ಪ್ರತಿ ಗುರ್‍ವಾರ ಪಟ್ಟನಾಯಕನಹಳ್ಳಿಯಲ್ಲಿ ಸಂತೆ. ಆವತ್ತು ಸುತ್ತಲ ಕಾಮಗೊಂಡನಹಳ್ಳಿ, ಹೆಂದೊರೆ, ಪಾಳ್ಯ, ನಾದೂರು, ಕೆರೆಯಾಗಲಹಳ್ಳಿ, ಸೀಗಲಹಳ್ಳಿ, ಚಂಗಾವರ, ಯಾದಲಡಕು, ಹುಚ್ಚುಗೀರನಳ್ಳಿ ಸೇರಿದಂತೆ ಹತ್ತಾರು ಹಳ್ಳಿ ಜನ ನಮ್ಮೂರಿಗೆ ಬರ್ತಾ ಇದ್ದರು. ಸಂತೆದಿನ ಬಸ್ಸುಗಳು ದಿನತುಂಬಿದ ಗರ್ಭಿಣಿಯರಂತೆ ಇರ್ತಾ ಇದ್ದವು. ಹೆಜ್ಜೆ ಇಡೋದಕ್ಕೆ ಜಾಗವಿಲ್ಲ.
ಬಸ್ಸುನ ಒಳಗೆ ಜಾಗವಿಲ್ಲದೇ ಬಾಗಿಲಲ್ಲಿ, ಏಣಿ ಮೇಲೆ, ಕಿಟಕಿ ಮೇಲೆ ಜನ ನೇತಾಡೋದು ಆವತ್ತು ಸಾಮಾನ್ಯ. ಟಾಪಲ್ಲಿ ಕೂತ ಜನರು ಬುಸುಬುಸು ಬೀಡಿ ಸೇದುತಾ, ತಮ್ಮ ಕಷ್ಟಸುಖ ಮಾತಾಡಿಕೊಳ್ಳೋರು. ದೇಶದ ರಾಜಕೀಯವನ್ನು ತಮ್ಮ ಮೂಗಿನ ನೇರದಲ್ಲಿ ವ್ಯಾಖ್ಯಾನಿಸೋರು. ಟಿಕೀಟು ಇಲ್ಲದೇ ಊರು ತಲುಪೋರು ಜಾಸ್ತಿ ಜನ ಇದ್ದ ಕಾರಣ, ನಾಲ್ಕೈದು ಜನ ದುಡ್ಡು ವಸೂಲಿಗೆ ಪರದಾಡೋರು. ನಮ್ಮ ವಿಜಿ ಮಾಮಾ ಹನುಮಾನ್ ಬಸ್ ಬುಕ್ ಮಾಡೋನು.
ಸಂತೆ ಮಾಡ್ತಾಯಿದ್ದ ಅಮ್ಮ, ನಮಗೆಲ್ಲ ಸಂತೆಯಿಂದ ಏನಾದರೂ ತರೋಳು. ಸಂತೆಯಲ್ಲಿ ಉಳಿಸಿಕೊಂಡ ಹಣದಲ್ಲಿ ನಾಲ್ಕಾಣಿನೋ, ಎಂಟಾಣಿನೋ ಕೊಡೋಳು. ನಾವು ಬಟಾಣಿಯೋ, ಪೆಪ್ಪರ್‌ಮೆಂಟೋ ತಿಂದು ಖುಷಿಪಡುತ್ತಿದ್ದೆವು. ಅಮ್ಮನಿಗೆ ಹುಷಾರಿಲ್ಲದಿದ್ರೆ, ಅಪ್ಪ ಸಂತೆಗೆ ಹೊರಡೋನು. ನಾನು ಮತ್ತು ನನ್ನಣ್ಣ ಗೌರಜ್ಜಿ ಹೆಣೆದಿದ್ದ ಕಿತ್ತಲೆ ಬಣ್ಣದ ವೈರ್‌ಬ್ಯಾಗ್ ಹಿಡಿದು ಸ್ಕೂಲ್ ಹತ್ತಿರ ಹೋಗ್ತಾಯಿದ್ವಿ.
ಊರಿಗೆ ಕಳಸದಂತಿರುವ ನಮ್ಮಪ್ಪನ ಸ್ಕೂಲ್‌ಗೆ ಹೋಗೋದೇ ನಮಗೆ ಪ್ರತಿಷ್ಠೆಯ ವಿಷಯವಾಗಿತ್ತು. ಮುಖಮುಸುಡಿ ತೊಳ್ಕಂಡು ಅಣ್ಣ ರೆಡಿಯಾಗ್ತಾಯಿದ್ದ. ನಾನು ಬೆಕ್ಕಿನಂತೆ ಮುಖ ತೊಳೆದು ಅಣ್ಣನ ಕೈಹಿಡಿದುಕೊಂಡು ಸ್ಕೂಲ್ ದಾರಿ ತುಳಿಯುತ್ತಿದ್ದೆ. ‘ಯಾಕ್ರೋ ಇಷ್ಟು ಲೇಟು’ ಎನ್ನುತ್ತಿದ್ದ ಅಪ್ಪ ನಮ್ಮನ್ನು ಸಂತೆಗೆ ಕರೆದುಕೊಂಡು ಹೋಗೋನು. ನಾನು ಎಲ್ಲಾದರೂ ತಪ್ಪಿಸಿಕೊಳ್ತಿನೇನೋ ಅಂತ ಅಪ್ಪ ನನ್ನ ಕೈಹಿಡಿಯುತ್ತಿದ್ದ. ಅಣ್ಣ ನನ್ನ ಇನ್ನೊಂದು ಕೈಹಿಡಿದುಕೊಳ್ಳುತ್ತಿದ್ದ.
ಜನಗಳ ಮಧ್ಯೆ ತೂರಿಕೊಂಡು ಸಂತೆ ಬೀದಿಗೆ ಹೋಗ್ತಾಯಿದ್ವಿ. ನನಗೆ ಸಂತೆಯಲ್ಲಿ ಗಮನ ಸೆಳೆಯುತ್ತಿದ್ದದ್ದು, ಕಲ್ಲುಗಾಲಿಯ ರಥ. ಅದು ಬಿಸಿಲಿಗೆ ಒಣಗದಿರಲೆಂದು ರಥಕ್ಕೆ ತಗಡಿನ ಶೀಟುಗಳನ್ನು ಹೊದಿಸಿದ್ದರು. ನಾನು ಏನಾದ್ರೂ ಕಾಣುತ್ತೇನೋ ಅಂತ ಇಣುಕಿಣುಕಿ ನೋಡುತ್ತಿದ್ದೆ. ಜಾತ್ರೆ ಟೈಮಲ್ಲಿ ಈ ರಥಕ್ಕೆ ಸಿಂಗಾರಬಂಗಾರ ಮಾಡೋದು ನೆನೆದು, ಮನಸ್ಸು ಅರಳುತ್ತಿತ್ತು. ‘ಅಪ್ಪ ಯಾವಾಗ ಜಾತ್ರೆ?’ ಎನ್ನುತ್ತಿದ್ದೆ. ‘ಇನ್ನೂ ಅದು ದೂರ ಇದೆ. ಈಗ ಆಗಸ್ಟ್ ತಿಂಗಳು. ಜನವರಿಯಲ್ಲಿ ಜಾತ್ರೆ’ ಎಂದು ಅಪ್ಪ ಅನ್ನುತ್ತಿದ್ದ. ಜನವರಿ ಯಾವಾಗ ಬರುತ್ತೆ ಎಂದು ತಿಂಗಳುಗಳನ್ನು ನಾನು ಬೆರಳಲ್ಲಿಯೇ ಎಣಿಸ್ತಾಯಿದ್ದೆ.
ಸಂತೆಯಲ್ಲಿನ ತರಕಾರಿ ಸೋಮಣ್ಣ ಎಲ್ಲರಿಗೂ ಪರಿಚಿತ. ಬ್ಯಾಂಕ್‌ನೋರು, ಮೇಷ್ಟ್ರುಗಳು, ಮೇಡಂಗಳು, ಪೊಲೀಸರು -ಹೀಗೆ ಅಫೀಸಿಯಲ್ಸ್ ಎಲ್ಲರೂ ಆತನ ಬಳಿಯೇ ತರಕಾರಿ ಖರೀದಿಸೋರು. ಚಿಲ್ಲರೆ ಕೊಡೋದರ ಜತೆಗೆ, ಪ್ರೀತಿಯಿಂದ ಆತ ಮಾತಾಡಿಸುತ್ತಿದ್ದ. ಐದಾರು ಜನರ ಜತೆ ಮಾತಾಡುತ್ತಲೇ, ಇನ್ನೈದು ಜನರ ಜತೆ ವ್ಯಾಪಾರ ಮಾಡ್ತಾಯಿದ್ದ. ಹುರುಳಿಕಾಯಿ, ಕ್ಯಾರೆಟ್, ಹೂಕೋಸು, ಬೀಡ್‌ರೂಟ್, ಗೆಡ್ಡೆ ಕೋಸು ಎಲ್ಲವನ್ನೂ ರಾಶಿ ಹಾಕಿಕೊಂಡಿರ್‍ತಾಯಿದ್ದ.
ಕ್ಷಣ ಸಹಾ ಪುರಸೊತ್ತಿಲ್ಲದಂತೆ ಸೋಮಣ್ಣನ ವ್ಯಾಪಾರ ನಡೆಯುತ್ತಿತ್ತು. ಅಪ್ಪ ‘ಕಾಲು ಕೆ.ಜಿ. ಕ್ಯಾರೆಟ್ ಹಾಕಿ’ ಅಂದರೆ ಯಾವುದೋ ಕಲ್ಲನ್ನು ತಕ್ಕಡಿ ತಟ್ಟೆಗೆ ಎಸೆದು ತೂಗುತ್ತಲೆ, ‘ಆಮೇಲೆ ಹುರುಳಿಕಾಯಿ ಹಾಕ್ಲಾ ಮೇಷ್ಟ್ರೆ..’ ಎನ್ನುತ್ತಿದ್ದ. ಹುರುಳಿಕಾಯನ್ನು ಕೈಯಲ್ಲಿ ಮುರಿದ ಅಪ್ಪ, ‘ಹೂಂ ಹಾಕು’ ಅನ್ನೋರು. ತಕ್ಷಣ ಅರ್ಧ ಕೆ.ಜಿ. ಕಲ್ಲನ್ನು ತಟ್ಟೆಗೆ ಎಸೆಯೋನು. ನಮ್ಮ ಅರ್ಧ ಬ್ಯಾಗನ್ನು ಸೋಮಣ್ಣನ ಅಂಗಡಿಯಲ್ಲಿಯೇ ತುಂಬಿಸುತ್ತಿದ್ದೆವು.
ಅಮೇಲೆ ಅದೇ ಸಾಲಲ್ಲಿ ಮುಂದಕ್ಕೆ ಹೋಗ್ತಾಯಿದ್ವಿ. ಅಲ್ಲಿ ಈರುಳ್ಳಿ ಬೆಳ್ಳುಳ್ಳಿ ರಾಶಿಗಳು. ಅಲ್ಲಿ ದಪ್ಪನೆಯ ಈರುಳ್ಳಿ ೨ ಕೆ.ಜಿ. ಖರೀದಿಸಿ, ಒಂದು ರೂಪಾಯಿ ನೀಡಿ, ಒಂದು ಗುಡ್ಡೆ ಬೆಳ್ಳುಳ್ಳಿ ತಗೊಳ್ಳುತ್ತಿದ್ದೆವು. ಅಮೇಲೆ ಟಮೊಟೊ ಖರೀದಿಗೆ ಅಪ್ಪ ಅತ್ತಿತ್ತ ಸುತ್ತಾಡೋನು. ಅಪ್ಪನ ಹಿಂದೆ ಕಣ್‌ಕಣ್ ಬಿಟ್ಟುಕೊಂಡು, ನಾನು ಅಣ್ಣ ಹೆಜ್ಜೆ ಹಾಕುತ್ತಿದ್ದೆವು. ಅಪ್ಪ ಜೋರಾಗಿ ಹೆಜ್ಜೆ ಹಾಕೋನು. ನನ್ನ ಎಳೆದುಕೊಂಡು ಅಪ್ಪನನ್ನು ಅಣ್ಣ ಹಿಂಬಾಲಿಸುತ್ತಿದ್ದ. ‘ಟಮೊಟೊನಾ ಕಡೆಗೆ ಕೊಳ್ಳಬೇಕು.. ಯಾಕಂದ್ರೆ ಮೊದ್ಲೆ ತಕೊಂಡ್ರೆ ಅವು ತಳ ಸೇರಿ ಅಜ್ಜಿಬಜ್ಜಿಯಾಗುತ್ತವೆ ’ ಎಂದು ಅಪ್ಪ ಸಲಹೆ ನೀಡೋನು. ನಾನು ಅಣ್ಣ ಹೂಂಗುಟ್ಟುತ್ತಿದ್ದೆವು.
ಅಪ್ಪನ ಸ್ಟೂಡೆಂಟ್ಸ್ ಅನೇಕರು ತರಕಾರಿ ಮಾರೋರು. ಅವರೆಲ್ಲರೂ ‘ನಮಸ್ಕಾರ ಸಾರ್, ನಾನು ನಿಮ್ಮ ಸ್ಟೂಡೆಂಟ್ ಸಾರ್’ ಅನ್ನೋರು. ತರಕಾರಿ ಕೊಟ್ಟು ‘ದುಡ್ಡು ಬೇಡ ಸಾರ್’ ಎನ್ನೋರು. ಅಪ್ಪ ಬಲವಂತ ಮಾಡಿ ದುಡ್ಡು ಕೊಟ್ಟು ಮುಂದೆ ಹೋಗೋನು. ಅಪ್ಪನ ಪರಿಚಿತರು ಅನೇಕರು ಸಿಗ್ತಾಯಿದ್ದರು. ಆಗ ಒಂದೆರಡು ನಿಮಿಷ ಮಾತಾಡಿ, ಮುಂದೆ ಹೋಗುತ್ತಿದ್ದೆವು.
ಸೊಪ್ಪು ಕೊಳ್ಳೋದಕ್ಕೆ ಸಂತೆ ಕೊನೆಗೆ ಅಂದರೆ ಮಠದ ಪ್ರವೇಶ ದ್ವಾರದ ಕಡೆಗೆ ಬರಬೇಕಿತ್ತು. ನನಗೆ ಅಲ್ಲಿಗೆ ಬರೋದಕ್ಕೆ ಭಯವಾಗುತ್ತಿತ್ತು. ಅಲ್ಲಿ ಎತ್ತುಗಳಿಗೆ ಇಮಾಂ ಸಾಬಿ ಮತ್ತು ಆತನ ಸೋದರರು ಲಾಳ ಕಟ್ಟೋರು. ಎತ್ತುಗಳು ಬೆದರದಿರಲಿ ಎಂದು ಸೇದೋ ಹಗ್ಗದಿಂದ ಕಾಲುಗಳ ಕಟ್ಟಿ ಹಾಕಿ, ಅದರ ಮೇಲೆ ಮೂರುನಾಲ್ಕು ಜನ ಕೂತಿರೋರು. ಸಾಬಿ ತಲೆಗೊಂದು ಟೋಪಿ ಸಿಕ್ಕಿಸಿಕೊಂಡು, ಸೂಕ್ತ ಲಾಳ ಹುಡುಕಿ ಪಾದದ ಮೇಲಿಟ್ಟು ಮೊಳೆ ಹೊಡೆಯೋನು. ಬೆದರಿದ ಎತ್ತುಗಳು ಒದ್ದಾಡುತ್ತಿದ್ದವು. ‘ಭಯ ಯಾಕೆ, ನಾನಿಲ್ವಾ?’ ಎನ್ನುತ್ತಾ ಅಪ್ಪ ಕರೆದುಕೊಂಡು ಹೋಗೋನು. ನಾನು ಎಷ್ಟು ನೋಡಬಾರದು ಅನ್ನಿಸಿದರೂ ಕಣ್ಣು ಅತ್ತಲೇ ಹೋಗುತ್ತಿದ್ದವು. ಅಣ್ಣನಿಗೂ ಭಯ ಇತ್ತು.
‘ಅದನ್ನು ಲಾಳ ಕಟ್ಟೋದು ಅನ್ತಾರೆ. ನಾವು ಚಪ್ಪಲಿ ಹಾಕಿಕೊಳ್ಳೋದಿಲ್ವಾ.. ಅದೇ ರೀತಿ ಎತ್ತುಗಳಿಗೆ ಲಾಳ ಕಟ್ಟುತ್ತಾರೆ. ಅವುಗಳಿಗೆ ಅದರಿಂದ ಒಳ್ಳೆಯದು. ಒಂಚೂರು ನೋವಾಗೋದಿಲ್ಲ. ಉಗುರು ಕತ್ತರಿಸಿದರೆ ನಮಗೇನು ನೋವಾಗುತ್ತಾ? ಅದೇ ರೀತಿ ಎತ್ತುಗಳಿಗೆ ಲಾಳ ಕಟ್ಟೋದರಿಂದ ನೋವಾಗದು‘ ಎಂದು ಅಪ್ಪ ವಿವರಣೆ ನೀಡೋನು.
ಸಂತೆಯಲ್ಲಿ ನನಗೆ ಭಯ ಹುಟ್ಟಿಸುತ್ತಿದ್ದ ಸಂಗತಿಗಳು ಇನ್ನೆರಡದಿದ್ವು. ಮೊಂಡರು ಅಪರೂಪಕ್ಕೆ ಸಂತೆಯಲ್ಲಿ ಕಾಣಿಸಿಕೊಳ್ಳೋರು, ಕೈ ಕೊಯ್ಯುಕೊಂಡು ದುಡ್ಡು ಕೇಳೋರು. ‘ಮೊಂಡೋರು ನಾವು ಮೊಂಡೋರು.. ದುಡ್ಡು ಕೊಡವ್ವಾ, ದುಡ್ಡು ಕೊಡೋ ತಂದೇ’ ಎಂದು ಬೇಡೋರು. ನನಗೆ ಅವರು, ಮೈತುಂಬ ಕಾಣಿಸೋ ಗಾಯಗಳು, ಅವರ ಪೊದೆಯಂಥ ತಲೆಗೂದಲು ನೋಡಿ ಸಕತ್ತು ಹೆದರಿಕೆಯಾಗುತ್ತಿತ್ತು.
ಮೊಂಡರ ಜತೆಗೆ ಒಂದೊಂದು ಸಲ ಚಾಟಿ ಬಿಸೋರು ಬರೋರು. ಸೊಂಟದಲ್ಲಿ ಮಗು ನೇತಾಡಿಸಿಕೊಂಡ ಕೊಳಕು ಸೀರೆಯುಟ್ಟ ಹೆಂಗಸು ತಲೆ ಮೇಲೆ ದೇವರನ್ನು ಹೊತ್ತುಕೊಂಡಿರೋಳು. ತಲೆ ಮೇಲಿನ ಬುಟ್ಟಿಯಲ್ಲಿ ಅರಿಶಿಣ ಕುಂಕುಮ, ತಂಗಟೆ ಸೊಪ್ಪು ಮುಡಿದುಕೊಂಡಿದ್ದ ಆ ಹೆಣ್ಣು ದೇವರ ಮುಖವಾಡ, ದೇವರ ಕೋರೆ ಹಲ್ಲುಗಳ ಕಂಡು, ನಾನು ನಿಂತಲ್ಲೆ ಕೈಮುಗಿಯುತ್ತಿದ್ದೆ.
ಚಾಟಿಯಿಂದ ಮೈಗೆ ಬಾಸುಂಡೆ ಬರುವಂತೆ ತೆಳ್ಳಗಿದ್ದ ವ್ಯಕ್ತಿಯೊಬ್ಬ ಹೊಡೆದುಕೊಳ್ಳುತ್ತಿದ್ದ. ಬಾಯಲ್ಲಿ ಬೆಳ್ಳಿ ಮೀಸೆ, ಮುಖದ ತುಂಬ ಅರಿಶಿಣ ಕುಂಕುಮ, ಕೊರಳಲ್ಲಿ ಚಾಟಿ , ತೋಳಲ್ಲಿ ಪಂಚಲೋಹದ ಬಳೆ ಆತನ ವೇಷಭೂಷಣ. ಕೈಯಲ್ಲಿ ತಟ್ಟೆ ಹಿಡಿದು ಅತ ಅಂಗಡಿಗಳ ಮುಂದೆ ನಿಲ್ಲುತ್ತಿದ್ದ. ಅವರು ಕೊಡೋ ೫ ಪೈಸೆ, ೧೦ಪೈಸೆಯನ್ನು ತಟ್ಟೆಗೆ ಹಾಕಿಕೊಳ್ಳುತ್ತಿದ್ದ. ಆಗಾಗ ತಟ್ಟೆಯನ್ನು ನೆಲದ ಮೇಲಿಟ್ಟು, ಕೊರಳಲ್ಲಿ ಹಾಕಿಕೊಂಡಿದ್ದ ಚಾಟಿಯನ್ನು ಬಲಗೈಲಿ ಹಿಡಿದು, ತನ್ನ ಮೈಗೆ ಹೊಡೆದುಕೊಳ್ಳುತ್ತಿದ್ದ. ಆತ ನಮಗೆ ಹೊಡೆಯದಿದ್ದರೂ, ನನಗೆ ನೋವಾದಂತೆ ನಾನು ತತ್ತರಿಸಿದ್ದೆ. ಅಪ್ಪ ಬಿಗಿಯಾಗಿ ಕೈಯಿಡಿದುಕೊಂಡು ನನ್ನನ್ನು ಮುನ್ನಡೆಸುತ್ತಿದ್ದ.
ಸಂತೆ ಮುಗಿಸಿ ಲಿಂಗಣ್ಣನ ಅಂಗಡಿ ಬಳಿಗೆ ಬರುತ್ತಿದ್ದೆವು. ಬಾಯಿತುಂಬ ಎಲೆಅಡಿಕೆ ತುಂಬಿಕೊಂಡಿರುತ್ತಿದ್ದ ಲಿಂಗಣ್ಣ ನಗೋನು. ಸನ್ನೆ ಮೂಲಕವೇ ಉತ್ತರಿಸೋನು. ಏನಾದ್ರೂ ಹೇಳೋ ತುರ್ತು ಬರದ ಹೊರತು, ಬಾಯಲ್ಲಿನ ಎಲೆಅಡಿಕೆ ತಪ್ಪೆಯನ್ನು ಉಗಿಯುತ್ತಿರಲಿಲ್ಲ. ಎಲೆಅಡಿಕೆ ರಸ, ಬಾಯಿಯ ಕಟವಾಯಿಯಿಂದ ಕೆಳಕ್ಕಿಳಿದಿರೋದು. ಅಪ್ಪ ಸಿಜರ್ ಸಿಗರೇಟ್ ಪಡೆದು, ಬೆಂಕಿ ಹಚ್ಚಿ ಹೊಗೆ ಬಿಡ್ತಾಯಿದ್ದ. ತಲಾ ೧೦ಪೈಸೆಗೆ ಬಟಾಣಿಯೋ, ಉಪ್ಪುಗಡಲೆಯೋ ಯಾವುದೋ ಒಂದು ನನ್ನ ಮತ್ತು ನನ್ನಣ್ಣನ ಜೇಬು ಸೇರುತ್ತಿತ್ತು. ನಾವು ಒಂದೊಂದೇ ಕಾಳನ್ನು ಬಾಯಲ್ಲಿ ಹಾಕಿಕೊಳ್ತಾಯಿದ್ವಿ. ಮನೆಗೆ ಬರೋ ಹೊತ್ತಿಗೆ ಸಂಜೆ ಆಗಿರ್‍ತಾಯಿತ್ತು.
ಸೀಮೆ ಎಣ್ಣೆ ಸ್ಟೋವ್ ಹಚ್ಚಿ, ಅಮ್ಮ ಕಾಫಿಗೆ ಇಟ್ಟು ತರಕಾರಿಯನ್ನು ನೆಲದ ಮೇಲೆ ಸುರಿಯೋಳು. ಬದನೆಕಾಯಿ ಚೆನ್ನಾಗಿಲ್ಲ, ಸೊಪ್ಪು ಬಾಡಿದೆ ಎಂದು ಅಮ್ಮ ಗೊಣಗುತ್ತಿದ್ದಳು. ಅದು ಎಷ್ಟು ? ಇದು ಎಷ್ಟು ? ಎಂದು ಅಪ್ಪ ವಿವರಿಸುತ್ತಿದ್ದ. ಕಾಫಿ ಲೋಟಗಳನ್ನು ಅಮ್ಮ ನಮ್ಮ ಮುಂದೆ ಇಡೋಳು. ಲೋಟದ ಮೇಲಿನ ಹೆಚ್.ಸಿ.ಎನ್, ಹೆಚ್.ಸಿ.ಆರ್ ಮತ್ತು ಹೆಚ್.ಸಿ.ಎ. ಇನ್ಸಿಯಲ್‌ಗಳನ್ನು ನಾವು ಪದೇಪದೇ ಓದುತ್ತಿದ್ದವು. ಬ್ರೆಡ್ ಇದ್ದರೆ ಅಮ್ಮ ಕಾಫಿ ಜತೆ ಕೊಡೋಳು.
ಕಬ್ಬಾಕ್ಷಿ ಸೊಪ್ಪುನ ಕ್ಲೀನ್ ಮಾಡಿ, ಅಮ್ಮ ಬಸ್ಸಾರ್‌ಗೆ ರೆಡಿ ಮಾಡೋಳು. ಬಿಸಿ ಬಿಸಿ ಮುದ್ದೆ ಜತೆ ಸಾಂಬರ್ ಹಾಕಿಕೊಂಡು ತಿನ್ನೋದು ಒಂದು ಸಂಭ್ರಮ. ‘ಮುದ್ದೇ.. ನಾ’ ಎಂದು ನಾನೂ ಅಣ್ಣನಂತೆಯೇ ಗೊಣಗುತ್ತಿದ್ದೆ. ಆದರೆ ಮುದ್ದೆ ಯಾಕೋ ಹೊಟ್ಟೆಗೆ ಸಲೀಸಾಗಿ ಸೇರಿ ಬಿಡುತ್ತಿತ್ತು. ಈಗಲೂ ನನಗೆ ಮುದ್ದೆ ಇಷ್ಟವೆ.
ಸಂತೆಯಲ್ಲಿ ಸಿಗದ ವಸ್ತುಗಳೇ ಅಪರೂಪ. ಬೀದಿ ಬದಿಯಲ್ಲಿಯೇ ಪಕೋಡಗಳನ್ನು ಮಾರೋರು. ‘ಧೂಳು ಅವೆಲ್ಲ ತಿನ್ನಬಾರದು’ ಅನ್ನೋನು ಅಪ್ಪ. ನನ್ನ ಫ್ರೆಂಡ್ ಹೆಂಜಾರಿ, ತುಳಸಿರಾಮ ಸಂತೆಯಿಂದ ಪಕೋಡಗಳನ್ನು ಕೊಂಡು ತರೋರು. ಬಸ್‌ಸ್ಟಾಂಡ್‌ನಲ್ಲಿ ಲಕ್ಷ್ಮಣಪ್ಪ ನ ಹಣ್ಣಂಗಡಿ ಪಕ್ಕದಲ್ಲಿರೋ ನಾಗರಾಜಪ್ಪ ತನ್ನ ಅಂಗಡಿಯಲ್ಲಿ ೫೦ ಪೈಸೆಗೊಂದು ಮೆಣಸಿನಕಾಯಿ ಬಜ್ಜಿ ಮಾರೋನು. ಆದ್ರೆ ಸಂತೆಯಲ್ಲಿ ನಾಕಾಣಿಗೆ ಸಿಗೋದು. ಪಕೋಡಗಳು ಬರೀ ೧೦ ಪೈಸೆ. ಒಂದು ರೂಪಾಯಿಗೆ ೧೦ ಪಕೋಡ ತಂದು ಹೆಂಜಾರಿ ತಿನ್ನೋನು. ನನಗೂ ತಿನ್ನು ಅಂತಾ ಕೊಡೋನು. ನಾನು ಭಯದಿಂದಲೇ ಒಂದು ದಿನ ಒಂದೇ ಒಂದು ತಿಂದಿದ್ದೆ. ಅಪ್ಪ-ಅಮ್ಮನ ಎಚ್ಚರಿಕೆ ಮಾತುಗಳು, ಪಕೋಡ ತಿನ್ನದಂತೆ ತಡೆದಿದ್ದವು. ಜತೆಗೆ ಅದರ ರುಚಿಯೂ ಅಷ್ಟರಲ್ಲಿಯೇ ಇತ್ತು.
ಈಗಲೂ ಸಂತೆ ನಡೆಯುತ್ತೆ, ಖುಷಿಯಲ್ಲಿ ತಿರುಗಾಡಲು ಬಾಲ್ಯವಿಲ್ಲ. ಅದಕ್ಕೂ ಹೆಚ್ಚಿನದಾಗಿ ನನ್ನ ಕೈಹಿಡಿದು ನಡೆಸೋಕೆ ಅಪ್ಪ ಇಲ್ಲ. ಯಾಕೋ ಪಟ್ಟನಾಯಕನಹಳ್ಳಿಗೆ ಹೋಗಲು ಮನಸ್ಸೆ ಬರೋದಿಲ್ಲ. ಚೆಡ್ಡಿ ದೋಸ್ತು ಶೆಟ್ಟಿ ಮಂಜ ಅಂಗಡಿ ನೋಡಿಕೊಂಡು ಚೆನ್ನಾಗಿದ್ದಾನೆ.
Saturday, May 10, 2008
Subscribe to:
Post Comments (Atom)
No comments:
Post a Comment