ಸರ್ಕಲ್‌ನಲ್ಲಿ ಟ್ರಾಫಿಕ್ ಜಾಮ್. ಇವತ್ತು ಕೆಲಸಕ್ಕೆ ಲೇಟಾಗುತ್ತಿರುವುದನ್ನು ಅರಿತ ಮನಸ್ಸು ಅಸಹನೆಯಿಂದ ಕುದಿಯುತ್ತಿತ್ತು. ಅಷ್ಟರಲ್ಲಿಯೇ ಹಿಂದಿದ್ದ ಇಬ್ಬರು ಯುವಕರ ಮಾತು ಯಾಕೋ ಕುತೂಹಲಕಾರಿಯಾಗಿದೆ ಅನ್ನಿಸಿತು. ಬೇಡವೆಂದರೂ ಕಿವಿಗಳು ಅತ್ತಲೇ ತಿರುಗಿದವು. ನನ್ನಂತೆಯೇ ಅನೇಕರ ಕಿವಿಗಳು ಆ ದಿಕ್ಕಿನತ್ತಲೇ ಬಾಗಿದ್ದವು.
ಜೀನ್ಸ್ ಪ್ಯಾಂಡ್, ನೀಲಿ ಟೀ ಶರ್ಟ್ ಧರಿಸಿದ್ದ ಯುವಕ, ಜತೆಯಲ್ಲಿದ್ದವನಿಗೆ ಮಾರ್ಗದರ್ಶನ ನೀಡುತ್ತಿದ್ದ. ಬಹುಶಃ ಅವರಿಬ್ಬರೂ ಒಂದು ಕಾಲದ ಗೆಳೆಯರಿರಬಹುದು. ತುಂಬಾ ದಿನಗಳ ನಂತರ ಆಕಸ್ಮಿಕವಾಗಿ ಬಸ್‌ನಲ್ಲಿ ಭೇಟಿಯಾಗಿದ್ದಾರೆ ಅನ್ನಿಸಿತು. ಜೀನ್ಸ್ ಪ್ಯಾಂಡ್‌ಧಾರಿ ಭಾಷಣ ಆರಂಭಿಸಿದ್ದ. ತನ್ನ ಬದುಕಿನ ಏರಿಳಿತಗಳು, ಇತ್ತೇಚೆಗಿನ ಉನ್ನತಿ ಬಗ್ಗೆ ಹೇಳುತ್ತಿದ್ದ.
‘ನೋಡು ಮಗಾ, ಇಂಗ್ಲಿಷ್ ಬರೋದಿಲ್ಲ ಎಂಬ ಕೀಳರಿಮೆ ಬೇಡ. ಯಾರಿಗೂ ಶುದ್ಧ ಇಂಗ್ಲಿಷ್ ಗೊತ್ತಿಲ್ಲ. ಇವತ್ತಿನಿಂದಲೇ ತಪ್ಪೋ ಸರಿಯೋ ಮಾತು ಶುರು ಮಾಡು. ಕೆಲಸ ಚಿಕ್ಕದಾದರೂ ಪರವಾಗಿಲ್ಲ ಮುಂದುವರಿಸು. ಜಾಬ್ ವೆಬ್‌ಸೈಟ್‌ಗಳಿಗೆ ಬಯೋಡೇಟಾ ಕಳಿಸು. ದುಡಿಯೋದಕ್ಕಿಂತಲೂ ಮೊದಲು ಅನುಭವ ಸಂಪಾದಿಸಲು ಪ್ರಯತ್ನಿಸು. ಕೆಲಸ ಗೊತ್ತಿದ್ದರೆ, ಇಂದು ಯಾರು ಬೇಕಾದರೂ ಕರೆದು ಅವಕಾಶ ಕೊಡ್ತಾರೆ. ನನ್ನೇ ನೋಡು, ಬರೀ ೫೦೦೦ ರೂಪಾಯಿಗೆ ಅಲ್ಲಿ ಸೇರಿದೆ. ಈಗ ೨೦ಸಾವಿರ ಬರ್‍ತಾಯಿದೆ. ಏನಾದರೂ ಮಾಡಿ ಇನೋಸಿಸ್‌ನಲ್ಲಿ ಕೆಲಸ ಗಿಟ್ಟಿಸಿದರೆ, ೩೦-೪೦ ಸಾವಿರ ಎಣಿಸಬಹುದು...’ ಮಾತು ಪ್ರವಾಹದಂತೆ ಹರಿಯುತ್ತಿತ್ತು. ಇನ್ನೊಬ್ಬ ಬಾಯಿಬಿಟ್ಟುಕೊಂಡು ಕೇಳುತ್ತಿದ್ದ.
‘ನಿನಗೇನಿದೆ ಕಷ್ಟ? ಅದರ ೧೦ರಷ್ಟು ತಾಪತ್ರಯ ನನಗಿತ್ತು. ವರ್ಷದ ಹಿಂದೆ ಕಾಯಿಲೆ ಬಿದ್ದು, ಒಂದು ತಿಂಗಳು ಹಾಸಿಗೆ ಹಿಡಿದಿದ್ದೆ. ಏನು ಮಾಡಿದ್ದರೂ ಕೈಗೆ ಬರ್ತಾ ಇರಲಿಲ್ಲ. ಆಗ ನಮ್ಮ ಸೋದರ ಮಾವ, ನನ್ನ ಪಾಲಿಗೆ ದೇವರ ಥರಾ ಬಂದರು’.
‘ಏನ್ ಮಾಡಿದರು?’
‘ಪ್ರಾರ್ಥನೆ ಮಾಡೋದಕ್ಕೆ ಹೇಳಿದರು..’
‘ಪ್ರಾರ್ಥನೆನಾ?’
‘ಹೌದು. ಯೇಸು ಪ್ರಭುವಿನ ಪ್ರಾರ್ಥನೆಯನ್ನು ಅಂದಿನಿಂದ ನಾನು ಶುರು ಮಾಡಿದೆ. ಬೆಳಗ್ಗೆ ಒಂದು ೧೦ ನಿಮಿಷ ಪ್ರಾರ್ಥನೆ ಮಾಡ್ತೀನಿ. ಸಮಸ್ಯೆ ಬಂದಾಗಲೆಲ್ಲ, ಯೇಸು ಪ್ರಭುವನ್ನು ನೆನಪು ಮಾಡಿಕೊಳ್ಳುತ್ತೇನೆ. ವಾರಕ್ಕೊಮ್ಮೆ ಚರ್ಚ್‌ಗೆ ಹೋಗ್ತೀನಿ. ಯೇಸು ಪ್ರಭು ದೆಸೆಯಿಂದ ಕಲ್ಲಿನಂಥ ಕಷ್ಟಗಳು ಕರಗಿ ನೀರಾಗುತ್ತವೆ. ಬೇಕಿದ್ದರೇ ನೀನೂ ಟ್ರೈ ಮಾಡು.. ಕಳಕೊಳ್ಳೋದೇನಿದೆ.. ಒಳ್ಳೆಯದಾಗುತ್ತೆ ಅಂದ್ರೆ, ಪ್ರಾರ್ಥನೆ ಮಾಡೋದು ತಪ್ಪಾ? ನನಗಂತೂ ಒಳ್ಳೆಯದಾಗಿದೆ. ನಿನಗೂ ಒಳ್ಳೆಯದಾಗಲಿ ಅಂಥ ಇಷ್ಟೆಲ್ಲಾ ಹೇಳಿದೆ. ಇದರ್‍ಮೇಲೆ ನಿನ್ನಿಷ್ಟ.. ’ ಎಂದ ಆ ಯುವಕ ತನ್ನ ಸ್ಟಾಪ್ ಬಂದ ತಕ್ಷಣ, ಟಾಟಾ ಹೇಳುತ್ತ ಇಳಿದು ಹೋದ. ತನ್ನ ಗೆಳೆಯನಿಗೆ ಹೇಳುವಂತೆ, ಹಿಡೀ ಬಸ್‌ಗೆ ಆತ ತಾನು ಏನು ಹೇಳಬೇಕಾಗಿದ್ದೋ ಅದನ್ನು ಹೇಳಿದ್ದ.
***
ಗೆಳೆಯ ಕುಮಾರ ಬಿಪಿಎಡ್ ಮಾಡಿ ನಾಲ್ಕಾರು ವರ್ಷಗಳಾಗಿತ್ತು. ಮದುವೆ ವಯಸ್ಸು ಮೀರುತ್ತಿದೆ ಎಂಬ ಆತಂಕ ಸೃಷ್ಟಿಸುವಂತೆ, ತಲೆಯಲ್ಲಿ ಬೆಳ್ಳಿ ಕೂದಲ ಸಂತತಿ ಹೆಚ್ಚುತ್ತಿತ್ತು. ಯಾವ ಕೆಲಸವಾದರೂ ಪರವಾಗಿಲ್ಲ ಮಾಡೋದಕ್ಕೆ ರೆಡಿ ಎನ್ನುತ್ತಿದ್ದವನಿಗೆ ಊರಲ್ಲಿನ ಕಾನ್ವೆಂಟ್‌ನಲ್ಲಿ ಕೊನೆಗೂ ಕೆಲಸ ಸಿಕ್ಕಿತು. ಆದರೆ ಆ ಕೆಲಸವನ್ನು ಕೊಡಲು ಆಡಳಿತ ಸಂಸ್ಥೆ ಹಿಂದೆ ಮುಂದೆ ನೋಡಿತ್ತು. ಡಬ್ಬಲ್ ಡಿಗ್ರಿ ಸರದಾರನಿಗೆ ಮೂರಂಕೆಯ ಸಂಬಳ ಕೊಡೋದು ಹೇಗೆ ಎಂಬುದು ಅವರ ತಳಮಳ. ಸಂಬಳಕ್ಕಿಂತಲೂ ಕೆಲಸ ದೊಡ್ಡದು ಎಂಬ ಮನಸ್ಥಿತಿ ಆತನದು. ಕೆಲಸ ಸಿಕ್ಕಿದ ದಿನ ನನಗೆ ಟೀ ಕೊಡಿಸಿ, ಮುಖ ಅರಳಿಸಿದ್ದ.
ಆ ಮಧ್ಯೆ ದೈಹಿಕ ಶಿಕ್ಷಕರ ನೇಮಕಾತಿಗಾಗಿ ಸರಕಾರ, ಅರ್ಜಿ ಆಹ್ವಾನಿಸಿತು. ಸಿಇಟಿ ಪರೀಕ್ಷೆ ಆತನ ಪಾಲಿಗೆ ಸ್ವರ್ಗದ ರಹದಾರಿಯಂತೆ ಕಾಣಿಸಿತ್ತು.
ಅರ್ಜಿ ಗುಜರಾಯಿಸಿದ ಆತ ಬೆಂಗಳೂರಿಗೆ ಹೊರಟ. ಒಂದಷ್ಟು ಪುಸ್ತಕ ತಂದು, ಕಷ್ಟಪಟ್ಟು ಓದುವುದು, ಆ ಮೂಲಕ ಹಠ ಹಿಡಿದು ಕೆಲಸ ಗಿಟ್ಟಿಸುವ ಕನಸು ಆತನದು.
ಈ ಮಧ್ಯೆ ಧರ್ಮಸ್ಥಳಕ್ಕೆ ಹೋಗುವ ಬಯಕೆ ಮನದಲ್ಲಿ ಬಂತು. ಬಹುದಿನದಿಂದ ಬಾಕಿ ಉಳಿದಿದ್ದ ಟೂರ್ ನೆನಪಾಯಿತು. ಧರ್ಮಸ್ಥಳದಲ್ಲಿ ಹರಕೆ ಕಟ್ಟಿದ. ‘ಕೆಲಸ ಸಿಕ್ಕರೆ ನಾನು ಮುಡಿ ಕೊಡ್ತಿನಿ, ಕೈ ಬಿಡಬೇಡವೋ ಮಂಜುನಾಥಾ..’ ಎಂದು ಬೇಡಿಕೊಂಡ. ಮಂಜುನಾಥ ಕೈ ಹಿಡಿದನೋ ಅಥವ ಕುಮಾರನ ಶ್ರಮಕ್ಕೆ ಫಲ ಸಿಕ್ಕಿತೋ ಗೊತ್ತಿಲ್ಲ. ಅವನಂತೂ ‘ಎಲ್ಲವೂ ಮಂಜುನಾಥನ ದಯೆ’ ಎನ್ನುತ್ತಾನೆ. ಆತನ ಮನೆಯಲ್ಲೀಗ ಮಂಜುನಾಥನ ದೊಡ್ಡ ಪಟ ಗೋಡೆಯನ್ನು ಅಲಂಕರಿಸಿದೆ.
***
ಈಗ ಒಂದು ಪ್ರಶ್ನೆ. ಮೇಲಿನ ಎರಡೂ ಪ್ರಕರಣಗಳಲ್ಲಿ ದೇವರು ಕೈಹಿಡಿದನೋ ಅಥವಾ ಎಲ್ಲವೂ ಕಾಕತಾಳಿಯವೋ? ಅವರವರ ಭಾವಕ್ಕೆ ತಕ್ಕಂತೆ ಉತ್ತರಗಳು ರೂಪುಗೊಳ್ಳುತ್ತವೆ. ಆ ವಿಚಾರ ಬಿಡಿ. ದೇವರ ಶಕ್ತಿ ಪರೀಕ್ಷಿಸುವ ಬದಲು, ನಮ್ಮೊಳಗಿನ ಶಕ್ತಿಯನ್ನು ಬಳಸಿಕೊಳ್ಳುವುದರಲ್ಲಿಯೇ ಹೆಚ್ಚು ಖುಷಿಯಿದೆ ಎಂದು ಅಂದುಕೊಳ್ಳುವುದೇ ನಮಗೂ ಮತ್ತು ದೇವರಿಗೂ ಕ್ಷೇಮ.

No comments: